Imran Khan: ಇಮ್ರಾನ್ ಖಾನ್‌ಗೆ ಜೈಲಿನಲ್ಲಿ ವಿಷ ಹಾಕ್ತಾರಾ?
ಲಾಹೋರ್: ದಿನದಿಂದ ದಿನಕ್ಕೆ ಪರಿಸ್ಥಿತಿ ಕೈಮೀರಿ ಹೋಗುತ್ತಿದ್ದು, ಪಾಕಿಸ್ತಾನದ ಮಾಜಿ ಪ್ರಧಾನಿಗೆ ಜೈಲಿನಲ್ಲಿ ಜೀವ ಭಯ ಎದುರಾಗಿದೆ ಎಂಬ ಆರೋಪ ಕೇಳಿಬಂದಿದೆ. ಖುದ್ದಾಗಿ ಇಮ್ರಾನ್ ಪತ್ನಿ ಈ ಆರೋಪ ಮಾಡಿದ್ದು, ಅಟಕ್ ಜೈಲಿನಲ್ಲಿ ಆಹಾರದಲ್ಲಿ ವಿಷ ಬೆರೆಸುವ ಆತಂಕ ಇದೆ ಎಂದಿದ್ದಾರೆ ಬುಶ್ರಾ ಬೀಬಿ. ಆರೋಪದ ಬಳಿಕ ಪಾಕಿಸ್ತಾನದಲ್ಲಿ ಮತ್ತೊಮ್ಮೆ ಸಂಚಲನ ಸೃಷ್ಟಿಯಾಗಿದೆ.
ಈಗಾಗಲೇ ಉಡುಗೊರೆ ಮಾರಾಟ ಆರೋಪದಡಿ 14 ಕೋಟಿ ರೂಪಾಯಿ ಹಣ ಗಳಿಸಿದ್ದಕ್ಕಾಗಿ ಇಮ್ರಾನ್ ಖಾನ್ ಜೈಲು ಸೇರಿದ್ದಾರೆ. 3 ಜೈಲು ಶಿಕ್ಷೆ ಮಾಜಿ ಪ್ರಧಾನಿ ಇಮ್ರಾನ್‌ಗೆ ಫಿಕ್ಸ್ ಆಗಿದೆ. ಇಮ್ರಾನ್‌ಗೆ ಹಗಲಲ್ಲಿ ನೊಣ, ರಾತ್ರಿ ಸೊಳ್ಳೆ & ಹುಳಗಳ ಕಾಟ ಇರುವ ಜೈಲಿನ ಕೋಣೆಯಲ್ಲಿ ಟಾರ್ಚರ್ ಕೊಡುತ್ತಿರುವ ಆರೋಪ ಕೇಳಿಬಂದಿತ್ತು. ಸ್ವತಃ ಇಮ್ರಾನ್ ಖಾನ್ ಪರ ವಕೀಲರು ಈ ಬಗ್ಗೆ ಗಂಭೀರ ಆರೋಪ ಮಾಡಿದ್ದರು. ಇಷ್ಟೆಲ್ಲಾ ಬೆಳವಣಿಗೆ ಮಧ್ಯೆ ಈಗ ಇಮ್ರಾನ್ ಖಾನ್ ಹತ್ಯೆಗೆ ಜೈಲಿನಲ್ಲೇ ಸಂಚು ನಡೆಸಿದ ಆರೋಪವನ್ನ ಸ್ವತಃ ಅವರ ಪತ್ನಿಯೇ ಮಾಡಿದ್ದಾರೆ.

ಜೈಲಿನಲ್ಲಿ ಇಮ್ರಾನ್‌ಗೆ ನರಕ
ತನ್ನ ಪತಿ ಇಮ್ರಾನ್ ಖಾನ್‌ರ ಜೀವ ಅಪಾಯಕ್ಕೆ ಸಿಲುಕಿದೆ ಎಂಬ ಆರೋಪವನ್ನ ಬುಶ್ರಾ ಮಾಡಿದ್ದಾರೆ. ಈ ಕುರಿತು ಪಂಜಾಬ್ ಗೃಹ ಕಾರ್ಯದರ್ಶಿಗೆ ಬುಶ್ರಾ ಪತ್ರ ಬರೆದಿದ್ದು, ತನ್ನ ಪತಿಯನ್ನ ಅಟಕ್ ಜೈಲಿನಿಂದ ರಾವಲ್ಪಿಂಡಿ ಅಡಿಯಾಲ ಜೈಲಿಗೆ ಶಿಫ್ಟ್ ಮಾಡಲು ಕೋರ್ಟ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಕಾನೂನು ಪ್ರಕಾರ ಇಮ್ರಾನ್‌ರನ್ನು ಅಡಿಯಾಲ ಜೈಲಿಗೆ ವರ್ಗಾಯಿಸಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ ಇಮ್ರಾನ್ ಖಾನ್‌ರ ಸಾಮಾಜಿಕ ಹಾಗೂ ರಾಜಕೀಯ ಸ್ಥಾನಮಾನ ಪರಿಗಣಿಸಿ ಜೈಲಲ್ಲಿ 'ಬಿ ದರ್ಜೆ' ಸೌಲಭ್ಯ ಕಲ್ಪಿಸಲು ಇಮ್ರಾನ್ ಪತ್ನಿ ಒತ್ತಾಯಿಸಿದ್ದಾರೆ.
ಮನೆ ಊಟಕ್ಕೂ ಸಿಕ್ಕಿಲ್ಲ ಪರ್ಮಿಷನ್
ಭ್ರಷ್ಟಾಚಾರದ ಕೂಪ ಪಾಕಿಸ್ತಾನದಲ್ಲಿ ಮಾಜಿ ಪ್ರಧಾನಿ ಜೈಲಿಗೆ ಹೊಗುವುದು ಮಾಮೂಲು ಎನ್ನಬಹುದು. ಅದರಲ್ಲೂ ಇಮ್ರಾನ್ ಖಾನ್ ವಿಚಾರದಲ್ಲಿ ಸಾಕಷ್ಟು ಗಂಭೀರ ಆರೋಪ ಇದೆ. ಇಷ್ಟಿದ್ದರೂ ಇಮ್ರಾನ್‌ಗೆ ಉತ್ತಮ ಸೌಕರ್ಯ ಕಲ್ಪಿಸಿ ಎಂಬ ಆಗ್ರಹ ಕೇಳಿಬರುತ್ತಿದೆ. ಮತ್ತೊಮ್ಮೆ ಅದೇ ಮಾತನ್ನು ಹೇಳಿರುವ ಇಮ್ರಾನ್ ಪತ್ನಿ, ಇಮ್ರಾನ್ ಮೇಲೆ ಎರಡು ಬಾರಿ ಹತ್ಯೆ ಪ್ರಯತ್ನ ನಡೆದಿದೆ. ಆದರೆ ಹತ್ಯೆಗೆ ಯತ್ನಿಸಿದವರನ್ನು ಇನ್ನೂ ಬಂಧಿಸಿಲ್ಲ. ಹೀಗಾಗಿ ಇದೀಗ ಇಮ್ರಾನ್‌ಗೆ ವಿಷ ಹಾಕುವ ಭಯವಿದೆ ಎಂದಿದ್ದಾರೆ. ಜೈಲು ನಿಯಮ ಪ್ರಕಾರ ಖಾಸಗಿ ವೈದ್ಯರಿಂದ ವೈದ್ಯಕೀಯ ಪರೀಕ್ಷೆಗೆ ಒಳಗಾಗಲು ಅವಕಾಶ ನೀಡಬೇಕು ಎಂದಿದ್ದಾರೆ ಇಮ್ರಾನ್ ಪತ್ನಿ.
ಇಮ್ರಾನ್ ಖಾನ್ ಆಪ್ತ ಅಂದರ್
ಪಾಕ್ ಉಚ್ಛಾಟಿತ ಪ್ರಧಾನಿ ಆಪ್ತ ಸಹಾಯಕ ಶಾ ಮುಹಮ್ಮದ್ ಖುರೇಷಿ ಅರೆಸ್ಟ್ ಆಗಿದ್ದಾರೆ. ಪಿಟಿಐ ಪಕ್ಷದ ವಕ್ತಾರರು ಈ ಮಾಹಿತಿ ರಿವೀಲ್ ಮಾಡಿದ್ದು, ಪಾಕಿಸ್ತಾನದಲ್ಲೀಗ ಮತ್ತೆ ಬೆಂಕಿ ಬೀಳುವ ಮುನ್ಸೂಚನೆ ಸಿಕ್ಕಿದೆ. 66 ವರ್ಷದ ಖುರೇಷಿಯನ್ನು ಇಸ್ಲಮಾಬಾದ್‌ನ ಪೊಲೀಸರು ಅರೆಸ್ಟ್ ಮಾಡಿ ಅಜ್ಞಾತ ಸ್ಥಳಕ್ಕೆ ಕಳುಹಿಸಿದ್ದಾರೆ ಎಂದು ಪಿಟಿಐ ಪಕ್ಷದ ಮೂಲಗಳು ತಿಳಿಸಿವೆ. ಬಂಧಿತ ಖುರೇಷಿ ವಿರೋಧ ಪಕ್ಷದ ಮುಖಂಡ & ಪಿಟಿಐ ಪಕ್ಷದ ಉಪಾಧ್ಯಕ್ಷ ಕೂಡ ಆಗಿದ್ರು. ಹೀಗೆ ಚುನಾವಣೆಗೂ ಮುನ್ನ ವಿರೋಧಿಗಳನ್ನು ಅಲ್ಲಿನ ಸರ್ಕಾರ ಟಾರ್ಗೆಟ್ ಮಾಡಿ ಒಳಗೆ ಹಾಕುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಸರ್ಕಾರದ ವಿರುದ್ಧ ಮಾತನಾಡಿದ್ದ ಖುರೇಷಿ
ಪಾಕಿಸ್ತಾನ ಹೆಸರಿಗೆ ಮಾತ್ರ ಪ್ರಜಾಪ್ರಭುತ್ವ ಪಾಲಿಸುವ ದೇಶ. ಆದರೆ ಪಾಕಿಸ್ತಾನದಲ್ಲಿ ಈಗ ಸರ್ಕಾರದ ಬಗ್ಗೆ ಯಾರೇ ಪ್ರಶ್ನೆ ಮುಂದಿಟ್ಟರೂ ಸೈಲೆಂಟ್ ಆಗಿ ಅವರ ಕಥೆ ಖಲ್ಲಾಸ್ ಆಗಿ ಜೈಲು ಸೇರುತ್ತಾರೆ. ಇಮ್ರಾನ್ ಖಾನ್ ಕಥೆಯೂ ಇದೇ ರೀತಿ ಆಗಿದೆ. ಇದೀಗ ಇಮ್ರಾನ್‌ರ ಆಪ್ತ ಶಾ ಮುಹಮ್ಮದ್ ಖುರೇಷಿ ಕೂಡ ಸರ್ಕಾರದ ವಿರುದ್ಧ ಮಾತನಾಡಿ ಲಾಕ್ ಆಗಿದ್ದು, ಜೈಲು ಸೇರಿದ್ದಾರೆ. ನವೆಂಬರ್ ಆರಂಭದಲ್ಲಿ ನಡೆಯಬೇಕಿರುವ ಸಾರ್ವತ್ರಿಕ ಚುನಾವಣೆಯಲ್ಲಿ ತಡವಾದರೆ ಕೋರ್ಟ್‌ಗೆ ಹೋಗ್ತೀವಿ ಎಂದು ಖುರೇಷಿ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆಯನ್ನ ನೀಡಿದ್ದರು. ಈ ಬೆಳವಣಿಗೆ ನಡೆದ ಕೆಲವೇ ಸಮಯದಲ್ಲಿ ಖುರೇಷಿ ಅಂದರ್ ಆಗಿದ್ದಾರೆ.












Click it and Unblock the Notifications