ವಯಸ್ಕರ ಚಿತ್ರಗಳ ಮಾಜಿ ತಾರೆ ಮಿಯಾ ಖಲೀಫಾ ಒಟ್ಟಾರೆ ದುಡಿಮೆ ಎಷ್ಟು ಗೊತ್ತಾ?
ವಯಸ್ಕರ ಚಿತ್ರಗಳ ಲೋಕದಲ್ಲಿ ಮಿಯಾ ಖಲೀಫಾ ಹೆಸರು ಬಹಳ ದೊಡ್ಡ ಮಟ್ಟದಲ್ಲಿ ಚಾಲ್ತಿಯಲ್ಲಿತ್ತು. ಆಕೆ ತಾನು ವಯಸ್ಕರ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದ ಕಾಲ ಘಟ್ಟದ ಬಗ್ಗೆ ಅಚ್ಚರಿ ಎನಿಸುವ ಸಂಗತಿಯೊಂದನ್ನು ಬಹಿರಂಗ ಪಡಿಸಿದ್ದಾಳೆ. ಜಗತ್ತಿನಲ್ಲೇ ಅತಿ ಹೆಚ್ಚು ಮಂದಿ ವೀಕ್ಷಣೆ ಮಾಡಿದ ನೀಲಿ ಚಿತ್ರಗಳ ತಾರೆ ಎಂಬುದು ಮಿಯಾ ಖಲೀಫಾ ಪಾಲಿನ ಹೆಗ್ಗಳಿಕೆ.
ಆದರೆ, ಐದು ವರ್ಷಗಳ ಹಿಂದೆಯೇ ವಯಸ್ಕರ ಚಿತ್ರರಂಗದ ಹೊರ ಬಂದಿದ್ದರೂ ಈಗಲೂ ಗೂಗಲ್ ನಲ್ಲಿ ಅತಿ ಹೆಚ್ಚು ಸರ್ಚ್ ಮಾಡುವ ಹೆಸರು ಮಿಯಾ ಖಲೀಫಾದು. ಇಪ್ಪತ್ತಾರು ವರ್ಷದ ಮಿಯಾ ಖಲೀಫಾ ಈಚೆಗೆ ಮೆಗಾನ್ ಅಬಾಟ್ ಗೆ ಯೂಟ್ಯೂಬ್ ನಲ್ಲಿ ನೀಡಿದ ಸಂದರ್ಶನದಲ್ಲಿ, ಕೆಲವೇ ತಿಂಗಳ ಸಮಯ ಮಾತ್ರ ನೀಲಿ ಚಿತ್ರಗಳಲ್ಲಿ ಕೆಲಸ ಮಾಡಿದ್ದೆ ಎಂದು ಹೇಳಿಕೊಂಡಿದ್ದಾಳೆ.
ಅಷ್ಟೇ ಅಲ್ಲ, "ನಾನು ಲಕ್ಷಗಟ್ಟಲೆ ಹಣ ಸಂಪಾದನೆ ಮಾಡಿದ್ದೀನಿ ಎಂದು ಜನ ಅಂದುಕೊಂಡಿದ್ದಾರೆ. ಅದು ಸಂಪೂರ್ಣ ಸುಳ್ಳು. ಒಟ್ಟಾರೆಯಾಗಿ ನಾನು ದುಡಿದಿದ್ದು $ 12 ಸಾವಿರ ( ಭಾರತೀಯ ರುಪಾಯಿಯಲ್ಲಿ 8 ಲಕ್ಷ). ಆ ನಂತರ ಒಂದು ಪೈಸೆ ಕೂಡ ನೋಡಿಲ್ಲ" ಎಂದು ಮಿಯಾ ಹೇಳಿಕೊಂಡಿದ್ದಾಳೆ.

"ಒಂದು ವಿಷಯ ಸ್ಪಷ್ಟಪಡಿಸಬೇಕಿದೆ. ನನಗೆ ಯಾವತ್ತಿಗೂ 'ಲಕ್ಷಗಟ್ಟಲೆ' ಹಣವನ್ನು ಭರವಸೆ ನೀಡಿಲ್ಲ, ನಾನು ಅದನ್ನು ನಿರೀಕ್ಷೆಯೂ ಮಾಡಿಲ್ಲ. ನನ್ನ ಬಗ್ಗೆ ಇರುವ ಸಾಮಾನ್ಯ ತಪ್ಪು ಅಭಿಪ್ರಾಯಗಳನ್ನು ಸರಿ ಪಡಿಸುತ್ತಿದ್ದೇನೆ. ತುಂಬ ಕಡಿಮೆ ಸಮಯ ನಾನು ವಯಸ್ಕರ ಚಿತ್ರಗಳಲ್ಲಿ ಅಭಿನಯಿಸಿದೆ. ಆದರೆ ನನ್ನ ಚಿತ್ರಗಳು ಕಾಳ್ಗಿಚ್ಚಿನಂತೆ ಹಬ್ಬಿದವು. ಆ ಚಿತ್ರರಂಗವನ್ನು ಬಿಟ್ಟು ಐದು ವರ್ಷದ ನಂತರ ಆ ಚಿತ್ರಗಳು ಓಡುತ್ತಿವೆ. ಆದ್ದರಿಂದಲೇ ಈಗಲೂ ನಾನು ನೀಲಿ ಚಿತ್ರಗಳಲ್ಲಿ ಅಭಿನಯಿಸುತ್ತೇನೆ ಎಂದು ಜನ ಅಂದುಕೊಳ್ಳುತ್ತಾರೆ" ಎಂದಿದ್ದಾರೆ.
ನೀಲಿ ಚಿತ್ರಗಳಿಂದ ಆಚೆ ಬಂದ ನಂತರ ಕೆಲಸ ಹುಡುಕುವುದಕ್ಕೆ ಪಟ್ಟ ಕಷ್ಟದ ಬಗ್ಗೆ ಕೂಡ ಆಕೆ ಹೇಳಿಕೊಂಡಿದ್ದಾಳೆ. "ನೀಲಿ ಚಿತ್ರರಂಗ ತೊರೆದ ಮೇಲೆ ಮಾಮೂಲಿ ಕೆಲಸ ಹುಡುಕುವುದು ಬಹಳ ಕಠಿಣವಾಗಿತ್ತು. ಭಯಗೊಳಿಸುವಂತಿತ್ತು. ನನ್ನ ಭೂತಕಾಲದ ಕಾರಣಕ್ಕೆ ಕಂಪೆನಿಗಳು ಉದ್ಯೋಗ ನೀಡಲು ಬಯಸುತ್ತಿರಲಿಲ್ಲ ಎಂದು ಮಿಯಾ ಹೇಳಿಕೊಂಡಿದ್ದಾರೆ.
ನಿಶ್ಚಿತಾರ್ಥ ಮುಗಿಸಿಕೊಂಡಿರುವ ಮಿಯಾ, ನನ್ನ ಜೀವನದಲ್ಲಿ ಭಾವೀ ಪತಿ ರಾಬರ್ಟ್ ಸ್ಯಾಂಡ್ ಬರ್ಗ್ ಅಂಥ ವ್ಯಕ್ತಿಯನ್ನು ಭೇಟಿ ಆಗಬಹುದು ಎಂದು ಸಹ ಅಂದುಕೊಂಡಿರಲಿಲ್ಲ ಎಂದಿದ್ದಾರೆ. ನೀಲಿ ಚಿತ್ರರಂಗವು ಮಹಿಳೆಯರನ್ನು ಹೇಗೆ ಒಪ್ಪಂದದ ಮೂಲಕ ದುರ್ಬಲರನ್ನಾಗಿ ಮಾಡುತ್ತವೆ, ತಮ್ಮ ಬಲೆಗೆ ಬೀಳಿಸಿಕೊಳ್ಳುತ್ತವೆ ಎಂಬುದನ್ನು ಸಹ ಆಕೆ ವಿವರಿಸಿದ್ದಾರೆ.












Click it and Unblock the Notifications