ಇಸ್ರೇಲ್‌ಗೆ ಅನ್ನ, ನೀರು, ಪೆಟ್ರೋಲ್ ನಿಲ್ಲಿಸಿ! ಹಿಂಗೆ ಹೇಳಿದ್ಯಾರು?
ಇಸ್ರೇಲ್ ಮತ್ತು ಹಮಾಸ್ ಮಧ್ಯೆ ಹೊತ್ತಿ ಉರಿಯುತ್ತಿರುವ ಭೀಕರ ಯುದ್ಧದ ಜ್ವಾಲೆ ಈಗ ಮಧ್ಯಪ್ರಾಚ್ಯ ದೇಶಗಳನ್ನು ಸುಡುತ್ತಿದೆ. ಈ ಯುದ್ಧದ ಪರಿಣಾಮ ಇಡೀ ಜಗತ್ತಿನ ಮೇಲೂ ಆಗುತ್ತಿದೆ. ತೈಲ ರಫ್ತು ಮಾಡುವಲ್ಲಿ ಅತಿಹೆಚ್ಚಿನ ಪಾಲು ಹೊಂದಿರುವ ಅರಬ್ ದೇಶಗಳು ಯುದ್ಧದ ಹಿನ್ನೆಲೆ ಇಸ್ರೇಲ್ ವಿರುದ್ಧ ಗರಂ ಆಗಿವೆ. ಹೀಗೆ ಇರಾನ್‌ನ ಸರ್ವೋಚ್ಛ ನಾಯಕ ಖಮೇನಿ ಇಸ್ರೇಲ್ ವಿರುದ್ಧ ಇದೀಗ ಹೇಳಿರುವುದು ಏನು ಗೊತ್ತಾ?
ಇರಾನ್ ನಾಯಕರು ಹಮಾಸ್ ಉಗ್ರರ ಪರ ಮೃದು ದೋರಣೆ ಹೊಂದಿದ್ದು, ಹೀಗಾಗಿಯೇ ಪದೇ ಪದೆ ಹಮಾಸ್ ಪರವಾಗಿ ಇರಾನ್ ಹೇಳಿಕೆ ನೀಡ್ತಿದೆ. ಈಗಲೂ ಅದೇ ರೀತಿ ಹೇಳಿಕೆ ಹೊರಬಿದ್ದಿದ್ದು ಇರಾನ್‌ನ ಸರ್ವೋಚ್ಛ ನಾಯಕ ಖಮೇನಿ ಗುಡುಗಿದ್ದು, ಇಸ್ರೇಲ್ ದೇಶಕ್ಕೆ ತೈಲ, ಆಹಾರ ಸೇರಿ ಎಲ್ಲಾ ವಸ್ತುಗಳ ರಫ್ತು ನಿಲ್ಲಿಸಿ ಎಂದು ಮುಸ್ಲಿಂ ರಾಷ್ಟ್ರಗಳಿಗೆ ಸೂಚನೆ ನೀಡಿದ್ದಾರೆ. ಅಲ್ಲದೆ ತಕ್ಷಣ ಪ್ಯಾಲೆಸ್ತೀನ್ ಭಾಗವಾಗಿರುವ ಗಾಜಾಪಟ್ಟಿ ಮೇಲೆ ದಾಳಿಯನ್ನ ನಿಲ್ಲಿಸಬೇಕು ಎಂದು ಖಮೇನಿ ಆಗ್ರಹಿಸಿದ್ದು, ಇಸ್ರೇಲ್ ಪಿತ್ತ ನೆತ್ತಿಗೇರುವಂತೆ ಮಾಡಿದೆ.

ಖಮೇನಿ VS ಬೆಂಜಮಿನ್ ನೆತನ್ಯಾಹು!
ಗಾಜಾಪಟ್ಟಿ ಮೇಲೆ ದಾಳಿ ನಡೆಯುತ್ತಿರುವ ಸಮಯದಲ್ಲಿ ಇರಾನ್ ಮಹತ್ವದ ಹೇಳಿಕೆ ನೀಡಿದೆ. ಕೆಲವು ದಿನಗಳ ಹಿಂದೆ ಕೂಡ, ಇಸ್ಲಾಮಿಕ್ ರಾಷ್ಟ್ರಗಳ ಸಹಕಾರ ಒಕ್ಕೂಟ ಅಂದರೆ ಒಐಸಿಯ ಸದಸ್ಯ ರಾಷ್ಟ್ರಗಳು ಇಸ್ರೇಲ್ ವಿರುದ್ಧ ತೈಲ ಪೂರೈಕೆ ಸೇರಿ ಇತರ ರೀತಿ ನಿರ್ಬಂಧ ವಿಧಿಸಬೇಕು ಎಂಬ ಆಗ್ರಹವನ್ನ ಇರಾನ್ ಮಾಡಿತ್ತು. ಇದರ ಜೊತೆ ಇಸ್ಲಾಮಿಕ್ ರಾಷ್ಟ್ರಗಳಲ್ಲಿನ ಇಸ್ರೇಲ್ ರಾಯಭಾರಿಗಳನ್ನ ಹೊರಹಾಕಬೇಕು ಎಂದು ಇರಾನ್ ಹೇಳಿತ್ತು. ಇರಾನ್ ವಿದೇಶಾಂಗ ಸಚಿವ ಹುಸೇನ್ ಅಮಿರಾಬ್ದುಲ್ಲಾಹಿಯಾನ್ ಇಂತಹ ಸಲಹೆ ನೀಡಿದ್ದು ಚರ್ಚೆಗೆ ಗ್ರಾಸವಾಗಿತ್ತು. ಈ ನಡುವೆ ಇರಾನ್‌ನ ಸರ್ವೋಚ್ಛ ನಾಯಕ ಖಮೇನಿ ಕೂಡ ಇಸ್ರೇಲ್ ವಿರುದ್ಧ ಇದೇ ರೀತಿಯ ಸಲಹೆ ನೀಡಿರುವುದು ಸಂಚಲನ ಸೃಷ್ಟಿಸಿದೆ.
ಹಮಾಸ್ ಬೆಂಬಲಕ್ಕೆ ನಿಂತಿದೆಯಾ ಇರಾನ್?
1979ರಲ್ಲಿ ಸಂಭವಿಸಿದ ಘಟನೆ ನಂತರ, ಪ್ಯಾಲೆಸ್ತೀನ್ ವಿಷಯದಲ್ಲಿ ಇರಾನ್ ಸದಾ ಸಪೋರ್ಟ್ ಕೊಡುತ್ತಿದೆ. ಹಮಾಸ್ ಬೆಂಬಲಕ್ಕೆ ತೆಹರಾನ್ ನೇರವಾಗಿ ನಿಲ್ಲುತ್ತಿದೆ. ಗಾಜಾಪಟ್ಟಿಯ ಮೇಲೆ ನಿಯಂತ್ರಣ ಹೊಂದಿರುವ ಹಮಾಸ್‌ಗೆ ಹಣಕಾಸು & ಶಸ್ತ್ರಾಸ್ತ್ರ ಪೂರೈಕೆಯನ್ನ ಕೂಡ ಇರಾನ್ ಮಾಡುತ್ತಿದೆ ಎಂಬ ಆರೋಪ ಕೂಡ ಇದೆ. ಹೀಗೆ ಇಷ್ಟೆಲ್ಲಾ ಆರೋಪದ ನಡುವೆ ಈಗ ಇಸ್ರೇಲ್ & ಹಮಾಸ್ ಜಗಳ ನಡೆಯುವಾಗ ಇರಾನ್‌ನ ಸರ್ವೋಚ್ಛ ನಾಯಕ ನೀಡಿರುವ ಹೇಳಿಕೆ ಕೂಡ ಮುನ್ನೆಲೆಗೆ ಬಂದಿದೆ.
ಯುದ್ಧಕ್ಕೆ ಬಲಿಯಾದವರು ಎಷ್ಟು ಜನ?
ಇಸ್ರೇಲ್ & ಹಮಾಸ್ ಯುದ್ಧದಲ್ಲಿ ಈವರೆಗೂ 10 ಸಾವಿರಕ್ಕೂ ಹೆಚ್ಚು ಜನ ಮೃತಪಟ್ಟು, ಸಾವಿರಾರು ಅಮಾಯಕರು ನರಳುತ್ತಿದ್ದಾರೆ. ಅದರಲ್ಲೂ ಗಾಜಾಪಟ್ಟಿ ಇಸ್ರೇಲ್ ಸೇನೆ ದಾಳಿ ಹಿನ್ನೆಲೆ ಅಕ್ಷರಶಃ ನರಕವಾಗಿದೆ. 9 ಸಾವಿರಕ್ಕೂ ಹೆಚ್ಚು ಗಾಜಾಪಟ್ಟಿ ಜನ ಯುದ್ಧಕ್ಕೆ ಈಗ, ಬಲಿಯಾಗಿರುವ ಆರೋಪ ಕೇಳಿಬರುತ್ತಿದೆ. ಇಷ್ಟೆಲ್ಲದರ ಮಧ್ಯೆ ಇರಾನ್ ಸೇರಿದಂತೆ ಹಲವು ದೇಶಗಳು ಯುದ್ಧ ನಿಲ್ಲಿಸುವಂತೆ ಆಗ್ರಹಿಸುತ್ತಿವೆ.

ಬರೋಬ್ಬರಿ 8 ಲಕ್ಷ ಜನರು ಎಸ್ಕೇಪ್!
ಹೌದು, ಗಾಜಾಪಟ್ಟಿ ಉತ್ತರ ಭಾಗವನ್ನೇ ಟಾರ್ಗೆಟ್ ಮಾಡಿ ಇಸ್ರೇಲ್ ಸೇನೆ ಹಮಾಸ್ ಉಗ್ರರ ವಿರುದ್ಧ ಜೋರಾದ ಸಂಘರ್ಷ ನಡೆಸುತ್ತಿದೆ. ಅದರಲ್ಲೂ ಗಾಜಾಪಟ್ಟಿ ಉತ್ತರ ಭಾಗದಲ್ಲಿನ ನೆಲದಲ್ಲಿ ಸುರಂಗ ನಿರ್ಮಿಸಿ ಹಮಾಸ್ ಉಗ್ರರು ಯುದ್ಧ ಮುಂದುವರಿಸಿದ್ದಾರೆ. ಹೀಗಿದ್ದಾಗ ಗಾಜಾದ ಸಾಮಾನ್ಯ ನಿವಾಸಿಗಳು ಜೀವ ಭಯದಲ್ಲಿ, ತಾವು ಹುಟ್ಟಿ ಬೆಳೆದ ಜಾಗವ ಬಿಟ್ಟು ಓಡಿ ಹೋಗುತ್ತಿದ್ದಾರೆ. ಇದೇ ರೀತಿ ಒಟ್ಟಾರೆ 8 ಲಕ್ಷ ಪ್ಯಾಲೆಸ್ತೀನ್ ಅಂದರೆ ಗಾಜಾ ಜನರು ಎದ್ದುಬಿದ್ದು ಓಡಿದ್ದಾರೆ ಎನ್ನಲಾಗಿದೆ.
ಯುದ್ಧ ನಿಲ್ಲಿಸುತ್ತಾ ಇಸ್ರೇಲ್ ಸೇನೆ?
ಇಷ್ಟೆಲ್ಲ ಘಟನೆಗಳು ಸಂಭವಿಸುತ್ತಿರುವ ಸಮಯದಲ್ಲೇ ಕದನ ವಿರಾಮವನ್ನ ಘೋಷಿಸಬೇಕು ಎಂಬ ಆಗ್ರಹಕ್ಕೆ ಇಸ್ರೇಲ್ ಪ್ರಧಾನಿ ನೀಡಿದ ಉತ್ತರ ಸಂಚಲನ ಸೃಷ್ಟಿಸಿದೆ. ಗಾಜಾಪಟ್ಟಿಯ ಮೇಲೆ ದಾಳಿ ನಿಲ್ಲಿಸಿ ಕದನ ವಿರಾಮ ಘೋಷಿಸಿ ಎಂಬ ಮನವಿಗೆ ಬೆಂಜಮಿನ್ ನೆತನ್ಯಾಹು ವ್ಯತಿರಿಕ್ತವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ ಹಮಾಸ್ ಉಗ್ರರನ್ನ ಸಂಪೂರ್ಣವಾಗಿ ನಾಶ ಮಾಡುವುದಾಗಿ ಮತ್ತೊಮ್ಮೆ ಗುಡುಗಿದ್ದಾರೆ ಇಸ್ರೇಲ್ ಪಿಎಂ. ಇದು ಸಾಲದು ಎಂಬಂತೆ ಈ ಸಮಯದಲ್ಲೇ ಇರಾನ್ ಕೂಡ ಮಧ್ಯ ಮೂಗು ತೂರಿಸಿದ್ದು, ಮತ್ತೊಂದು ಮಹಾಯುದ್ಧ ನಡೆಯುತ್ತಾ? ಎಂಬ ಭಯ ಆವರಿಸಿದೆ.












Click it and Unblock the Notifications