ಟ್ಯಾಕ್ಸ್ ವಾರ್ ಶುರು ಮಾಡಿದ ಅಮೆರಿಕ, ಚೀನಾ ವಿಲವಿಲ: ಭಾರತಕ್ಕೂ ಶಾಕ್!
ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮೇಲೆ ಡೊನಾಲ್ಡ್ ಟ್ರಂಪ್ ಅವರು ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಒಂದಿಲ್ಲೊಂದು ಕಾರಣಕ್ಕೆ ಚರ್ಚೆಗೆ ಗ್ರಾಸವಾಗುತ್ತಿದೆ. ಚೀನಾ ಸೇರಿದಂತೆ ಹಲವು ರಾಷ್ಟ್ರಗಳು ಅಮೆರಿಕ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸುವುದನ್ನು ಮುಂದುವರಿಸಿವೆ. ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಧಿಕಾರಕ್ಕೆ ಬರುತ್ತಿದ್ದಂತೆಯೇ ಅಮೆರಿಕ ತೆರಿಗೆ ನೀತಿಯನ್ನು ಪರಿಷ್ಕರಿಸುವುದಾಗಿಯೂ ಹಾಗೂ ಅಮೆರಿಕದಲ್ಲಿ ಹೊಸ ತೆರಿಗೆ ನೀತಿಯನ್ನು ಜಾರಿ ಮಾಡುವುದಾಗಿಯೂ ಹೇಳಿದ್ದರು. ಇದೀಗ ತೆರಿಗೆ ನೀತಿಯನ್ನು ಪರಿಷ್ಕರಿಸುವುದಕ್ಕೆ ಮುಂದಾಗಿದ್ದು, ಮೊದಲಿಗೆ ಚೀನಾಗೆ ಬಿಸಿ ಮುಟ್ಟಿಸಿದ್ದಾರೆ. ಈ ಮೂಲಕ ಪರೋಕ್ಷವಾಗಿ ಭಾರತಕ್ಕೂ ಎಚ್ಚರಿಕೆ ಕೊಟ್ಟಿದ್ದಾರೆ. ಅದೇನು ಎನ್ನುವ ವಿವರ ಇಲ್ಲಿದೆ.
ಚೀನಾದೊಂದಿಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಟ್ಯಾಕ್ಸ್ ವಾರ್ ಶುರು ಮಾಡಿಕೊಂಡಿದ್ದಾರೆ. ಚೀನಾದಿಂದ ಅಮೆರಿಕಗೆ ಆಮದಾಗುವ ವಸ್ತುಗಳ ಮೇಲೆ ಶೇ 10ರಷ್ಟು ಹೆಚ್ಚಿಗೆ ತೆರಿಗೆ ವಿಧಿಸುವ ಆದೇಶವನ್ನು ಡೊನಾಲ್ಡ್ ಟ್ರಂಪ್ ಅವರು ಮಾಡಿದ್ದು. ಇದರಿಂದ ಚೀನಾ ವಿಲವಿಲ ಎನ್ನುತ್ತಿದೆ. ಅಧಿಕಾರಕ್ಕೆ ಬಂದಾಗಲೇ ಹೆಚ್ಚು ತೆರಿಗೆ ವಿಧಿಸುವ ಸುಳಿವನ್ನು ಟ್ರಂಪ್ ಕೊಟ್ಟಿದ್ದರು. ಅಲ್ಲದೆ ಭಾರತ ಹೆಚ್ಚು ತೆರಿಗೆ ವಿಧಿಸುತ್ತಿದೆ ಎಂದು ಭಾರತಕ್ಕೂ ಟ್ರಂಪ್ ಎಚ್ಚರಿಕೆ ಕೊಟ್ಟಿರುವುದು ಇದೆ. ಅಮೆರಿಕದ ಹೊಸ ತೆರಿಗೆ ನೀತಿ ಯಾವ ರೀತಿ ಪರಿಣಾಮ ಬೀರಲಿದೆ ಎನ್ನುವುದನ್ನು ನೋಡೋಣ.

ಹೆಚ್ಚು ಟ್ಯಾಕ್ಸ್ ಕಟ್ಟಬೇಕು ಎನ್ನುವ ಅಮೆರಿಕದ ಆದೇಶಕ್ಕೆ ಚೀನಾ ವಿಲವಿಲ ಎನ್ನುತ್ತಿದ್ದರೂ. ಇದು ಸರಿಯಲ್ಲ ಎಂದು ತನ್ನ ಅಸಮಾಧಾನವನ್ನು ದಾಖಲಿಸಿದೆ. ಇದು ಸ್ಪಷ್ಟವಾಗಿ ವಿಶ್ವ ವ್ಯಾಪಾರ ಸಂಸ್ಥೆಗಳ ನಿಯಮದ ಉಲ್ಲಂಘನೆಯಾಗಿದೆ. ಇದನ್ನು ನಾವು ಪ್ರಶ್ನೆ ಮಾಡಲಿದ್ದೇವೆ ಎಂದಿದೆ ಚೀನಾ. ಅಲ್ಲದೆ ಮುಂದಿನ ದಿನಗಳಲ್ಲಿ ದ್ವಿಪಕ್ಷೀಯ ಮಾತುಕತೆ - ವ್ಯಾಪಾರ ಹಾಗೂ ವ್ಯವಹಾರದ ಮೇಲೆ ಅಮೆರಿಕದ ಆದೇಶ ಪರಿಣಾಮ ಬೀರಲಿದೆ ಎಂದೂ ಚೀನಾ ಹೇಳಿದೆ.
ಯಾವ ದೇಶಗಳ ಮೇಲೆ ತೆರಿಗೆ ಹೆಚ್ಚಳ: ಅಮೆರಿಕ ಪ್ರಾರಂಭಿಕವಾಗಿ ಚೀನಾ, ಕೆನಡಾ ಹಾಗೂ ಮೆಕ್ಸಿಕೊದ ಮೇಲೆ ಆಮದು ತೆರಿಗೆಯನ್ನು ಹೆಚ್ಚಳ ಮಾಡಿ ಟ್ರಂಪ್ ಆದೇಶ ಮಾಡಿದ್ದಾರೆ. ಮೆಕ್ಸಿಕೊ ಹಾಗೂ ಕೆನಡಾದ ಮೇಲೆ ಶೇ 25ರಷ್ಟು ಹೆಚ್ಚುವರಿ ತೆರಿಗೆ ವಿಧಿಸಲಾಗಿದ್ದರೆ. ಚೀನಾದ ಮೇಲೆ ಶೇ 10ರಷ್ಟು ತೆರಿಗೆ ವಿಧಿಸಲಾಗಿದೆ. ಅಲ್ಲದೆ ಭಾರತಕ್ಕೂ ಟ್ರಂಪ್ ಎಚ್ಚರಿಕೆ ಕೊಟ್ಟಿದ್ದಾರೆ. ಭಾರತದ ತೆರಿಗೆ ನೀತಿ ಬದಲಾಗಬೇಕು. ಭಾರತ ಹೆಚ್ಚು ತೆರಿಗೆ ವಿಧಿಸುತ್ತಿದೆ ಎಂದು ಅಮೆರಿಕ ಅಸಮಾಧಾನ ವ್ಯಕ್ತಪಡಿಸಿತ್ತು. ಇದರಿಂದ ಭಾರತಕ್ಕೂ ಆತಂಕ ಶುರುವಾಗಿದೆ.
ಪನಾಮ ಕಾಲುವೆ ಚರ್ಚೆ: ತೆರಿಗೆ ನೀತಿಯ ಜೊತೆ ಜೊತೆಗೆ ಪನಾಮ ಕಾಲುವೆಯ ಬಗ್ಗೆಯೂ ಚರ್ಚೆ ಜೋರಾಗಿದೆ. ಈ ಕಾಲುವೆಯನ್ನು ಮರು ವಶಕ್ಕೆ ಪಡೆಯುವ ಬಗ್ಗೆ ಚಿಂತನೆ ನಡೆದಿದೆ ಎಂದು ಅಮೆರಿಕ ಎಚ್ಚರಿಸಿದೆ. ಇದನ್ನು ಸದ್ಯ ಚೀನಾ ನಿರ್ವಹಣೆ ಮಾಡುತ್ತಿದೆ. ಅಂದಾಜು 82 ಕಿಮೀ ಉದ್ದದ ಕೃತಕ ಕಾಲುವೆ ಇಲ್ಲಿದ್ದು, ಕೆರೆಬಿಯನ್ ಸಮುದ್ರ ಹಾಗೂ ಪೆಸಿಫಿಕ್ ಮಹಾಸಾಗರದ ನಡುವೆ ಕೊಂಡಿಯಾಗಿದೆ. ವ್ಯಾಪಾರ ವಹಿವಾಟಿಗೆ ಮುಖ್ಯ ಕೇಂದ್ರವಾಗಿದೆ. ಇಲ್ಲಿಂದಲೇ ಹಡಗುಗಳ ಸಾಗಾಟ ನಡೆಯುತ್ತದೆ.
ಈ ಕಾಲುವೆಯನ್ನು ಅಮೆರಿಕ ಪನಾಮ ದೇಶಕ್ಕೆ ಕೊಟ್ಟಿತ್ತು. ಪನಾಮ ಸಣ್ಣ ದೇಶ ಅದರ ಕಾಲುವೆ ನಿರ್ವಹಣೆಯನ್ನು ಚೀನಾಗೆ ಕೊಟ್ಟಿದ್ದು. ಇದರ ವಿರುದ್ಧ ಅಮೆರಿಕ ಕೆಂಡಕಾರಿದೆ. ನಾವು ಪನಾಮಗೆ ಕೊಟ್ಟಿದ್ದು ಚೀನಾಗೆ ಬಿಟ್ಟುಕೊಡಲಿ ಎಂದೇನು ಅಲ್ಲ ಎಂದು ಅಮೆರಿಕ ಎಚ್ಚರಿಸಿದೆ. ದೇಶ - ವಿದೇಶಗಳ ನಡುವೆ ಸರಕುಗಳ ಸಾಗಾಣಿಕೆ ಹಾಗೂ ಆಮದು, ರಫ್ತು ಹಾಗೂ ಪುನರ್ ರಫ್ತುಗೆ ಸಮುದ್ರ ಪ್ರದೇಶವು ಅತ್ಯಂತ ಮುಖ್ಯ ಹಾಗೂ ಮಹತ್ವದ ಪಾತ್ರವನ್ನು ವಹಿಸುತ್ತದೆ.












Click it and Unblock the Notifications