ಹಿಂದುತ್ವ ಅಲೆಗೆ ಬೆಚ್ಚಿಬಿದ್ದಿದೆಯೇ ಪಾಕಿಸ್ತಾನ?
ಭಾರತದೆಲ್ಲೆಡೆ ಹಿಂದುತ್ವ, ಹಿಂದೂ ರಾಷ್ಟ್ರದ ಚಿಂತನೆಗಳು ಹರಡುತ್ತಿರುವುದರಿಂದ ಯಾವುದೇ ಕ್ಷಣದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ, ತೊಡೆ ತಟ್ಟಿ ನಿಲ್ಲಬಹುದು ಎಂಬುದು ಸದ್ಯದ ಮಟ್ಟಿಗೆ ಪಾಕಿಸ್ತಾನ ಸರ್ಕಾರವನ್ನು ಕಾಡುತ್ತಿದೆ ಎಂದು ಹೇಳಲಾಗಿದೆ.
ನವದೆಹಲಿ, ಏಪ್ರಿಲ್ 1: ಇತ್ತೀಚೆಗೆ ನಡೆದ ಪಂಚರಾಜ್ಯ ಚುನಾವಣೆಯ ನಂತರ, ದೇಶದೆಲ್ಲೆಡೆ ಪಸರಿಸುತ್ತಿರುವ ಹಿಂದುತ್ವದ ಅಲೆ ನೆರೆಯ ದೇಶ ಪಾಕಿಸ್ತಾನವನ್ನು ಆತಂಕಕ್ಕೀಡು ಮಾಡಿದೆಯಾ ?
'ಹೌದು' ಎನ್ನುತ್ತಿವೆ ಪಾಕಿಸ್ತಾನ ಸರ್ಕಾರಿ ಮೂಲಗಳು. ಭಾರತದಲ್ಲಿ ಹಿಂದುತ್ವದ ಅಲೆಯು ಜೋರಾಗಿಯೇ ಸದ್ದು ಮಾಡುತ್ತಿದೆ. ಇದು ಹೀಗೇ ಮುಂದುವರಿದರೆ, ಭಾರತದ ಎಲ್ಲಾ ರಾಜ್ಯಗಳಲ್ಲೂ ಬಿಜೆಪಿ ಸರ್ಕಾರವೇ ಅಧಿಕಾರಕ್ಕೆ ಬಂದರೆ ಹಿಂದುತ್ವವು ಮತ್ತಷ್ಟು ಪ್ರಖರವಾಗಿ ಪಾಕಿಸ್ತಾನಕ್ಕೆ ಮುಳುವಾಗಲಿದೆಯೇನೋ ಎಂಬ ಆತಂಕ ಎದುರಾಗಿದೆ ಎಂದು ಅಲ್ಲಿನ ನಿವೃತ್ತ ಸೇನಾಧಿಕಾರಿಯೊಬ್ಬರು ಡಾನ್ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆಂದು ಎನ್ ಡಿ ಟಿವಿ ವರದಿ ಮಾಡಿದೆ.

ಇದೆಲ್ಲದರ ಮಧ್ಯೆ, ಭಾರತವು ತನ್ನಲ್ಲಿರುವ ಪರಮಾಣು ಶಸ್ತ್ರಾಸ್ತ್ರವನ್ನು ತಾನೇ ಮೊದಲು ಉಪಯೋಗಿಸುವುದಿಲ್ಲ ಎಂಬ ಘೋಷಣೆ ಮಾಡಲಿದೆ ಎಂಬುದನ್ನು ಪಾಕಿಸ್ತಾನ ಸರ್ಕಾರ ಎದುರು ನೋಡುತ್ತಿದೆ. ಆದರೂ, ಭಾರತದಲ್ಲಿನ ಅಗಾಧವಾದ ಶಸ್ತ್ರಾಸ್ತ್ರ ಬಲ ಪಾಕಿಸ್ತಾನದ ಮತ್ತೊಂದು ಆತಂಕವಾಗಲಿದೆ ಎಂದು ಹೇಳಲಾಗಿದೆ.
ಪಾಕಿಸ್ತಾನ ಸರ್ಕಾರವು ಪದೇ ಪದೇ ಭಾರತದ ವಿರುದ್ಧ ಕಾಲು ಕೆದರುತ್ತಿರುವುದರ ಬೆನ್ನಿಗೇ ಈಗ ಭಾರತದೆಲ್ಲೆಡೆ ಹಿಂದುತ್ವ, ಹಿಂದೂ ರಾಷ್ಟ್ರದ ಚಿಂತನೆಗಳು ಹರಡುತ್ತಿರುವುದರಿಂದ ಯಾವುದೇ ಕ್ಷಣದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ, ತೊಡೆ ತಟ್ಟಿ ನಿಲ್ಲಬಹುದು ಎಂಬುದು ಸದ್ಯದ ಮಟ್ಟಿಗೆ ಪಾಕಿಸ್ತಾನ ಸರ್ಕಾರವನ್ನು ಕಾಡುತ್ತಿದೆ ಎಂದು ಹೇಳಲಾಗಿದೆ.












Click it and Unblock the Notifications