
ಹಿಜಾಬ್ ಹುಡುಗಿ ಮುಸ್ಕಾನ್‌ನನ್ನು ಹೊಗಳಿದ ಅಲ್-ಖೈದಾ ಮುಖ್ಯಸ್ಥ
ಕಾಬೂಲ್ ಏಪ್ರಿಲ್ 06: ಒಸಾಮಾ ಬಿನ್ ಲಾಡೆನ್. ಈ ಹೆಸರು ಕೇಳಿದರೇನೇ ಅಮೆರಿಕಾದ ಅವಳಿ ಕಟ್ಟಡಗಳು ನೆನಪಿಗೆ ಬರುತ್ತವೆ. ವಿಮಾನ ಡಿಕ್ಕಿಯಾಗಿ ವರ್ಲ್ಡ್ ಟ್ರೇಡ್ ಸೆಂಟರ್ ಕ್ಷಣಾರ್ಧದಲ್ಲಿ ಧರೆಗುರುಳುವ ದೃಶ್ಯ ಕಣ್ಣೆದುರು ಸುಳಿದಂತಾಗುತ್ತದೆ... ಯಾಕೆಂದರೆ, ಆ ಘೋರ ದುರಂತ ವಿಶ್ವದಾದ್ಯಂತ ಅಷ್ಟು ದೊಡ್ಡ ಮಟ್ಟಿನ ಗಾಯ ಮಾಡಿದೆ. ಹೀಗಾಗಿ, ಸಹಜವಾಗಿಯೇ ಈ ಘಟನೆಗೆ ಕಾರಣನಾದ ರಕ್ಕಸ ಉಗ್ರ ಒಸಾಮಾ ಬಿನ್ ಲಾಡೆನ್‌ನನ್ನೂ ಜನ ಮರೆತಿಲ್ಲ. ಇಂತಹ ಒಸಾಮಾ ಬಿನ್ ಲಾಡೆನ್‌ನ ಎರಡನೇ ಕಮಾಂಡರ್ ಅಯ್ಮಾನ್ ಅಲ್-ಜಹ್ಹಾರಿ ಜೀವಂತವಾಗಿರುವುದು ವಿಡಿಯೋವೊಂದರಿಂದ ತಿಳಿದುಬಂದಿದೆ. ಮಾತ್ರವಲ್ಲ ಈತ ಹೊಸ ವಿಡಿಯೊದಲ್ಲಿ ಭಾರತ ಮತ್ತು ಭಾರತದ ಆಡಳಿತ ಪಕ್ಷ ಭಾರತೀಯ ಜನತಾ ಪಕ್ಷದ ವಿರುದ್ಧ ವಿಷವನ್ನು ಕಾರಿದ್ದಾನೆ. ಒಸಾಮಾ ಬಿನ್ ಲಾಡೆನ್ ನಂತರ ವಿಶ್ವದ ಎರಡನೇ ಅತಿದೊಡ್ಡ ಭಯೋತ್ಪಾದಕ ಅಲ್-ಜಹ್ಹಾರಿ ಕೆಲ ದೇಶಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿದ ನಂತರ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋದಲ್ಲಿ ಭಾರತೀಯ ಜನತಾ ಪಕ್ಷವನ್ನು 'ಇಸ್ಲಾಂನ ಶತ್ರುಗಳು' ಎಂದು ಖಂಡಿಸಿದ್ದಾರೆ ಎನ್ನಲಾಗುತ್ತಿದೆ. ಜೊತೆಗೆ ಹಿಜಾಬ್ ಬೇಕು ಎಂದು ಪ್ರತಿಭಟಿಸಿದ ಕರ್ನಾಟಕದ ಮುಸ್ಲಿಂ ವಿದ್ಯಾರ್ಥಿನಿ ಮುಸ್ಕಾನ್ ಖಾನ್ ಅವರ ಬಗ್ಗೆ ಅಲ್-ಜಹ್ಹಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾನೆ ಎನ್ನಲಾಗುತ್ತಿದೆ.
ಅಲ್-ಖೈದಾದ ಅಧಿಕೃತ ಮಾಧ್ಯಮ ವಿಭಾಗವಾದ ಅಸ್-ಸಾಹಬ್ ಮೀಡಿಯಾ ಬಿಡುಗಡೆ ಮಾಡಿದ ಒಂಬತ್ತು ನಿಮಿಷಗಳ ವೀಡಿಯೊದಲ್ಲಿ, ಅಲ್-ಜಹ್ಹಾರಿ ಮುಸ್ಲಿಂ ವಿದ್ಯಾರ್ಥಿ ಮುಸ್ಕಾನ್ ಖಾನ್ ಅವರನ್ನು ಹೊಳಿದ್ದಾನೆ. ಮುಸ್ಕಾನ್ ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷದ ಸರ್ಕಾರವಿರುವ ಶಾಲೆಯಲ್ಲಿ ಹಿಜಾಬ್ ಧರಿಸಲು ಮನವಿ ಮಾಡಿ ಹಿಜಾಬ್ ವಿರೋಧಿಗಳ ಮುಂದೆ 'ಅಲ್ಲಾಹು ಅಕ್ಬರ್' ಎಂದು ಕೂಗಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು.
ಹಲಾಲ್, ಹಿಜಾಬ್ ವಿವಾದ; ಕಾನೂನು ಸುವ್ಯವಸ್ಥೆಗೆ ಮೊದಲ ಆದ್ಯತೆ ಎಂದ ಸಿಎಂ
ಟ್ವಿಟ್ಟರ್‌ನಲ್ಲಿ ಭಯೋತ್ಪಾದನಾ ನಿಗ್ರಹ ತಜ್ಞರು ಒದಗಿಸಿದ ಅನುವಾದಗಳ ಪ್ರಕಾರ ಮತ್ತು ಜಿಹಾದಿಸ್ಟ್ ವೆಬ್‌ಸೈಟ್‌ಗಳನ್ನು ಮೇಲ್ವಿಚಾರಣೆ ಮಾಡುವ ವೆಬ್‌ಸೈಟ್ ಗುಪ್ತಚರ ಗ್ರೂಪ್ ಪ್ರಕಾರ, ಈಜಿಪ್ಟ್ ಮೂಲದ ಮತ್ತು ವೈದ್ಯಕೀಯ ಶಿಕ್ಷಣ ಪಡೆದ ಭಯೋತ್ಪಾದಕ ಅಲ್-ಜಹ್ಹಾರಿ ಮುಸ್ಲಿಮರಿಗೆ ಚಿತ್ರಹಿಂಸೆ ನೀಡುತ್ತಿರುವ "ಭಾರತದ ಹಿಂದೂ ಪ್ರಜಾಪ್ರಭುತ್ವ"ವನ್ನು ಟೀಕಿಸಿದ್ದಾರೆ.

"ಇಸ್ಲಾಂನ ಶತ್ರುಗಳು" ಎಂದು ಖಂಡನೆ
ಅಲ್-ಜವಾಹಿರಿ 2011 ರಲ್ಲಿ ಒಸಾಮಾ ಬಿನ್ ಲಾಡೆನ್ ಸಾವಿನ ನಂತರ ಅಲ್-ಖೈದಾದ ಹೊಸ ಮುಖ್ಯಸ್ಥ. ಈತ ಫ್ರಾನ್ಸ್, ಹಾಲೆಂಡ್ ಮತ್ತು ಸ್ವಿಟ್ಜರ್ಲೆಂಡ್ ಮತ್ತು ಈಜಿಪ್ಟ್ನಲ್ಲಿ ಹಿಜಾಬ್ ವಿರೋಧಿ ನೀತಿಗಳಿಗಾಗಿ ಆಯಾ ದೇಶಗಳನ್ನು "ಇಸ್ಲಾಂನ ಶತ್ರುಗಳು" ಎಂದು ವಿವರಿಸಿದ್ದಾರೆ. ಅಲ್-ಜಹ್ಹಾರಿ ಅವರು ವೀಡಿಯೊದಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಸರ್ಕಾರಗಳನ್ನು ಟೀಕಿಸಿದ್ದಾರೆ. ಜೊತೆಗೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳು 'ನಮ್ಮೊಂದಿಗೆ ಹೋರಾಡಲು ಅಧಿಕಾರ ನೀಡಿದ ಶತ್ರುಗಳನ್ನು ರಕ್ಷಿಸುತ್ತಿವೆ' ಎಂದು ಆತ ಆರೋಪಿಸಿದ್ದಾನೆ.

ಶಾಂತಿ ಕದಡಿದ ಹಿಜಾಬ್ ಕಿಚ್ಚು
ಕರ್ನಾಟಕದಲ್ಲಿ ಹಿಜಾಬ್ ಧರಿಸುವ ವಿವಾದ ಈ ವರ್ಷದ ಜನವರಿಯಲ್ಲಿ ಪ್ರಾರಂಭವಾಯಿತು. ಕರ್ನಾಟಕದ ಉಡುಪಿ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿಗಳನ್ನು ತರಗತಿಗೆ ಪ್ರವೇಶಿಸದಂತೆ ನಿರ್ಬಂಧಿಸಲಾಯಿತು. ಇದರ ಬಳಿಕ ಭಾರತದ ಅನೇಕ ಮುಸ್ಲಿಂ ವಿದ್ಯಾರ್ಥಿಗಳು ಈ ನಿರ್ಧಾರವನ್ನು ವಿರೋಧಿಸಿದರು. ಇದಕ್ಕೆ ಪ್ರತಿಯಾಗಿ ಹಿಂದೂ ವಿದ್ಯಾರ್ಥಿಗಳು ಕೇಸರಿ ಧರಿಸಿ ಪ್ರತಿಭಟಿಸಿದರು. ಹಿಜಾಬ್ ವಿವಾದವು ಉಲ್ಬಣಗೊಳ್ಳುತ್ತಿದ್ದಂತೆ, ಹೆಚ್ಚಿನ ಶಾಲೆಗಳು ಹಿಜಾಬ್ ಧರಿಸುವುದನ್ನು ನಿಷೇಧಿಸಿದವು. ಇದನ್ನು ರಾಜಕೀಯ ಅಸ್ತ್ರವನ್ನಾಗಿಸಿಕೊಂಡು ಪಕ್ಷಗಳು ಹಿಜಾಬ್ ಪರ ಹಾಗೂ ವಿರೋಧವಾಗಿ ಮಾತನಾಡಲು ಆರಂಭಿಸಿದವು. ವಾದ ವಿವಾದಗಳ ಬಳಿಕ ಕರ್ನಾಟಕ ಹೈಕೋರ್ಟ್ ಶಾಲೆಯಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿತು. ಸದ್ಯ ಕರ್ನಾಟಕ ಹಿಜಾಬ್ ವಿವಾದವು ಪ್ರಸ್ತುತ ಸುಪ್ರೀಂ ಕೋರ್ಟ್‌ನಲ್ಲಿದೆ.

ಯಾವೆಲ್ಲಾ ದೇಶಗಳು ಹಿಜಾಬ್ ನಿಷೇಧಿಸಿವೆ?
ಭಾರತದಲ್ಲಿ ಹಿಜಾಬ್ ಅನ್ನು ಐತಿಹಾಸಿಕವಾಗಿ ನಿಷೇಧಿಸಲಾಗಿಲ್ಲ ಅಥವಾ ಸಾರ್ವಜನಿಕ ಪ್ರದೇಶಗಳಿಗೆ ನಿರ್ಬಂಧಿಸಲಾಗಿಲ್ಲ. ಆದರೆ, ಫ್ರಾನ್ಸ್, ಶ್ರೀಲಂಕಾ ಮತ್ತು ಸ್ವಿಟ್ಜರ್ಲೆಂಡ್‌ನಂತಹ ಹಲವು ದೇಶಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್ ಧರಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಶ್ರೀಲಂಕಾದಲ್ಲಿ ಹಿಬಾಜ್ ಧರಿಸಿ ಭಯೋತ್ಪಾದಕ ಘಟನೆಗಳನ್ನು ನಡೆಸಬಹುದು ಎಂದು ಸರ್ಕಾರ ಹೇಳಿದೆ. ಶ್ರೀಲಂಕಾದಲ್ಲಿ ಈಸ್ಟರ್ ಸಂದರ್ಭದಲ್ಲಿ, ಚರ್ಚ್‌ನಲ್ಲಿ ಭೀಕರ ಭಯೋತ್ಪಾದಕ ದಾಳಿ ನಡೆದಿದೆ. ಅದರಲ್ಲಿ ಹಿಜಾಬ್ ಧರಿಸಿದ ಭಯೋತ್ಪಾದಕರು ಚರ್ಚ್‌ಗೆ ಪ್ರವೇಶಿಸಿದರು. ಅಂದಿನಿಂದ, ಶ್ರೀಲಂಕಾದಲ್ಲಿ ಹಿಜಾಬ್ ಅನ್ನು ನಿಷೇಧಿಸಲು ಬೇಡಿಕೆ ಇತ್ತು.

ಇಸ್ಲಾಮಿಕ್ ಸ್ಟೇಟ್‌ನಿಂದ ಸವಾಲು
ಅಲ್-ಜವಾಹಿರಿ ಕಳೆದ ವರ್ಷ ಸೆಪ್ಟೆಂಬರ್ 11 ದಾಳಿಯ ವೀಡಿಯೊದಲ್ಲಿ ಕಾಣಿಸಿಕೊಂಡರು. ಅದಾದ ಬಳಿಕ ಅವರು ಸತ್ತಿದ್ದಾರೆ ಎಂದು ವದಂತಿ ಹರಡಿತ್ತು. ಆದರೆ ಹೊಸ ವೀಡಿಯೊದ ನಂತರ ಅಲ್-ಜವಾಹಿರಿ ಇನ್ನೂ ಜೀವಂತವಾಗಿದ್ದಾನೆ ಎಂದು ದೃಢಪಡಿಸಲಾಗಿದೆ. ವಿಡಿಯೊದಲ್ಲಿ ಅಲ್-ಜವಾಹಿರಿ "ಜೆರುಸಲೆಮ್ ಅನ್ನು ಎಂದಿಗೂ ಯಹೂದಿ ಪ್ರದೇಶವಾಗಲು ಅನುಮತಿಸಲಾಗುವುದಿಲ್ಲ" ಎಂದು ಹೇಳಿದ್ದಾರೆ. ಜೊತೆಗೆ ಅಲ್-ಖೈದಾದ ದಾಳಿಯನ್ನು ಶ್ಲಾಘಿಸಿದ್ದಾರೆ. ಇದು ಜನವರಿ 2021 ರಲ್ಲಿ ಸಿರಿಯಾದಲ್ಲಿ ರಷ್ಯಾದ ಸೈನ್ಯವನ್ನು ಗುರಿಯಾಗಿಸಿತು. ಆಕ್ರಮಣದ 20 ವರ್ಷಗಳ ನಂತರ ಅಫ್ಘಾನಿಸ್ತಾನದಿಂದ ಯುಎಸ್ ಪಡೆಗಳನ್ನು ಹಿಂತೆಗೆದುಕೊಳ್ಳುವುದನ್ನು ಅಲ್-ಜವಾಹಿರಿ ಉಲ್ಲೇಖಿಸಿದ್ದಾರೆ ಎಂದು ವೆಬ್‌ಸೈಟ್ ಹೇಳಿದೆ. ಇತ್ತೀಚಿನ ವರ್ಷಗಳಲ್ಲಿ, ಅಲ್-ಖೈದಾ ತನ್ನ ಪ್ರತಿಸ್ಪರ್ಧಿ ಇಸ್ಲಾಮಿಕ್ ಸ್ಟೇಟ್ ಗುಂಪಿನಿಂದ ಜಿಹಾದಿ ವಲಯಗಳಲ್ಲಿ ಸ್ಪರ್ಧೆಗಿಳಿದಿದೆ. 2014 ರಲ್ಲಿ ಇರಾಕ್ ಮತ್ತು ಸಿರಿಯಾದ ದೊಡ್ಡ ಪ್ರದೇಶಗಳನ್ನು ವಶಪಡಿಸಿಕೊಳ್ಳುವ ಮೂಲಕ ತನ್ನ ವ್ಯಾಪ್ತಿಯನ್ನು ಗಮನಾರ್ಹವಾಗಿ ವಿಸ್ತರಿಸಿದೆ.