ಕ್ಷಮೆ ಕೇಳಿದ ಕೆನಡಾ ಪ್ರಧಾನಿ, ಟ್ರುಡೋ ಹೇಳಿದ್ದೇನು?
ಭಾರತದ ಜೊತೆ ಯಾವಾಗ ಕೆನಡಾ ಪ್ರಧಾನಿ ಜಗಳಕ್ಕೆ ನಿಂತರೋ, ಆ ಕ್ಷಣದಲ್ಲೇ ಕೆನಡಾ ನೆಮ್ಮದಿ ಹಾರಿ ಹೋಗಿದೆ ಅಂತಾ ಕಾಣುತ್ತೆ. ಯಾಕಂದ್ರೆ ದಿನಕ್ಕೊಂದು ವಿವಾದ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ ಬೆನ್ನಿಗೆ ಅಂಟಿಕೊಳ್ಳುತ್ತಿದೆ. ಇದೀಗ ತಮ್ಮ ಅದೊಂದು ತಪ್ಪಿನ ಅರಿವು ಆದ ಕಾರಣ ಖುದ್ದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ ಕ್ಷಮೆ ಕೇಳಿದ್ದಾರೆ. ಈ ರೀತಿ ತುಂಬಿದ ಸಂಸತ್ ಸಭೆಯಲ್ಲಿ ಜಸ್ಟಿನ್ ಟ್ರುಡೋ ಕ್ಷಮೆ ಕೇಳಿದ್ದೇಕೆ?
ಹಿಂದೆ, ಮುಂದೆ ಯೋಚನೆ ಮಾಡದೆ ಏನೇನೋ ಎಡವಟ್ಟು ಮಾಡಿಕೊಂಡು ತಪ್ಪಾಯ್ತು ಕ್ಷಮಿಸಿ ಅಂತಾ ಕೇಳೋದು ಕೆನಡಾಗೆ ಮಾಮೂಲಿ. ಇದೇ ರೀತಿ ಹಿಟ್ಲರ್ ಪಡೆಯ ನಾಜಿ ಯೋಧನಿಗೆ ಕೆನಡಾ ಸಂಸತ್ ಗೌರವ ಸಲ್ಲಿಸಿತ್ತು. ಆ ಬಳಿಕ ಮೊಳಗುತ್ತಿರುವ ಆಕ್ರೋಶದ ಕಹಳೆಗೆ ತಲೆಬಾಗಿ ಈಗ ಕ್ಷಮೆ ಕೇಳಿದ್ದಾರೆ ಕೆನಡಾ ಪ್ರಧಾನಿ. ಹಾಗಾದರೆ ನಿಜಕ್ಕೂ ಕೆನಡಾ ಸಂಸತ್‌ನಲ್ಲಿ ಆಗಿದ್ದು ಏನು? ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ, ಮುಂದೆ ಓದಿ.

ಎಡವಟ್ಟಾಯ್ತು.. ತಲೆಕೆಟ್ಟೋಯ್ತು..
ಸಂಸತ್‌ನಲ್ಲಿ ಹಿರಿಯ ನಾಜಿ ಯೋಧನಿಗೆ ಗೌರವ ಸಲ್ಲಿಸಿದ್ದಕ್ಕೆ ಕೆನಡಾ ಪಿಎಂ ಜಸ್ಟಿನ್ ಟ್ರುಡೋ ಸಂಸತ್ತಿನ ಪರವಾಗಿ ಕ್ಷಮೆ ಕೇಳಿದ್ದಾರೆ. ಅಂದಹಾಗೆ ಸೆ. 22ರಂದು ಕೆನಡಾ ಸಂಸತ್ತನ್ನುದ್ದೇಶಿಸಿ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಭಾಷಣ ಮಾಡಿದ್ದರು. ಆಗ ಫುಲ್ ಜೋಶ್‌ನಲ್ಲಿ ಇದ್ದ ಕೆನಡಾದ ಸಂಸದರು ಹಿಂದು ಮುಂದು ಯೋಚಿಸದೆ ದೊಡ್ಡ ಎಡವಟ್ಟು ಮಾಡಿದ್ದರು. 98 ವರ್ಷದ ನಾಜಿ ಅಂದರೆ ಜರ್ಮನಿಯ ಹಿಟ್ಲರ್ ಸೇನೆಯ ಮಾಜಿ ಯೋಧ ಯಾರೋಸ್ಲಾವ್ ಹುಂಕಾನಿಗೆ ಗೌರವ ಸಲ್ಲಿಸಿದ್ದರು. ಅದರಲ್ಲೂ ಖುದ್ದಾಗಿ ಕೆನಡಾದ ಸ್ಪೀಕರ್ ಆಂಥೋನಿ ರೋಟ ಅವರೇ ನಾಜಿ ಯೋಧನನ್ನು ಗೌರವಿಸಿದ್ದರು.
ಅಡಕೆಗೆ ಹೋದ ಮಾನ, ಆನೆ ಕೊಟ್ಟರೂ...
ಈ ವಿಚಾರ ತಿಳಿಯುತ್ತಿದ್ದಂತೆ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿತ್ತು. ಹುಂಕಾ 2ನೇ ಮಹಾ ಯುದ್ಧದಲ್ಲಿ ಭಾಗವಹಿಸಿದ್ದ ವಿಚಾರ ತಿಳಿಯುತ್ತಿದ್ದಂತೆ ಬೆಂಕಿ ಹೊತ್ತಿತ್ತು. ಸ್ವತಃ ಕೆನಡಾದ ವಿಪಕ್ಷಗಳು ಇದನ್ನ ಖಂಡಿಸಿದ್ದವು. ನಾಜಿ ಯೋಧನಿಗೆ ಗೌರವ ನೀಡಿರುವುದನ್ನು ಖಂಡಿಸಿದ್ದ ವಿರೋಧ ಪಕ್ಷಗಳ ನಾಯಕರು ಕೆನಡಾ ಪ್ರಧಾನಿ ಟ್ರುಡೋ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ರು. ಹೀಗೆ ಒತ್ತಡಕ್ಕೆ ಮಣಿದು ಟ್ರುಡೋ ಕ್ಷಮೆ ಕೇಳಿದ್ದಾರೆ. ಆದ್ರೆ ಅಡಕೆಗೆ ಹೋಗಿರುವ ಮಾನ, ಆನೆ ಕೊಟ್ಟರೆ ಬರುತ್ತಾ? ಅಂತಾ ಟ್ರುಡೋಗೆ ವಿಪಕ್ಷಗಳು ಪ್ರಶ್ನೆ ಮಾಡುತ್ತಿರಬಹುದು.

ಕೆನಡಾ ಪ್ರಧಾನಿ ಹೇಳಿದ್ದು ಏನು?
ಸಂಸತ್ ಸದಸ್ಯರ ಎದುರು ಕ್ಷಮೆ ಕೇಳಿದ ಕೆನಡಾ ಪ್ರಧಾನಿ ಟ್ರುಡೋ, ನಮ್ಮ ನಡೆಯಿಂದ ಸಂಸತ್ತು & ಕೆನಡಾಗೆ ಮುಜುಗರ ಉಂಟಾಗಿದೆ. ಸದನದಲ್ಲಿದ್ದ ನಾವು ಪೂರ್ವಪರ ಯೋಚಿಸಿದೆ ನಿಂತು ಚಪ್ಪಾಳೆ ತಟ್ಟಿದ್ದೇವೆ. ಅದಕ್ಕಾಗಿ ವಿಷಾದಿಸುತ್ತೇವೆ ಎನ್ನುವ ಮೂಲಕ ಕೆನಡಾ ಪಿಎಂ ತಪ್ಪಾಯ್ತು ಕ್ಷಮಿಸಿ ಎಂದಿದ್ದಾರೆ. ಹಾಗೇ ನಾಜಿ ಮಾಜಿ ಯೋಧ ಹುಂಕಾ ಗೌರವಿಸಿರುವುದು ಹತ್ಯಾಕಾಂಡದಲ್ಲಿ ಮಡಿದ ಜನರಿಗೆ ಮಾಡಿದ ಅವಮಾನ. ಇದರಿಂದ ಯುಹೂದಿಗಳು ಮತ್ತು 2ನೇ ಮಹಾಯುದ್ಧದಲ್ಲಿ ನಾಜಿಗಳ ಹೇಯ ಕೃತ್ಯಕ್ಕೆ ತತ್ತರಿಸಿದ ಅಮಾಯಕರಿಗೆ ನೋವಾಗಿದೆ ಎನ್ನುವ ಮೂಲಕ ಪರಿಪರಿಯಾಗಿ ಕ್ಷಮೆ ಕೇಳಿದ್ದಾರೆ ಟ್ರುಡೋ.
ಈಗಾಗಲೇ ರಷ್ಯಾ ಇದೇ ವಿಚಾರ ಇಟ್ಟುಕೊಂಡು ಕೆನಡಾ ವಿರುದ್ಧ ವಾಗ್ದಾಳಿಗೆ ಸಜ್ಜಾಗಿದೆ. ಅಲ್ಲದೆ ಉಕ್ರೇನ್ ಯುದ್ಧದ ಬಗ್ಗೆ ಮಾತನಾಡುವ ಕೆನಡಾಗೆ ನಾಜಿಗಳ ಬಗ್ಗೆ ಗೊತ್ತಿಲ್ಲವೇ? ಎಂಬ ಪ್ರಶ್ನೆ ಕೂಡ ಮೂಡಿದೆ. ನಾಜಿ ಯೋಧನನ್ನು ಆಹ್ವಾನಿಸಿ ಗೌರವಿಸಿರುವ ಕಾರಣಕ್ಕೆ ಕೆನಡಾ ಸ್ಪೀಕರ್ ರಾಜೀನಾಮೆ ಕೊಟ್ಟಿದ್ದಾಗಿದೆ. ಇಷ್ಟೆಲ್ಲದರ ನಡುವೆ ಟ್ರುಡೋ ಕೂಡ ಕ್ಷಮೆ ಕೇಳುವ ಮೂಲಕ ಜಗತ್ತಿನಾದ್ಯಂತ ಈ ವಿಚಾರ ದೊಡ್ಡ ಸದ್ದನ್ನೇ ಮಾಡುತ್ತಿದ್ದು, ಮುಂದೆ ಈ ವಿಚಾರ ಎಲ್ಲಿಗೆ ಹೋಗಿ ಮುಟ್ಟುತ್ತೆ? ರಷ್ಯಾ ಕೂಡ ಇದೇ ವಿಚಾರ ಹಿಡಿದು, ಕೆನಡಾ ವಿರುದ್ಧ ಹೇಗೆ ರಣತಂತ್ರ ರೂಪಿಸುತ್ತೆ? ಅಂತಾ ಕಾದು ನೋಡಬೇಕು.












Click it and Unblock the Notifications