ಕಾಬೂಲ್‌ನಿಂದ 80 ಭಾರತೀಯರ ರಕ್ಷಣೆ; ವಿಮಾನ ತಪ್ಪಿಸಿಕೊಂಡ 150 ಜನ
ಕಾಬೂಲ್, ಆಗಸ್ಟ್ 22; ಅಫ್ಘಾನಿಸ್ತಾನದಲ್ಲಿ ಸಿಲುಕಿದ್ದ 80 ಭಾರತೀಯರನ್ನು ವಾಯುಪಡೆಯ ವಿಮಾನ ರಕ್ಷಣೆ ಮಾಡಿದೆ. ತಜಕಿಸ್ತಾನದ ದುಶಂಬೆಯಲ್ಲಿ ಎಲ್ಲರೂ ಸುರಕ್ಷಿತವಾಗಿದ್ದು, ಮಧ್ಯಾಹ್ನ ನವದೆಹಲಿ ತಲುಪುವ ನಿರೀಕ್ಷೆ ಇದೆ.
ಅಫ್ಘಾನಿಸ್ತಾನ ಸಂಪೂರ್ಣವಾಗಿ ತಾಲಿಬಾನ್ ವಶವಾಗಿದೆ. ಬಳಿಕ ಅಲ್ಲಿ ಸಿಲುಕಿರುವ ಭಾರತೀಯರನ್ನು ವಾಯುಪಡೆ ವಿಮಾನದ ಮೂಲಕ ರಕ್ಷಣೆ ಮಾಡಲಾಗುತ್ತಿದೆ. ಕಾಬೂಲ್‌ನಲ್ಲಿ ಸಿಲುಕಿದ್ದ 80 ಭಾರತೀಯರನ್ನು ರಕ್ಷಣೆ ಮಾಡಲಾಗಿದೆ.
ಶನಿವಾರ ತಜಕಿಸ್ತಾನಕ್ಕೆ ಭಾರತೀಯ ವಾಯುಪಡೆಯ ವಿಶೇಷ ಸಿ-130ಜೆ ವಿಮಾನವನ್ನು ಕಳಿಸಲಾಗಿದೆ. ಕಾಬೂಲ್‌ನಿಂದ ರಕ್ಷಣೆ ಮಾಡಲಾದ ಎಲ್ಲರೂ ಈ ವಿಮಾನದ ಮೂಲಕ ನವದೆಹಲಿಗೆ ಭಾನುವಾರ ಮಧ್ಯಾಹ್ನದ ವೇಳೆಗೆ ತುಲುಪುವ ನಿರೀಕ್ಷೆ ಇದೆ.

ತಾಲಿಬಾನಿ ಉಗ್ರರು ಕಾಬೂಲ್ ವಿಮಾನ ನಿಲ್ದಾಣಕ್ಕೆ ಜನರು ಆಗಮಿಸುವುದಕ್ಕೆ ಅಡ್ಡಿ ಪಡಿಸುತ್ತಿದ್ದಾರೆ. ಇದರಿಂದಾಗಿ 150 ಭಾರತೀಯರ ರಕ್ಷಣೆ ಸಾಧ್ಯವಾಗಿಲ್ಲ. ವಿಮಾನ ಹೊರಡುವ ವೇಳೆಗೆ ನಿಲ್ದಾಣ ತಲುಪಲು ಅವರು ವಿಫಲವಾಗಿದ್ದಾರೆ.
ಭಾರತದ ವೈದ್ಯರು, ಶಿಕ್ಷಕರು, ಇಂಜಿನಿಯರ್‌ಗಳು ಅಫ್ಘಾನಿಸ್ತಾನದಲ್ಲಿ ಸಿಲುಕಿದ್ದು, ಉಗ್ರರು ಅವರು ಸ್ವದೇಶಕ್ಕೆ ಮರಳಲು ಅವಕಾಶ ನೀಡುತ್ತಿಲ್ಲ. ಭಾರತದ ಸರ್ಕಾರ ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ನಿರಂತರ ಕಾರ್ಯಾಚರಣೆ ನಡೆಸುತ್ತಿದೆ.
ವಾಯುಪಡೆಯ ವಿಶೇಷ ವಿಮಾನ ಹತ್ತಿದ ಎಲ್ಲಾ 80 ಭಾರತೀಯರು ಗುರುವಾರ ಕಾಬೂಲ್ ವಿಮಾನ ನಿಲ್ದಾಣ ತಲುಪಿದ್ದರು. ಅಮೆರಿಕಾ ಹಾಗೂ ನ್ಯಾಟೋ ಪಡೆಯ ನಿಯಂತ್ರಣದಲ್ಲಿಯೇ ಹಮೀದ್ ಕರ್ಜೈ ವಿಮಾನ ನಿಲ್ದಾಣವಿದ್ದು, ನಿಲ್ದಾಣದ ಹಲವು ಪ್ರವೇಶ ದ್ವಾರಗಳನ್ನು ಬಂದ್ ಮಾಡಲಾಗಿದೆ.
ಈ ಹಿಂದೆ ರಕ್ಷಣೆ ಮಾಡಲಾದ ಭಾರತದ 150 ಜನರ ತಂಡ ಹೇಳುವ ಪ್ರಕಾರ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ರಸ್ತೆಗಳಲ್ಲಿ ತಾಲಿಬಾನಿಗಳು ಚೆಕ್‌ಪೋಸ್ಟ್ ಮಾಡಿಕೊಂಡಿದ್ದಾರೆ. ಅಲ್ಲಿ ದಾಖಲೆಗಳನ್ನು ಪರಿಶೀಲನೆ ಮಾಡಿ ಮುಂದಕ್ಕೆ ಕಳಿಸಲಾಗುತ್ತಿದೆ.
ಭಾರತೀಯ ವಾಯುಪಡೆಯ 2ನೇ ವಿಮಾನವನ್ನು ತಜಕಿಸ್ತಾನದ ದುಶಂಬೆಯಲ್ಲಿ ಲ್ಯಾಂಡ್ ಮಾಡಲಾಗಿದೆ. ಈಗ ವಿಮಾನ ತಪ್ಪಿಸಿಕೊಂಡ 150 ಜನರು ಕಾಬೂಲ್ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಅವರನ್ನು ರಕ್ಷಣೆ ಮಾಡಲು ವಿಮಾನ ತೆರಳಲಿದೆ.
ಕಾಬೂಲ್ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ನಿಲ್ಲಿಸುವುದು ಸವಾಲಿನ ಕೆಲಸವಾಗಿದೆ. ಆದ್ದರಿಂದ ತಜಕಿಸ್ತಾನದ ದುಶಂಬೆಯಿಂದ ವಿಮಾನದ ಕಾರ್ಯಾಚರಣೆಯನ್ನು ನಡೆಸುತ್ತಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಫ್ಘಾನಿಸ್ತಾನದ ವಿವಿಧ ಪ್ರಾಂತ್ಯಗಳಲ್ಲಿ ಸಿಲುಕಿರುವ ಭಾರತೀಯರು ಕಾಬೂಲ್ ವಿಮಾನ ನಿಲ್ದಾಣ ತಲುಪುವುದೇ ಸವಾಲಾಗಿದೆ. ವಿದೇಶಾಂಗ ಇಲಾಖೆಯ ಅಫ್ಘಾನಿಸ್ತಾನ ವಿಶೇಷ ಘಟಕ ಅಲ್ಲಿ ಸಿಲುಕಿರುವ ಭಾರತೀಯರನ್ನು ಸಂಪರ್ಕ ಮಾಡುತ್ತಿದ್ದು, ಅವರ ರಕ್ಷಣೆಗಾಗಿ ನಿರಂತರವಾಗಿ ಪ್ರಯತ್ನ ನಡೆಸುತ್ತಿದೆ.
ಈಗ ರಕ್ಷಣೆ ಮಾಡಿರುವ 80 ಜನರು, ವಿಮಾನ ತಪ್ಪಿಸಿಕೊಂಡ 150 ಜನರನ್ನು ಹೊರತುಪಡಿಸಿ ಇನ್ನೂ 200 ರಿಂದ 250 ಜನರು ಅಲ್ಲಿ ಸಿಲುಕಿದ್ದಾರೆ ಎಂದು ಅಂದಾಜಿಸಲಾಗಿದೆ. ಕಾಬೂಲ್‌ನಲ್ಲಿನ ರಾಯಭಾರ ಕಚೇರಿ ಮುಚ್ಚಿದ ಬಳಿಕ ಭಾರತೀಯರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.
ಅಫ್ಘಾನಿಸ್ತಾನಲ್ಲಿ ಸಿಲುಕಿರುವ ಭಾರತೀಯರನ್ನು ರಕ್ಷಣೆ ಮಾಡಲು ಸಹಾಯ ಮಾಡುತ್ತಿರುವ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆ ಸಿಕ್ಕರು ಮತ್ತು ಹಿಂದೂಗಳನ್ನು ಭಾರತಕ್ಕೆ ವಾಪಸ್ ಆಗಲು ತಾಲಿಬಾನಿಗಳು ಅವಕಾಶ ನೀಡಲಿದ್ದಾರೆಯೇ? ಎಂಬುದು ಇನ್ನೂ ಖಚಿತವಾಗಿಲ್ಲ ಎಂದು ಹೇಳಿದ್ದಾರೆ.
ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ಕಾಯುತ್ತಿರುವ ಭಾರತೀಯರನ್ನು ಹತ್ತಿರದ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ದಾಖಲೆಗಳ ಪರಿಶೀಲನೆ ನಡೆಸಲಾಗಿದೆ. ಕಾಬೂಲ್‌ಗೆ ಬರಲು ಇನ್ನೂ ಹಲವು ಭಾರತೀಯರು ಪ್ರಯತ್ನ ನಡೆಸುತ್ತಿದ್ದು, ಅಲ್ಲಲ್ಲಿ ತಾಲಿಬಾನಿಗಳು ತಡೆವೊಡ್ಡುತ್ತಿದ್ದಾರೆ.
ವಿದೇಶಾಂಗ ಇಲಾಖೆ ಸಚಿವ ಎಸ್. ಜೈ ಶಂಕರ್, "ಅಫ್ಘಾನಿಸ್ತಾನದ ಪರಿಸ್ಥಿತಿಯನ್ನು ನಾವು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದೇವೆ. ನಮ್ಮ ಆದ್ಯತೆ ಅಲ್ಲಿ ಸಿಲುಕಿರುವ ಭಾರತೀಯ ನಾಗರೀಕರ ರಕ್ಷಣೆಯಾಗಿದೆ" ಎಂದು ಹೇಳಿದ್ದಾರೆ.












Click it and Unblock the Notifications