ಫೇಸ್ ಬುಕ್ ನಲ್ಲಿ 50 ಕ್ಕೂ ಹೆಚ್ಚು ಪೋಸ್ಟ್ ಹಾಕಿಬಿಟ್ಟೀರಾ, ಹುಷಾರು!
ಈ ಕಾಲದಲ್ಲಿ ಫೇಸ್ ಬುಕ್ ಉಪಯೋಗಿಸದವರು ಯಾರಿದ್ದಾರೆ? ಸ್ನೇಹಿತರು, ಬಂಧು, ಬಳಗವನ್ನು ಒಂದೇ ಅಂಗಳದಲ್ಲಿ ತಂದಿಟ್ಟು, ಅಪರಿಚಿತರನ್ನೂ ಪರಿಚಿತರನ್ನಾಗಿ ಮಾಡಿ ನೂರಾರು ಸ್ನೇಹಿತರನ್ನು ನೀಡಿದ, ನೀಡುತ್ತಿರುವ ಫೇಸ್ ಬುಕ್ ಗೆ ಕೃತಜ್ಞರಾಗದವರಿಲ್ಲ. ಆದರೆ ಈ ಫೇಸ್ ಬುಕ್ ಹವ್ಯಾಸ, ಚಟವಾಗಿ ಉಂಡಿದ್ದು, ತಿಂದಿದ್ದು, ನಕ್ಕಿದ್ದು, ಅತ್ತಿದ್ದು ಎಲ್ಲವನ್ನೂ ಫೇಸ್ ಬುಕ್ಕಿನಲ್ಲಿ ಶೇರ್ ಮಾಡುವವರಿದ್ದಾರೆ. ಅಂಥವರಿಗಾಗಿ ಫೇಸ್ ಬುಕ್ ಒಂದು ಆಘಾತಕಾರಿ ಸುದ್ದಿ ನೀಡಿದೆ.
ದಿನವೊಂದಕ್ಕೆ ಫೇಸ್ ಬುಕ್ಕಿನಲ್ಲಿ 50 ಕ್ಕಿಂತ ಹೆಚ್ಚು ಬಾರಿ ಪೋಸ್ಟ್ ಮಾಡುವವರರ ಮೇಲೆ ಫೇಸ್ ಬುಕ್ ನಿಗಾ ಇಡಲಿದೆ. ಅಂದರೆ ಅವರ ಪೋಸ್ಟ್ ಗಳನ್ನು ಕದ್ದು ಓದುತ್ತದೆ ಅಂತಲ್ಲ. ಆದರೆ ದಿನವೊಂದಕ್ಕೆ 50 ಕ್ಕಿಂತ ಹೆಚ್ಚು ಸ್ಟೇಟಸ್ ಗಳು ಫೋಸ್ಟ್ ಆಗಿದ್ದರೆ ಅಂಥವರ ಪೋಸ್ಟ್ ಗಳನ್ನು 'ಸುಳ್ಳು ಸುದ್ದಿ' ಎಂದು ಫೇಸ್ ಬುಕ್ ಗುರುತಿಸಲಿದೆ! ಅವುಗಳನ್ನು ಸ್ಪಾಮ್ ಗೆ ತಳ್ಳಲಿದೆ! ಇಂಥ ಪೋಸ್ಟ್ ಗಳು ಮತ್ತಷ್ಟು ಜನರಿಗೆ ತಲುಪದಂತೆ ನೋಡಿಕೊಳ್ಳುವ ಕೆಲಸವನ್ನು ಫೇಸ್ ಬುಕ್ ಮಾಡಲಿದೆ.

ಅಂದರೆ ಅನಗತ್ಯವಾಗಿ ಪದೇ ಪದೇ ಪೋಸ್ಟ್ ಮಾಡುವುದರಿಂದ ಹಲವು ರೀತಿಯ ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ, ಅದೂ ಅಲ್ಲದೆ ಚುನಾವಣೆಯಂಥ ಮಹತ್ವದ ಸಮಯದಲ್ಲಿ ಫೇಸ್ ಬುಕ್ ಗಳಲ್ಲಿ ಹರಿದಾಡುತ್ತಿರುವ ಸುಳ್ಳುಸುದ್ದಿಗಳು ಫೇಸ್ ಬುಕ್ ನ ವಿಶ್ವಾಸಾರ್ಹತೆಗೆ ಧಕ್ಕೆಯನ್ನುಂಟುಮಾಡುತ್ತದೆ. ಅದಕ್ಕೆಂದೇ ಇಂಥ ನಿರ್ಧಾರ ಕೈಗೊಳ್ಳುತ್ತಿರುವುದಾಗಿ ಫೇಸ್ ಬುಕ್ ಹೇಳಿದೆ.
ದಿನವೊಂದಕ್ಕೆ 50 ಕ್ಕಿಂತ ಹೆಚ್ಚು ಪೋಸ್ಟ್ ಅನ್ನು ಫೇಸ್ ಬುಕ್ಕಿನಲ್ಲಿ ಹಾಕುವ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆಯೇ ಎಂಬೆಲ್ಲ ಕುರಿತು ಮಾಹಿತಿ ಲಭ್ಯವಾಗಿಲ್ಲ.












Click it and Unblock the Notifications