ಪಾಕಿಸ್ತಾನದಲ್ಲಿ ಚರ್ಚ್ ಗೆ ಬೆಂಕಿ: ಭಯಭೀತರಾದ ಕ್ರಿಶ್ಚಿಯನ್ನರು!
ಮುಸ್ಲಿಂ ಮೂಲಭೂತವಾದಿಗಳ ಗುಂಪೊಂದು ಧರ್ಮನಿಂದೆಯ ಆರೋಪದ ಮೇಲೆ ಚರ್ಚ್‌ಗೆ ಬೆಂಕಿ ಹಚ್ಚಿದ್ದು ಕ್ರಿಶ್ಚಿಯನ್ನರು ಭಯಭೀತರಾದ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಸಮುದಾಯದ ಜನರ ಜೀವನವೂ ನರಕವಾಗಿದೆ. ಈ ಬಾರಿ ಮುಸ್ಲಿಂ ಮೂಲಭೂತವಾದಿಗಳ ಗುಂಪೊಂದು ಫೈಸಲಾಬಾದ್ ಜಿಲ್ಲೆಯಲ್ಲಿ ಚರ್ಚ್‌ಗೆ ಬೆಂಕಿ ಹಚ್ಚಿದೆ.
ಮಾಧ್ಯಮ ವರದಿಗಳ ಪ್ರಕಾರ, ಧರ್ಮನಿಂದೆಯ ಆರೋಪದ ಮೇಲೆ ಚರ್ಚ್ ಅನ್ನು ಸುಟ್ಟು ನಾಶಪಡಿಸಲಾಗಿದೆ. ಪಾಕಿಸ್ತಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ಮತ್ತೊಂದು ದಾಳಿಯಲ್ಲಿ ಫೈಸಲಾಬಾದ್ ಜಿಲ್ಲೆಯ ಚರ್ಚ್ ಗೆ ಬೆಂಕಿ ಹಚ್ಚಲಾಗಿದೆ. ಧರ್ಮನಿಂದೆಯ ಆರೋಪದ ಮೇಲೆ ಗುಂಪೊಂದು ಪಂಜಾಬ್ ಪ್ರಾಂತ್ಯದ ಫೈಸಲಾಬಾದ್ ಜಿಲ್ಲೆಯಲ್ಲಿ ಚರ್ಚ್ ಅನ್ನು ಧ್ವಂಸ ಮಾಡಿದೆ.

ಪಾಕಿಸ್ತಾನದಲ್ಲಿ ಚರ್ಚ್‌ಗೆ ಬೆಂಕಿ!
ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿರುವ ಬಿಷಪ್ ಮಾರ್ಷಲ್, "ನಾನು ಇದನ್ನು ಬರೆಯುವಾಗ ನಾನು ಪದಗಳೇ ಬರುತ್ತಿಲ್ಲ. ಪಾಕಿಸ್ತಾನದ ಫೈಸಲಾಬಾದ್ ಜಿಲ್ಲೆಯ ಜರನ್‌ವಾಲಾ ಘಟನೆಯ ಬಗ್ಗೆ ನಾವು, ಬಿಷಪ್‌ಗಳು, ಪಾದ್ರಿಗಳು ಮತ್ತು ಸಾಮಾನ್ಯ ಜನರು ತೀವ್ರ ದುಃಖಿತರಾಗಿದ್ದೇವೆ''
''ಇಲ್ಲಿ ಚರ್ಚ್‌ಗೆ ಬೆಂಕಿ ಹಚ್ಚಲಾಗಿದೆ ಮತ್ತು ಬೈಬಲ್ ಅನ್ನು ಅವಮಾನಿಸಲಾಗಿದೆ. ಮಾತ್ರವಲ್ಲದೆ ಕ್ರಿಶ್ಚಿಯನ್ನರನ್ನು ಪವಿತ್ರ ಕುರಾನ್ ಉಲ್ಲಂಘಿಸಿದ್ದಾರೆಂದು ಸುಳ್ಳು ಆರೋಪ ಹೊರಿಸಲಾಗಿದೆ" ಎಂದು ಅವರು ಕಿರುಕುಳದ ಆರೋಪ ಮಾಡಿದ್ದಾರೆ.
ತನ್ನ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ನ್ಯಾಯ ಮತ್ತು ಕ್ರಮಕ್ಕಾಗಿ ನಾನು ಕರೆ ನೀಡುತ್ತಿದ್ದೇನೆ ಎಂದು ಬಿಷಪ್ ಮಾರ್ಷಲ್ ಹೇಳಿದ್ದಾರೆ. ಜೊತೆಗೆ ಅವರು ನಾಗರಿಕರ ಸುರಕ್ಷತೆಗೆ ಒತ್ತಾಯಿಸಿದ್ದಾರೆ. ಪಾಕಿಸ್ತಾನದಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಾರೆ. ಇಲ್ಲಿ ಅಲ್ಪಸಂಖ್ಯಾತರಿಗೆ ಸ್ವಾತಂತ್ರ್ಯವಿಲ್ಲ ಎಂದು ಹೇಳಿದ್ದಾರೆ.
ಸಹಿಷ್ಣು ಮತ್ತು ಸಮಾನತೆಯ ದೇಶವನ್ನು ರಚಿಸುವ ಉದ್ದೇಶದಿಂದ 1947 ರಲ್ಲಿ ಪಾಕಿಸ್ತಾನವನ್ನು ಸ್ಥಾಪಿಸಲಾಯಿತು. ಆದರೆ ಅದು ಕೇವಲ ಹೇಳುವುದಕ್ಕಾಗಿ ಮಾತ್ರ. ಪಾಕಿಸ್ತಾನವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡಲಾಗಿದೆ ಮತ್ತು ಕಳೆದ 76 ವರ್ಷಗಳಲ್ಲಿ ಅಲ್ಪಸಂಖ್ಯಾತರು ಬಹುತೇಕ ನಾಶವಾಗಿದ್ದಾರೆ.
ಪಾಕಿಸ್ತಾನ ಅಲ್ಪಸಂಖ್ಯಾತರ ಸಂಖ್ಯೆ ಇಳಿಕೆ
ಕಳೆದ ತಿಂಗಳು ಹ್ಯೂಮನ್ ರೈಟ್ಸ್ ಫೋಕಸ್ ಪಾಕಿಸ್ತಾನದ ಅಧ್ಯಕ್ಷ ನವೀದ್ ವಾಲ್ಟರ್, 1947 ರಲ್ಲಿ ಸ್ವಾತಂತ್ರ್ಯ ಪಡೆದ ನಂತರ, ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಜನಸಂಖ್ಯೆಯು 23 ಪ್ರತಿಶತದಿಂದ 3 ಪ್ರತಿಶತಕ್ಕೆ ಇಳಿದಿದೆ ಎಂದು ಹೇಳಿದರು. "ಇದರ ಹಿಂದೆ ಹಲವು ಕಾರಣಗಳಿವೆ, ಪಾಕಿಸ್ತಾನವನ್ನು ಇಸ್ಲಾಮಿಕ್ ರಾಷ್ಟ್ರವೆಂದು ಘೋಷಿಸಿರುವುದು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.
1980 ರ ದಶಕದಲ್ಲಿ ಸರ್ವಾಧಿಕಾರಿ ಮುಹಮ್ಮದ್ ಜಿಯಾ-ಉಲ್-ಹಕ್ ತಿದ್ದುಪಡಿ ಮಾಡಿದಾಗ ಸಂವಿಧಾನವು ಹಲವಾರು ತಿದ್ದುಪಡಿಗಳಿಗೆ ಒಳಗಾಯಿತು. ಪಾಕಿಸ್ತಾನದ ಸಂವಿಧಾನವು ಷರಿಯಾ ಕಾನೂನಿಗೆ ಅನುಸಾರವಾಗಿದೆ ಎಂದು ನವೀದ್ ವಾಲ್ಟರ್ ಹೇಳಿದ್ದಾರೆ. ದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಧರ್ಮನಿಂದನೆ ಕಾನೂನನ್ನು ತರಲಾಗಿದೆ ಎಂದು ಅವರು ಹೇಳಿದರು. ಇದು ಜಾರಿಯಾದಾಗಿನಿಂದ, ಪಾಕಿಸ್ತಾನದಾದ್ಯಂತ ಹೆಚ್ಚಿನ ಸಂಖ್ಯೆಯ ಜನರು ಕೊಲ್ಲಲ್ಪಟ್ಟಿದ್ದಾರೆ ಮತ್ತು ಅನೇಕರು ಜೈಲಿನಲ್ಲಿದ್ದಾರೆ.
ಜೂನ್‌ನಲ್ಲಿ, ಬಹವಾಲ್‌ಪುರದ ಸ್ಥಳೀಯ ನ್ಯಾಯಾಲಯವು 22 ವರ್ಷದ ಕ್ರಿಶ್ಚಿಯನ್ ಯುವಕ ನೋಮನ್ ಮಸಿಹ್‌ಗೆ ಧರ್ಮನಿಂದೆಯ ಆರೋಪದ ಮೇಲೆ ಮರಣದಂಡನೆ ವಿಧಿಸಿತು ಎಂದು ಬಿಎನ್‌ಎನ್ ನೆಟ್‌ವರ್ಕ್ ವರದಿ ಮಾಡಿದೆ. ಈ ನಿರ್ಧಾರಕ್ಕೆ ವಿವಿಧ ಮಾನವ ಹಕ್ಕುಗಳ ಕಾರ್ಯಕರ್ತರು ಮತ್ತು ಸಂಘಟನೆಗಳು ತೀವ್ರವಾಗಿ ಪ್ರತಿಕ್ರಿಯಿಸಿವೆ. ಅದೇ ತಿಂಗಳಲ್ಲಿ ಪಾಕಿಸ್ತಾನದಲ್ಲಿ ಧರ್ಮನಿಂದೆಯ ಆರೋಪದ ಮೇಲೆ ಮತ್ತೊಬ್ಬ ಹಿಂದೂ ಯುವಕನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಕಳೆದ ವರ್ಷ, ಪಾಕಿಸ್ತಾನದಲ್ಲಿ ಶ್ರೀಲಂಕಾದ ಮ್ಯಾನೇಜರ್ ಅನ್ನು ಧರ್ಮನಿಂದೆಯ ಆರೋಪದ ಮೇಲೆ ಪೆಟ್ರೋಲ್ ಸುರಿದು ಜೀವಂತವಾಗಿ ಸುಡಲಾಯಿತು.












Click it and Unblock the Notifications