ಅನ್ನ ಇಲ್ಲ.. ನೀರು ಇಲ್ಲ.. ಜೀವಂತ ಇರ್ತೀವಿ ಅನ್ನೋ ಗ್ಯಾರಂಟಿ ಇಲ್ಲವೇ ಇಲ್ಲ!
ಇಸ್ರೇಲ್ & ಗಾಜಾ ಪಟ್ಟಿ ನಡುವೆ ನಡೆಯುತ್ತಿರುವ ಮಹಾನ್ ಯುದ್ಧಕ್ಕೆ ಅಮಾಯಕರು ಜೀವ ಕಳೆದುಕೊಳ್ಳುವ ಪರಿಸ್ಥಿತಿ ಬಂದಿದೆ. ಹಮಾಸ್ ಬಂಡುಕೋರರ ವಿರುದ್ಧ ಯುದ್ಧ ಸಾರಿರುವ ಇಸ್ರೇಲ್ 2023ರ ಅಕ್ಟೋಬರ್ ತಿಂಗಳಿಂದ ಸತತವಾಗಿ ದಾಳಿ ಮಾಡುತ್ತಿದೆ. ಹೀಗಿದ್ದಾಗಲೇ ಗಾಜಾ ಪಟ್ಟಿ ಜನರು ಮಾತ್ರ ಅನ್ನ & ನೀರು ಇಲ್ಲದೆ ಪ್ರತಿ ಕ್ಷಣವು ನರಳಿ ನರಳಿ ಸಾಯುವ ಪರಿಸ್ಥಿತಿ ಬಂದಿದೆ.
ಗಾಜಾ ವಿರುದ್ಧ ಇಸ್ರೇಲ್ ಯುದ್ಧ ಸಾರಿದ ನಂತರ ಅಲ್ಲಿಗೆ ಸರಬರಾಜು ಆಗುತ್ತಿದ್ದ ಎಲ್ಲ ವಸ್ತುಗಳನ್ನ ನಿಲ್ಲಿಸಲಾಗಿದೆ. ಹೀಗಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಗಾಜಾ ಪಟ್ಟಿ ಜನ ತುತ್ತು ಅನ್ನಕ್ಕೂ ಪ್ರತಿದಿನ ಪರದಾಡುವ ಪರಿಸ್ಥಿತಿ ಬಂದಿದೆ. ಹೀಗಿದ್ದಾಗ ಜಗತ್ತಿನ ಮೂಲೆ ಮೂಲೆಯಿಂದ ಗಾಜಾ ಜನರಿಗೆ ಅಂತಾನೆ ಸಾಕಷ್ಟು ಪ್ರಮಾಣದ ಪರಿಹಾರ ಸಾಮಾಗ್ರಿಗಳು ಬರುತ್ತಿವೆ. ಆದರೆ ಆ ವಸ್ತುಗಳನ್ನ ಗಾಜಾ ಜನರಿಗೆ ತಲುಪಿಸಲು ಇಸ್ರೇಲ್ ಸೇನೆಯೇ ಅಡ್ಡಿ ಆಗಿದೆ ಎಂದು ಆರೋಪ ಮಾಡಲಾಗಿದೆ. ಹೀಗಿದ್ದಾಗ ಪರಿಹಾರ ಸಾಮಾಗ್ರಿಗಳು ಸಮಯ ಮೀರುತ್ತಿರುವ ಕಾರಣಕ್ಕೆ ವಾಪಸ್ ಹೋಗುತ್ತಿರುವ ಆರೋಪ ಕೇಳಿಬಂದಿದೆ.

ಗಾಜಾದಲ್ಲಿ ಮಕ್ಕಳ ಸಾವು ಹೆಚ್ಚು
ಇಸ್ರೇಲ್ ಯಾವಾಗ ಗಾಜಾ ವಿರುದ್ಧ ಯುದ್ಧ ಸಾರಿತ್ತೋ ಅದೇ ದಿನದಿಂದ ಪರಿಸ್ಥಿತಿಯು ಕೂಡ ಕೈಮೀರಿ ಹೋಗುತ್ತಿದೆ. ಅದರಲ್ಲೂ ಗಾಜಾ ಪಟ್ಟಿ ಪ್ರದೇಶದಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಿದ್ದು, ಅಲ್ಲಿ ಇಸ್ರೇಲ್ ನಡೆಸುತ್ತಿರುವ ದಾಳಿಗೆ ಮಕ್ಕಳೇ ಹೆಚ್ಚಿನ ಪ್ರಮಾಣದಲ್ಲಿ ಜೀವ ಕಳೆದುಕೊಳ್ಳುತ್ತಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕಿದ್ದ ವಿಶ್ವಸಂಸ್ಥೆ ಕೂಡ ಸುಮ್ಮನೆ ಇದೆ ಎಂಬ ಆಕ್ರೋಶ ಮೊಳಗುತ್ತಿದೆ. ಹೀಗಾಗಿ ಜಗತ್ತಿನಾದ್ಯಂತ ಈ ಬಗ್ಗೆ ಗಂಭೀರ ಚರ್ಚೆ ಶುರುವಾಗಿದೆ.
ಜಗತ್ತಿನಾದ್ಯಂತ ಇಸ್ರೇಲ್ ವಿರುದ್ಧ ಆಕ್ರೋಶ?
ಇಸ್ರೇಲ್ & ಹಮಾಸ್ ನಡುವೆ ನಡೆಯುತ್ತಿರುವ ಭೀಕರ ರಣಕಾಳಗ ಇದೀಗ ಗಾಜಾ ಪಟ್ಟಿಯ ಬಹುತೇಕ ಪ್ರದೇಶವನ್ನ ಹಾಳು ಮಾಡಿ ಹಾಕಿದೆ. ಅದರಲ್ಲೂ 35,000ಕ್ಕೂ ಹೆಚ್ಚು ಜನರು ಈ ಕಿತ್ತಾಟದಲ್ಲಿ ಜೀವ ಬಿಟ್ಟಿದ್ದಾರೆ. ಇಂತಹ ಪರಿಸ್ಥಿತಿ ಎದುರಾಗಿದ್ದನ್ನು ನೋಡಿದ ಜಗತ್ತೇ ಇಸ್ರೇಲ್ ವಿರುದ್ಧ ಆಕ್ರೋಶ ಹೊರ ಹಾಕುವಾಗ ತುತ್ತು ಅನ್ನಕ್ಕೂ ಗಾಜಾದ ಜನರು ಈಗ ಪರದಾಡುವ ಸ್ಥಿತಿ ಬಂದಿದೆ. ಜಾಗತಿಕ ಮಟ್ಟದಲ್ಲಿ ಇಸ್ರೇಲ್ ನಡೆಯ ಬಗ್ಗೆ ಭಾರಿ ಬೇಸರ ವ್ಯಕ್ತವಾಗುತ್ತಿದೆ. ಯಾಕಂದ್ರೆ ಹಮಾಸ್ ಉಗ್ರರ ಹೊಡೆದು ಉರುಳಿಸುವ ನೆಪದಲ್ಲಿ ಇಸ್ರೇಲ್ ಸೇನೆ, ಗಾಜಾ ಪಟ್ಟಿ ಪ್ರದೇಶದ ಸಾಮಾನ್ಯ ಜನರು ಹಾಗೂ ನಿರಾಶ್ರಿತರ ಮೇಲೆ ಕೂಡ ದಾಳಿ ಮಾಡಿ ಸಾಯಿಸುತ್ತಿದೆ ಎಂಬ ಆರೋಪ ಇದೆ.












Click it and Unblock the Notifications