ಇಂದು ನ್ಯಾಯಾಲಯಕ್ಕೆ ಶರಣಾಗಲಿರುವ ಡೊನಾಲ್ಡ್ ಟ್ರಂಪ್: ಅಮೆರಿಕ ಇತಿಹಾಸದ ಕರಾಳ ಅಧ್ಯಾಯಕ್ಕೆ ಸೇರಲಿದ್ದಾರೆ ಮಾಜಿ ಅಧ್ಯಕ್ಷ
ವಾಷಿಂಗ್ಟನ್, ಆಗಸ್ಟ್ 24: ಅಮೆರಿಕ ಇತಿಹಾಸದಲ್ಲಿ ಕರಾಳ ಅಧ್ಯಾಯವೊಂದು ತೆರೆದುಕೊಳ್ಳಲಿದೆ. ಜಾರ್ಜಿಯಾ ಚುನಾವಣೆಯಲ್ಲಿ ಅಕ್ರಮ ಎಸಗಿದ ಆರೋಪ ಎದುರಿಸುತ್ತಿರುವ ಯುಎಸ್ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು ನ್ಯಾಯಾಲಯಕ್ಕೆ ಶರಣಾಗಲಿದ್ದಾರೆ.
ನಾನು ಗುರುವಾರ ಜಾರ್ಜಿಯಾದ ಅಟ್ಲಾಂಟಾಗೆ ಹೋಗುತ್ತೇನೆ. ಅಲ್ಲಿನ ನ್ಯಾಯಾಲಯಕ್ಕೆ ಶರಣಾಗುತ್ತೇನೆ ಎಂದು ಡೊನಾಲ್ಡ್ ಟ್ರಂಪ್ ಸಾಮಾಜಿಕ ಮಾಧ್ಯಮಗಳ ಮೂಲಕ ತಿಳಿಸಿದ್ದಾರೆ.

ತಮ್ಮ ಮೇಲಿರುವ ಆರೋಪಗಳು ರಾಜಕೀಯ ಪ್ರೇರಿತವೆಂದು ಟ್ರಂಪ್ ಹೇಳಿದ್ದಾರೆ.
'ನಾನು ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಮರು ಆಯ್ಕೆ ಬಯಸಿದ್ದೇನೆ. ಚುನಾವಣೆಗೆ ಪ್ರಚಾರವನ್ನು ಮಾಡುತ್ತಿದ್ದೇನೆ. ಈ ಪ್ರಚಾರವನ್ನು ಹಳಿತಪ್ಪಿಸುವ ಯತ್ನ ನಡೆಯುತ್ತಿದೆ. ಈ ದೋಷಾರೋಪಣೆಯು ರಾಜಕೀಯ ಪ್ರೇರಿತವಾಗಿದೆ' ಎಂದು ಅವರು ಆರೋಪಿಸಿದ್ದಾರೆ.
ಟ್ರಂಪ್ ಮತ್ತು ಇತರ 18 ಸಹ-ಪ್ರತಿವಾದಿಗಳಿಗೆ ಶರಣಾಗಲು ಶುಕ್ರವಾರ ಮಧ್ಯಾಹ್ನದ ವರೆಗೆ ಸಮಯವಿದೆ. ವಕೀಲ ಜಾನ್ ಈಸ್ಟ್‌ಮನ್ ( ಟ್ರಂಪ್ ಅವರ ನ್ಯಾಯವಾದಿ ) ಅವರು ಬುಧವಾರ ಫುಲ್ಟನ್ ಕೌಂಟಿ ಅಧಿಕಾರಿಗಳಿಗೆ ಟ್ರಂಪ್ ಅವರನ್ನು ಹಸ್ತಾಂತರಿಸಲು ಯೋಜಿಸಿದ್ದಾರೆ ಎಂದು ತಿಳಿದುಬಂದಿದೆ.
ಟ್ರಂಪ್ ವಿರುದ್ಧದ ಆರೋಪಗಳೇನು?
ಕಳೆದ ವಾರ 98 ಪುಟಗಳ ದೋಷಾರೋಪಣೆಯನ್ನು ಜಾರ್ಜಿಯಾ ನ್ಯಾಯಾಲಯ ಬಹಿರಂಗಪಡಿಸಿದೆ. ಟ್ರಂಪ್ ಮತ್ತು ಅವರ ಸಹ-ಪ್ರತಿವಾದಿಗಳು 2020 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ಜೋ ಬೈಡನ್ ವಿರುದ್ಧ ಸೋತ ನಂತರವೂ ಟ್ರಂಪ್ ಅವರು ಶ್ವೇತಭವನದಲ್ಲಿ ಉಳಿದುಕೊಳ್ಳುವ ಮೂಲಕ ಮತದಾರರ ಇಚ್ಛೆಯನ್ನು ಬುಡಮೇಲು ಮಾಡಲು ಸಂಚು ರೂಪಿಸಿದ್ದಾರೆ ಎಂದು ಪ್ರಾಸಿಕ್ಯೂಟರ್‌ಗಳು ಆರೋಪಿಸಿದ್ದಾರೆ.
ಜಾರ್ಜಿಯದಲ್ಲಿ ಸೋಲನ್ನು ಒಪ್ಪಿಕೊಳ್ಳದೇ ಚುನಾವಣಾ ಪ್ರಕ್ರಿಯೆಗಳನ್ನೇ ಬುಡಮೇಲು ಮಾಡುವ ನಿಟ್ಟಿನಲ್ಲಿ ಟ್ರಂಪ್ ಮತ್ತು ಅವರ ಸಹ-ಪ್ರತಿವಾದಿಗಳು ಯತ್ನಿಸಿದ್ದರು. ಅವರ ವಿರುದ್ಧ ಒಟ್ಟು 41 ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿತ್ತು ಎಂದು ನ್ಯಾಯಾಲಯ ಹೇಳಿದೆ.
ಯಾವುದೇ ವ್ಯಕ್ತಿ ಅಥವಾ ಸಾಕ್ಷಿಯನ್ನು ಬೆದರಿಸುವ ನಿಟ್ಟಿನಲ್ಲಿ ಪ್ರತಿವಾದಿಗಳು ಕೆಲಸ ಮಾಡಿದರೆ, ಅವರ ಮೇಲೆ ಗಂಭೀರ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಫುಲ್ಟನ್ ಕೌಂಟಿಯ ಸುಪೀರಿಯರ್ ಕೋರ್ಟ್ ನ್ಯಾಯಾಧೀಶ ಸ್ಕಾಟ್ ಮ್ಯಾಕ್‌ಅಫೀ ಹೇಳಿದ್ದಾರೆ.

ಟ್ರಂಪ್ ಮಾಜಿ ವಕೀಲ ರೂಡಿ ಗಿಯುಲಿಯಾನಿ ಶರಣಾಗತಿ
ಡೊನಾಲ್ಡ್ ಟ್ರಂಪ್ ಅವರ ಮಾಜಿ ವಕೀಲ ರೂಡಿ ಗಿಯುಲಿಯಾನಿ ಅವರು ಜಾರ್ಜಿಯಾ ನ್ಯಾಯಾಲಕ್ಕೆ ಬುಧವಾರ ಶರಣಾದರು. 2020 ರ ಅಧ್ಯಕ್ಷೀಯ ಚುನಾವಣೆಯ ಸೋಲನ್ನು ರದ್ದುಗೊಳಿಸುವ ಯತ್ನಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯವು ಅವರ ವಿರುದ್ಧ ದೋಷಾರೋಪಣೆ ಪ್ರಕಟಿಸಿದೆ.












Click it and Unblock the Notifications