ಕಿರ್ಗಿಸ್ತಾನ್, ಕಜಕಿಸ್ತಾನ್, ಅರ್ಮೇನಿಯಾಗೆ ಸಚಿವ ಜೈಶಂಕರ್ ಭೇಟಿ: ಇಲ್ಲಿದೆ ಮಾಹಿತಿ
ನವದೆಹಲಿ, ಅಕ್ಟೋಬರ್ 11: ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಸೋಮವಾರ ಮೂರು ರಾಷ್ಟ್ರಗಳ ಪ್ರವಾಸ ಆರಂಭಿಸಿದ್ದಾರೆ. ಕಿರ್ಗಿಸ್ತಾನ್, ಕಜಕಿಸ್ತಾನ್, ಅರ್ಮೇನಿಯಾಗೆ ಸಚಿವರು ಭೇಟಿ ನೀಡಲಿದ್ದಾರೆ.
ವಿದೇಶಾಂಗ ವ್ಯವಹಾರ ಸಚಿವ ಎಸ್ ಜೈಶಂಕರ್ ಮೊದಲ ಬಾರಿಗೆ ಕಿರ್ಗಿಸ್ತಾನ್ ದೇಶಕ್ಕೆ ಭೇಟಿ ನೀಡುತ್ತಿದ್ದಾರೆ. ಮೂರು ದೇಶಗಳ ಭೇಟಿಯು ಭಾರತದೊಂದಿಗಿನ ದ್ವಿಪಕ್ಷೀಯ ಬಾಂಧವ್ಯದ ಪ್ರಗತಿ ಪರಿಶೀಲನೆ ಮತ್ತು ಈ ಪ್ರದೇಶದ ಬೆಳವಣಿಗೆಗಳ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳಲು ಅವಕಾಶ ಒದಗಿಸುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.
ಕಿರ್ಗಿಸ್ತಾನ್ ಭೇಟಿ ವೇಳೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಅಧ್ಯಕ್ಷ ಸಾದಿರ್ ಜಪರೋವ್ ಅವರನ್ನು ಭೇಟಿ ಮಾಡುವುದರ ಹೊರತಾಗಿ ಕಿರ್ಗಿಸ್ತಾನ್ ವಿದೇಶಾಂಗ ಸಚಿವ ರುಸಿಯನ್ ಕಜಕ್‌ಬೇವ್ ಜೊತೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ.

ಮೂರು ದಿನಗಳ ಪ್ರವಾಸದಲ್ಲಿ ಜೈಶಂಕರ್:
ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅಕ್ಟೋಬರ್ 13ರವರೆಗೆ ಮೂರು ರಾಷ್ಟ್ರಗಳಿಗೆ ಭೇಟಿ ನೀಡಲಿದ್ದಾರೆ. ಅಕ್ಟೋಬರ್ ಇಂದು ಸೋಮವಾರ ಅವರು ಕಿರ್ಗಿಸ್ತಾನ್ ಗಣರಾಜ್ಯದಲ್ಲಿ ಇರುತ್ತಾರೆ. ಸೋಮವಾರ ಕಜಕಿಸ್ತಾನದಿಂದ ಹೊರಡಲಿರುವ ಅವರು, ಅಕ್ಟೋಬರ್ 12 ಮತ್ತು 13ರಂದು ಅರ್ಮೇನಿಯಾದಲ್ಲಿ ಇರಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಅಕ್ಟೋಬರ್ 11-12ರಂದು ಸಚಿವ ಜೈಶಂಕರ್ ಕಜಕಿಸ್ತಾನದ ನೂರ್-ಸುಲ್ತಾನ್‌ನಲ್ಲಿ ಏಷ್ಯಾದಲ್ಲಿ ಸಂವಹನ ಮತ್ತು ಆತ್ಮವಿಶ್ವಾಸ ನಿರ್ಮಾಣ ಕ್ರಮಗಳ ಸಮ್ಮೇಳನದ (CICA) 6ನೇ ಸಚಿವರ ಸಭೆಯಲ್ಲಿ ಭಾಗವಹಿಸಲಿದ್ದಾರೆ. "ಇದು 'ವಿಸ್ತೃತ ನೆರೆಹೊರೆಯ' ದೇಶಗಳೊಂದಿಗಿನ ನಮ್ಮ ಹೆಚ್ಚಿದ ಬಾಂಧವ್ಯವನ್ನು ಮುಂದುವರಿಸುತ್ತದೆ" ಎಂದು ಸಚಿವಾಲಯ ಹೇಳಿದೆ.
ಕಜಕಿಸ್ತಾನವು ಪ್ರಸ್ತುತ ಏಷ್ಯಾದಲ್ಲಿ ಸಂವಹನ ಮತ್ತು ಆತ್ಮವಿಶ್ವಾಸ ನಿರ್ಮಾಣ ಕ್ರಮಗಳ ಸಮ್ಮೇಳನ(CICA)ದ ಆರಂಭಿಕ ವೇದಿಕೆಯಾಗಿದೆ. ಕಜಕಿಸ್ತಾನದ ವಿದೇಶಾಂಗ ಸಚಿವ ಮುಖ್ತಾರ್ ತಿಲೇಬುರ್ಡಿ ಅವರೊಂದಿಗೆ ಜೈಶಂಕರ್ ದ್ವಿಪಕ್ಷೀಯ ಮಾತುಕತೆ ನಡೆಸುವ ನಿರೀಕ್ಷೆಯಿದೆ.
CICA ಸ್ಥಾಪನೆ ಮತ್ತು ಗುರಿ:
ಕಳೆದ 1999ರಲ್ಲಿ ಸ್ಥಾಪಿತವಾದ ಸಿಐಸಿಎ ಏಷ್ಯಾದಲ್ಲಿ ಶಾಂತಿ, ಭದ್ರತೆ ಮತ್ತು ಸ್ಥಿರತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಬಹುಪಕ್ಷೀಯ ವಿಧಾನಗಳನ್ನು ವಿಸ್ತರಿಸುವ ಮೂಲಕ ಸಹಕಾರವನ್ನು ಹೆಚ್ಚಿಸುವ ಗುರಿ ಹೊಂದಿದೆ. ಇದು ಪ್ರಸ್ತುತ 27 ಸದಸ್ಯ ರಾಷ್ಟ್ರಗಳು ಮತ್ತು 9 ವೀಕ್ಷಕ ರಾಜ್ಯಗಳನ್ನು ಮತ್ತು 5 ವೀಕ್ಷಕ ಸಂಸ್ಥೆಗಳನ್ನು ಹೊಂದಿದೆ. 1999ರಲ್ಲಿ ಭಾರತವು CICA ಸದಸ್ಯತ್ವ ಪಡೆದುಕೊಂಡಿದ್ದು, CICA ನ ಅಡಿಯಲ್ಲಿ ನಡೆಸಲಾದ ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದೆ.












Click it and Unblock the Notifications