ಕೆನಡಾ ಪಾರ್ಲಿಮೆಂಟ್‌ನಲ್ಲಿ ಟ್ರುಡೋಗೆ ಬೆವರಿಳಿಸಿದ ವಿರೋಧ ಪಕ್ಷಗಳು
ಕೆನಡಾ ಪ್ರಧಾನಿ ಟ್ರುಡೋ ಗ್ರಹಚಾರವೇ ಸರಿ ಇಲ್ಲ ಅಂತಾ ಕಾಣುತ್ತೆ. ಯಾಕಂದ್ರೆ ಪದೇ ಪದೆ ಏನೇನೋ ಎಡವಟ್ಟು ಮಾಡಿಕೊಂಡು ಬರೀ ರುಬ್ಬಿಸಿಕೊಳ್ಳುವುದೆ ಆಗ್ತಿದೆ. ಅದ್ರಲ್ಲೂ ಹಿಟ್ಲರ್ ಸೇನೆಗೆ ಸೇರಿದ, ಮಾಜಿ 'ನಾಜಿ' ಯೋಧನನ್ನು ಕೆನಡಾ ಸಂಸತ್‌ನಲ್ಲಿ ಗೌರವಿಸಿದ ನಂತರ ಇಡೀ ಜಗತ್ತು ಜಸ್ಟಿನ್ ಟ್ರುಡೋಗೆ ಬುದ್ಧಿ ಹೇಳುತ್ತಿದೆ. ಇದೀಗ ಕೆನಡಾ ವಿಪಕ್ಷಗಳು ಕೂಡ ಈ ವಿಚಾರವಾಗಿ ರೊಚ್ಚಿಗೆದ್ದು ನಿಂತಿವೆ.
ಜಸ್ಟಿನ್ ಟ್ರುಡೋ ಪದೇ ಪದೆ ಭಾರತದ ವಿರುದ್ಧ ಹೇಳಿಕೆಗಳನ್ನು ನೀಡುತ್ತಾ ಕೆಂಗಣ್ಣಿಗೂ ಗುರಿಯಾಗಿದ್ದಾರೆ. ಅದರಲ್ಲೂ ಖಲಿಸ್ತಾನಿ ಉಗ್ರ ನಿಜ್ಜರ್ ಹತ್ಯೆ ಬಗ್ಗೆ ಭಾರತದ ವಿರುದ್ಧವೇ ಆರೋಪ ಮಾಡಿ ಸಾಕಷ್ಟು ವಿರೋಧ ಅನುಭವಿಸಿದ್ದರು. ಇದು ಸಾಲದು ಎಂಬಂತೆ ಈಗ 'ನಾಜಿ' ಯೋಧನಿಗೆ ಕೆನಡಾ ಸಂಸತ್ ಚಪ್ಪಾಳೆ ಹೊಡೆದು, ಗೌರವ ಸಲ್ಲಿಸಿರುವ ಕಾರಣಕ್ಕೆ ಸ್ವತಃ ಪಾಶ್ಚಿಮಾತ್ಯ ದೇಶಗಳೇ ಕೆನಡಾ ಪ್ರಧಾನಿಗೆ ಚಳಿ ಬಿಡಿಸಿವೆ. ಅದರಲ್ಲೂ ಕೆನಡಾದ ವಿರೋಧ ಪಕ್ಷದ ನಾಯಕ ಪಿಯರ್ರೆ ಪೊಯಿಲಿಯ್ವ್ರೇ, ಕೆನಡಾ ಪ್ರಧಾನಿಯನ್ನು ಹಾಸ್ಯಗಾರ ಎಂದು ಕರೆದಿದ್ದಾರೆ!

ಕೆನಡಾ ಪ್ರಧಾನಿ ಕಾಮಿಡಿ ಪೀಸ್?
ಹೌದು, ವಿರೋಧ ಪಕ್ಷಗಳ ಆಕ್ರೋಶ ಎಷ್ಟು ಜೋರಾಗಿದೆ ಅಂದ್ರೆ ಕೆನಡಾ ಸಂಸತ್ ಇದೇ ಗಲಾಟೆಯಲ್ಲಿ ಮುಳುಗಿ ಹೋಗಿದೆ. ಯಾಕಂದ್ರೆ ಹಿಟ್ಲರ್ ವಿರುದ್ಧ ಹೋರಾಟ ನಡೆಸಿರುವ ದೇಶಗಳ ಪೈಕಿ ಕೆನಡಾ ಕೂಡ ಒಂದಾಗಿತ್ತು. ಆದರೆ ಈಗ ಹಿಟ್ಲರ್ ಪರ ಇದ್ದ ಸೈನಿಕನನ್ನೇ ಕರೆದು ಸನ್ಮಾನ ಮಾಡಿದ್ದು ಕೆನಡಾ ವಿಪಕ್ಷಗಳನ್ನು ರೊಚ್ಚಿಗೆಬ್ಬಿಸಿದೆ. ಈ ಕುರಿತು ಕೆನಡಾ ಪ್ರಧಾನಿ ವಿರುದ್ಧ ಮಾತನಾಡಿರುವ ವಿರೋಧ ಪಕ್ಷದ ನಾಯಕ ಪಿಯರ್ರೆ ಪೊಯಿಲಿಯ್ವ್ರೇ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಟ್ರುಡೋ ಹಾಸ್ಯಗಾರರಾಗಿದ್ದಾರೆ ಎಂದಿದ್ದಾರೆ. ಅದರಲ್ಲೂ ಮಾಜಿ 'ನಾಜಿ' ಯೋಧನಿಗೆ ಸನ್ಮಾನ ಮಾಡಿದ 5 ದಿನದ ಬಳಿಕ ಕ್ಷಮೆ ಕೇಳಿದ್ದಕ್ಕೂ ಗರಂ ಆಗಿದ್ದರು.
ಕೆನಡಾ ಎಡವಟ್ಟು ಮಾಡಿದ್ದು ಯಾವಾಗ?
ಸೆಪ್ಟೆಂಬರ್ 22ರಂದು ಕೆನಡಾ ಸಂಸತ್ತನ್ನು ಉದ್ದೇಶಿಸಿ ಉಕ್ರೇನ್‌ನ ಅಧ್ಯಕ್ಷ ಝೆಲೆನ್ಸ್ಕಿ ಭಾಷಣ ಮಾಡಿದ್ದರು. ಫುಲ್ ಜೋಶ್‌ನಲ್ಲಿ ಇದ್ದ ಕೆನಡಾದ ಸಂಸದರು ಹಿಂದು ಮುಂದು ಯೋಚಿಸದೆ ದೊಡ್ಡ ಎಡವಟ್ಟು ಮಾಡಿದ್ದರು. 98 ವರ್ಷದ ನಾಜಿ ಅಂದರೆ ಜರ್ಮನಿಯ ಹಿಟ್ಲರ್ ಸೇನೆಯ ಮಾಜಿ ಯೋಧ ಯಾರೋಸ್ಲಾವ್ ಹುಂಕಾನಿಗೆ ಗೌರವ ಸಲ್ಲಿಸಿತ್ತು ಕೆನಡಾ ಸಂಸತ್. ಅದ್ರಲ್ಲೂ ಖುದ್ದಾಗಿ ಕೆನಡಾದ ಸ್ಪೀಕರ್ ಆಂಥೋನಿ ರೋಟ ಅವರೇ ನಾಜಿ ಯೋಧನನ್ನು ಗೌರವಿಸಿದ್ದರು.

ಟ್ರುಡೋಗೆ ಪಾಠ ಕಲಿಸುತ್ತಿವೆ ವಿಪಕ್ಷಗಳು!
ವಿಚಾರ ತಿಳಿಯುತ್ತಿದ್ದಂತೆ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿತ್ತು. ನಾಜಿ ಸೈನಿಕ ಹುಂಕಾ 2ನೇ ಮಹಾ ಯುದ್ಧದಲ್ಲಿ ಭಾಗವಹಿಸಿದ್ದ ವಿಚಾರ ತಿಳಿಯುತ್ತಿದ್ದಂತೆ ಬೆಂಕಿ ಹೊತ್ತಿತ್ತು. ಕೆನಡಾದಲ್ಲಿ ವಿಪಕ್ಷಗಳು ಖಂಡಿಸಿದ್ದವು. ನಾಜಿ ಯೋಧನಿಗೆ ಗೌರವ ನೀಡಿರುವುದನ್ನು ಖಂಡಿಸಿದ್ದ ವಿರೋಧ ಪಕ್ಷಗಳ ನಾಯಕರು ಕೆನಡಾ ಪ್ರಧಾನಿ ಟ್ರುಡೋ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದರು. ಕೊನೆಗೆ ಒತ್ತಡಕ್ಕೆ ಮಣಿದು ಟ್ರುಡೋ ಕ್ಷಮೆ ಕೇಳಿದ್ದಾರೆ. ಆದರೆ ವಿರೋಧ ಪಕ್ಷಗಳ ಆಗ್ರಹಿಸಿದ ಹಲವು ದಿನಗಳ ನಂತರ ಟ್ರುಡೋ ಕ್ಷಮೆ ಕೇಳಿದ್ದು ರೊಚ್ಚಿಗೆಬ್ಬಿಸಿದೆ. ಈ ಮೂಲಕ ಕೆನಡಾ ಪಿಎಂ ಜಸ್ಟಿನ್ ಟ್ರುಡೋಗೆ ವಿರೋಧ ಪಕ್ಷಗಳು ಪಾಠ ಕಲಿಸುತ್ತಿವೆ.
ಒಟ್ನಲ್ಲಿ ಕೆನಡಾ ಪ್ರಧಾನಿ ಒಂದಲ್ಲ ಒಂದು ಎಡವಟ್ಟು ಮಾಡಿಕೊಳ್ಳುತ್ತಿದ್ದಾರೆ. ಆದರೆ ಈ ಸಂದರ್ಭದಲ್ಲಿ ನಾಜಿ ಯೋಧನನ್ನು ಸನ್ಮಾನಿಸಿದ್ದು ನಾವಲ್ಲ, ಸ್ಪೀಕರ್ ಎಂದು ಹಾರಿಕೆಯ ಉತ್ತರ ನೀಡ್ತಿದ್ದಾರೆ ಟ್ರುಡೋ ಪಕ್ಷದ ನಾಯಕರು. ಇದಕ್ಕೂ ವಿಪಕ್ಷ ನಾಯಕರು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ ಇಂತಹ ಮಾತು ಪ್ರಧಾನಿಗೆ ಸೂಕ್ತವಲ್ಲ ಎಂಬ ಹೇಳಿಕೆಯನ್ನೂ ನೀಡುತ್ತಿವೆ. ಹೀಗೆ ಕೆನಡಾ ಮಾಡಿದ ಎಡವಟ್ಟು ಅಮೆರಿಕ ಮತ್ತು ನ್ಯಾಟೋ ಒಕ್ಕೂಟಕ್ಕೂ ಸಂಕಷ್ಟ ತಂದೊಡ್ಡಿದೆ. ಇದೀಗ ಜಗತ್ತಿನಾದ್ಯಂತ ಕೆನಡಾ ಸಂಸತ್ ಮಾಡಿರುವ ಎಡವಟ್ಟಿನ ಬಗ್ಗೆಯೇ ಬಿಸಿಬಿಸಿ ಚರ್ಚೆ ನಡೆಯುತ್ತಿದೆ.












Click it and Unblock the Notifications