ಕೆನಡಾಗೆ ಮಾತಿನ ಪೆಟ್ಟು, ಭದ್ರತಾ ಮಂಡಳಿ ಸ್ಥಾನಕ್ಕೆ ಭಾರತದ ಬಿಗಿಪಟ್ಟು
ಖಲಿಸ್ತಾನಿ ಉಗ್ರರ ವಿಚಾರ ಮುಂದಿಟ್ಟುಕೊಂಡು ಭಾರತದ ವಿರುದ್ಧ ಹೇಳಿಕೆ ನೀಡುತ್ತಿರುವ ಕೆನಡಾ ಪ್ರಧಾನಿಗೆ ಭಾರತ ಈಗ ಸರಿಯಾಗೇ ಉತ್ತರ ಕೊಟ್ಟಿದೆ. ವಿದೇಶಾಂಗ ಸಚಿವ ಎಸ್. ಜೈಶಂಕರ್ ಕೆನಡಾ ಮಾಡುತ್ತಿದ್ದ ಆರೋಪಕ್ಕೆ ಕೆನಡಾ ನೆಲದ ಪಕ್ಕದಲ್ಲೇ ನಿಂತು, ಅಂದರೆ ವಿಶ್ವಸಂಸ್ಥೆಯಲ್ಲಿ ಸೂಕ್ತ ಉತ್ತರ ನೀಡಿದ್ದಾರೆ. ಈ ವೇಳೆ ಭಾರತದ ಆಂತರಿಕ ವಿಚಾರದಲ್ಲಿ ಮೂಗು ತೂರಿಸದಂತೆ ಸೂಚನೆ ಕೊಟ್ಟು, ಭದ್ರತಾ ಮಂಡಳಿ ವಿಚಾರ ಪ್ರಸ್ತಾಪಿಸಿದ್ದಾರೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮತಾನಾಡಿದ ವಿದೇಶಾಂಗ ಸಚಿವ ಎಸ್. ಜೈಶಂಕರ್, ವಿಶ್ವಸಂಸ್ಥೆಯ ನೀತಿ & ನಿಯಮಗಳನ್ನು ಸೂಕ್ತವಾಗಿ ಪಾಲಿಸಲು ಪರೋಕ್ಷವಾಗಿ ಭಾರತದ ಶತ್ರುಗಳಿಗೆ ಎಚ್ಚರಿಕೆ ನೀಡಿದ್ದಾರೆ. ಅದರಲ್ಲೂ ಭಾರತದ ವಿರುದ್ಧ ಗಂಭೀರ ಆರೋಪವನ್ನ ಹೊರಿಸಿದ್ದ ಕೆನಡಾ ಪ್ರಧಾನಿ ಟ್ರುಡೋ ವಿರುದ್ಧ, ಅವರ ಹೆಸರು ಪ್ರಸ್ತಾಪಿಸದೆ ಉತ್ತರಿಸಿದ ಎಸ್. ಜೈಶಂಕರ್ ಭಾರತದ ಆಂತರಿಕ ವಿಚಾರಗಳಲ್ಲಿ ತಲೆಹಾಕದಂತೆ ಸೂಚಿಸಿದ್ದಾರೆ. ಈ ಹೇಳಿಕೆ ಜೊತೆಯಲ್ಲಿ ಭಾರತಕ್ಕೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಖಾಯಂ ಸ್ಥಾನದ ಬಗ್ಗೆ ಕೂಡ ಪ್ರಸ್ತಾಪಿಸಿದ್ದಾರೆ ಜೈಶಂಕರ್.

ಜೈಶಂಕರ್ ಕೆನಡಾಗೆ ಕೊಟ್ಟ ಸಂದೇಶವೇನು?
ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಉದ್ದೇಶಿಸಿ ಮತಾನಾಡಿ, ರಾಜಕೀಯ ಅನುಕೂಲತೆ ಆಧಾರದಲ್ಲಿ ಭಯೋತ್ಪಾದನೆ ಅಥವಾ ಉಗ್ರವಾದಕ್ಕೆ ಪ್ರತಿಕ್ರಿಯೆ ನೀಡಲು ಆಗಲ್ಲ. ವಿಶ್ವ ಸಮುದಾಯವು ವಿಶ್ವಸಂಸ್ಥೆಯ ಮೂಲ ಒಪ್ಪಂದವನ್ನು ಗೌರವಿಸಬೇಕು ಎಂದಿದ್ದಾರೆ. ಈ ಮೂಲಕ ರಾಜಕೀಯ ಅನುಕೂಲತೆಗಳು ಭಯೋತ್ಪಾದನೆ, ಉಗ್ರವಾದ & ಹಿಂಸಾಚಾರಕ್ಕೆ ಪ್ರತಿಕ್ರಿಯೆಗಳನ್ನ ನಿರ್ಧರಿಸುತ್ತೆ ಎಂದು ನಾವು ಪರಿಗಣಿಸಬಾರದು ಎಂಬ ಸಂದೇಶ ರವಾನಿಸಿದ್ದಾರೆ. ಹಾಗೇ ಇದೇ ವೇಳೆ ಬೇರೆ ದೇಶಗಳು ಮತ್ತೊಂದು ದೇಶದ ಆಂತರಿಕ ವಿಚಾರದಲ್ಲಿ ಹಸ್ತಕ್ಷೇಪ ಮಾಡಬಾರದು ಎಂಬ ಸೂಚನೆ ನೀಡಿದ್ದಾರೆ.
ಪಾಕಿಸ್ತಾನ & ಕೆನಡಾಗೆ ಜೈಶಂಕರ್ ಗುದ್ದು!
ಇನ್ನು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಇದೀಗ ವಿಶ್ವಸಂಸ್ಥೆಯಲ್ಲಿ ನೀಡಿರುವ ಹೇಳಿಕೆ ಪಾಕಿಸ್ತಾನದ ಗಡಿಯಲ್ಲಿನ ಉದ್ವಿಗ್ನ ಪರಿಸ್ಥಿತಿ ಮತ್ತು ಭಾರತ & ಕೆನಡಾ ನಡುವಿನ ರಾಜತಾಂತ್ರಿಕ ವಿವಾದಕ್ಕೆ ಖಡಕ್ ಉತ್ತರ ಎಂದು ಹೇಳಲಾಗಿದೆ. ಕೆನಡಾ ಪ್ರಧಾನಿ ಭಾರತ ವಿರುದ್ಧ ಖಲಿಸ್ತಾನಿ ಉಗ್ರರ ಹತ್ಯೆ ವಿಚಾರದಲ್ಲಿ ಆರೋಪ ಮಾಡಿದ ಬಳಿಕ ಕೆನಡಾ ಮತ್ತು ಭಾರತದ ಸಂಬಂಧ ಹಳಸಿ ಹೋಗಿದೆ. ಅದರಲ್ಲೂ ಎರಡೂ ದೇಶಗಳು ಕಠಿಣ ಕ್ರಮವನ್ನು ತೆಗೆದುಕೊಂಡಿದ್ದವು. ಹೀಗಾಗಿ ಎರಡೂ ದೇಶದ ಸಂಬಂಧ ಸಂಪೂರ್ಣ ಕೈಮೀರಿ ಹೋಗಿದೆ ಅಂತಾ ವಿಶ್ಲೇಷಣೆ ಮಾಡಲಾಗಿತ್ತು. ಈಗ ಜೈಶಂಕರ್ ಕೆನಡಾ ಆರೋಪಕ್ಕೆ ಖಡಕ್ ಉತ್ತರ ನೀಡಿದ್ದಾರೆ.

ಭದ್ರತಾ ಮಂಡಳಿ ಖಾಯಂ ಸ್ಥಾನ?
ಹಾಗೇ ಇದೇ ವೇಳೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸ್ಥಾನದ ಬಗ್ಗೆ ಕೂಡ ಪ್ರಸ್ತಾಪ ಮಾಡಿರುವ ವಿದೇಶಾಂಗ ಸಚಿವ ಎಸ್.ಜೈಶಂಕರ್, ಕೆಲವೇ ರಾಷ್ಟ್ರಗಳ ಕೈಯಲ್ಲಿ ಅಧಿಕಾರ ಇರುವುದನ್ನ ಪ್ರಸ್ತಾಪಿಸಿದ್ದಾರೆ. ಹಾಗೇ ಕೆಲವೇ ರಾಷ್ಟ್ರಗಳು ರೂಪಿಸಿದ ನಿಯಮ ಹಲವು ರಾಷ್ಟ್ರಗಳು ಪಾಲಿಸುವುದು ಕಷ್ಟ ಎಂಬ ಸಂದೇಶ ರವಾನೆ ಮಾಡಿದ್ದಾರೆ. ಅಲ್ಲದೆ ಭಾರತ ಜಿ20 ಶೃಂಗಸಭೆಯ ಅಧ್ಯಕ್ಷತೆ ವಹಿಸಿ ಯಶಸ್ಸು ಕಂಡಿದ್ದನ್ನ ಕೂಡ ಇದೇ ವೇಳೆ ಪ್ರಸ್ತಾಪ ಮಾಡಿ, ಭಾರತಕ್ಕೆ ಭದ್ರತಾ ಮಂಡಳಿಯಲ್ಲಿ ಖಾಯಂ ಸ್ಥಾನ ನೀಡಬೇಕು ಎಂಬ ಕೂಗನ್ನು ಮತ್ತೆ ಪ್ರಸ್ತಾಪಿಸಿದ್ದಾರೆ.
ಕೆನಡಾ ಪ್ರಧಾನಿ ಆರೋಪ ಏನು?
ಭಾರತದ ಮೋಸ್ಟ್ ವಾಟೆಂಡ್ ಉಗ್ರ & ಖಲಿಸ್ತಾನಿ ಗ್ಯಾಂಗ್ ನಾಯಕ ಹರ್ದೀಪ್ ಸಿಂಗ್ ನಿಜ್ಜರ್‌ನ ಈ ವರ್ಷದ ಜೂನ್ 18ರಂದು ಕೆನಡಾದ ಸರ್ರೆಯಲ್ಲಿ ಗುಂಡಿಟ್ಟು ಭೀಕರವಾಗಿ ಹತ್ಯೆ ಮಾಡಿದ್ರು. ಹಿಂಸಾಚಾರ & ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾದ ಆರೋಪ ಹೀಗೆ ಕೊಲೆಯಾಗಿದ್ದ ನಿಜ್ಜರ್ ವಿರುದ್ಧ ಇತ್ತು. ಆದರೆ ಈ ಕೊಲೆಯನ್ನು ಭಾರತದ ಏಜೆಂಟ್‌ಗಳು ಮಾಡಿದ್ದಾರೆ ಎನ್ನುತ್ತಿದ್ದಾರೆ ಕೆನಡಾ ಪ್ರಧಾನಿ. ಸೂಕ್ತ ಸಾಕ್ಷ್ಯವೇ ಇಲ್ಲದೆ ಇಂಥ ಆರೋಪ ಸರಿಯಲ್ಲ ಎಂದು ಭಾರತ ಕೂಡ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿತ್ತು. ಈಗ ಭಾರತದ ವಿದೇಶಾಂಗ ಸಚಿವರ ಜೈಶಂಕರ್, ವಿಶ್ವಸಂಸ್ಥೆಯಲ್ಲೇ ನಿಂತು ಭಾರತದ ಆಂತರಿಕ ವಿಚಾರದಲ್ಲಿ ಕೈಹಾಕಬೇಡಿ ಎಂದಿದ್ದಾರೆ.












Click it and Unblock the Notifications