‘ಖಲಿಸ್ತಾನಿ’ಗಳ ವಿರುದ್ಧ ಭಾರತೀಯ ಅಧಿಕಾರಿಗಳಿಗೆ ರಕ್ಷಣೆ: ಕೆನಡಾ ಭರವಸೆ!
ಟೊರಾಂಟೋ: ಭಾರತದ ಒಳಗೆ ಉಸಿರು ಬಿಡೋದಕ್ಕೆ ಹೆದರುವ 'ಖಲಿಸ್ತಾನಿ'ಗಳು ಇದೀಗ ಹೊರದೇಶದಲ್ಲಿ ಬಾಲ ಬಿಚ್ಚುತ್ತಿದ್ದಾರೆ. ಅದರಲ್ಲೂ ಅಮೆರಿಕ & ಕೆನಡಾದಲ್ಲಿ ಖಲಿಸ್ತಾನಿ ಗ್ಯಾಂಗ್ ಕಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹೀಗೆ ಇವತ್ತು ಕೂಡ ಅಮೆರಿಕದ ಭಾರತೀಯ ರಾಯಭಾರ ಕಚೇರಿ ಮೇಲೆ ಖಲಿಸ್ತಾನಿ ಗ್ಯಾಂಗ್ ದಾಳಿ ನಡೆಸಿ ಬೆಂಕಿ ಹಚ್ಚಿದೆ. ಈ ಘಟನೆ ನಡುವೆಯೇ ಭಾರತಕ್ಕೆ ಇದೀಗ ಕೆನಡಾ ಭರವಸೆಯೊಂದನ್ನ ಕೊಟ್ಟಿದೆ.
ಕೆನಡಾದಲ್ಲಿ 'ಖಲಿಸ್ತಾನಿ' ಬೆಂಬಲಿಗರು ಭಾರಿ ಪ್ರಮಾಣದಲ್ಲಿದ್ದು ಅಲ್ಲಿ ಭಾರತ ವಿರೋಧಿ ಚಟುವಟಿಕೆ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ ಈ ಮಧ್ಯೆ ಖಲಿಸ್ತಾನ ಪರ ಇರುವವರು ಭಾರತದ ರಾಜತಾಂತ್ರಿಕರ ಭಾವಚಿತ್ರದ ಪೋಸ್ಟರ್‌ಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿರುವುದು ವಿವಾದ ಎಬ್ಬಿಸಿದೆ. ಈ ಬಗ್ಗೆ ಕೆನಡಾ ಕೂಡ ಪ್ರತಿಕ್ರಿಯೆ ನೀಡಿದ್ದು ಭಾರತದ ಅಧಿಕಾರಿಗಳ ಸುರಕ್ಷತೆಗೆ ಅಗತ್ಯವಿರುವ ಕ್ರಮ ಕೈಗೊಳ್ಳುವುದಾಗಿ ಭರವಸೆ ಕೊಟ್ಟಿದೆ. ಅಲ್ಲದೆ 'ವಿಯೆನ್ನಾ ಸಮಾವೇಶದ ಒಪ್ಪಂದದ ಪ್ರಕಾರ ರಾಜತಾಂತ್ರಿಕರ ಸುರಕ್ಷತೆ ವಿಚಾರವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ' ಎನ್ನುವ ಮೂಲಕ ಕೆನಡಾ ವಿದೇಶಾಂಗ ಸಚಿವರಾದ ಮೆಲಾನಿ ಜೋಲಿ 'ಖಲಿಸ್ತಾನಿ'ಗಳಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.

ಯಾರೋ ಕೆಲವರ ಕೃತ್ಯ ಇದು!
ಅಷ್ಟಕ್ಕೂ ಖಲಿಸ್ತಾನಿ ಬೆಂಬಲಿಗರು ಭಾರತದ ರಾಯಭಾರ ಕಚೇರಿಗಳ ಮೇಲೆ ದಾಳಿಯನ್ನ ನಡೆಸುತ್ತಿರುವ ಘಟನೆಗಳು ಮೇಲಿಂದ ಮೇಲೆ ನಡೆದ ಹಿನ್ನೆಲೆಯಲ್ಲಿ ಭಾರತ ಎಚ್ಚರಿಸಿತ್ತು. ಅಲ್ಲದೆ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಖಡಕ್ ವಾರ್ನಿಂಗ್ ಕೊಟ್ಟಿದ್ದರು. ಈ ಹಿನ್ನೆಲೆ ಖಲಿಸ್ತಾನಿಗಳ ಉಪಟಳದ ಬಗ್ಗೆ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅದರಲ್ಲೂ ಕೆನಡಾದ ಅಧಿಕಾರಿಗಳು ಭಾರತದ ಅಧಿಕಾರಿಗಳ ಜೊತೆ ನಿಕಟ ಸಂಪರ್ಕದಲ್ಲಿದ್ದು, ಯಾರೋ ಕೆಲವರ ಕಾರ್ಯವನ್ನು ದೇಶಕ್ಕೆ ಅನ್ವಯಿಸಬೇಡಿ ಎಂದು ಮೆಲಾನಿ ಜೋಲಿ ಮನವಿ ಮಾಡಿದ್ದಾರೆ.
ದೊಡ್ಡಣ್ಣನ ನಾಡಿನಲ್ಲಿ ಖಲಿಸ್ತಾನಿ ಕಾಟ!
ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದ ಭಾರತೀಯ ದೂತವಾಸ ಕಚೇರಿ ಮೇಲೆ ಇಂದು ದಿಢೀರ್ ದಾಳಿ ನಡೆಸಿರುವ ಖಲಿಸ್ತಾನಿ (Khalistani) ಬೆಂಬಲಿಗರು, ಬೆಂಕಿ ಹಚ್ಚಿದ್ದಾರೆ. ಘಟನೆ ಬಗ್ಗೆ ಜಗತ್ತಿನಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಅಮೆರಿಕದ ಸ್ಥಳೀಯ ಕಾಲಮಾನ ಪ್ರಕಾರ, ಮುಂಜಾನೆ 1.30ರಿಂದ 2.30ರ ಮಧ್ಯೆ ಭಾರತದ ರಾಯಭಾರ ಕಚೇರಿ ಟಾರ್ಗೆಟ್ ಮಾಡಿ ಬೆಂಕಿ ಹಚ್ಚಿದ್ದಾರೆ. ಕಳೆದ 5 ತಿಂಗಳಲ್ಲಿ ಇಂತಹ ಘಟನೆ ನಡೆಯುತ್ತಿರುವುದು ಇದು 2ನೇ ಬಾರಿಗೆ. ಕಳೆದ ಮಾರ್ಚ್‌ನಲ್ಲಿ ಕೂಡ ಇದೇ ರೀತಿ ಸ್ಯಾನ್ ಫ್ರಾನ್ಸಿಸ್ಕೋದ ಭಾರತೀಯ ದೂತವಾಸ ಕಚೇರಿ ಮೇಲೆ ದಾಳಿ ಮಾಡಿದ್ದರು. ಘಟನೆ ಬೆನ್ನಲ್ಲೇ ಕೆನಡಾ ಕೂಡ ಭಾರತಕ್ಕೆ ಭರವಸೆ ನೀಡಿದೆ.
ಭಾರತದ ವಿರುದ್ಧ ಮುಂದುವರಿದ ಷಡ್ಯಂತ್ರ
ಹೌದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಬಲ ಹೊಂದಿರುವ ಖಲಿಸ್ತಾನಿ ಬೆಂಬಲಿಗ ಪಡೆ ಈಗ ಭಾರತದ ವಿರುದ್ಧ ಷಡ್ಯಂತ್ರ ಮಾಡಿದಂತೆ ಕಾಣುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಭಾರತದ ವಿರುದ್ಧ ಪದೇ ಪದೆ ಈ ರೀತಿ ಕೃತ್ಯ ನಡೆಯುತ್ತಿದೆ. ಅಮೆರಿಕ ಸೇರಿ ಕೆನಡಾದ ಬಹುಭಾಗದಲ್ಲಿ ಖಲಿಸ್ತಾನಿ ಬೆಂಬಲಿಗರು ವಾಸವಿದ್ದು, ನ್ಯೂಜಿಲ್ಯಾಂಡ್ & ಆಸ್ಟ್ರೇಲಿಯಾದ ಕೆಲ ಭಾಗಗಳಲ್ಲೂ ಖಲಿಸ್ತಾನಿ ಬೆಂಬಲಿಗರು ಭಾರತದ ವಿರುದ್ಧ ಷಡ್ಯಂತ್ರ ನಡೆಸುತ್ತಿರುವ ಆರೋಪವಿದೆ. ಆದರೆ ಈ ನಡುವೆ ಕೆನಡಾ ನೇರವಾಗಿ ಖಲಿಸ್ತಾನಿಗಳ ವಿರುದ್ಧ ಎಚ್ಚರಿಕೆ ಸಂದೇಶ ರವಾನಿಸಿದೆ. ಕೆಲ ದಿನಗಳ ಹಿಂದೆ ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆ ಟ್ಯಾಬ್ಲೋ ಮಾಡಿದ್ದರು ಈ ಖಲಿಸ್ತಾನಿಗಳು. ಕೆನಡಾದಲ್ಲಿ ಈ ರೀತಿ ಘಟನೆ ನಡೆದಿದ್ದು ಭಾರತಕ್ಕೆ ಕೋಪ ತರಿಸಿತ್ತು.
ಹೀಗೆ ಕೆನಡಾದಲ್ಲಿ ಭಾರತ ರಾಯಭಾರ ಕಚೇರಿಯನ್ನ ಮತ್ತು ಅಧಿಕಾರಿಗಳನ್ನು ಟಾರ್ಗೆಟ್ ಮಾಡುತ್ತಿರುವುದು ಭಾರತಕ್ಕೂ ಕೋಪ ತರಿಸಿದೆ. ಹೀಗಾಗಿ ಕೆನಡಾದಲ್ಲಿ ಖಾಲಿಸ್ತಾನ ಪರ ಚಟುವಟಿಕೆಗಳು ಹೆಚ್ಚುತ್ತಿರುವ ಕಾರಣದಿಂದ ಅಲ್ಲಿನ ಹೈಕಮಿಷನರ್‌ಗೆ ಭಾರತ ಸಮನ್ಸ್ ನೀಡಿ ಪ್ರತಿಭಟನೆ ದಾಖಲಿಸಿದೆ. ಹಾಗೇ ಅಮೆರಿಕದ ಘಟನೆ ಕೂಡ ಇದೀಗ ಜಗತ್ತಿನಾದ್ಯಂತ ಸದ್ದು ಮಾಡುತ್ತಿದ್ದು, ಖಲಿಸ್ತಾನಿ ಬೆಂಬಲಿಗರ ವರ್ತನೆಗೆ ಆಕ್ರೋಶ ವ್ಯಕ್ತವಾಗುತ್ತಿದೆ.












Click it and Unblock the Notifications