ರಷ್ಯಾ ಯುದ್ಧ: ಉಕ್ರೇನ್‌ನಿಂದ ಭಾರತೀಯರ ಸ್ಥಳಾಂತರಕ್ಕೆ ಮೊದಲ ಆದ್ಯತೆ
ಕೀವ್, ಮಾರ್ಚ್ 1: ರಷ್ಯಾ ಯುದ್ಧದ ನಡುವೆ ಉಕ್ರೇನ್ ಪೂರ್ವದ ಖಾರ್ಕಿವ್‌ನಿಂದ ಭಾರತೀಯರನ್ನು ಸ್ಥಳಾಂತರಿಸುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ಕೇಂದ್ರ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಹೇಳಿದ್ದಾರೆ.
ಖಾರ್ಕಿವ್‌ನಲ್ಲಿನ ಪರಿಸ್ಥಿತಿಯ ಬಗ್ಗೆ ಮಾತನಾಡಿದ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ, "ಒಂದು ತಂಡವು ಸ್ಥಳದಲ್ಲಿದ್ದು, ಖಾರ್ಕಿವ್ ಮತ್ತು ಸುಮಿಯಿಂದ ವಿದ್ಯಾರ್ಥಿಗಳನ್ನು ಹೊರತೆರಲು ಏನು ಮಾಡಬಹುದು ಎಂಬುದನ್ನು ನೋಡೋಣ," ಎಂದು ಹೇಳಿದರು.
ಭಾರತದ ಶೇ.60ರಷ್ಟು ಅಂದರೆ ಕನಿಷ್ಠ 12,000 ಭಾರತೀಯ ಪ್ರಜೆಗಳು ಉಕ್ರೇನ್ ತೊರೆದಿದ್ದಾರೆ. ಉಳಿದವರಲ್ಲಿ ಅರ್ಧದಷ್ಟು ಭಾಗವು ಖಾರ್ಕಿವ್ ಮತ್ತು ಸುಮಿಯಲ್ಲಿದೆ. ಉಳಿದ ಅರ್ಧವು ಪಶ್ಚಿಮ ಗಡಿಯತ್ತ ಸಾಗುತ್ತಿದೆ," ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ತಿಳಿಸಿದ್ದಾರೆ. "ಝಪೊರಿಟ್ಜಿಯಾದಲ್ಲಿನ 1,400 ನಾಗರಿಕರು ಪಶ್ಚಿಮ ಗಡಿಗೆ ತೆರಳಿದ್ದಾರೆ. 400 ವಿದ್ಯಾರ್ಥಿಗಳು ಮೊಲ್ಡೊವಾಕ್ಕೆ ತೆರಳಿದ್ದಾರೆ. ರಾಯಭಾರ ಕಚೇರಿಯನ್ನು ಎಲ್ವಿವ್ ನಲ್ಲಿ ಸ್ಥಾಪಿಸಲಾಗುತ್ತಿದೆ," ಎಂದು ಅವರು ಮಾಹಿತಿ ನೀಡಿದ್ದಾರೆ.

ಸುಮಿ, ಖಾರ್ಕಿವ್‌ನಲ್ಲಿನ ಪರಿಸ್ಥಿತಿಯ ಬಗ್ಗೆ ಕಾಳಜಿ:
"ನಾವು ಸುಮಿ, ಖಾರ್ಕಿವ್‌ನಲ್ಲಿನ ಪರಿಸ್ಥಿತಿಯ ಬಗ್ಗೆ ತುಂಬಾ ಕಾಳಜಿ ವಹಿಸುತ್ತೇವೆ. ನಾವು ರಷ್ಯಾದ ಮತ್ತು ಉಕ್ರೇನಿಯನ್ ರಾಯಭಾರಿಗಳಿಗೆ ಕರೆ ಮಾಡಿದ್ದೇವೆ. ಸಂಘರ್ಷದ ಪ್ರದೇಶಗಳಲ್ಲಿ ನಮ್ಮ ವಿದ್ಯಾರ್ಥಿಗಳ ತುರ್ತು ಸುರಕ್ಷಿತ ಮಾರ್ಗಕ್ಕಾಗಿ ಪ್ರಬಲ ಬೇಡಿಕೆಯನ್ನು ಪುನರುಚ್ಚರಿಸಿದ್ದೇವೆ," ಎಂದು ಭಾರತೀಯ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಹೇಳಿದ್ದಾರೆ.
ಕೀವ್ ನಗರದಲ್ಲಿ ಭಾರತೀಯರು ಉಳಿದಿಲ್ಲ:
ಉಕ್ರೇನ್‌ನ ರಾಜಧಾನಿ ಕೀವ್‌ನಲ್ಲಿ ಯಾವುದೇ ಭಾರತೀಯ ಪ್ರಜೆಗಳು ಉಳಿದಿಲ್ಲ. ಪ್ರತಿಯೊಬ್ಬರೂ ಸಂಘರ್ಷಪೀಡಿತ ಪ್ರದೇಶದಿಂದ ಹೊರ ಬಂದಿದ್ದಾರೆ," ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಪುನರ್ ಉಚ್ಛರಿಸಿದ್ದಾರೆ. ಖಾರ್ಕಿವ್‌ನಲ್ಲಿ ರಷ್ಯಾದ ಶೆಲ್ ದಾಳಿಯಲ್ಲಿ ಭಾರತೀಯ ವಿದ್ಯಾರ್ಥಿ ನವೀನ್ ಸಾವಿಗೀಡಾದ ಬಗ್ಗೆ ಮಾತನಾಡಿದ ಶ್ರಿಂಗ್ಲಾ, "ಈ ಬಗ್ಗೆ ನಾವು ತೀವ್ರ ವಿಷಾದವನ್ನು ವ್ಯಕ್ತಪಡಿಸುತ್ತೇವೆ. ಪ್ರಧಾನಿಯವರು ಪ್ರಾಣಹಾನಿಗಾಗಿ ತೀವ್ರ ದುಃಖ ವ್ಯಕ್ತಪಡಿಸಿದರು" ಎಂದು ಹೇಳಿದರು.

ಕರೆನ್ಸಿ ಬದಲಾಯಿಸಿಕೊಂಡು ಬರಲು ಹೋದಾಗ ದಾಳಿ:
ಕರ್ನಾಟಕದ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ್ ಕಳೆದ ನಾಲ್ಕು ವರ್ಷಗಳಿಂದ ಉಕ್ರೇನ್‌ನ ಖಾರ್ಕಿವ್ ನಗರದಲ್ಲಿ ವಾಸವಾಗಿದ್ದರು. ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ ನವೀನ್, ಮಂಗಳವಾರ ಬೆಳಗ್ಗೆ ಕರೆನ್ಸಿ ಬದಲಾಯಿಸಿಕೊಂಡು ಬರುವುದಕ್ಕೆ ತೆರಳಿದ ಸಂದರ್ಭದಲ್ಲಿ ರಷ್ಯಾ ನಡೆಸಿದ ಶೆಲ್ ದಾಳಿಯಲ್ಲಿ ವಿದ್ಯಾರ್ಥಿ ಮೃತಪಟ್ಟಿದ್ದಾರೆ ಎಂದು ಅವರ ಜೊತೆಗಿದ್ದ ವಿದ್ಯಾರ್ಥಿಗಳು ವಿವರಿಸಿದ್ದಾರೆ.
ನವೀನ್ ಜೊತೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ರಾಣೆಬೆನ್ನೂರು ತಾಲೂಕಿನ ಸ್ನೇಹಿತ ಪ್ರವೀಣ್ ಎಂಬಾತ ಈ ಸಾವಿನ ಬಗ್ಗೆ ಪೋಷಕರಿಗೆ ಮೊಬೈಲ್ ಮೂಲಕ ಸಂದೇಶ ರವಾನಿಸಿದ್ದ. ಸ್ನೇಹಿತನ ಸಂದೇಶದ ನಡುವೆ ಭಾರತೀಯ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಕೂಡ ಭಾರತೀಯ ವಿದ್ಯಾರ್ಥಿಯೊಬ್ಬರು ಮೃತಪಟ್ಟಿರುವ ಬಗ್ಗೆ ಟ್ವೀಟ್ ಮಾಡಿದ್ದರು.












Click it and Unblock the Notifications