Canada PM: ಕೆನಡಾ ಪ್ರಧಾನಿ ರೇಸ್‌ನಲ್ಲಿ ಕನ್ನಡಿಗ; ತುಮಕೂರು ಮೂಲದ ಸಂಸದರಿಗೆ ಒಲಿಯುತ್ತಾ ಹುದ್ದೆ
ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ತಮ್ಮ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಜಸ್ಟಿನ್ ಟ್ರುಡೊ ಬಳಿಕ ಕೆನಡಾ ಮುಂದಿನ ಪ್ರಧಾನಿ ಯಾರು ಎನ್ನುವ ಪ್ರಶ್ನೆ ಎದುರಾಗಿದೆ. ಹಲವು ಪ್ರಮುಖ ನಾಯಕರು ಪ್ರಧಾನಿ ರೇಸ್‌ನಲ್ಲಿದ್ದು, ಕನ್ನಡಿಗ ಚಂದ್ರ ಆರ್ಯ ಕೂಡ ಕೆನಡಾ ಪ್ರಧಾನಿ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ.
ನೇಪಿಯನ್ ಅನ್ನು ಪ್ರತಿನಿಧಿಸುವ ಲಿಬರಲ್ ಸಂಸದರಾದ ಚಂದ್ರ ಆರ್ಯ ಈಗ ಅಧಿಕೃತವಾಗಿ ಪ್ರಧಾನಿ ರೇಸ್‌ಗೆ ಪ್ರವೇಶಿಸಿದ್ದಾರೆ. ತಮ್ಮ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ತಾವು ಕೆನಡಾ ಪ್ರಧಾನಿಯಾದರೆ ಏನೆಲ್ಲಾ ಮಾಡುತ್ತೇನೆ ಎನ್ನುವ ವಿಚಾರವನ್ನು ಹಂಚಿಕೊಂಡಿದ್ದಾರೆ.

ಕೆನಡಾವನ್ನು ಸಾರ್ವಭೌಮ ಗಣರಾಜ್ಯವನ್ನಾಗಿ ಮಾಡುವ, ನಿವೃತ್ತಿ ಹೆಚ್ಚಿಸುವ, ಪೌರತ್ವ ಆಧಾರಿತ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತರುವ ಮತ್ತು ಪ್ಯಾಲೆಸ್ಟೈನ್ ರಾಜ್ಯವನ್ನು ಅಧಿಕೃತವಾಗಿ ಗುರುತಿಸುವುದಾಗಿ ಭರವಸೆ ನೀಡಿದ್ದಾರೆ. ನಮ್ಮ ದೇಶವನ್ನು ಮರು ನಿರ್ಮಾಣ ಮಾಡಲು ಮತ್ತು ಭವಿಷ್ಯದ ಪೀಳಿಗೆಗೆ ಸಮೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಸಣ್ಣ, ಹೆಚ್ಚು ಪರಿಣಾಮಕಾರಿ ಸರ್ಕಾರವನ್ನು ಮುನ್ನಡೆಸಲು ಕೆನಡಾದ ಮುಂದಿನ ಪ್ರಧಾನಿ ಹುದ್ದೆಗೆ ಸ್ಪರ್ಧಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಜಸ್ಟೀನ್ ಟ್ರುಡೋ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಲಿಬರಲ್ ಪಕ್ಷದ ನಾಯಕ ಸ್ಥಾನದಿಂದ ಕೆಳಗಿಳಿಯುವ ನಿರ್ಧಾರವನ್ನು ಬಹಿರಂಗಪಡಿಸಿದ ಕೆಲವು ದಿನಗಳ ನಂತರ ಚಂದ್ರ ಆರ್ಯ ಘೋಷಣೆ ಮಾಡಿದ್ದಾರೆ.
ತುಮಕೂರು ಜಿಲ್ಲೆಯ ಶಿರಾ ಮೂಲದ ಚಂದ್ರ ಆರ್ಯ
ಚಂದ್ರ ಆರ್ಯ ನಮ್ಮ ಕರ್ನಾಟಕದವರು, ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ದ್ವಾರಾಳು ಗ್ರಾಮದವರು. ಧಾರವಾಡದ ಕೌಸಾಲಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್‌ನಿಂದ ಎಂಬಿಎ ಪದವಿ ಪಡೆದಿದ್ದಾರೆ. ಅವರ ವೈಯಕ್ತಿಕ ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿ ಪ್ರಕಾರ, 20 ವರ್ಷಗಳ ಹಿಂದೆ ತಮ್ಮ ಪತ್ನಿ ಮತ್ತು ಮಗನ ಹೊತೆ ಒಟ್ಟಾವಗೆ ಹೋದ ಅವರು, ಸಣ್ಣ ಅಪಾರ್ಟ್‌ಮೆಂಟ್‌ನಲ್ಲಿ ವಾಸ ಮಾಡುತ್ತಾ ಬದುಕನ್ನು ಆರಂಭಿಸಿದರು.
ಮೊದಲು ಎಂಜಿನಿಯರ್ ಆಗಿ ನಂತರ ಸಣ್ಣ ಉದ್ಯಮಗಳಿಗೆ ಹಣಕಾಸು ಒದಗಿಸುವ ಹಣಕಾಸು ಸಂಸ್ಥೆಯಲ್ಲಿ ಕೆಲಸ ಮಾಡಿದರು. ಬಳಿಕ ಬ್ಯಾಂಕಿನಲ್ಲಿ ಹೂಡಿಕೆ ಸಲಹೆಗಾರರಾಗಿ ಕೆಲಸ ಆರಂಭಿಸಿದ ಅವರು ಯಶಸ್ಸು ಪಡೆದರು. ರಾಜಕೀಯ ಪ್ರವೇಶಿಸುವ ಮೊದಲು ಅವರು ಆರು ವರ್ಷಗಳ ಕಾಲ ಹೈಟೆಕ್ ರಕ್ಷಣಾ ತಂತ್ರಜ್ಞಾನ ಕಂಪನಿಯಲ್ಲಿ ಕಾರ್ಯನಿರ್ವಾಹಕರಾಗಿ ಸೇವೆ ಸಲ್ಲಿಸಿದ್ದಾರೆ. 2015ರಲ್ಲಿ ಮೊದಲ ಬಾರಿ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಹೌಸ್ ಆಫ್ ಕಾಮನ್ಸ್‌ಗೆ ಆಯ್ಕೆಯಾದರು. 2019ರಲ್ಲಿ ಅವರು ಮರು ಆಯ್ಕೆಯಾದರು.
ಕೆನಡಾದಲ್ಲಿ ಕನ್ನಡದ ಕಂಪು
2022ರ ಹೌಸ್ ಆಫ್ ಕಾಮನ್ಸ್‌ನಲ್ಲಿ ಕನ್ನಡದಲ್ಲಿ ಮಾತನಾಡುವ ಮೂಲಕ ಭಾರಿ ಜನಪ್ರಿಯತೆ ಪಡೆದರೆ. ತಮ್ಮ ಭಾಷಣದ ವಿಡಿಯೋವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದ ಅವರು, ನಾನು ಕೆನಡಾದ ಸಂಸತ್‌ನಲ್ಲಿ ನನ್ನ ಮಾತೃಭಾಷೆ ಕನ್ನಡದಲ್ಲಿ ಮಾತನಾಡಿದ್ದೆ, ಭಾರತದ ಹೊರಗೆ ವಿಶ್ವದ ಯಾವುದೇ ಸಂಸತ್‌ನಲ್ಲಿ ಕನ್ನಡ ಮಾತನಾಡಿದ್ದು ಇದೇ ಮೊದಲ ಬಾರಿ ಎಂದು ಬರೆದಿದ್ದಾರೆ.
2024ರ ನವೆಂಬರ್ ನಲ್ಲಿ ಚಂದ್ರ ಆರ್ಯ ಸಂಸತ್ತಿನ ಹೊರಗೆ ಓಂ ಚಿಹ್ನೆ ಇರುವ ಕೇಸರಿ ಧ್ವಜವನ್ನು ಹಾರಿಸಿ ಗಮನ ಸೆಳೆದಿದ್ದರು. ಅವರು ಕೆನಡಾದ ಹಿಂದೂ ಧರ್ಮದ ಜನರ ದನಿಯಾಗಿ ಕೆಲಸ ಮಾಡಲು ಬದ್ದರಾಗಿದ್ದಾರೆ.












Click it and Unblock the Notifications