121 ಮಂದಿ ಬಂಧನ, 182 ಮದ್ರಸಾಗಳು ಬಂದ್: ಉಗ್ರರ ವಿರುದ್ಧ ಪಾಕ್ ಕಾರ್ಯಾಚರಣೆ
ಇಸ್ಲಾಮಾಬಾದ್, ಮಾರ್ಚ್ 07: ಬಾಲಾಕೋಟ್ ಮೇಲೆ ಭಾರತವು ವೈಮಾನಿಕ ದಾಳಿ ನಡೆಸಿದ ಬಳಿಕ ಪಾಕಿಸ್ತಾನದ ಮೇಲೆ ಉಗ್ರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಡ ಹೆಚ್ಚಿದ್ದು, ಅದಕ್ಕೆ ತಕ್ಕಂತೆ ಪಾಕಿಸ್ತಾನವು ಕಾರ್ಯಚಾರಣೆ ಪ್ರಾರಂಭಿಸಿದಂತಿದೆ.
ಉಗ್ರರ ವಿರುದ್ಧ ಕಾರ್ಯಚಾರಣೆ ಪ್ರಾರಂಭವಾಗಿದ್ದು 182 ಮದ್ರಸಾಗಳನ್ನು ಬಂದ್ ಮಾಡಲಾಗಿದೆ. ಹಾಗೂ ಉಗ್ರರಿಗೆ ಬೆಂಬಲ ನೀಡುತ್ತಿದ್ದ, ಉಗ್ರ ಚಿಂತನೆಗಳನ್ನು ಹೊಂದಿದ್ದವರು ಎನ್ನಲಾದ 121 ಮಂದಿಯನ್ನು ಬಂಧಿಸಲಾಗಿದೆ ಎಂದು ಪಾಕಿಸ್ತಾನ ಸರ್ಕಾರ ಹೇಳಿದೆ.
ಆಂತರಿಕ ಭದ್ರತೆ ಸಚಿವಾಲಯವು ಈ ಬಗ್ಗೆ ಮಾಹಿತಿ ನೀಡಿದ್ದು, ಈ ಕಾರ್ಯಾಚರಣೆಯು ಮೊದಲೇ ಯೋಜನೆ ರೂಪಿಸಿದ್ದಾಗಿತ್ತು. ಭಾರತವು ದಾಳಿ ಮಾಡಿದ ಕಾರಣವಾಗಲಿ, ಅಥವಾ ಅಂತರರಾಷ್ಟ್ರೀಯ ಒತ್ತಡದಿಂದಾಗಲಿ ಮಾಡಿದ್ದಲ್ಲ ಎಂದು ಹೇಳಿದೆ.

ಫೆಬ್ರವರಿ 14 ರಂದು ಪುಲ್ವಾಮಾದಲ್ಲಿ ಜೈಶೆ-ಎ-ಮೊಹಮ್ಮದ್ ಉಗ್ರರ ದಾಳಿಗೆ 49 ಸಿಆರ್‌ಪಿಎಫ್ ಯೋಧರು ಹುತಾತ್ಮರಾದ ನಂತರ ಪಾಕಿಸ್ತಾನದ ಮೇಲೆ ಉಗ್ರರ ವಿರುದ್ಧ ಕ್ರಮಕೈಗೊಳ್ಳುವಂತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೆಚ್ಚಿದೆ. ಹಾಗಾಗಿಯೇ ಈ ಕಾರ್ಯಾಚರಣೆ ನಡೆದಿದೆ ಎನ್ನಲಾಗಿದೆ.
ಪಾಕಿಸ್ತಾನ ಸರ್ಕಾರಕ್ಕೆ ಮದ್ರಸಾಗಳು ಭಾರಿ ತಲೆನೋವಾಗಿವೆ. ಧರ್ಮಶಾಲೆಗಳಾದ ಮದರಸಾಗಳು ಯುವಕರನ್ನು ಧರ್ಮಬಿರುಗಳನ್ನಾಗಿ ಮಾಡಿ ಭಯೋತ್ಪಾದನೆಯತ್ತ ಆಕರ್ಷಿತಗೊಳಿಸುತ್ತಿವೆ ಎಂಬ ದೂರು ಬಹಳ ಕಾಲದಿಂದಲೂ ಇವೆ. ಆದರೆ ಹಠಾತ್ತನೆ ಇವುಗಳ ಮೇಲೆ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಆಗುತ್ತಿಲ್ಲ. ಮದರಸಾಗಳಲ್ಲಿ ಪಾಕಿಸ್ತಾನದ ಕೋಟ್ಯಂತರ ಜನ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ನಿಷೇಧಿತ ಸಂಘಟನೆಗಳಾದ ಜೈಶೆ-ಎ-ಮೊಹಮ್ಮದ್ ಹಲವು ಮದ್ರಸಾಗಳನ್ನು ನಡೆಸುತ್ತಿದೆ. ಮತ್ತೊಂದು ನಿಷೇಧಿತ ಸಂಘಟನೆ ಜಮಾತ್-ಉದ್-ದವಾ ಸಂಘಟನೆ ಪಾಕಿಸ್ತಾನದಲ್ಲಿ 300 ಮದರಸಾಗಳನ್ನು ನಡೆಸುತ್ತಿದೆ.
ಪಾಕಿಸ್ತಾನವು ಹೊಸದಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ನಿಷೇಧಿತ ಸಂಘಟನೆಗಳಿಗೆ ಸೇರಿದ 34 ಶಾಲಾ-ಕಾಲೇಜು, 164 ಮದ್ರಸಾಗಳು, 184 ಆಂಬುಲೆನ್ಸ್‌ಗಳು, ಐದು ಆಸ್ಪತ್ರೆ, ಎಂಟು ಕಚೇರಿಗಳನ್ನು ಸರ್ಕಾರ ತನ್ನ ವಶಕ್ಕೆ ಪಡೆದಿದೆ.












Click it and Unblock the Notifications