ʼಭಾರತೀಯರನ್ನು ಅಮಾನವೀಯವಾಗಿ ನಡೆಸಿಕೊಂಡ ಟ್ರಂಪ್ʼ
ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದಲ್ಲಿರುವ ವಲಸಿಗರನ್ನು ಗಡಿಪಾರು ಮಾಡುವ ಪ್ರಕ್ರಿಯೆಯನ್ನು ಚುರುಕುಗೊಳಿಸಿದ್ದಾರೆ. ಆದರೆ ಭಾರತೀಯ ವಲಸಿಗರನ್ನು ಅತ್ಯಂತ ಹೀನಾಯವಾಗಿ ನಡೆಸಿಕೊಂಡಿದ್ದಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಬಿಜೆಪಿ ಸರ್ಕಾರವು ಈ ವಿಚಾರದಲ್ಲಿ ಸರಿಯಾಗಿ ನಿರ್ಧಾರ ತೆಗೆದುಕೊಂಡಿಲ್ಲ. ಭಾರತದ ವಿದೇಶಾಂಗ ನೀತಿ ದುರ್ಬಲವಾಗಿದೆ ಎಂದು ಕಾಂಗ್ರೆಸ್ ಸೇರಿದಂತೆ ವಿವಿಧ ವಿರೋಧ ಪಕ್ಷಗಳು ತಮ್ಮ ಆಕ್ರೋಶವನ್ನು ಹೊರ ಹಾಕಿವೆ. ಅಮೆರಿಕದಿಂದ ಭಾರತೀಯರನ್ನು ಗಡಿಪಾರು ಮಾಡುವಾಗ ಅನುಸರಿಸಿರುವ ವಿಧಾನವು ಭಾರೀ ಚರ್ಚೆಗೆ ಕಾರಣವಾಗಿದೆ.
ಅಮೆರಿಕದಲ್ಲಿ ನೆಲೆಸಿರುವ ಭಾರತೀಯರು ಸೇರಿದಂತೆ ವಿವಿಧ ದೇಶಗಳ ಅಕ್ರಮ ವಲಸಿಗರನ್ನು ಗಡಿಪಾರು ಮಾಡಲಾಗುತ್ತಿದೆ. ಆದರೆ ಈ ರೀತಿ ಗಡಿಪಾರು ಮಾಡುವಾಗ 104 ಜನ ಭಾರತೀಯರಿಗೆ ಅವರ ಕೈಗಳಿಗೆ ಕೋಳ ಹಾಕಿ ಹಾಗೂ ಕಾಲುಗಳನ್ನು ಚೈನುಗಳಿಂದ ಕಟ್ಟಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬೆಳವಣಿಗೆಗೆ ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ಮೇಲೆ ಮುಗಿಬಿದ್ದಿವೆ. ಈ ವಿಷಯದ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ಮಾಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.

ಅಮೆರಿಕದಿಂದ 104 ಜನ ಅಕ್ರಮ ಭಾರತೀಯ ವಲಸಿಗರನ್ನು ಯುದ್ಧ ವಿಮಾನಗಳ ಮೂಲಕ ಭಾರತಕ್ಕೆ ಕರೆದುಕೊಂಡು ಬರಲಾಗಿದೆ. ಅಕ್ರಮ ವಲಸಿಗರನ್ನು ಬುಧವಾರ ಪಂಜಾಬ್‌ನ ಅಮೃತಸರಕ್ಕೆ ಕರೆದುಕೊಂಡು ಬರಲಾಯಿತು. ಅಮೆರಿಕದ ನೂತನ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ಅವರು ಅಕ್ರಮ ವಲಸೆ ನೀತಿಯನ್ನು ಜಾರಿ ಮಾಡುವುದಾಗಿ ಹೇಳಿದ್ದರು. ಆಗಲೇ ಭಾರತದ ಅಕ್ರಮ ವಲಸಿಗರ ಬಗ್ಗೆಯೂ ಚರ್ಚೆಯಾಗಿತ್ತು. ಅಕ್ರಮ ವಲಸಿಗರನ್ನು ಭಾರತ ಸಹ ಹಿಂದಕ್ಕೆ ಕಳೆಸಿಕೊಳ್ಳುವುದಾಗಿ ಹೇಳಿತ್ತು. ಆದರೆ ಇದರ ನಡುವೆಯೇ ಗಡಿಪಾರು ಪ್ರಕ್ರಿಯೆ ಜೋರಾಗಿದೆ. ಅಮೆರಿಕ ಭಾರತೀಯ ವಲಸಿಗರನ್ನು ಅತ್ಯಂತ ಅಮಾನುಷವಾಗಿ ನಡೆಸಿಕೊಂಡಿರುವುದು ಭಾರತೀಯರಲ್ಲಿ ನೋವುಂಟು ಮಾಡಿದೆ.
ಕಾಂಗ್ರೆಸ್ ವಿರೋಧ: ಈ ಬೆಳವಣಿಗೆಯನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ. ಭಾರತೀಯ ಅಕ್ರಮ ವಲಸಿಗರನ್ನು ಗಡಿಪಾರು ಮಾಡುವಾಗ ಅಮಾನವೀಯವಾಗಿ ನಡೆಸಿಕೊಳ್ಳಲಾಗಿದೆ. ಭಾರತೀಯರ ಕೈಗಳಿಗೆ ಕೋಳ ಹಾಕಿ ಹಾಗೂ ಕಾಲುಗಳನ್ನು ಚೈನುಗಳಿಂದ ಕಟ್ಟಿರುವುದು ಘನತೆ ಹಾಗೂ ಮಾನವ ಹಕ್ಕುಗಳ ಬಗ್ಗೆ ಕಳವಳವನ್ನು ಸೃಷ್ಟಿಸಿದೆ ಎಂದು ವಿರೋಧ ಪಕ್ಷದ ಕಾಂಗ್ರೆಸ್ ಶಾಸಕ ಗೌರವ್ ಗೊಗೊಯ್ ಅವರು ಲೋಕಸಭೆಯ ಪ್ರಧಾನ ಕಾರ್ಯದರ್ಶಿ ಅವರಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಕೇಂದ್ರ ಬಿಜೆಪಿ ಸರ್ಕಾರ ತೆಗೆದುಕೊಂಡಿರುವ ಪರಿಹಾರಗಳ ಬಗ್ಗೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಕೂಡಲೇ ತಿಳಿಸಬೇಕು ಎಂದು ಒತ್ತಾಯಿಸಲಾಗಿದೆ. ಆದರೆ ಭಾರತೀಯ ವಿದೇಶಾಂಗ ಸಚಿವಾಲಯ ಹಾಗೂ ಅಮೆರಿಕ ರಾಯಭಾರಿ ಕಚೇರಿಯಿಂದ ಇಲ್ಲಿಯ ವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ಈ ಬಗ್ಗೆ ಸಂಸತ್ತಿನಲ್ಲಿ ಗದ್ದಲವಾಗಿದ್ದು ಅಧಿವೇಶನವನ್ನು ಮುಂದೂಡಲಾಗಿದೆ.

ಟ್ರಂಪ್ - ಮೋದಿ ಮಾತುಕತೆ: ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಚರ್ಚೆ ಮಾಡುವಾಗ ಈ ವಿಷಯಗಳ ಬಗ್ಗೆ ಚರ್ಚೆಯಾಗುವ ಸಾಧ್ಯತೆ ಇದೆ ಎಂದು ನಿರೀಕ್ಷೆ ಮಾಡಲಾಗಿದೆ.












Click it and Unblock the Notifications