ಮೀಡಿಯಂ, ಲಾರ್ಜ್ ಅಲ್ಲ ಸ್ವಾಮಿ, ಇದು 2 ಕಿಲೋಮೀಟರ್ ಉದ್ದದ ಪಿಜ್ಜಾ
ಲಾಸ್ ಏಂಜಲೀಸ್, ಜೂನ್ 12: ನೀವು ಸ್ಮಾಲ್ ಪಿಜ್ಜಾ ಕೇಳಿರ್ತೀರಿ. ಮೀಡಿಯಂ ಹಾಗೂ ಲಾರ್ಜ್ ಪಿಜ್ಜಾ ಕೂಡ ಕೇಳಿರ್ತೀರಿ, ತಿಂದಿರ್ತೀರಿ. ಆದರೆ ಅಮೆರಿಕದ ಲಾಸ್ ಏಂಜಲೀಸ್ ನಲ್ಲಿ ಮಾಡಿದ್ದು ಜಗತ್ತಿನಲ್ಲೇ ಅತಿ ಉದ್ದದ ಪಿಜ್ಜಾ. ಅರ್ಥಾತ್ 6,333 ಅಡಿ ಅಥವಾ 1.93 ಕಿಲೋಮೀಟರ್ ಉದ್ದದ ಪಿಜ್ಜಾ ಇದು.
ಹತ್ತಾರು ಜನ ಇದಕ್ಕಾಗಿ ಕೆಲಸ ಮಾಡಿದ್ದಾರೆ. ಮತ್ತು ಈ ಹಿಂದಿನ ಎಲ್ಲ ದಾಖಲೆಗಳನ್ನು ಈ ಪಿಜ್ಜಾ ನುಂಗಿ ಕೋಕ್ ಕುಡಿದಿದೆ. ಇದೀಗ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನವರೇ ಇದಕ್ಕೆ ಪ್ರಮಾಣ ಪತ್ರ ವಿತರಿಸಿದ್ದಾರೆ. ಅಂದಹಾಗೆ ಈ ಪಿಜ್ಜಾದ ತೂಕ 7808 ಕೆಜಿ. ಇದನ್ನು ತಯಾರು ಮಾಡುವುದಕ್ಕೆ 3632 ಕೆಜಿ ಹಿಟ್ಟು, 1634 ಕೆಜಿ ಚೀಸ್ ಹಾಗೂ 2542 ಸಾಲ್ಸಾ ಸಾಸ್ ಬಳಸಲಾಗಿದೆ.

ಈ ಹಿಂದಿನ ದಾಖಲೆ 2016ರಲ್ಲಿ 6082 ಅಡಿ ಉದ್ದದ ಪಿಜ್ಜಾವನ್ನು ಇಟಲಿಯಲ್ಲಿ ಮಾಡಲಾಗಿತ್ತು. ಅದು ಈ ವರೆಗಿನ ದಾಖಲೆಯಾಗಿತ್ತು. ಅಂದಹಾಗೆ ಈ ಬಾರಿಯ ಪಿಜ್ಜಾ ತಯಾರಿಗೆ ಮೂರು ಇಂಡಸ್ಟ್ರಿಯಲ್ ಓವನ್ ಗಳನ್ನು ಸತತವಾಗಿ ಎಂಟು ಗಂಟೆ ಬಳಸಲಾಗಿದೆ. ಈ ಸಾಧನೆಗೆ ಮಾನವೀಯತೆ ಹಾಗೂ ಗೆಳೆತನದ ಆಚರಣೆಗೆ ಕಾರಣ ಎಂದು ಕರೆಯಲಾಗಿದೆ.
ಈ ಕಾರ್ಯಕ್ರಮದಿಂದ ಸಂಗ್ರಹ ಆದ ಹಣವನ್ನು ಸ್ಥಳೀಯ ಆಹಾರ ಬ್ಯಾಂಕ್ ಗಳಿಗೆ ಹಾಗೂ ಮನೆಯಿಲ್ಲದ ನಿರಾಶ್ರಿತರಿಗೆ ನೀಡಲಾಗಿದೆ.
ಐಎಎನ್ಎಸ್












Click it and Unblock the Notifications