Rain..Rain: ಭೀಕರ ಮಳೆ, ಸುಂಟರಗಾಳಿಗೆ ನಲುಗಿದ ಚೀನಾ: 141 ಕಾರ್ಖಾನೆ ನೆಲಸಮ, 5 ಸಾವು
ಚೀನಾ, ಏಪ್ರಿಲ್ 28: ಏಕಾಏಕಿ ಅಪ್ಪಳಿಸಿದ ಸುಂಟರಗಾಳಿ ಚೀನಾ ದೇಶದ ದಕ್ಷಿಣ ಭಾಗವನ್ನು ಅಲ್ಲೋಲ ಕಲ್ಲೋಲ ಮಾಡಿದೆ. ಚೀನಾದ ದಕ್ಷಿಣ ಭಾಗದ ಗುವಾಂಗ್‌ಝೌನಲ್ಲಿ ಸುಂಟರಗಾಳಿ ಅಪ್ಪಳಿಸಿದ್ದು, ಆಲಿ ಕಲ್ಲು ಸಹಿತ ಭೀಕರ ಮಳೆಯಾಗಿದೆ. ಘಟನೆಯಲ್ಲಿ 5 ಜನರು ಸಾವನ್ನಪ್ಪಿದ್ದು 33ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಈ ಹಿಂದೆಯೇ ಗುವಾಂಗ್‌ಝೌನ ಹಲವು ಜಿಲ್ಲೆಗಳಲ್ಲಿ ಗುಡುಗು, ಆಲಿಕಲ್ಲು ಮತ್ತು ಸುಂಟರಗಾಳಿ ಸಹಿತ ಭಾರೀ ಮಳೆಯಾಗಲಿದೆ ಎಂದು ಎಚ್ಚರಿಕೆಯನ್ನು ನೀಡಲಾಗಿತ್ತು. ಹೀಗಾಗಿ ಅನೇಕ ಸ್ಥಳಾಂತರಗೊಂಡಿದ್ದರು. ಇನ್ನೂ ಕೆಲವರು ಅಲ್ಲಿಯೇ ಸಿಲುಕಿಕೊಂಡಿದ್ದು, ಹತ್ತಾರು ಜನರು ಕಣ್ಮರೆಯಾಗಿದ್ದಾರೆ.

ಇನ್ನು ಸುಂಟರಗಾಳಿಯ ತೀವ್ರತೆಗೆ ಸಿಕ್ಕಿ 5 ಜನ ಸಾವನ್ನಪ್ಪಿದ್ದು, 33ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಧಾರಾಕಾರ ಮಳೆ ಹಾಗೂ ಭಯಾನಕವಾದ ಗಾಳಿಯಿಂದ ನಗರ ಸೇರಿದಂತೆ ಇತರೆ ಪ್ರದೇಶಗಳಲ್ಲಿ ಭಾರೀ ಹಾನಿಯಾಗಿದೆ. ವಸ್ತುಗಳು ಗಾಳಿಯಲ್ಲಿ ತೂರಿಕೊಂಡು ಹೋಗಿದ್ದು, ಸೆಕೆಂಡಿಗೆ ಗರಿಷ್ಠ 20.6 ಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದೆ.
ಚೀನಾ ದೇಶದ ದಕ್ಷಿಣ ಭಾಗಕ್ಕೆ ಮೂರು ಹಂತದಲ್ಲಿ ಸುಂಟರಗಾಳಿ ಅಪ್ಪಳಿಸಲಿದೆ ಎನ್ನುವ ಮಾಹಿತಿ ಇದ್ದು, ಒಂದು ತೀವ್ರ ಗತಿಯಲ್ಲಿದ್ದರೆ, ಮತ್ತೆರಡು ಸಾಧಾರಣಾ ಮಳೆಯೊಂದಿಗೆ ಅಪ್ಪಳಿಸಲಿದೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಗುವಾಂಗ್‌ಝೌನ 141 ಕಾರ್ಖಾನೆ ಕಟ್ಟಡಗಳು ಹಾನಿಗೊಳಗಾಗಿದ್ದು, ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.

1951ರ ಏಪ್ರಿಲ್‌ನಲ್ಲಿ ಚೀನಾದ ಈ ಭಾಗದಲ್ಲಿ ಅತ್ಯಧಿಕ ಮಳೆಯಾಗಿತ್ತು. ಆದರೆ ಈ ಬಾರಿ ಅದನ್ನು ಮೀರಿಸುವ ಮಳೆಯಾಗಿದ್ದು, ಜನ ಆತಂಕಕ್ಕೊಳಗಾಗಿದ್ದಾರೆ. ನನ್ನ ಜೀವನದಲ್ಲಿ ಇಂತಹ ಮಳೆಯನ್ನು ನಾನು ಕಂಡೇ ಇಲ್ಲ, ನನಗಿಂತ ಹಿರಿಯರು ಕೂಡ ಕಂಡಿರಲು ಸಾಧ್ಯವಿಲ್ಲ ಎಂದು 72 ವರ್ಷದ ಸ್ಥಳೀಯರೊಬ್ಬರು ತಿಳಿಸಿದ್ದಾರೆ.












Click it and Unblock the Notifications