Get Updates
Get notified of breaking news, exclusive insights, and must-see stories!

ಕಾಂಬೋಡಿಯಾ ಸ್ಕ್ಯಾಮ್ ಸೆಂಟರ್‌ಗಳ ಮೇಲೆ ಥಾಯ್ಲೆಂಡ್ ದಾಳಿ: ಡಿಜಿಟಲ್ ಸಂತ್ರಸ್ತರ ನಿಟ್ಟುಸಿರು - ಕೃಷ್ಣಭಟ್ ಬರಹ

ಕಾಂಬೋಡಿಯಾ ಮತ್ತು ಥಾಯ್ಲೆಂಡ್‌ನ ಹೊಡೆದಾಟದಿಂದ ಈ ಎರಡೂ ದೇಶಗಳಿಗೆ ಎಷ್ಟು ಹಾನಿಯಾಗಬಹುದೋ ಗೊತ್ತಿಲ್ಲ. ಆದರೆ, ನಮ್ಮ ಫೇಸ್‌ಬುಕ್‌ ಪ್ರೊಫೈಲ್‌ ಡೂಪ್ಲಿಕೇಟ್ ಮಾಡಿ ಹಣ ಕೇಳೋದು, ಯೂಟ್ಯೂಬಲ್ಲಿ ರಿವ್ಯೂ ಮಾಡಿ ದುಡ್ಡು ಕೊಡ್ತೀವಿ ಅಂತ ಹೇಳೋದು, ಯುಪಿಐ ಪಿನ್‌ ಯಾಮಾರಿಸಿ ತಗೊಂಡು ದುಡ್ಡು ಲಪಟಾಯಿಸೋದು. ಇವೆಲ್ಲದರ ಮೇಲೂ ಬಾಂಬ್ ಬೀಳ್ತಾ ಇದೆ.

ಒಂದು ವೇಳೆ, ಥಾಯ್ಲೆಂಡ್ ಈ ಯುದ್ಧದಲ್ಲಿ ಗೆದ್ದು ಕಾಂಬೋಡಿಯಾದ ಒಂದಷ್ಟು ಪ್ರದೇಶಗಳನ್ನು ಗೆದ್ದುಕೊಂಡರೆ, ನಮಗೆ ಬರುತ್ತಿದ್ದ ಇಂತಹ ಸ್ಕ್ಯಾಮ್‌ ಫೋನ್ ಕಾಲ್‌ಗಳೆಲ್ಲ ಅರ್ಧಕ್ಕರ್ಧ ನಿಂತು ಹೋಗುತ್ತವೆ. ಎಲ್ಲಿ ಕಾಂಬೋಡಿಯಾ-ಥೈಲ್ಯಾಂಡ್ ಗಲಾಟೆ, ಎಲ್ಲಿ ಯುಪಿಐ ಸ್ಕ್ಯಾಮ್ ಇವೆರಡೂ ಒಂದಕ್ಕೊಂದು ಡೈರೆಕ್ಟ್ ಲಿಂಕ್ ಇದೆ ಅಂದರೆ ಭಾರಿ ಆಶ್ಚರ್ಯ ಆಗದೇ ಇರತ್ತಾ? ಅಸಲಿ ವಿಷಯ ಏನೆಂದರೆ, ಈ ಕಾಂಬೋಡಿಯಾ ಮತ್ತು ಥಾಯ್ಲೆಂಡ್‌ನ ಗಡಿಯಲ್ಲಿ ಕಾಂಬೋಡಿಯಾ ಭಾಗದಲ್ಲಿ ಪೊಯ್ಪೆಟ್ ಮತ್ತು ಬವೆಟ್ ಅನ್ನೋ ಸಣ್ಣ ನಗರಗಳಿವೆ. ನಮ್ಮ ಕಡೆ ತಾಲೂಕು ಕೇಂದ್ರಗಳ ರೀತಿಯ ಪಟ್ಟಣಗಳು ಇವು. ಇಲ್ಲಿ ಭಾರಿ ದೊಡ್ಡ ದೊಡ್ಡ ಸ್ಕ್ಯಾಮ್‌ ಸೆಂಟರ್‌ಗಳಿವೆ.

How the Cambodia Thailand Conflict Could Disrupt Global Scam Networks Targeting India

ಈ ಸ್ಕ್ಯಾಮ್‌ ಸೆಂಟರ್‌ಗಳನ್ನು ನಡೆಸುವವರು ಚೀನಾದ ಕ್ರೈಮ್ ನೆಟ್‌ವರ್ಕ್‌. ಇಲ್ಲಿ ನಮ್ಮನ್ನ ಯಾಮಾರಿಸುವುದಕ್ಕೆ ಅಂತಲೇ ಫೋನ್ ಮಾಡುವುದಕ್ಕೆ ಸಿಗುವ ಜನ ಹೆಚ್ಚಾಗಿ ನಮ್ಮ ಭಾರತೀಯರು ಜೊತೆಗೆ ಇಂಗ್ಲಿಷ್ ಮಾತನಾಡುವ ದೇಶಗಳ ಜನ. ಅವರಿಗೆ ಇಂಗ್ಲಿಷ್ ಮಾತನಾಡಲು ಬರುವ ಜನರು ಬೇಕು. ಯಾಕೆಂದರೆ, ಇವರು ಟಾರ್ಗೆಟ್ ಮಾಡುವುದು ಕೂಡಾ ಇಂಗ್ಲಿಷ್ ಬರುವ ಭಾರತೀಯರು ಮತ್ತು ಯುರೋಪಿಯನ್ ದೇಶದ ಜನರನ್ನೇ.

ನಮಗೆ ಬರುವ ಬಹುತೇಕ ಸ್ಕ್ಯಾಮ್ ಫೋನ್‌ ಕಾಲ್‌ಗಳೆಲ್ಲ ಈ ಸ್ಕ್ಯಾಮ್‌ ಸೆಂಟರ್‌ಗಳಿಂದಲೇ ಹೊರಟಿರುತ್ತವೆ. ಒಂದು ಸಮೀಕ್ಷೆಯ ಪ್ರಕಾರ, 2025ರಲ್ಲಿ ಈ ಸ್ಕ್ಯಾಮ್ ಸೆಂಟರ್‌ಗಳು 40 ಲಕ್ಷ ಕೋಟಿ ರೂಪಾಯಿ ಹಣ ಗಳಿಸಿವೆಯಂತೆ. ಅದೆಲ್ಲಾ ನಮ್ಮದೇ ದುಡ್ಡು. ಇವು ಲೆಕ್ಕಕ್ಕೆ ಸಿಕ್ಕಿದ್ದು. ಇನ್ನು ಮೋಸ ಹೋದೆವು ಅಂತ ಹೇಳಿಕೊಳ್ಳದೇ ಇರುವವರೂ ಇರುತ್ತಾರೆ. ಅದರ ಲೆಕ್ಕ ಇಲ್ಲ.

ಇಡೀ ಜಗತ್ತಿನ ಸುಮಾರು ಶೇಕರ 60ರಷ್ಟು ಜನರಿಗೆ ಒಂದಲ್ಲ ಒಂದು ರೀತಿಯಲ್ಲಿ ಈ ಜನರು ಸ್ಕ್ಯಾಮ್‌ ಮಾಡುವ ಪ್ರಯತ್ನ ಮಾಡಿದ್ದಾರೆ ಅಂದರೆ ಈ ಸ್ಕ್ಯಾಮ್‌ ಸೆಂಟರ್‌ಗಳ ವ್ಯಾಪ್ತಿ ಎಷ್ಟಿದೆ ಅಂತ ಗೊತ್ತಾಗುತ್ತೆ. ವಿಶ್ವಸಂಸ್ಥೆಯ ಅಂದಾಜಿನ ಪ್ರಕಾರ, 2023ರಲ್ಲಿ ಈ ಕಾಂಬೋಡಿಯಾ, ಮ್ಯಾನ್ಮಾರ್ ಮತ್ತು ಲಾವೋಸ್‌ನಲ್ಲಿರುವ ಇಂತಹ ಸ್ಕ್ಯಾಮ್‌ ಸೆಂಟರ್‌ಗಳಿಗೆ ಸುಮಾರು 3 ಲಕ್ಷ ಜನರನ್ನ ಕರೆದುಕೊಂಡು ಹೋಗಿದ್ದಾರಂತೆ.

ವಿದೇಶದಲ್ಲಿ ನೌಕರಿ ಕೊಡಿಸುತ್ತೇವೆ ಅಂತ ಹೇಳಿ ಇವರನ್ನು ಪುಸಲಾಯಿಸಿ ವಿಮಾನ ಹತ್ತಿಸುತ್ತಾರೆ. ಮೊದಲು ನಿಮ್ಮ ಡಾಕ್ಯುಮೆಂಟ್ ಎಲ್ಲ ಮಾಡಿಕೊಡ್ತೇವೆ ಅಂತ ಹೇಳಿ ಕಾಂಬೋಡಿಯಾದಲ್ಲಿ ಇಳಿಸಿಕೊಳ್ಳುತ್ತಾರೆ. ನಂತರ ಮತ್ತೆ ಜನ ಅಲ್ಲೇ ಫಿಕ್ಸ್. ಈ ಸ್ಕ್ಯಾಮ್ ಸೆಂಟರ್‌ಗಳು ಯಾವ ರೀತಿ ಸೊಫಿಸ್ಟಿಕೇಟಡ್ ಆಗಿರುತ್ತವೆ ಅಂದರೆ, ಇಲ್ಲಿಂದ ಹೊರಗೆ ಬರುವುದು ಹೋಗಲಿ, ಹೊರ ಜಗತ್ತಿಗೆ ಸಂಪರ್ಕವೂ ಸಾಧ್ಯ ಆಗುವುದಿಲ್ಲ.

ಇಲ್ಲಿನ ಸ್ಕ್ಯಾಮ್‌ ಸೆಂಟರ್ ನಡೆಸುವವರಿಗೂ ಹಾಗೂ ಕ್ಯಾಸಿನೋ ನಡೆಸುವವರಿಗೂ ನಂಟಿದೆ. ಕ್ಯಾಸಿನೋಗಳು ಮತ್ತು ಸ್ಕ್ಯಾಮ್ ಸೆಂಟರ್‌ಗಳು ಅಣ್ಣ ತಮ್ಮಂದಿರಿದ್ದ ಹಾಗೆ. ಸ್ಕ್ಯಾಮ್ ಸೆಂಟರ್‌ನಲ್ಲಿ ಬರುವ ಹಣವನ್ನು ಕ್ಯಾಸಿನೋ ಹೆಸರಿನಲ್ಲಿ ಮೇನ್‌ಸ್ಟ್ರೀಮ್‌ಗೆ ತರುತ್ತಾರೆ. ಬಹುತೇಕ ಸ್ಕ್ಯಾಮ್‌ ಸೆಂಟರ್‌ಗಳು ಈ ಕ್ಯಾಸಿನೋ ಬಿಲ್ಡಿಂಗ್‌ನಲ್ಲೇ ಇವೆ. ಕೆಳ ಮಹಡಿಗಳಲ್ಲಿ ಕ್ಯಾಸಿನೋಗಳಿದ್ದರೆ, ಮೇಲಿನ ಮಹಡಿಗಳಲ್ಲಿ ಸ್ಕ್ಯಾಮ್ ಸೆಂಟರ್‌ಗಳಿರುತ್ತವೆ.

ಈ ವಿಷಯ ಮತ್ತೊಂದು ಸಾರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುವುದಕ್ಕೆ ಕಾರಣ ಕಳೆದ ಅಕ್ಟೋಬರ್‌ನಲ್ಲಿ ದಕ್ಷಿಣ ಕೊರಿಯಾದ ಒಬ್ಬ ವ್ಯಕ್ತಿಯನ್ನ ಹೀಗೇ ಯಾಮಾರಿಸಿ ಇಲ್ಲಿಗೆ ಕರೆದುಕೊಂಡು ಹೋಗಿ, ಅವನನ್ನ ಪಳಗಿಸುವುದಕ್ಕೆ ಚಿತ್ರಹಿಂಸೆ ಕೊಟ್ಟಿದ್ದಾರೆ. ಆತ ಅಲ್ಲೇ ಸಾವನ್ನಪ್ಪಿದ್ದಾನೆ. ಈ ವಿಷಯ ತಿಳಿದ ದಕ್ಷಿಣ ಕೊರಿಯಾ ಸರ್ಕಾರ ಕ್ರಮ ತೆಗೆದುಕೊಂಡು ಅಲ್ಲಿ ಸಿಕ್ಕಿಕೊಂಡಿದ್ದ ಸುಮಾರು 1 ಸಾವಿರಕ್ಕೂ ಹೆಚ್ಚು ಜನರನ್ನು ತನ್ನ ದೇಶಕ್ಕೆ ಕರೆಸಿಕೊಂಡಿದೆ.

ಕಳೆದ ವರ್ಷ ಅಥವಾ ಈ ವರ್ಷದ ಆರಂಭದಲ್ಲಿ ಭಾರತ ಕೂಡಾ ಸಾವಿರಗಟ್ಟಲೆ ಜನರನ್ನು ಕಾಂಬೋಡಿಯಾದಿಂದ ಕರೆಸಿಕೊಂಡು ಬಂದಿತ್ತು. ಈ ಬಗ್ಗೆ ಸುದ್ದಿಯೂ ಆಗಿತ್ತು. ಈ ದಕ್ಷಿಣ ಕೊರಿಯಾ ಘಟನೆಯ ನಂತರ, ಮತ್ತೊಂದು ಸುತ್ತಿನ ಸಂಘರ್ಷ ಅಂತಾರಾಷ್ಟ್ರೀಯ ಸಮುದಾಯದಲ್ಲಿ ಶುರುವಾಗಿದೆ. ಮೊನ್ನೆಯಿಂದ ಶುರುವಾದ ಗಲಾಟೆಯಲ್ಲಿ ಈ ಪೊಯ್ಪೆಟ್ ಮತ್ತು ಬವೆಟ್‌ನಲ್ಲಿರುವ ಈ ಸ್ಕ್ಯಾಮ್‌ ಸೆಂಟರ್‌ಗಳ ಮೇಲೂ ಥಾಯ್ಲೆಂಡ್ ಬಾಂಬ್ ಹಾಕಿದೆ.

ಅಸಲಿಗೆ, ಈ ಎರಡೂ ದೇಶಗಳ ಮಧ್ಯೆ ಬೆಂಕಿ ಹೊತ್ತಿಸಿದ್ದೇ ಈ ಸ್ಕ್ಯಾಮ್ ಸೆಂಟರ್‌ಗಳು. ಅದು ಹೇಗೆ ಎಂದರೆ, ಯುರೋಪ್ ದೇಶಗಳಿಗೆ ಚೀನಾ ಸುತ್ತಲಿನ ದೇಶಗಳನ್ನು ಅಭದ್ರಗೊಳಿಸುವ ಹುಕಿ ಇದೆ. ಚೀನಾ ತನ್ನ ದೇಶದ ಒಳಗಿರಲಿ, ಹೊರಗೂ ಕೂಡಾ ಅಭದ್ರತೆಯ ಭಾವ ಮೂಡುವುದನ್ನು ಇಷ್ಟಪಡುವುದಿಲ್ಲ. ಇದೇ ಕಾರಣಕ್ಕೆ ಮ್ಯಾನ್ಮಾರ್‌, ಬಾಂಗ್ಲಾದೇಶ, ನೇಪಾಳ ಸೇರಿದ ಹಾಗೆ ಸುತ್ತಲಿರವ ಎಲ್ಲ ದೇಶಗಳಲ್ಲೂ ಅಸ್ಥಿರತೆಯನ್ನು ಅಮೆರಿಕ ಹುಟ್ಟುಹಾಕುತ್ತಿದೆ. ಅದು ಚೀನಾಗೆ ತಲೆಬಿಸಿ ತಂದಿಡುವ ಕಾರ್ಯಕ್ರಮದ ಒಂದು ಭಾಗ.

ಈಗ ಥಾಯ್ಲೆಂಡ್‌ ಅನ್ನು ಛೂ ಬಿಟ್ಟಿದ್ದೂ ಕೂಡಾ ಅಮೆರಿಕವೇ. ಥಾಯ್ಲೆಂಡ್‌ಗೂ ಕಾಂಬೋಡಿಯಾದ ಸ್ಕ್ಯಾಮ್‌ ಸೆಂಟರ್‌ಗಳ ಮೇಲೆ ದಾಳಿ ಮಾಡುವುದರಿಂದ ಅನುಕೂಲವೇ ಆಗಿದೆ. ಯಾಕೆಂದರೆ, ಈ ಕಾಂಬೋಡಿಯಾದಲ್ಲಿರುವ ಸ್ಕ್ಯಾಮ್ ಸೆಂಟರ್‌ಗಳಿಂದಲೇ ಆ ದೇಶದ ಆರ್ಥಿಕತೆ ನಡೆಯುತ್ತಿದೆ. ಸ್ಕ್ಯಾಮ್ ಸೆಂಟರ್ ಉರುಳಿಸಿ ಹಾಕಿದರೆ, ಕಾಂಬೋಡಿಯಾ ಅರ್ಧ ಸತ್ತ ಹಾಗೆ.

ಮೊನ್ನೆಯಿಂದ ನಡೆಯುತ್ತಿರುವ ದಾಳಿಯಲ್ಲಿ 5 ಸ್ಕ್ಯಾಮ್ ಸೆಂಟರ್‌ಗಳನ್ನು ಹುಡಿ ಮಾಡಿದ್ದಾರೆ ಎಂದು ಸುದ್ದಿ ಬರುತ್ತಿದೆ. ಕಾಂಬೋಡಿಯಾದಲ್ಲಿ ಸ್ಕ್ಯಾಮ್ ಸೆಂಟರ್ ಬಿಟ್ಟರೆ, ಬೇರೆ ಸರಿಯಾದ ಉದ್ಯೋಗವಿಲ್ಲ, ಉದ್ಯಮವಿಲ್ಲ. ಪ್ರವಾಸೋದ್ಯಮವನ್ನು ಬಿಟ್ಟರೆ ಬೇರೆ ಏನೂ ಇಲ್ಲ. ಅದೂ ಅಲ್ಲಿ ಸರಿ ಇಲ್ಲ ಬಿಡಿ. ಕಾಂಬೋಡಿಯಾದಲ್ಲಿ ಒಂದು ರೀತಿಯಲ್ಲಿ ಸರ್ಕಾರವೇ ಸ್ಕ್ಯಾಮ್ ಸೆಂಟರ್‌ಗಳನ್ನು ನಡೆಸುತ್ತಿರುವ ಹಾಗಿದೆ.

ಇತ್ತೀಚೆಗೆ ಅಮೆರಿಕ ಮತ್ತು ಇಂಗ್ಲೆಂಡ್‌ನಲ್ಲಿ ಪ್ರಿನ್ಸ್‌ ಗ್ರೂಪ್ ಎಂಬ ಸಂಸ್ಥೆಯನ್ನು ನಿಷೇಧಿತ ಸಂಸ್ಥೆಯ ಪಟ್ಟಿಗೆ ಸೇರಿಸಿದ್ದರು. ಅದರ ಮಾಲೀಕ ಚೆನ್ ಝಿ. ಈತ ಕಾಂಬೋಡಿಯಾ ಪ್ರಧಾನಿಗೆ ಸಲಹೆಗಾರ. ಈ ಇಡೀ ಕಾಂಬೋಡಿಯಾವನ್ನು ಚೀನಾ ಕ್ರಿಮಿನಲ್ ಗ್ಯಾಂಗ್‌ಗಳು ಕಂಟ್ರೋಲ್ ಮಾಡುತ್ತಿವೆ. ಆದರೆ, ಇವರು ಎಲ್ಲೂ ಕಾಣಿಸಿಕೊಳ್ಳುವುದಿಲ್ಲ. ಇವರು ಚೀನಾದಲ್ಲಿದ್ದುಕೊಂಡೇ ಈ ದೇಶಗಳಲ್ಲಿ ಸ್ಕ್ಯಾಮ್ ಸೆಂಟರ್‌ಗಳನ್ನು ನಡೆಸುತ್ತಿರುತ್ತಾರೆ. ಸ್ಕ್ಯಾಮ್ ಸೆಂಟರ್‌ಗಳು ಮುಚ್ಚಿದರೆ ನೇರವಾಗಿ ನಷ್ಟವಾಗುವುದು ಈ ಚೀನಾ ಕ್ರೈಮ್ ನೆಟ್‌ವರ್ಕ್‌ಗಳಿಗೇ.

ಕಳೆದ ಸೆಪ್ಟೆಂಬರ್‌ನಲ್ಲಿ ಮಿಂಗ್ ಎಂಬ ಚೀನಾದ ಒಂದು ಕುಟುಂಬವು ಮ್ಯಾನ್ಮಾರ್‌ನಲ್ಲಿ ಸ್ಕ್ಯಾಮ್ ಸೆಂಟರ್ ನಡೆಸುತ್ತಿತ್ತು ಎಂದು ಗೊತ್ತಾಗಿ, ಆ ಕುಟುಂಬದ 11 ಮಂದಿಗೆ ಚೀನಾ ಮರಣದಂಡನೆ ವಿಧಿಸಿದೆ. ಈ ಫ್ಯಾಮಿಲಿ ಸುಮಾರು 10 ಸಾವಿರ ಜನರನ್ನು ಮ್ಯಾನ್ಮಾರ್ ಮತ್ತು ಚೀನಾ ಗಡಿಯಲ್ಲಿರುವ ಮ್ಯಾನ್ಮಾರ್‌ನ ಕೊಕಾಂಗ್‌ನಲ್ಲಿ ಕೆಲಸಕ್ಕಿಟ್ಟುಕೊಂಡು ಅವರಿಂದ ಸ್ಕ್ಯಾಮ್ ಮಾಡಿಸುತ್ತಿತ್ತಂತೆ.

ತಮಾಷೆಯೆಂದರೆ, ಈ ಫ್ಯಾಮಿಲಿ ಟಾರ್ಗೆಟ್ ಮಾಡುತ್ತಿದ್ದದ್ದು ಚೀನೀಯರನ್ನು ಮಾತ್ರ. ಹೀಗಾಗಿ, ಚೀನಾ ಇವರ ಮೇಲೆ ಕ್ರಮ ತೆಗೆದುಕೊಂಡಿತು. ಮ್ಯಾನ್ಮಾರ್ ಒಂದರಲ್ಲೇ ಸುಮಾರು ಒಂದೂವರೆ ಲಕ್ಷ ಜನರು ಈ ಸ್ಕ್ಯಾಮ್ ಸೆಂಟರ್‌ಗಳಲ್ಲಿದ್ದಾರೆ ಮತ್ತು ಇದರ ಮಾಲೀಕರೆಲ್ಲ ಚೀನೀಯರೇ ಆದರೂ, ಚೀನಾ ಇವರ ಮೇಲೆ ಕ್ರಮ ತೆಗೆದುಕೊಳ್ಳುವುದಿಲ್ಲ. ಯಾಕೆಂದರೆ, ಉಳಿದ ಎಲ್ಲರೂ ಚೀನೀಯರನ್ನು ಟಾರ್ಗೆಟ್ ಮಾಡುವುದಿಲ್ಲ. ಚೀನೀಯರನ್ನು ಟಾರ್ಗೆಟ್ ಮಾಡಿದರೆ ಮಾತ್ರ ಅವರು ಕ್ರಮ ತೆಗೆದುಕೊಳ್ಳುತ್ತಾರೆ.

ಸ್ಕ್ಯಾಮ್ ಸೆಂಟರ್‌ಗಳು ಮುಖ್ಯವಾಗಿ ಮ್ಯಾನ್ಮಾರ್, ಕಾಂಬೋಡಿಯಾ, ಲಾವೋಸ್ ಹಾಗೂ ಫಿಲಿಪೀನ್ಸ್‌ನಲ್ಲಿ ಭಾರಿ ಪ್ರಮಾಣದಲ್ಲಿವೆ. ಇತ್ತೀಚೆಗೆ ಫಿಲಿಪೀನ್ಸ್‌ನ ಮಾಜಿ ಮೇಯರ್‌ ಒಂದು ದೊಡ್ಡ ಸ್ಕ್ಯಾಮ್ ಸೆಂಟರ್ ನಡೆಸುತ್ತಿರುವುದು ಗೊತ್ತಾಗಿ, ಆತನನ್ನ ಗಲ್ಲಿಗೇರಿಸಿದ್ದರು. ಈಗ ಒಂದೊಂದೇ ದ್ವೀಪ ದೇಶಕ್ಕೆ ಈ ಸ್ಕ್ಯಾಮ್ ಸೆಂಟರ್‌ಗಳು ವಿಸ್ತರಿಸಿಕೊಳ್ಳುತ್ತಾ ಇವೆ. ಇತ್ತೀಚೆಗೆ ಈಸ್ಟ್ ಟಿಮೋರ್ ಎಂಬ ದ್ವೀಪರಾಷ್ಟ್ರದಲ್ಲೂ ಸ್ಕ್ಯಾಮ್ ಸೆಂಟರ್‌ಗಳು ಹುಟ್ಟಿಕೊಂಡಿವೆ ಎಂದು ವರದಿಯಾಗಿದೆ.

ಕಾಂಬೋಡಿಯಾದಂತಹ ದೇಶಗಳಲ್ಲಂತೂ ಈ ಸ್ಕ್ಯಾಮ್ ಸೆಂಟರ್‌ಗಳಿಂದ ಹುಟ್ಟುವ ಆದಾಯ ಆ ದೇಶದ ಒಟ್ಟಾರೆ ವಹಿವಾಟಿಗೆ ಹೋಲಿಸಿದರೆ ಹಲವು ಪಟ್ಟು ಹೆಚ್ಚಿರುತ್ತವೆ. ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ಗುಂಪು ಸಂಘರ್ಷಕ್ಕೆ ಹಣ ಬರುವುದೂ ಈ ಸ್ಕ್ಯಾಮ್ ಸೆಂಟರ್‌ಗಳಿಂದಲೇ. ಅಮೆರಿಕ, ಇಂಗ್ಲೆಂಡ್ ಸೇರಿದ ಹಾಗೆ ಹಲವು ದೇಶಗಳು ಈ ಸ್ಕ್ಯಾಮ್ ಸೆಂಟರ್‌ಗಳನ್ನು ನಿಯಂತ್ರಿಸುವ ಹಲವು ಪ್ರಯತ್ನ ಮಾಡಿವೆ.

ಆದರೆ, ಈ ವಿಷಯವನ್ನು ಅಮೆರಿಕ ಗಂಭೀರವಾಗಿ ತೆಗೆದುಕೊಂಡಂತೆ ಕಾಣಿಸುವುದಿಲ್ಲ. ಒಂದು ವೇಳೆ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿದ್ದರೆ, ಕಾಂಬೋಡಿಯಾ ಸರ್ಕಾರದ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತಿತ್ತು. ಅದೆಲ್ಲ ಹೋಗಲಿ, ಸ್ಕ್ಯಾಮ್ ಸೆಂಟರ್‌ಗಳ ವಿಷಯದಲ್ಲಿ ಕಾಂಬೋಡಿಯಾದ ಪಾತ್ರದ ಬಗ್ಗೆ ಸಾರ್ವಜನಿಕವಾಗಿ ಹೇಳುವುದಕ್ಕೂ, ಆ ದೇಶವನ್ನು ಹೊಣೆ ಮಾಡುವುದಕ್ಕೂ ಯುರೋಪ್ ದೇಶಗಳು ಹಿಂದೇಟು ಹಾಕುತ್ತವೆ. ಎಲ್ಲರಿಗೂ ಗೊತ್ತಿದೆ, ಅಲ್ಲಿನ ಸರ್ಕಾರವೇ ಇದರಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಶಾಮೀಲಾಗಿದೆ ಎಂದು.

ಹೀಗಾಗಿ, ಈಗ ಥಾಯ್ಲೆಂಡ್‌ ಮತ್ತು ಕಾಂಬೋಡಿಯಾ ಮಧ್ಯೆ ನಡೆಯುತ್ತಿರುವ ಸಂಘರ್ಷ ನಿಲ್ಲುವುದು ಭಾರತವೂ ಸೇರಿದ ಹಾಗೆ ಯಾವ ದೇಶಕ್ಕೂ ಬೇಕಿಲ್ಲ. ಇದು ಇನ್ನಷ್ಟು ತೀವ್ರವಾಗಿ ನಡೆದು, ಕಾಂಬೋಡಿಯಾದ ಈ ಸೆಂಟರ್‌ಗಳು ಹುಡಿಯಾಗಲಿ, ಚೀನಾಗೆ ಬಿಸಿ ಮುಟ್ಟಲಿ ಎಂದೇ ಎಲ್ಲ ದೇಶಗಳು ಕಾಯುತ್ತಿವೆ. ಅಲ್ಲಿ ಇನ್ನಷ್ಟು ಬಾಂಬ್ ಬಿದ್ದರೆ, ನಮಗೆ ದಿನ ಬೆಳಗಾದರೆ ಬರುವ ಒಟಿಪಿ ಕಳ್ಳರ ಫೋನ್ ಕಿರಿಕಿರಿ ಕಡಿಮೆಯಾಗಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+