ಹನುಮಂತ ಹಿಂದೂಗಳ ನಕಲಿ ದೇವರು: ಟ್ರಂಪ್ ಪಕ್ಷದ ರಾಜಕಾರಣಿ ವಿವಾದಾತ್ಮಕ ಪೋಸ್ಟ್
ಭಾರತದ ಪರಂಪರೆಯಲ್ಲಿ ಹನುಮಂತನಿಗೆ ವಿಶೇಷವಾದ ಸ್ಥಾನವಿದೆ. ಆಂಜನೇಯ, ಮಾರುತಿ, ಹನುಮಾನ್ ಸೇರಿದಂತೆ ವಿವಿಧ ಹೆಸರುಗಳಿಂದ ಹನುಮಂತನನ್ನು ಪೂಜಿಸಲಾಗುತ್ತಿದೆ. ರಾಮಾಯಣ ಕಾಲದಿಂದಲೂ ಹನುಮಂತನ ಹೆಸರು ಅಚ್ಚಳಿಯದೆ ಉಳಿದಿದೆ ಎನ್ನುವುದು ಇತಿಹಾಸ. ಇಂದಿಗೂ ಎಲ್ಲೆಡೆ ಹನುಮಂತನನ್ನು ಭಕ್ತಿ ಭಾವದಿಂದ ಪೂಜಿಸುವ ಕೋಟ್ಯಂತರ ಭಕ್ತರಿದ್ದಾರೆ. ಭಾರತದಲ್ಲಿ ಮಾತ್ರವಲ್ಲದೆ ಬೇರೆ ದೇಶಗಳಲ್ಲಿಯೂ ಹನುಮಂತನಿಗೆ ಕೈಮುಗಿಯುತ್ತಾರೆ. ಹೀಗಿರುವಾಗ ಅಮೇರಿಕಾ ಅಧ್ಯಕ್ಷ ಟ್ರಂಪ್ ಪಕ್ಷದ ನಾಯಕರೊಬ್ಬರು ಹನುಮಂತನ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹನುಮಂತ ಹಿಂದೂಗಳ ನಕಲಿ ದೇವರು ಎನ್ನುವ ಮೂಲಕ ಹನುಮಂತನ ಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಅಮೇರಿಕಾದ ಟೆಕ್ಸಾಸ್‌ನಲ್ಲಿ 2024ರಲ್ಲಿ ಒಕ್ಕೂಟದ ಪ್ರತಿಮೆ ಎಂದು ಹನುಮಂತನ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ ಇದನ್ನು ಅಮೇರಿಕಾದ ಅತ್ಯಂತ ಎತ್ತರದ ಹಿಂದೂ ಸ್ಮಾರಕಗಳಲ್ಲಿ ಒಂದು ಎನ್ನಲಾಗಿದೆ. ಸುಮಾರು 90 ಅಡಿ ಎತ್ತರದ ಹನುಮಂತನ ಪ್ರತಿಮೆಯ ಕುರಿತು ಟೆಕ್ಸಾಸ್‌ನ ರಿಪಬ್ಲಿಕನ್ ನಾಯಕರೊಬ್ಬರು ನೀಡಿರುವ ಹೇಳಿಕೆ ತೀವ್ರ ಟೀಕೆಗೆ ಗುರಿಯಾಗಿದೆ. ಅಮೆರಿಕವನ್ನು ಕ್ರಿಶ್ಚಿಯನ್ ರಾಷ್ಟ್ರ ಎಂದು ಕರೆದಿರುವ ಟೆಕ್ಸಾಸ್‌ನ ರಿಪಬ್ಲಿಕನ್ ಅಲೆಕ್ಸಾಂಡರ್ ಡಂಕನ್ ಹಿಂದೂ ದೇವರ ಪ್ರತಿಮೆಯ ನಿರ್ಮಾಣಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನಮ್ಮದು ಕ್ರಿಶ್ಚಿಯನ್ ರಾಷ್ಟ್ರ
2024ರಲ್ಲಿ ಉದ್ಘಾಟನೆಯಾದ ಹನುಮಾನ್ ಪ್ರತಿಮೆಯ ವೀಡಿಯೊವನ್ನು ಪೋಸ್ಟ್ ಮಾಡಿರುವ ರಿಪಬ್ಲಿಕನ್ ಪಕ್ಷದ ನಾಯಕ ಅಲೆಕ್ಸಾಂಡರ್ ಡಂಕನ್, "ಟೆಕ್ಸಾಸ್‌ನಲ್ಲಿ ಸುಳ್ಳು ಹಿಂದೂ ದೇವರ ಸುಳ್ಳು ಪ್ರತಿಮೆಯನ್ನು ನಾವು ಏಕೆ ಅನುಮತಿಸುತ್ತಿದ್ದೇವೆ? ನಮ್ಮದು ಕ್ರಿಶ್ಚಿಯನ್ ರಾಷ್ಟ್ರ! ಎಂದು ಟ್ವೀಟ್ ಮಾಡಿದ್ದಾರೆ.
ಟೆಕ್ಸಾಸ್ ಪ್ರತಿನಿಧಿಸಲು ಸೆನೆಟ್ ಚುನಾವಣೆಗೆ ಸ್ಪರ್ಧಿಸುತ್ತಿರುವ ಡಂಕನ್ ಬೈಬಲ್ ಅನ್ನು ಉಲ್ಲೇಖಿಸುವ ಮತ್ತೊಂದು ಪೋಸ್ಟ್ ಅನ್ನು ಸಹ ಪೋಸ್ಟ್ ಮಾಡಿದ್ದಾರೆ. ನಾನು ಅದನ್ನು ಒಂದು ವಿಗ್ರಹ ಎಂದು ಕರೆಯುತ್ತಿದ್ದೇನೆ. ಅವರು ದೇವರ ಕುರಿತಾದ ಸತ್ಯವನ್ನು ಸುಳ್ಳಿಗೆ ಬದಲಾಯಿಸಿಕೊಂಡರು. ಆದ್ದರಿಂದ ಅವರು ಸೃಷ್ಟಿಕರ್ತನ ಬದಲಿಗೆ ದೇವರು ಸೃಷ್ಟಿಸಿದ ವಸ್ತುಗಳನ್ನು ಪೂಜಿಸಿದರು ಮತ್ತು ಸೇವಿಸಿದರು ಎಂದು ನಾಲಿಗೆ ಹರಿಬಿಟ್ಟಿದ್ದಾರೆ. ನನ್ನನ್ನು ಬಿಟ್ಟು ಬೇರೆ ದೇವರು ನಿನಗೆ ಇರಬಾರದು. ನೀನು ನಿಮಗಾಗಿ ಯಾವುದೇ ರೀತಿಯ ವಿಗ್ರಹವನ್ನು ಅಥವಾ ಸ್ವರ್ಗದಲ್ಲಿ ಅಥವಾ ಭೂಮಿಯ ಮೇಲೆ ಅಥವಾ ಸಮುದ್ರದಲ್ಲಿ ಯಾವುದರ ಪ್ರತಿಮೆಯನ್ನು ಮಾಡಿಕೊಳ್ಳಬಾರದು ಎಂದು ಡಂಕನ್ ಟ್ವೀಟ್ ಮಾಡಿದ್ದಾರೆ.
ಹಿಂದೂ ಸಂಘಟನೆಗಳಿಂದ ಖಂಡನೆ
ಡಂಕನ್ ಅವರ ಹೇಳಿಕೆಗೆ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಖಂಡನೆ ವ್ಯಕ್ತವಾಗಿದೆ. ಹಿಂದೂ ಅಮೇರಿಕನ್ ಫೌಂಡೇಶನ್ ಕೂಡ ಈ ಹೇಳಿಕೆಯನ್ನು ಖಂಡಿಸಿ ಪೋಸ್ಟ್ ಹಂಚಿಕೊಂಡಿದೆ. ಇದು ಹಿಂದೂ ವಿರೋಧಿ ಮತ್ತು ಪ್ರಚೋದನಕಾರಿ ಎಂದು ಕರೆದಿದೆ. ಅಲ್ಲದೆ ಟೆಕ್ಸಾಸ್‌ನ ರಿಪಬ್ಲಿಕನ್ ಪಕ್ಷಕ್ಕೆ ಈ ಘಟನೆಯ ಬಗ್ಗೆ ವಿವರಿಸಿ, ಈ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿದೆ.
"ನಿಮ್ಮ ಪಕ್ಷದ ಸೆನೆಟ್ ಅಭ್ಯರ್ಥಿಯು ತಾರತಮ್ಯದ ವಿರುದ್ಧ ನಿಮ್ಮದೇ ಆದ ಮಾರ್ಗಸೂಚಿಗಳನ್ನು ಬಹಿರಂಗವಾಗಿ ಉಲ್ಲಂಘಿಸುವ ಹಾಗೂ ಕೆಲವು ಅಸಹ್ಯಕರ ಹಿಂದೂ ವಿರೋಧಿ ದ್ವೇಷವನ್ನು ಪ್ರದರ್ಶಿಸುವ, 1ನೇ ತಿದ್ದುಪಡಿಯ ಸ್ಥಾಪನಾ ಷರತ್ತಿಗೆ ಅಗೌರವ ತೋರಿಸಿದ್ದಾರೆ. ಈ ಬಗ್ಗೆ ಶಿಸ್ತುಬದ್ಧವಾಗಿ ವರ್ತಿಸುವಿರಾ? ಎಂದು ಹಿಂದೂ ಅಮೇರಿಕನ್ ಫೌಂಡೇಶನ್ ಪೋಸ್ಟ್ ಮಾಡಿದೆ. ಈ ಹೇಳಿಕೆಗೆ ಎಲ್ಲ ಕಡೆ ವಿರೋಧ ವ್ಯಕ್ತವಾಗುತ್ತಿದೆ. ಡಂಕನ್ ಕೂಡಲೇ ಕ್ಷಮೆ ಕೇಳುವಂತೆ ಆಗ್ರಹಿಸುತ್ತಿದ್ದಾರೆ.












Click it and Unblock the Notifications