
ನ.7ರಿಂದ ಎರಡು ದಿನ ಪ್ರವಾಸ; ವಿದೇಶಾಂಗ ಸಚಿವ ಜೈಶಂಕರ್ ರಷ್ಯಾ ಭೇಟಿ ರಹಸ್ಯ
ಮಾಸ್ಕೋ, ನವೆಂಬರ್ 4: ರಷ್ಯಾ-ಉಕ್ರೇನ್ ನಡುವಿನ ಯುದ್ಧದ ಕಾರ್ಮೋಡದ ನಡುವೆ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ನವೆಂಬರ್ 7 ರಿಂದ ಎರಡು ದಿನ ರಷ್ಯಾ ಪ್ರವಾಸ ಕೈಗೊಳ್ಳಲಿದ್ದಾರೆ. ನವೆಂಬರ್ 7 ಮತ್ತು 8ರಂದು ರಷ್ಯಾಗೆ ಭೇಟಿ ನೀಡಲಿರುವ ಅವರು, ರಷ್ಯಾದ ಸಹವರ್ತಿ ಸೆರ್ಗೆ ಲಾವ್ರೊವ್ ಜೊತೆಗೆ ಮಾತುಕತೆ ನಡೆಸಲಿದ್ದಾರೆ.
ವಿದೇಶಾಂಗ ಸಚಿವ ಜೈಶಂಕರ್ ಭೇಟಿಯನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಗುರುವಾರ ಸ್ಪಷ್ಟಪಡಿಸಿದೆ. ಮಾಸ್ಕೋಗೆ ಭೇಟಿ ನೀಡಿದಾಗ, ಜೈಶಂಕರ್ ಲಾವ್ರೊವ್ ಜೊತೆಗೆ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ವಿಷಯಗಳ ಕುರಿತು ಮಾತುಕತೆ ನಡೆಸಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ವಕ್ತಾರ ಅರಿಂದಮ್ ಬಾಗ್ಚಿ ತಿಳಿಸಿದ್ದಾರೆ.
ಮುಂಬೈ ದಾಳಿ ಮಾಸ್ಟರ್ ಮೈಂಡ್ಗಳಿಗೆ ಶಿಕ್ಷೆಯಾಗಿಲ್ಲ: ಜೈಶಂಕರ್
ಕಳೆದ ಕೆಲವು ತಿಂಗಳುಗಳಲ್ಲಿ ಭಾರತ ಮತ್ತು ರಷ್ಯಾ ನಡುವಿನ ವಹಿವಾಟು ಜೋರಾಗಿದೆ. ಹಲವಾರು ಪಾಶ್ಚಿಮಾತ್ಯ ಶಕ್ತಿಗಳಿಂದ ಹೆಚ್ಚುತ್ತಿರುವ ಆತಂಕದ ಹೊರತಾಗಿಯೂ, ಭಾರತವು ರಷ್ಯಾದಿಂದ ರಿಯಾಯಿತಿ ದರದ ಹೆಚ್ಚಿನ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ.
ನಾಲ್ಕು ಬಾರಿ ಜೈಶಂಕರ್-ಲಾವ್ರೊವ್ ಭೇಟಿ:
ಕಳೆದ ಫೆಬ್ರವರಿಯಲ್ಲಿ ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ಪ್ರಾರಂಭವಾದ ದಿನದಿಂದ ಇದುವರೆಗೂ ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ಹಾಗೂ ರಷ್ಯಾದ ಸೆರ್ಗೆ ಲಾವ್ರೊವ್ ನಾಲ್ಕು ಬಾರಿ ಭೇಟಿ ಆಗಿದ್ದಾರೆ. ಏಪ್ರಿಲ್ ತಿಂಗಳಿನಲ್ಲಿ ರಷ್ಯಾದ ವಿದೇಶಾಂಗ ಸಚಿವರು ಜೈಶಂಕರ್ ಜೊತೆಗೆ ಸಭೆ ನಡೆಸಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನೂ ಭೇಟಿ ಮಾಡಿದ್ದರು.
ವಿಶ್ವಸಂಸ್ಥೆಯಲ್ಲಿ ಅಂತರ ಕಾಯ್ದುಕೊಂಡ ಭಾರತ:
ಪಾಶ್ಚಿಮಾತ್ಯ ರಾಷ್ಟ್ರಗಳ ಒತ್ತಡದ ಹೊರತಾಗಿಯೂ ರಷ್ಯಾ ವಿರುದ್ಧದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಪ್ರಮುಖ ನಿರ್ಣಯಗಳಲ್ಲಿ ಭಾರತವು ಮತದಾನದಿಂದ ದೂರ ಉಳಿಯಿತು. ಕಳೆದ ತಿಂಗಳು ಸಮರ್‌ಕಂಡ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆ ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿ ಮಾಡಿದ್ದರು. ಈ ಸಭೆಯಲ್ಲಿ "ಇದು ಯುದ್ಧದ ಯುಗವಲ್ಲ" ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ನೀಡಿದ ಹೇಳಿಕೆಯನ್ನು ಅನೇಕ ಪಾಶ್ಚಿಮಾತ್ಯ ರಾಷ್ಟ್ರಗಳು ಸಾರ್ವಜನಿಕ ಬೆಂಬಲಿಸಿದ್ದವು.
ಭಾರತಕ್ಕೆ ಭೇಟಿ ನೀಡಿದ್ದ ಪುಟಿನ್:
ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ನಡೆದ ಭಾರತ-ರಷ್ಯಾ ವಾರ್ಷಿಕ ಸಮ್ಮೇಳನದ ಅಂಗವಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತಕ್ಕೆ ಭೇಟಿ ನೀಡಿದ್ದರು.