80 ಕೊರೊನಾ ಸೋಂಕಿತರನ್ನು ಇರಿಸಿದ್ದ ಹೋಟೆಲ್ ಕುಸಿತ: 10 ಮಂದಿ ಸಾವು
ಬೀಜಿಂಗ್, ಮಾರ್ಚ್.08: ಗಾಯದ ಮೇಲೆ ಬರೆ ಎಳೆಯುವುದು ಎಂಬ ಗಾದೆಮಾತು ಕೇಳಿದ್ದೀರಿ ಅಲ್ಲವೇ. ಅಂಥದ್ದೇ ಘಟನೆಗೆ ಚೀನಾದ ದಕ್ಷಿಣ ಭಾಗದಲ್ಲಿರುವ ಕ್ವಾಂಜೋವಾ ನಗರವು ಸಾಕ್ಷಿಯಾಗಿದೆ. ಮಾರಕ ಸೋಂಕಿನಿಂದ ತತ್ತರಿಸಿರುವ ಡ್ರ್ಯಾಗನ್ ರಾಷ್ಟ್ರದಲ್ಲಿ ಜವರಾಯನ ಅಟ್ಟಹಾಸ ಮುಂದುವರಿದಿದೆ.
ಕೊರೊನಾ ಸೋಂಕಿತರನ್ನು ದಿಗ್ಬಂಧನದಲ್ಲಿ ಇರಿಸಲು ಬಳಸುತ್ತಿದ್ದ ಐಶಾರಾಮಿ ಹೋಟೆಲ್ ಶನಿವಾರ ರಾತ್ರಿ ಕುಸಿದು ಬಿದ್ದಿದ್ದು, 10ಕ್ಕೂ ಹೆಚ್ಚು ಮಂದಿ ಪ್ರಾಣ ಬಿಟ್ಟಿರುವ ಬಗ್ಗೆ ತುರ್ತು ಪರಿಸ್ಥಿತಿ ನಿರ್ವಹಣಾ ಸಚಿವಾಲಯವು ಸ್ಪಷ್ಟನೆ ನೀಡಿದೆ.
ಕ್ವಾಂಜೋವಾ ನಗರದಲ್ಲಿ ಸಂಭವಿಸಿದ ಘಟನೆಯಿಂದಾಗಿ ಕಳೆದ ಶನಿವಾರ ರಾತ್ರಿಯಿಂದಲೂ ಫ್ಯೂಜಿಯನ್ ಅಗ್ನಿಶಾಮಕ ದಳಕ್ಕೆ ಸೇರಿದ 1 ಸಾವಿರಕ್ಕೂ ಅಧಿಕ ಸಿಬ್ಬಂದಿಯು ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ.

ಕ್ಸಿಂಜಿಯಾ ಹೋಟೆಲ್ ನಲ್ಲಿದ್ದ 89 ಮಂದಿ
ಚೀನಾದ ದಕ್ಷಿಣ ಭಾಗದ ಕ್ವಾಂಜೋವಾದಲ್ಲಿ ಇರುವ ಕ್ಸಿಂಜಿಯಾ ಹೋಟೆಲ್ ನಲ್ಲಿ 80 ಮಂದಿಯಿದ್ದರು. ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡ ಹಿನ್ನೆಲೆ ದಿಗ್ಬಂಧನದಲ್ಲಿ ಇರಿಸಿ ವೈದ್ಯಕೀಯ ತಪಾಸಣೆ ನಡೆಸಲಾಗುತ್ತಿತ್ತು. ಆದರೆ ಶನಿವಾರ ರಾತ್ರಿ ಇದೇ ಹೋಟೆಲ್ ನ ಕಟ್ಟಡ ಕುಸಿದು ಬಿದ್ದಿದೆ.

ಹೋಟೆಲ್ ಕುಸಿದು 2 ಗಂಟೆಗಳಲ್ಲೇ 32 ಮಂದಿ ರಕ್ಷಣೆ
ಕಳೆದ ಶನಿವಾರ ರಾತ್ರಿ 7.30ರ ವೇಳೆಗೆ ಕ್ವಾಂಜೋವಾದ ಕ್ಸಿಂಜಿಯಾ ಹೋಟೆಲ್ ಕುಸಿದಿದ್ದು, ಎರಡು ಗಂಟೆಗಳಲ್ಲೇ ಹೋಟೆಲ್ ನಲ್ಲಿದ್ದ 32 ಮಂದಿ ಕೊರೊನಾ ವೈರಸ್ ಸೋಂಕಿತರನ್ನು ರಕ್ಷಿಸಲಾಯಿತು ಎಂದು ಚೀನಾದ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

58 ಮಂದಿ ಸೋಂಕಿತರು, 16 ಸಿಬ್ಬಂದಿಯಿದ್ದ ಹೋಟೆಲ್
ಇನ್ನು, ಕ್ಸಿಂಜಿಯಾ ಹೋಟೆಲ್ ಕುಸಿತದ ಸಂದರ್ಭದಲ್ಲಿ ಅದರಲ್ಲಿ 58 ಮಂದಿ ಕೊರೊನಾ ವೈರಸ್ ಸೋಂಕಿತರು ಹಾಗೂ 16 ಮಂದಿ ಸಿಬ್ಬಂದಿಯಿದ್ದರು. ಮಾರಕ ರೋಗದ ಲಕ್ಷಣಗಳು ಕಂಡು ಬಂದ ಹಿನ್ನೆಲೆ 58 ಜನರನ್ನು ದಿಗ್ಬಂಧನದಲ್ಲಿ ಇರಿಸಲಾಗಿತ್ತು. ಇತ್ತೀಚಿಗೆ ಅಷ್ಟೂ ಜನರ ರಕ್ತದ ಮಾದರಿಯನ್ನು ಪರೀಕ್ಷಿಸಿದಾಗ ಸೋಂಕು ಇಲ್ಲ ಎಂಬ ಫಲಿತಾಂಶ ಸಹ ಹೊರ ಬಂದಿತ್ತು ಎಂದು ತಿಳಿದು ಬಂದಿದೆ.

7 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಹೋಟೆಲ್
2013ರಲ್ಲಿ ಏಳು ಅಂತಸ್ತಿನ ಕ್ಸಿಂಜಿಯಾ ಹೋಟೆಲ್ ನ್ನು ನಿರ್ಮಾಣ ಮಾಡಲಾಗಿತ್ತು. 2018ರಲ್ಲಿ ಹೋಟೆಲ್ ನವೀಕರಣಗೊಳಿಸಲಾಗಿತ್ತು. ಕಳದೆ ಜನವರಿಯಲ್ಲಿ ಹೋಟೆಲ್ ನ ಮೊದಲನೇ ಅಂತಸ್ತಿನ ಕಟ್ಟಡವನ್ನು ಪುನಚ್ಚೇತನಗೊಳಿಸಲಾಗಿತ್ತು ಎಂದು ಸ್ಥಳೀಯ ಸುದ್ದಿ ವಾಹನಿ ತಿಳಿಸಿದೆ.












Click it and Unblock the Notifications