ನಾರ್ತ್ ಕೆರೋಲಿನಾವನ್ನು ಅಪ್ಪಳಿಸಲಿದೆ ಫ್ಲಾರೆನ್ಸ್ ಚಂಡಮಾರುತ
Recommended Video

ಕ್ಯಾಲಿಫೋರ್ನಿಯಾ, ಸೆಪ್ಟೆಂಬರ್ 14 : ಪ್ರಚಂಡ ಫ್ಲಾರೆನ್ಸ್ ಚಂಡಮಾರುತ ನಾರ್ತ್ ಕೆರೋಲಿನಾದ ಪೂರ್ವ ಕರಾವಳಿಯನ್ನು ಅಪ್ಪಳಿಸಲು ಸಜ್ಜಾಗಿದ್ದು, ಆಸ್ತಿಪಾಸ್ತಿ ಮತ್ತು ಪ್ರಾಣಕ್ಕೆ ಭಾರೀ ಹಾನಿಯಾಗುವ ಸಂಭವನೀಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ.
ಈ ಫ್ಲಾರೆನ್ಸ್ ಚಂಡಮಾರುತವನ್ನು ಕೆಟಗರಿ 1 ಚಂಡಮಾರುತ ಎಂದು ವಿಭಾಗಿಸಲಾಗಿದ್ದು, ಪ್ರತಿ ಗಂಟೆಗೆ 90 ಮೈಲಿಯಷ್ಟು ವೇಗವಾಗಿ ಬಿರುಗಾಳಿ ಬೀಸುತ್ತಿದೆ. ಚಂಡಮಾರುತ ವಿಲ್ಮಿಂಗ್ಟನ್ ನಿಂದ 30 ಮೈಲು ದೂರದಲ್ಲಿದ್ದು, ಪ್ರತಿ ಗಂಟೆಗೆ 6 ಮೈಲಿ ವೇಗದಲ್ಲಿ ಕರೋಲಿನಾ ಉತ್ತರ ಕರಾವಳಿಯತ್ತ ಮುನ್ನುಗ್ಗುತ್ತಿದೆ.
ಮುಂದಿನ ಕೆಲ ದಿನಗಳ ಕಾಲ ಭಾರೀ ಮಳೆ ಸುರಿಯಲಿದ್ದು, ಜನರು ಎಚ್ಚರಿಕೆಯಿಂದ ಇರಬೇಕೆಂದು ಸೂಚನೆ ನೀಡಲಾಗಿದೆ. 10 ಲಕ್ಷಕ್ಕೂ ಹೆಚ್ಚು ಜನರನ್ನು ಅಪಾಯದ ಸ್ಥಳದಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕೆಂದು ಕೂಡ ಸೂಚನೆ ನೀಡಲಾಗಿದೆ.

ಈ ಚಂಡಮಾರುತ ಈಗಾಗಲೆ ತನ್ನ ಹಾವಳಿಯನ್ನು ಎಬ್ಬಿಸಿದೆ. ಲೈವ್ ಕ್ಯಾಮೆರಾಗಳು ಅನಾಹುತವನ್ನು ಸೆರೆಹಿಡಿಯುತ್ತಿವೆ. ಉತ್ತರ ಕರೋಲಿನಾದಲ್ಲಿರುವ ಪುಂಗೋ ನದಿ ಈಗಾಗಲೆ ಅಪಾಯಮಟ್ಟಕ್ಕಿಂತ ಮೇಲೆ ಹರಿಯುತ್ತಿದ್ದು, ಸುರಕ್ಷಿತವಾಗಿರಿ ಎಂಬ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಪ್ರಚಂಡ ಚಂಡಮಾರುತ ಫ್ಲಾರೆನ್ಸ್ ಸ್ಥಳೀಯ ಕಾಲಮಾನ ಶುಕ್ರವಾರ ಮಧ್ಯಾಹ್ನದ ಸಮಯ ಉತ್ತರ ಕರೋಲಿನಾಗೆ ಬಂದು ತಲುಪಲಿದೆ. ಈ ಚಂಡಮಾರುತ ನಮ್ಮ ಸಹನೆ, ಸಹಿಷ್ಣುತೆ, ಟೀಮ್ ವರ್ಕ್, ಸಾಮಾನ್ಯಜ್ಞಾನವನ್ನು ಪರೀಕ್ಷಿಸಲಿದೆ ಎಂದು ಕರೋಲಿನಾದ ರಾಜ್ಯಪಾಲ ರಾಯ್ ಕೂಪರ್ ಹೇಳಿದ್ದಾರೆ. ಎಂಟು ತಿಂಗಳಲ್ಲಿ ಬೀಳಲಿರುವ ಮಳೆ ಕೇವಲ ಎರಡು ಮೂರು ದಿನಗಳಲ್ಲಿ ಬೀಳಲಿದೆ ಎಂದು ರಾಷ್ಟ್ರೀಯ ಹವಾಮಾನ ತಜ್ಞ ಬ್ರಾಂಡನ್ ಲಾಕ್ಲಿಯರ್ ಅವರು ಮುನ್ಸೂಚನೆ ನೀಡಿದ್ದಾರೆ.

ಉತ್ತರ ಕೆರೋಲಿನಾದ ಕೆಲವೆಡೆಗಳಲ್ಲಿ ಕೆಲವೇ ಗಂಟೆಗಳಲ್ಲಿ ಭಾರೀ ಮಳೆ ಬಿದ್ದಿದೆ. ಸಮುದ್ರದ ಅಲೆಗಳು ಭಾರೀ ಗಾತ್ರ ಪಡೆಯುತ್ತ ತೀರವನ್ನು ಅಪ್ಪಳಿಸುತ್ತಿದೆ. ಗಾಳಿಯ ವೇಗ ತುಸು ತಗ್ಗಿದ್ದರೂ ಚಂಡಮಾರುತದ ರೌದ್ರತೆಯನ್ನು ಕಡೆಗಣಿಸುವಂತಿಲ್ಲ ಎಂದು ಎಚ್ಚರಿಕೆ ನೀಡಲಾಗಿದೆ. ನದಿ, ತೊರೆ, ತಗ್ಗು ಪ್ರದೇಶದಲ್ಲಿ ವಾಸಿಸುತ್ತಿರುವ ಜನರು ಎಚ್ಚರಿಕೆಯಿಂದಿರಬೇಕು. ಹಿಂದೆ ಕೂಡ ಪ್ರವಾಹದಿಂದಾಗಿ ಹಲವಾರು ಸಾವುನೋವುಗಳಾಗಿವೆ ಎಂದು ಫೆಡರಲ್ ಎಮರ್ಜೆನ್ಸಿ ಮ್ಯಾನೇಜ್ಮೆಂಟ್ ಏಜೆನ್ಸಿ ಹೇಳಿದೆ.












Click it and Unblock the Notifications