ನಾಯ್ಡು ಬಂಧನಕ್ಕೆ ಆಗ್ರಹ, ಅನಾಮಿಕ ಇಮೇಲ್ ಸೃಷ್ಟಿಸಿದ ಅವಾಂತರ
ಅಮೆರಿಕದ ಇರ್ವಿಂಗ್ ನಗರಕ್ಕೆ ಭೇಟಿ ನೀಡಿರುವ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಬಂಧನಕ್ಕೆ ಆಗ್ರಹಿಸಿ ಅನಾಮಿಕ ಇಮೇಲ್ ಕಳಿಸಲಾಗಿತ್ತು. ನಾಯ್ಡು ಇದ್ದ ಕಾರ್ಯಕ್ರಮಕ್ಕೆ ಹೋದ ಪೊಲೀಸರು ಏನು ಮಾಡಿದ್ರು, ಮುಂದೆ ಓದಿ...
ಹೈದರಾಬಾದ್, ಮೇ 10: ಅಧಿಕೃತವಾಗಿ ಅಮೆರಿಕ ಪ್ರವಾಸ ಕೈಗೊಂಡಿರುವ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಬಂಧಿಸುವಂತೆ ಅನಾಮಿಕ ಇಮೇಲ್ ಬಂದಿದ್ದು, ಪೊಲೀಸರು ಅವರನ್ನು ಹುಡುಕಿಕೊಂಡು ಹೋಗಿದ್ದು, ಎಲ್ಲವೂ ಗೊಂದಲಕ್ಕೆ ಕಾರಣವಾಗಿದೆ.
ಇರ್ವಿಂಗ್ ನಗರಕ್ಕೆ ಭೇಟಿ ನೀಡಿರುವ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಬಂಧನಕ್ಕೆ ಆಗ್ರಹಿಸಿ ಅನಾಮಿಕ ಇಮೇಲ್ ಕಳಿಸಲಾಗಿತ್ತು. ಆದರೆ, ಈ ಇಮೇಲ್ ನೋಡಿದ ಮೇಯರ್ ಬೆಥ್ ವಾನ್ ಡಯ್ನ್ ಅವರು ಕೂಡಲೇ ಕ್ರಮ ಕೈಗೊಂಡಿದ್ದಾರೆ.
ಅನುಮತಿ ಇಲ್ಲದೆ ಅಮೆರಿಕದ ಪ್ರಜೆಗಳಿಂದ ಅವರು ಭಾರಿ ಮೊತ್ತದ ದೇಣಿಗೆ ಸಂಗ್ರಹಿಸುತ್ತಿದ್ದಾರೆ. ಆಂಧ್ರಪ್ರದೇಶದಲ್ಲಿ ರಕ್ತಚಂದನ ಕಳ್ಳಸಾಗಾಟ ಮಾಡುತ್ತಿದ್ದ ಹಲವು ವ್ಯಕ್ತಿಗಳ ಹತ್ಯೆಗೆ ನಾಯ್ಡು ಕಾರಣರಾಗಿದ್ದಾರೆ ಎಂದು ಸಂದೇಶದಲ್ಲಿ ಆಪಾದಿಸಲಾಗಿತ್ತು.
ಈ ಕಾರಣಕ್ಕಾಗಿ ನಾಯ್ಡು ಅವರಿದ್ದ ಕಾರ್ಯಕ್ರಮಕ್ಕೆ ತೆರಳಿ ಸತ್ಯಾಸತ್ಯತೆ ಪರಿಶೀಲಿಸುವಂತೆ ಪೊಲೀಸರಿಗೆ ಮೇಯರ್ ಸೂಚಿಸಿದ್ದಾರೆ. ಅನಿವಾಸಿ ಭಾರತೀಯರು ಮತ್ತು ಅಮೆರಿಕದ ಹೂಡಿಕೆದಾರರ ಜತೆ ನಾಯ್ಡು ಅವರು ಸಭೆ ನಡೆಸುತ್ತಿದ್ದ ಸ್ಥಳಕ್ಕೆ ಬಂದ ಪೊಲೀಸರಿಗೆ ಅಂಥಾ ಯಾವುದೇ ಅಕ್ರಮ ಇಲ್ಲ ನಡೆಯುತ್ತಿಲ್ಲ ಎಂದು ಮನವರಿಕೆಯಾಗಿದೆ.

ಕಾನೂನುಬಾಹಿರವಾಗಿ ದೇಣಿಗೆ ಸಂಗ್ರಹ ನಡೆಯುತ್ತಿಲ್ಲ, ಇದು ಅಧಿಕೃತ ಕಾರ್ಯಕ್ರಮ ಎಂದು ತಿಳಿದ ಪೊಲೀಸರು, ಚಂದ್ರಬಾಬು ನಾಯ್ಡು ಅವರಿಗೆ ಭದ್ರತಾ ವ್ಯವಸ್ಥೆ ಒದಗಿಸಿದ್ದಾರೆ.
ಅಮೆರಿಕದ ಪೊಲೀಸರ ಭದ್ರತೆಯಲ್ಲಿ ತ್ವರಿತಗತಿಯಲ್ಲಿ ತಮ್ಮ ಕಾರ್ಯವನ್ನು ನಾಯ್ಡು ಅವರು ಪೂರೈಸಲು ಸಾಧ್ಯವಾಯಿತು ಎಂದು ತೆಲುಗುದೇಶಂ ಪಕ್ಷದ ಮುಖಂಡ, ಕೃಷಿ ಸಚಿವ ಸೋಮಿರೆಡ್ಡಿ ಚಂದ್ರಮೋಹನ್ ಹೇಳಿದ್ದಾರೆ.
ಆಂಧ್ರಪ್ರದೇಶದ ಮಾಹಿತಿ ತಂತ್ರಜ್ಞಾನ ಸಚಿವ ನಾರಾ ಲೋಕೇಶ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ಪ್ರಕಟಿಸಿದ್ದ ವೈಎಸ್‌ಆರ್ ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣ ವಿಭಾಗದ ನಿರ್ವಾಹಕರೊಬ್ಬರನ್ನು ಇತ್ತೀಚೆಗೆ ಪೊಲೀಸರು ಬಂಧಿಸಿದ್ದರು.
ಇದಕ್ಕೆ ಪ್ರತಿಕಾರವಾಗಿ ಈ ರೀತಿ ಇಮೇಲ್ ಕಳಿಸಿ, ನಾಯ್ಡು ಅವರಿಗೆ ಎನ್ನಾರಗಳ ಮುಂದೆ ಅಪಮಾನ ಮಾಡುವುದು ವೈಎಸ್ಸಾರ್ ಪಕ್ಷದ ಹುನ್ನಾರ ಎಂದು ಆರೋಪಿಸಲಾಗಿದೆ.












Click it and Unblock the Notifications