Independence Day: ಗಡಿಯಲ್ಲಿ ಭಾರತ & ಪಾಕ್ ಯೋಧರ ಸಿಹಿ ಸಂಭ್ರಮ!
ಜಮ್ಮುಕಾಶ್ಮೀರ: ಇಂದು ಶತಕೋಟಿ ಭಾರತೀಯರಿಗೆ ಎಂದೂ ಮರೆಯಲಾಗದ ದಿನ. ಹೀಗೆ ಪಾಕಿಸ್ತಾನ ಕೂಡ ಸ್ವಾತಂತ್ರ್ಯ ದಿನವನ್ನ ಆಚರಿಸಿಕೊಂಡಿದೆ. ಭಾರತ & ಪಾಕಿಸ್ತಾನ ನಡುವೆ ತಿಕ್ಕಾಟ ಇದ್ದರೂ ಸ್ವಾತಂತ್ರ್ಯ ದಿನದಂದು ಅದು ಲೆಕ್ಕಕ್ಕೆ ಬರುವುದಿಲ್ಲ. ಅದರಲ್ಲೂ ಪಾಕ್ ಯೋಧರಿಗೆ ಭಾರತದ ಹೆಮ್ಮೆಯ ಸೈನಿಕರು ಖುಷಿಯಿಂದ ಸಿಹಿ ಹಂಚುತ್ತಾರೆ. ಈ ಬಾರಿಯ ಸ್ವಾತಂತ್ರ್ಯ ದಿನಕ್ಕೂ ಇದೇ ರೀತಿ ಸಿಹಿ ನೀಡಿ ಶುಭ ಕೋರಿದ್ದಾರೆ ಭಾರತದ ಯೋಧರು.
ಪ್ರತಿವರ್ಷವು ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಉಭಯ ದೇಶಗಳ ಯೋಧರು ಇದೇ ರೀತಿ ಕೈಕುಲುಕಿ, ಸಿಹಿ ಹಂಚುತ್ತಾ ಬಂದಿದ್ದಾರೆ. ಈ ಬಾರಿ ಕೂಡ ಅದೇ ರೀತಿ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಸಾಂಬಾ, ಜಮ್ಮು ಮತ್ತು ಪೂಂಛ್‌ನಲ್ಲಿ ಸೇನೆ ಹಾಗೂ ಬಿಎಸ್‌ಎಫ್ ಪಡೆ ಯೋಧರು ಪಾಕಿಸ್ತಾನದ ಸೈನಿಕರಿಗೆ ಸಿಹಿ ಹಂಚಿದ್ದಾರೆ. ಈ ನಡುವೆ ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆ ಬಳಿ ಇರುವ ಗಡಿ ನಿಯಂತ್ರಣ ರೇಖೆಯಲ್ಲಿ ಬಿಎಸ್‌ಎಫ್ ಅಂದ್ರೆ ಗಡಿ ಭದ್ರತಾ ಪಡೆ ಯೋಧರು ಸ್ವಾತಂತ್ರ್ಯ ದಿನಾಚರಣೆ ಸಮಾರಂಭವನ್ನ ಅದ್ಧೂರಿಯಾಗಿ ನೆರವೇರಿಸಿದ್ದಾರೆ.

ಹೆಮ್ಮೆಯಿಂದ ಹಾರಿದ ಭಾರತದ ಧ್ವಜ!
ಗಡಿ ನಿಯಂತ್ರಣ ರೇಖೆಯಲ್ಲಿ ಬಿಎಸ್‌ಎಫ್ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಬೆಟಾಲಿಯನ್ ಕಮ್ಯಾಂಡಿಂಗ್ ಅಧಿಕಾರಿ ಮೊಹಮದ್ ಇಸ್ರೇಲ್ ಧ್ವಜಾರೋಹಣ ನೆರವೇರಿಸಿದರು. ಯೋಧರು ದೇಶಪ್ರೇಮ ಕುರಿತಾದ ಘೋಷಣೆ ಕೂಗಿ ಸಂಭ್ರಮಿಸಿದರು. ಇನ್ನು ಧ್ವಜಾರೋಹಣದ ನಂತರ ಮಾತನಾಡಿದ ಮೊಹಮದ್ ಅವರು, ದೇಶದ ಗಡಿ ಭಾಗ ರಕ್ಷಣೆಯ ಜವಾಬ್ದಾರಿಯನ್ನ ನಮಗೆ ಕೊಟ್ಟಿರುವುದು ನಮ್ಮ ಅದೃಷ್ಟ. ಈ ಬಗ್ಗೆ ನಮಗೆ ಹೆಮ್ಮೆ ಇದೆ ಎಂದರು.
ಗಡಿ ಭಾಗದಲ್ಲಿ ಹೆಚ್ಚಿನ ಭದ್ರತೆ
ಹಾಗೇ ದೇಶದ ಪ್ರತಿಯೊಬ್ಬರು ಸುರಕ್ಷಿತವಾಗಿರುತ್ತಾರೆ ಎಂದು ನಾನು ಭರವಸೆ ನೀಡುತ್ತೇನೆ. ಎಲ್‌ಒಸಿಯಿಂದ ಯಾವುದೇ ಶತ್ರು ಗಡಿಯ ಒಳಗೆ ನುಗ್ಗಲು ಸಾಧ್ಯವಿಲ್ಲ ಎಂದು ಮೊಹಮದ್ ಇಸ್ರೇಲ್ ಹೇಳಿದರು. ಬಿಎಸ್‌ಎಫ್ ಕಾಶ್ಮೀರ ವಿಭಾಗದ ಐಜಿ ಅಶೋಕ್ ಯಾದವ್ ಅವರು ಇದೇ ವೇಳೆ ಮಾತನಾಡಿ, ಸ್ವಾತಂತ್ರ್ಯ ಸಂಭ್ರಮದಲ್ಲಿ ಎದುರಾಗಬಹುದಾದ ಶತ್ರುಗಳ ದುಷ್ಟ ಯೋಜನೆ ವಿಫಲವಾಗಿಸಲು ಎಲ್‌ಒಸಿ ಸುತ್ತಲೂ ಭಾರಿ ಕಟ್ಟೆಚ್ಚರ ವಹಿಸಿದ್ದೇವೆಂದು ಮಾಹಿತಿ ನೀಡಿದರು. ಇನ್ನು ಭಾರತ & ಪಾಕ್ ಗಡಿ ಭಾಗದಲ್ಲಿ ಸ್ವಾತಂತ್ರ್ಯ ಸಂಭ್ರಮದ ಹಿನ್ನೆಲೆ ಭದ್ರತೆ ಹೆಚ್ಚಿಸಲಾಗಿತ್ತು.

ಚೀನಾ, ಸೌದಿ, ಟರ್ಕಿಗೆ ಪಾಕ್ ಧನ್ಯವಾದ!
ಭಾರತದಲ್ಲಿ ಸ್ವಾತಂತ್ರ್ಯ ದಿನಾಚರಣೆ ನೆರವೇರುವ ಒಂದು ದಿನ ಮುನ್ನ ಪಾಕ್ ಸ್ವಾತಂತ್ರ್ಯ ಸಮಾರಂಭ ನೆರವೇರಿಸಿದೆ. ಪಾಕಿಸ್ತಾನ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಇಸ್ಲಾಮಾಬಾದ್‌ನ ಜಿನ್ಹಾ ಕನ್ವೆನ್ಷನ್ ಸೆಂಟರ್‌ನಲ್ಲಿ ಧ್ವಜಾರೋಹಣ ನೆರವೇರಿಸಿ ಪಾಕಿಸ್ತಾನ ಅಧ್ಯಕ್ಷ ಆರಿಫ್ ಅಲ್ವಿ ಮಾತನಾಡಿದರು. ಆರ್ಥಿಕ ಸಂಕಷ್ಟದಲ್ಲಿರುವ ಪಾಕ್‌ಗೆ ನೆರವು ನೀಡಿದ್ದಕ್ಕಾಗಿ ಚೀನಾ, ಸೌದಿ ಅರೇಬಿಯಾ, ಅರಬ್, ಇರಾನ್ & ಟರ್ಕಿಗೆ ಧನ್ಯವಾದ ಸಲ್ಲಿಸಿದರು ಅಲ್ವಿ. ಪಾಕ್ ಕೆಲವೇ ವರ್ಷಗಳಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿಗೆ ಸೇರಲಿದೆ, ಆರ್ಥಿಕ ಸಂಕಷ್ಟದಿಂದ ಹೊರಬರಲಿದೆ ಎಂದು ಅಭಿಪ್ರಾಯಪಟ್ಟು. ಹಾಗೇ ತಮ್ಮ ದೇಶದ ಸಮಸ್ಯೆಗಳ ಬಗ್ಗೆಯೂ ಅಲ್ವಿ ಮಾತನಾಡಿದ್ದಾರೆ.
2.70 ಕೋಟಿ ಮಕ್ಕಳಿಗೆ ಶಿಕ್ಷಣವಿಲ್ಲ
ಇದೇ ವೇಳೆ ಪಾಕ್ ರಾಜಕಾರಣಿಗಳಿಗೆ ಪಾಕಿಸ್ತಾನ ರಾಷ್ಟ್ರಪತಿ ಆರಿಫ್ ಅಲ್ವಿ ಬುದ್ಧಿಮಾತು ಹೇಳಿದ್ದು, ಕ್ಷಮಿಸುವ ಗುಣ ಕಲಿಯಿರಿ ಎಂದು ಸಲಹೆ ನೀಡಿದ್ದಾರೆ. ಒಗ್ಗಟ್ಟಿನಿಂದ ಇರಲು ದೇಶದ ನಾಯಕರಲ್ಲಿ ನಾನು ಮನವಿ ಮಾಡುತ್ತೇನೆ. ಹಾಗೇ ಪಾಕಿಸ್ತಾನದಲ್ಲಿ 2.70 ಕೋಟಿ ಮಕ್ಕಳು ಶಾಲೆಯಿಂದ ಹೊರಬಿದ್ದಿದ್ದಾರೆ. ಶ್ರೀಮಂತರು ಮುಂದೆ ಬಂದು ಆ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡಲಿ. ದೇಶದ ಆರ್ಥಿಕ ಚಟುವಟಿಕೆಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯು ಕೂಡ ಮುಖ್ಯವಾಗಿ ಎಂದಿದ್ದಾರೆ. ಈ ಮೂಲಕ ಪಾಕ್‌ನಲ್ಲಿ ಮಕ್ಕಳ ಪರಿಸ್ಥಿತಿಯನ್ನ ಸ್ವತಃ ಪಾಕಿಸ್ತಾನದ ರಾಷ್ಟ್ರಪತಿಯೇ ಬಿಡಿಸಿಟ್ಟಿದ್ದಾರೆ. ಹೀಗೆ ಸ್ವಾತಂತ್ರ್ಯ ಸಂಭ್ರಮದಲ್ಲಿ ಪಾಕ್‌ನ ಪರಿಸ್ಥಿತಿ ಜಗತ್ತಿಗೇ ಗೊತ್ತಾಗಿದೆ.












Click it and Unblock the Notifications