
ಕೊರೊನಾ ಸೋಂಕು + 2 ಡೋಸ್ ಲಸಿಕೆ ಗರಿಷ್ಠ ರಕ್ಷಣೆ ನೀಡುತ್ತದೆ; ಅಧ್ಯಯನ
ಬ್ರಿಟನ್, ಅಕ್ಟೋಬರ್ 08: ಕೊರೊನಾ ಸೋಂಕಿನಿಂದ ಚೇತರಿಸಿಕೊಂಡ ನಂತರ ಎರಡು ಡೋಸ್‌ಗಳ ಲಸಿಕೆ ಪಡೆದುಕೊಂಡಿದ್ದರೆ ಅದು ವ್ಯಕ್ತಿಗೆ ಸೋಂಕಿನ ವಿರುದ್ಧ 94% ರಕ್ಷಣೆ ನೀಡಬಲ್ಲದು ಎಂದು ಬ್ರಿಟನ್‌ನಲ್ಲಿ ನಡೆದ ಅಧ್ಯಯನವೊಂದು ತಿಳಿಸಿದೆ.
ZOE ಕೋವಿಡ್ ಅಧ್ಯಯನ ಎಂದು ಇದನ್ನು ಕರೆಯಲಾಗಿದೆ. ಕಳೆದ ವರ್ಷದಿಂದಲೂ ಬ್ರಿಟನ್‌ನಲ್ಲಿ ಕೊರೊನಾ ಸೋಂಕಿನ ಹರಡುವಿಕೆಯ ವಾಸ್ತವ ಹಾಗೂ ನೈಜ ಮಾಹಿತಿಯನ್ನು ಕಲೆ ಹಾಕುತ್ತಿರುವ ಆಪ್ ಆಧಾರಿತ ಅಧ್ಯಯನ ಇದಾಗಿದ್ದು, ಸೋಂಕನ್ನು ತಡೆಯುವಲ್ಲಿ ಎರಡು ಡೋಸ್ ಲಸಿಕೆ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ಕಂಡುಕೊಳ್ಳಲು ಅಧ್ಯಯನ ನಡೆಸಲಾಗಿದೆ.
ಕೊನೆಗೂ ಯುಕೆ ಮಾರ್ಗಸೂಚಿ ಬದಲಾವಣೆ: ಲಸಿಕೆ ಹಾಕಿರುವ ಭಾರತೀಯರಿಗೆ ಕ್ವಾರಂಟೈನ್ ಇಲ್ಲ
ಆಕ್ಸ್‌ಫರ್ಡ್/ಆಸ್ಟ್ರಾಜೆನೆಕಾ ಲಸಿಕೆಯ ಎರಡು ಡೋಸ್ ಪಡೆದುಕೊಂಡವರಲ್ಲಿ ಲಸಿಕೆ ಪಡೆದ ನಂತರದ ಆರು ತಿಂಗಳವರೆಗೂ ಸೋಂಕಿನ ವಿರುದ್ಧ 71% ರಕ್ಷಣೆಯನ್ನು ನೀಡಬಲ್ಲದು ಎಂಬುದನ್ನು ಅಧ್ಯಯನ ತಿಳಿಸಿದೆ.
ಈ ರಕ್ಷಣಾ ಪ್ರಮಾಣವು ಈ ಹಿಂದೆ ಕೊರೊನಾ ಸೋಂಕಿಗೆ ತುತ್ತಾದವರಲ್ಲಿ 90% ಇರುತ್ತದೆ ಎಂಬುದನ್ನು ಉಲ್ಲೇಖಿಸಿದೆ.
'ಎರಡು ಡೋಸ್‌ಗಳ ಲಸಿಕೆ ಪಡೆಯುವ ಮುನ್ನ ಕೊರೊನಾ ಸೋಂಕಿನಿಂದ ಚೇತರಿಸಿಕೊಂಡವರಲ್ಲಿ ನೈಸರ್ಗಿಕ ರೋಗನಿರೋಧಕ ಶಕ್ತಿ ಇರುವುದು ಸೋಂಕಿನ ವಿರುದ್ಧ ಗರಿಷ್ಠ ರಕ್ಷಣಾ ಸಾಮರ್ಥ್ಯವನ್ನು, ರೋಗನಿರೋಧಕ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ' ಎಂದು ZOE ಕೋವಿಡ್ ಅಧ್ಯಯನದ ಭಾಗವಾಗಿರುವ ಟಿಮ್ ಸ್ಪೆಕ್ಟರ್ ತಿಳಿಸಿದ್ದಾರೆ.
ಬ್ರಿಟನ್‌ನಲ್ಲಿ ಮಕ್ಕಳಲ್ಲಿ ಹೆಚ್ಚುತ್ತಿದೆ ಕೊರೊನಾ ಸೋಂಕು
ದೇಹದಲ್ಲಿ ಈ ಎರಡು ಅಂಶಗಳಿಂದ ಒಟ್ಟಾರೆ ರೋಗನಿರೋಧಕ ಮಟ್ಟ ಹೆಚ್ಚುತ್ತದೆ. ಇದರರ್ಥ, ಹೆಚ್ಚಿನ ಸಂಖ್ಯೆಯ ಜನರು ಕೋವಿಡ್‌ನಿಂದ ಪರಿಣಾಮಕಾರಿ ಹಾಗೂ ದೀರ್ಘಕಾಲೀನ ರಕ್ಷಣೆ ಹೊಂದುತ್ತಾರೆ ಎಂಬುದು ಎಂದಿದ್ದಾರೆ. ಸೋಂಕಿನಿಂದ ಚೇತರಿಸಿಕೊಂಡವರಲ್ಲಿ ನೈಸರ್ಗಿಕವಾಗಿ ರೋಗನಿರೋಧಕ ಶಕ್ತಿ ಉತ್ಪತ್ತಿಯಾಗಿರುತ್ತದೆ. ಇದರೊಂದಿಗೆ ಲಸಿಕೆಯನ್ನು ಪಡೆದಿದ್ದರೆ ಅದರ ಪ್ರಮಾಣ ಇನ್ನಷ್ಟು ಹೆಚ್ಚಾಗಿ ಗರಿಷ್ಠ ರಕ್ಷಣೆ ದೊರೆಯುತ್ತದೆ ಎಂದು ತಿಳಿಸಿದೆ.

ಈ ಅಧ್ಯಯನವು ಲಸಿಕೆಯ ಅಗತ್ಯವನ್ನು ಬೆಂಬಲಿಸಿದೆ. ಈಗಾಗಲೇ ಕೊರೊನಾ ಸೋಂಕಿಗೆ ತುತ್ತಾದವರೂ ಲಸಿಕೆ ಪಡೆದುಕೊಳ್ಳುವ ಅಗತ್ಯವನ್ನು ಒತ್ತಿಹೇಳಿದೆ. ಚಳಿಗಾಲದ ಮೊದಲು ಪ್ರತಿಯೊಬ್ಬರಿಗೂ ಕೊರೊನಾ ಲಸಿಕೆ ನೀಡುವಲ್ಲಿ ಹೆಚ್ಚಿನ ಗಮನ ನೀಡಬೇಕು ಎಂದು ಸಲಹೆ ನೀಡಿದೆ.
ಫೈಜರ್/ಬಯೋಟೆಕ್‌ನ ಎಂಆರ್‌ಎನ್‌ಎ ಲಸಿಕೆಯ ಎರಡು ಡೋಸ್‌ಗಳನ್ನು ಲಂಡನ್‌ನಲ್ಲಿ ನೀಡಲಾಗುತ್ತಿದೆ. ಲಸಿಕೆ ಪಡೆದ ನಂತರ ಆರು ತಿಂಗಳವರೆಗೂ ಸೋಂಕಿನ ವಿರುದ್ಧ ಲಸಿಕೆ 80% ರಕ್ಷಣೆ ನೀಡುತ್ತದೆ. ಈ ಪ್ರಮಾಣ ಈ ಮುನ್ನ ಸೋಂಕಿಗೆ ತುತ್ತಾಗಿದ್ದರೆ 94% ಆಗಿರುತ್ತದೆ ಎಂದು ಹೇಳಿದೆ.
19 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ದಿನನಿತ್ಯದ ಹೊಸ ಪ್ರಕರಣಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಲೇ ಇದೆ ಎಂಬುದನ್ನು ಅಧ್ಯಯನ ತಿಳಿಸಿದೆ. 30-49 ವಯೋಮಾನದವರಲ್ಲಿ ಕ್ರಮೇಣ ಪ್ರಕರಣಗಳು ಏರಿಕೆಯಾಗುತ್ತಿವೆ. ZOE ಮಾಹಿತಿ ಪ್ರಕಾರ, 10-19 ವಯಸ್ಸಿನ 30 ಮಕ್ಕಳಲ್ಲಿ ಒಬ್ಬರು ಪ್ರಸ್ತುತ ಕೊರೊನಾ ಸೋಂಕನ್ನು ಹೊಂದಿದ್ದಾರೆ ಎಂಬುದನ್ನು ತಿಳಿಸಿದೆ.
ಬ್ರಿಟನ್‌ನಲ್ಲಿ ಹೇಗಿದೆ ಕೊರೊನಾ ಸ್ಥಿತಿಗತಿ?:
ಬ್ರಿಟನ್‌ನಲ್ಲಿ ಶಾಲೆಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ ಮಕ್ಕಳಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದೆ. ಇಂಗ್ಲೆಂಡ್‌ನಲ್ಲಿ ಶಾಲೆಗಳು ಆರಂಭವಾಗಿ ತಿಂಗಳು ಕಳೆದಿದ್ದು, ಆರೋಗ್ಯ ತಜ್ಞರು ಮಕ್ಕಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿರುವ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ.
ಮಕ್ಕಳಲ್ಲಿ ಶೇ.4.58ರಷ್ಟು ಸೋಂಕು ಹರಡುವಿಕೆ ಕಂಡುಬಂದಿದೆ. ಅಂದರೆ 25ರಲ್ಲಿ 1ಕ್ಕಿಂತ ಹೆಚ್ಚು ಮಕ್ಕಳು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ ಎಂದು ತಿಳಿಸಿದ್ದಾರೆ.
ಇಂಗ್ಲೆಂಡ್‌ನಲ್ಲಿ ಕೊರೊನಾ ಸೋಂಕು ಒಟ್ಟಾರೆ ಹರಡುವಿಕೆಯನ್ನು ಗಮನಿಸುವುದಾದರೆ 85ರಲ್ಲಿ 1ರಷ್ಟಿತ್ತು, ಹಿಂದಿನ ವಾರ 90ರಲ್ಲಿ 1 ಮಂದಿಗೆ ಕೊರೊನಾ ಸೋಂಕಿತ್ತು. ಇದೀಗ 80ರಲ್ಲಿ ಒಬ್ಬರಿಗೆ ಸೋಂಕಿರುವುದು ಗೋಚರಿಸುತ್ತಿದೆ.
ಕೊರೊನಾ ಮೂರನೇ ಅಲೆ ಎಚ್ಚರಿಕೆ ನಡುವೆಯೇ ಮಕ್ಕಳಲ್ಲಿನ ಸೋಂಕಿನ ಪ್ರಮಾಣ ಹೆಚ್ಚಾಗಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.