Russia & Ukraine: ಉಕ್ರೇನ್-ರಷ್ಯಾ ಯುದ್ಧ ಸಂಧಾನಕ್ಕೆ ಭಾರತ ಎಂಟ್ರಿ!
ಸೌದಿ ಅರೇಬಿಯಾ: ರಷ್ಯಾ ಹಾಗೂ ಉಕ್ರೇನ್ ನಡುವೆ ನಡೆಯುತ್ತಿರುವ ಭೀಕರ ಯುದ್ಧಕ್ಕೆ ಅಂತ್ಯ ಹಾಡಲು ಇಡೀ ಜಗತ್ತು ಒಂದಾಗಿದೆ. ಇದೇ ವೇಳೆ ಶಾಂತಿ ಮಾತುಕತೆಗೆ ಮೀಟಿಂಗ್ ಕೂಡ ಶುರುವಾಗಿದೆ. ಸೌದಿ ಅರೇಬಿಯಾದಲ್ಲಿ ನಡೆಯುತ್ತಿರುವ ಮಾತುಕತೆಯಲ್ಲಿ ಭಾರತ ಕೂಡ ಪ್ರಮುಖ ಪಾತ್ರ ವಹಿಸಿದೆ.
ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸೌದಿ ಅರೇಬಿಯಾದಲ್ಲಿ ಆರಂಭ ಆಗಿರುವ ರಷ್ಯಾ & ಉಕ್ರೇನ್ ಶಾಂತಿ ಮಾತುಕತೆಯಲ್ಲಿ ಭಾಗವಹಿಸಿದ್ದರು. ಈ ಸಂಘರ್ಷಕ್ಕೆ ಶಾಂತಿಯುತ ಪರಿಹಾರ ಮಾರ್ಗ ಕಂಡುಕೊಳ್ಳುವ ಉದ್ದೇಶದಿಂದ ಸಮ್ಮೇಳನಕ್ಕೆ ಭಾರತವನ್ನು ಕೂಡ ಆಹ್ವಾನಿಸಲಾಗಿದೆ. ಸೌದಿ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ಜೆಡ್ಡಾದಲ್ಲಿ ಸಭೆಯನ್ನ ಆಯೋಜನೆ ಮಾಡಿದ್ದು 2 ದಿನದ ಸಮ್ಮೇಳನದಲ್ಲಿ ಒಟ್ಟು 40 ದೇಶದ ಭದ್ರತಾ ಅಧಿಕಾರಿಗಳು ಭಾಗವಹಿಸಿದ್ದಾರೆ. ನಿನ್ನೆಯಿಂದ ಶುರುವಾದ ಈ ಸಭೆಯಲ್ಲಿ ಭಾರತವೂ ಭಾಗವಹಿಸಿದೆ.

ಯುದ್ಧ ನಿಲ್ಲಿಸುವಲ್ಲಿ ಭಾರತದ ಪಾತ್ರ ಮುಖ್ಯ
ಈಗಾಗಲೇ ಒಂದೂವರೆ ವರ್ಷ ಪೂರೈಸಿರುವ ರಷ್ಯಾ ಮತ್ತು ಉಕ್ರೇನ್ ಯುದ್ಧ ನಿಲ್ಲಿಸಲು ಭಾರತ ಕೂಡ ಪ್ರಮುಖ ಪಾತ್ರ ವಹಿಸಲಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು, ಮಾತುಕತೆ & ರಾಜತಾಂತ್ರಿಕತೆ ಉತ್ತೇಜಿಸುವುದು ಭಾರತದ ವಿಧಾನ. ಇದು ಯಾವಾಗಲೂ ಇರುತ್ತದೆ. ಇದು ಶಾಂತಿಯಿಂದ ಮುಂದುವರಿಯಲು ಇರುವ ಏಕೈಕ ಮಾರ್ಗವಾಗಿದೆ ಎಂದಿದ್ದಾರೆ. ಈ ಮೂಲಕ ಭಾರತದ ಶಾಂತಿ ಮಾರ್ಗವನ್ನು ಜಗತ್ತಿಗೆ ಮತ್ತೊಮ್ಮೆ ಸಾರಿ ಹೇಳಲಾಗಿದೆ. ಹಾಗೇ ಪರಿಹಾರವು ರಷ್ಯಾ ಮತ್ತು ಉಕ್ರೇನ್ ಎರಡಕ್ಕೂ ಸ್ವೀಕಾರಾರ್ಹವಾಗಿರಬೇಕು ಎಂದು ಅಜಿತ್ ದೋವಲ್ ಹೇಳಿದ್ದಾರೆ.
ಸಂಧಾನ ಸಭೆ ಸಕ್ಸಸ್ ಆಗುತ್ತಾ?
ಅಷ್ಟಕ್ಕೂ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಪ್ರಸ್ತಾಪದ ಹಿನ್ನೆಲೆ ಸೌದಿ ಆರೇಬಿಯಾ ಸಂಧಾನಕ್ಕೆ ಚರ್ಚೆ ಆರಂಭಿಸಿತ್ತು. ಉಕ್ರೇನ್ ಸೇರಿ ಪ್ರಮುಖ ಅಭಿವೃದ್ಧಿಶೀಲ ರಾಷ್ಟ್ರಗಳನ್ನೂ ಆಹ್ವಾನಿಸಿತ್ತು. ಈ ಮೂಲಕ ಯುದ್ಧ ನಿಲ್ಲಿಸಲು ಸಾಕಷ್ಟು ಪ್ರಯತ್ನ ನಡೆಸಲಾಗುತ್ತಿದೆ. ಆದ್ರೆ ಸಭೆ ಕರೆದ ಮಾತ್ರಕ್ಕೆ ಯುದ್ಧ ನಿಲ್ಲಲಿದೆ ಎಂಬ ನಂಬಿಕೆ ಇಲ್ಲ. ಏಕೆಂದರೆ ಈಗಾಗಲೇ ರಷ್ಯಾದ ಅಧ್ಯಕ್ರು ಹಲವಾರು ಬೇಡಿಕೆ ಮುಂದಿಟ್ಟಿದ್ದಾರೆ. ಹೀಗಾಗಿ ಉಕ್ರೇನ್ ಹಾಗೂ ರಷ್ಯಾ ನಡುವೆ ಸಂಧಾನ ನಡೆಸುವುದು ದೊಡ್ಡ ಸವಾಲಿನ ಕೆಲಸವಾಗಲಿದೆ.
2ನೇ ವರ್ಷಕ್ಕೆ ಕಾಲಿಟ್ಟಿರುವ ಯುದ್ಧ
ಕೆಲ ದಿನದಲ್ಲಿ ಮುಗಿದು ಹೋಗುತ್ತೆ ಎಂದು ಅಂದುಕೊಂಡಿದ್ದ ರಷ್ಯಾ ಮತ್ತು ಉಕ್ರೇನ್ ಯುದ್ಧ ಸುಮಾರು ಒಂದೂವರೆ ವರ್ಷ ಮುಗಿಸಿದೆ. ಇಂದಿಗೆ 530ನೇ ದಿನಕ್ಕೆ ಕಾಲಿಟ್ಟಿರುವ ರಣಭೀಕರ ಕಾಳಗ ನಿಲ್ಲುವ ಮುನ್ಸೂಚನೆಯೇ ಕಂಡಿಲ್ಲ. ರಷ್ಯಾ ಕೂಡ ಯುದ್ಧವನ್ನು ಇನ್ನೂ ಮುಂದಕ್ಕೆ ಕೊಂಡೊಯ್ಯಲು ಸನ್ನದ್ಧವಾಗಿದೆ. ಉಕ್ರೇನ್ ಪರದಾಡುತ್ತಿರುವಾಗ ಪಾಶ್ಚಿಮಾತ್ಯ ರಾಷ್ಟ್ರಗಳು ನೆರವಿಗೆ ನಿಂತಿವೆ. ಇದು ರಷ್ಯಾ ಅಧ್ಯಕ್ಷ ಪುಟಿನ್‌ರನ್ನ ಇನ್ನಷ್ಟು ಕೆರಳಿಸುತ್ತಿದೆ. ಹೀಗಾಗಿ ರಷ್ಯಾ ಮತ್ತು ಉಕ್ರೇನ್ ಯುದ್ಧ ಕ್ಷಣಕ್ಷಣಕ್ಕೂ ಭೀಕರ ಸ್ವರೂಪ ಪಡೆಯುತ್ತಿದೆ. ನೋಡ ನೋಡುತ್ತಲೇ ಯುದ್ಧ 530 ದಿನ ಪೂರೈಸಿದ್ದು, ಇನ್ನೇನು 2ನೇ ವರ್ಷವನ್ನೂ ಯುದ್ಧ ಪೂರೈಸುವ ಸಾಧ್ಯತೆ ದಟ್ಟವಾಗಿದೆ.

ಭಾರತ ಈಗ ಏಕೆ ಅತ್ಯಗತ್ಯ?
ಜಗತ್ತು ಈಗ ಎರಡು ಭಾಗವಾಗಿ ಹೋಗಿದೆ. ಒಂದು ಭಾಗ ರಷ್ಯಾ ಜೊತೆಗೆ ಸೇರಿದೆ, ಇದೇ ವೇಳೆ ಇನ್ನೊಂದು ಭಾಗ ಅಮೆರಿಕದ ಜೊತೆ ಸೇರಿ ಉಕ್ರೇನ್ ಪರ ನಿಂತಿದೆ. ಆದರೆ ಭಾರತ ಮಾತ್ರ ಹೀಗೆ ಮಾಡಿಲ್ಲ. ಭಾರತ ಯುದ್ಧವನ್ನ ವಿರೋಧಿಸುವ ಜೊತೆಗೆ ಮಾನವೀಯತೆ ಸಂದೇಶ ಸಾರುತ್ತಿದೆ. ಹಾಗೇ ಯುದ್ಧ ಬೇಡವೇ ಬೇಡ ಎನ್ನುತ್ತಿದೆ. ಈ ವಿಚಾರದಲ್ಲಿ ಅತ್ತ ಉಕ್ರೇನ್‌ಗೂ ಬೆಂಬಲವನ್ನ ನೀಡದೆ ಇತ್ತ ರಷ್ಯಾಗೂ ಬೆಂಬಲ ನೀಡದೆ ಭಾರತ ಶಾಂತಿ ಸಂದೇಶ ಸಾರುತ್ತಿದೆ. ಇದೀಗ ಭಾರತ ಕೂಡ ಸಂಧಾನ ಸಭೆಯ ಚರ್ಚೆಯಲ್ಲಿ ಭಾಗವಹಿಸಿದ್ದು, ಶಾಂತಿ ಮಾತುಕತೆಗೆ ಮಾತ್ರ ತಾನು ಒತ್ತು ನೀಡುವ ಘೋಷಣೆಯನ್ನ ಮತ್ತೊಮ್ಮೆ ಹೊರಡಿಸಿದೆ.












Click it and Unblock the Notifications