'ನಿಮ್ಮಿಂದ ಪಾಠ ಕಲಿಯಬೇಕಿಲ್ಲ,' ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಭಾರತದ ಉತ್ತರ!
ಜಿನೆವಾ, ಸೆಪ್ಟೆಂಬರ್ 11: "ಕಾಶ್ಮೀರ ಭಾರತದ ಆಂತರಿಕ ವಿಷಯ. ಕಾಶ್ಮೀರದಲ್ಲಿ ಮಾನವ ಹಕ್ಕು ಉಲ್ಲಂಘನೆಯಾಗುತ್ತಿದೆ ಎಂದು ಯಾವ ದೇಶವೂ ಸುಳ್ಳು ಹೇಳಿಕೆಗಳನ್ನು ನೀಡುವ ಅಗತ್ಯವಿಲ್ಲ" ಎಂದು ವಿಶ್ವಸಂಸ್ಥೆಯ ಮಾನವ ಹಕ್ಕು ಸಮಿತಿಯ ಸಭೆಯಲ್ಲಿ ಭಾರತ ಹೇಳಿದೆ.
ಸ್ವಿಟ್ಜರ್ಲೆಂಡಿನ ಜಿನೆವಾದಲ್ಲಿ ನಡೆದ ವಿಶ್ವಸಂಸ್ಥೆಯ ಮಾನವ ಹಕ್ಕು ಸಮಿತಿ ಸಭೆಯಲ್ಲಿ ಪಾಕಿಸ್ತಾನದ ಹೆಸರನ್ನೇ ಉಲ್ಲೇಖಿಸದೆ ಮಾತನಾಡಿದ ಭಾರತ, "ಮೋಸ್ಟ್ ವಾಂಟೆಂಡ್ ಉಗ್ರರಿಗೆ ರಕ್ಷಣೆ ನೀಡುತ್ತಿರುವ, ಭಯೋತ್ಪಾದನೆಗೆ ಕೇಂದ್ರನೆಲೆಯಾಗಿರುವ ದೇಶವೊಂದು ನಮಗೆ ಮಾನವ ಹಕ್ಕು ಉಲ್ಲಂಘನೆಯ ಪಾಠ ಹೇಳುವ ಅಗತ್ಯವಿಲ್ಲ" ಎಂದು ಭಾರತ ಗುಡುಗಿದೆ.
"ಕಾಶ್ಮೀರ ಸಹಜ ಸ್ಥಿತಿಗೆ ಮರಳಿದ್ದು, ಅಲ್ಲಿ ಯಾವ ರೀತಿಯ ಹಿಂಸಾಚಾರವೂ ನಡೆಯುತ್ತಿಲ್ಲ" ಎಂದು ಭಾರತ ವಿಶ್ವಸಂಸ್ಥೆಗೆ ಮನದಟ್ಟುಮಾಡುವ ಪ್ರಯತ್ನವನ್ನು ಈ ಸಭೆಯಲ್ಲಿ ಮಾಡಿದೆ.

ಯೋಚಿಸಿಯೇ ನಿರ್ಧಾರ ತೆಗೆದುಕೊಂಡಿದ್ದೇವೆ
ಭಾರತ ಸರ್ಕಾರ ಈ ಕುರಿತು ಬಹಳ ಯೋಚಿಸಿಯೇ ನಿರ್ಧಾರ ತೆಗೆದುಕೊಂಡಿದೆ. ಅದಕ್ಕೂ ಮುನ್ನ ಸರ್ಕಾರ ಹಲವು ಚರ್ಚೆಗಳನ್ನು ನಡೆಸಿದೆ. ಭಾರತದಲ್ಲಿ ಸಂಸತ್ತು ಯಾವೆಲ್ಲ ಕಾಯ್ದೆಗಳನ್ನು ಜಾರಿಗೆ ತರುತ್ತದೆಯೋ, ಹಾಗೆಯೇ ಇದು ಸಹ ಭಾರತದ ಆಂತರಿಕ ವಿಷಯ. ಅದರಲ್ಲಿ ತಲೆ ಹಾಕುವ ಅಧಿಕಾರ ಬೇರೆ ಯಾವ ದೇಶಕ್ಕೂ ಇಲ್ಲ ಎಂಬುದನ್ನು ಈ ಸಂದರ್ಭದಲ್ಲಿ ನೆನಪಿಸಲು ಬಯಸುತ್ತೇನೆ ಎಂದು ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ವಿಜಯ್ ಠಾಕೂರ್ ಸಿಂಗ್ ಹೇಳಿದರು.

ನಿಮ್ಮಿಂದ ಪಾಠ ಕಲಿಯಬೇಕಿಲ್ಲ!
"ಯಾವುದೇ ದೇಶ ಜಮ್ಮು ಕಾಶ್ಮೀರದಲ್ಲಿ ಮಾನವ ಹಕ್ಕು ಉಲ್ಲಂಘನೆಯಾಗುತ್ತಿದೆ ಎಂದು ಎಷ್ಟು ಉತ್ಪ್ರೇಕ್ಷೆ ಮಾಡಿ ಹೇಳಿದರೂ ಅದಕ್ಕೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಕಾಶ್ಮೀರದ ಮಾನವ ಹಕ್ಕು ಉಲ್ಲಂಘನೆಯ ಬಗ್ಗೆ ಮಾತನಾಡುವ ದೇಶ ಮೊದಲು ತಾನು ಸಾಕಿಟ್ಟುಕೊಂಡಿರುವ ಭಯೋತ್ಪಾದನೆಯ ವಿರುದ್ಧ ಸಮರ ಸಾರಲಿ" ಎಂದು ಭಾರತ ಹೇಳಿದೆ.

ಪಾಕಿಸ್ತಾನದ ಒತ್ತಾಯ
ಈ ಮೊದಲು ಕಾಶ್ಮೀರದ ಸ್ಥಿತಿಗತಿಯ ಬಗ್ಗೆ ಆಂತರಿಕ ತನಿಖೆ ನಡೆಸುವಂತೆ ವಿಶ್ವಸಂಸ್ಥೆಯ ಮಾನವ ಹಕ್ಕು ಆಯೋಗಕ್ಕೆ ಶಾ ಮಹಮ್ಮೂದ್ ಖುರೇಶಿ ಒತ್ತಾಯಿಸಿದ್ದರು. ಭಾರತ ಜಮ್ಮು ಕಾಶ್ಮೀರದಲ್ಲಿ ಜಾರಿಗೊಳಿಸಿರುವ ಕರ್ಫ್ಯೂವನ್ನು ಹಿಂತೆಗೆದುಕೊಳ್ಳಬೇಕು. ಅಲ್ಲಿನ ಜನರಿಗೆ ಸ್ವಾತಂತ್ರ್ಯ ನೀಡಬೇಕು, ಹೆಚ್ಚಿನ ಸೇನೆಯನ್ನು ವಾಪಸ್ ಪಡೆಯಬೇಕು, ರಾಜಕೀಯ ಖೈದಿಗಳನ್ನು ಬಿಡುಗಡೆ ಮಾಡಬೇಕು ಎಂದು ಪಾಕಿಸ್ತಾನ ಒತ್ತಾಯಿಸಿತ್ತು. ಆದರೆ ಇದರಲ್ಲಿ ಬೇರೆ ದೇಶಗಳಾಗಲೀ, ಸಂಘಟನೆಗಳಾಗಲೀ ತಲೆಹಾಕುವ ಅಗತ್ಯವಿಲ್ಲ ಎನ್ನುವ ಮೂಲಕ ಭಾರತ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿತು.

'ಕಾಶ್ಮೀರ ಭಾರತದ್ದು' ಎಂದಿದ್ದ ಖುರೇಶಿ!
ಮಂಗಳವಾರ ವಿಶ್ವಸಂಸ್ಥೆಯ ಮಾನವ ಹಕ್ಕು ಸಮಿತಿ ಸಭೆಯಲ್ಲಿ ಮಾತನಾಡುತ್ತಿದ್ದ ಖುರೇಶಿ, "ಜಗತ್ತಿನ ಎದುರು ಕಾಶ್ಮೀರ ಸಹಜ ಸ್ಥಿತಿಗೆ ಮರಳಿದೆ ಎಂಬ ಭಾವನೆ ಸೃಷ್ಟಿಯಾಗುವಂತೆ ಭಾರತ ಮಾಡುತ್ತಿದೆ. ಅಕಸ್ಮಾತ್ ಕಾಶ್ಮೀರ ಸಹಜ ಸ್ಥಿತಿಗೆ ಮರಳಿದ್ದರೆ, ಅಂತಾರಾಷ್ಟ್ರೀಯ ಸಂಘಟನೆಗಳು, ಎನ್ ಜಿಒಗಳು ಪತ್ರಕರ್ತರನ್ನು ಅಲ್ಲಿಗೆ ತೆರಳಲು ಬಿಡಲಿ. 'ಭಾರತೀಯ ರಾಜ್ಯ'ವಾದ ಜಮ್ಮು ಮತ್ತು ಕಾಶ್ಮೀರದ ಸ್ಥಿತಿ ಹೇಗಿದೆ ಎಂಬುದನ್ನು ಅವರೇ ಖುದ್ದು ತೆರಳಿ ತಿಳಿಯಲಿ"ಎಂದಿದ್ದರು.












Click it and Unblock the Notifications