ಭಾರತದ ವಿಚಾರದಲ್ಲಿ ಮತ್ತೆ ಮೂಗು ತೂರಿಸಿದ ಅಮೆರಿಕ!
ಭಾರತ ಮತ್ತು ಅಮೆರಿಕ ಸಂಬಂಧ ಗಟ್ಟಿಯಾಗುತ್ತಿರುವ ಸಮಯದಲ್ಲೇ ವಿಶ್ವದ ದೊಡ್ಡಣ್ಣ ನೀಡಿರುವ ಹೇಳಿಕೆ ಇದೀಗ ಸಂಚಲನ ಸೃಷ್ಟಿಸಿದೆ. ಕೆನಡಾ ಹಾಗೂ ಭಾರತ ನಡುವೆ ಈಗ ಖಲಿಸ್ತಾನಿಗಳ ವಿಚಾರಕ್ಕೆ ದೊಡ್ಡ ಕಿರಿಕ್ ನಡೆಯುತ್ತಿದ್ದು, ಈ ಸಮಯಕ್ಕೆ ಅಮೆರಿಕದಿಂದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಗಾದರೆ ಅಮೆರಿಕ ಹೇಳಿದ್ದೇನು? ಅಮೆರಿಕ ಅಧಿಕಾರಿ ನೀಡಿದ ಆ ಒಂದು ಹೇಳಿಕೆ ಯಾಕೆ ಇಷ್ಟೊಂದು ಸದ್ದು ಮಾಡುತ್ತಿದೆ?
ಭಾರತಕ್ಕೆ ಸಂಬಂಧಿಸಿದ ಹಲವು ವಿಚಾರಗಳಲ್ಲಿ ಅಮೆರಿಕ ಈಗಾಗಲೇ ಮಧ್ಯಪ್ರವೇಶ ಮಾಡಿ ಸರಿಯಾದ ಉತ್ತರ ಸಿಕ್ಕ ನಂತರ ತಣ್ಣಗಾಗಿದೆ. ಆದ್ರೆ ಭಾರತ & ಅಮೆರಿಕ ಇದೀಗ ಮತ್ತಷ್ಟು ಹತ್ತಿರವಾಗುತ್ತಿರುವ ಸಮಯಕ್ಕೆ ಅಮೆರಿಕ ನೀಡಿರುವ ಹೇಳಿಕೆ ಸಂಚಲನ ಸೃಷ್ಟಿಸಿದೆ. ಅತ್ತ ಕೆನಡಾಗೆ ಭಾರತ ಸರಿಯಾಗಿ ತಿರುಗೇಟು ನೀಡುತ್ತಿರುವ ವೇಳೆ ಅಮೆರಿಕ ಪ್ರತಿಕ್ರಿಯೆ ನೀಡಿ, ಗಮನ ಸೆಳೆದಿದೆ. ಹಾಗಾದರೆ ಜಗತ್ತಿನ ದೊಡ್ಡಣ್ಣ ಎಂದು ಕರೆಸಿಕೊಳ್ಳುವ ಅಮೆರಿಕ ಇದೀಗ ಹೇಳಿದ್ದು ಏನು? ಇದರಿಂದ ಭಾರತ & ಅಮೆರಿಕ ಸಂಬಂಧಕ್ಕೆ ಸಮಸ್ಯೆ ಆಗುತ್ತಾ?

ಬುದ್ಧಿ ಹೇಳಲು ಬಂದ ದೊಡ್ಡಣ್ಣ!
ಭಾರತದ ಮೋಸ್ಟ್ ವಾಟೆಂಡ್ ಉಗ್ರ & ಖಲಿಸ್ತಾನಿ ಗ್ಯಾಂಗ್ ನಾಯಕ ಹರ್ದೀಪ್ ಸಿಂಗ್ ನಿಜ್ಜರ್‌ನ ಈ ವರ್ಷದ ಜೂನ್ 18ರಂದು ಕೆನಡಾದ ಸರ್ರೆಯಲ್ಲಿ ಗುಂಡಿಟ್ಟು ಭೀಕರವಾಗಿ ಹತ್ಯೆ ಮಾಡಿದ್ರು. ಹಿಂಸಾಚಾರ & ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾದ ಆರೋಪ ಹೀಗೆ ಕೊಲೆಯಾಗಿದ್ದ ನಿಜ್ಜರ್ ವಿರುದ್ಧ ಇತ್ತು. ಆದರೆ ಈ ಕೊಲೆಯನ್ನು ಭಾರತದ ಏಜೆಂಟ್‌ಗಳು ಮಾಡಿದ್ದಾರೆ ಎನ್ನುತ್ತಿದ್ದಾರೆ ಕೆನಡಾ ಪ್ರಧಾನಿ. ಸೂಕ್ತ ಸಾಕ್ಷ್ಯವೇ ಇಲ್ಲದೆ ಇಂಥ ಆರೋಪ ಸರಿಯಲ್ಲ ಎಂದು ಭಾರತ ಕೂಡ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿತ್ತು. ಈ ವಿಚಾರಕ್ಕೆ ಸಂಬಂಧಿಸಿ ಈಗ ಅಮೆರಿಕ ಬುದ್ಧಿ ಹೇಳಲು ಬಂದಿದೆ.
ಭಾರತದ ಮೇಲೆ ಒತ್ತಡ ಹಾಕ್ತಿದ್ದಾರಾ?
ಹೌದು, ಖಾಲಿಸ್ತಾನಿ ಉಗ್ರ ನಿಜ್ಜರ್ ಹತ್ಯೆಯ ಕುರಿತು ಕೆನಡಾ ತನಿಖೆಗೆ ಸಹಕರಿಸಲು ಭಾರತಕ್ಕೆ ಅಮೆರಿಕ ನಿರಂತರ ಒತ್ತಡ ಹಾಕುತ್ತಿರುವ ಬಗ್ಗೆ ಅಧಿಕಾರಿಯೊಬ್ಬರು ನೀಡಿದ ಮಾಹಿತಿಯೇ ಈಗ ಸಂಚಲನ ಸೃಷ್ಟಿಸಿದೆ. ಅಂದಹಾಗೆ ಕಳೆದ ವಾರ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರ ಜೊತೆ ಅಮೆರಿಕ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಚರ್ಚೆ ನಡೆಸುವ ವೇಳೆ, ನಿಜ್ಜರ್ ಘಟನೆ ಬಗ್ಗೆ ಮಾತನಾಡಿದ್ದರಂತೆ. ಹೀಗೆ ಕೆನಡಾ ತನಿಖೆಗೆ ಸಹಕರಿಸಿ ಎಂದು ಹಲವು ಬಾರಿ ಭಾರತವನ್ನು ಕೇಳಿಕೊಂಡಿದ್ದೇವೆ ಅಂತಾ ವಿದೇಶಾಂಗ ಇಲಾಖೆ ವಕ್ತಾರ ಮ್ಯಾಥೀವ್ ಮಿಲ್ಲರ್ ಹೇಳಿಕೆ ನೀಡಿದ್ದಾರೆ.

ಹೀಗೆ ಅಮೆರಿಕದ ವಿದೇಶಾಂಗ ಇಲಾಖೆ ವಕ್ತಾರ ನೀಡಿರುವ ಹೇಳಿಕೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಏಕೆಂದರೆ ಕೆನಡಾ ಮತ್ತು ಭಾರತದ ವಿಚಾರಕ್ಕೆ ಅಮೆರಿಕ ಹೀಗೆ ದಿಢೀರ್ ಮಧ್ಯಪ್ರವೇಶ ಮಾಡುತ್ತಿರುವುದು ಏಕೆ? ಎಂಬ ಪ್ರಶ್ನೆ ಮೂಡಿದೆ. ಭಾರತ ಕೂಡ ಇದಕ್ಕೆಲ್ಲ ಸೂಕ್ತ ಉತ್ತರ ನೀಡುತ್ತಾ ಬಂದಿದ್ದು, ಈಗಲೂ ಅದೇ ರೀತಿ ಉತ್ತರ ಸಿಗುವ ನಿರೀಕ್ಷೆ ಕೂಡ ಇದೆ. ಆದ್ರೆ ಖಲಿಸ್ತಾನಿ ಉಗ್ರರ ವಿಚಾರಕ್ಕೆ ಇಷ್ಟೆಲ್ಲಾ ಬೆಳವಣಿಗೆ ನಡೆಯುತ್ತಿರುವುದು ಮಾತ್ರ ಬೇಸರದ ವಿಚಾರ.
ವಿಶ್ವಸಂಸ್ಥೆಯಲ್ಲೇ ಭಾರತದ ತಿರುಗೇಟು
ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಇತ್ತೀಚೆಗೆ ವಿಶ್ವಸಂಸ್ಥೆಯಲ್ಲಿ ನೀಡಿರುವ ಹೇಳಿಕೆ ಗಮನ ಸೆಳೆದಿತ್ತು. ಅತ್ತ ಪಾಕಿಸ್ತಾನದ ಗಡಿಯ ಉದ್ವಿಗ್ನ ಪರಿಸ್ಥಿತಿ ಮತ್ತು ಭಾರತ & ಕೆನಡಾದ ರಾಜತಾಂತ್ರಿಕ ವಿವಾದಕ್ಕೆ ಖಡಕ್ ತಿರುಗೇಟು ನೀಡಿದಂತಿತ್ತು. ಕೆನಡಾಗೆ ನೇರವಾಗಿ ಸಂದೇಶ ನೀಡಿದ್ದ ಜೈಶಂಕರ್ ಅವರು, ರಾಜಕೀಯ ಅನುಕೂಲತೆಗಳು ಭಯೋತ್ಪಾದನೆ, ಉಗ್ರವಾದ ಮತ್ತು ಹಿಂಸಾಚಾರಕ್ಕೆ ಪ್ರತಿಕ್ರಿಯೆಗಳನ್ನು ನಿರ್ಧರಿಸುತ್ತೆ ಎಂದು ಪರಿಗಣಿಸಬಾರದು ಎಂದಿದ್ರು. ಈ ಮೂಲಕ ಕೆನಡಾಗೆ ಭಾರತದ ವಿದೇಶಾಂಗ ಸಚಿವರು ಸೂಕ್ತ ತಿರುಗೇಟು ಕೊಟ್ಟಿದ್ದರು. ಆದರೆ ಈಗ ಅಮೆರಿಕ ಕೂಡ ಮಧ್ಯಪ್ರವೇಶ ಮಾಡುತ್ತಿದೆ.












Click it and Unblock the Notifications