BRICS 2023: ನೆಲದ ಮೇಲೆ ಬಿದ್ದಿದ್ದ ತ್ರಿವರ್ಣ ಧ್ವಜದ ಕಾರ್ಡ್ ನೋಡಿ ಪ್ರಧಾನಿ ಮೋದಿ ಮಾಡಿದ್ದೇನು?, ವಿಡಿಯೋ
ಜೋಹಾನ್ಸ್‌ಬರ್ಗ್, ಆಗಸ್ಟ್ 23: ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ 15ನೇ ಬ್ರಿಕ್ಸ್ (BRICS) ಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಂಡಿದ್ದಾರೆ. ಇಂದು ಬುಧವಾರ ಬ್ರಿಕ್ಸ್ ಸಮಾವೇಶದಲ್ಲಿ ಗ್ರೂಫ್ ಫೋಟೊ ತೆಗೆಯುವಾಗ ವೇದಿಕೆ ಏರಿಕೆ ಮೋದಿಯವರು ನೆಲದ ಮೇಲೆ ಬಿದ್ದಿದ್ದ ತ್ರಿವರ್ಣ ಧ್ವಜದ ಕಾರ್ಡ್ ಅನ್ನು ತೆಗೆದುಕೊಂಡು ಜೇಬಿನಲ್ಲಿ ಇಟ್ಟುಕೊಂಡ ದೃಶ್ಯ ಸೆರೆಯಾಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಪ್ರಧಾನಿ ಮೋದಿಯವರು ದಕ್ಷಿಣ ಆಫ್ರಿಕಾ ಅಧ್ಯಕ್ಷರ ಜೊತೆ ವೇದಿಕೆ ಹತ್ತುತ್ತಾರೆ. ಈ ವೇಳೆ ವೇದಿಕೆಯ ನೆಲದ ಮೇಲೆ ಬಿದ್ದಿದ್ದ ತ್ರಿವರ್ಣ ಧ್ವಜದ ಕಾರ್ಡ್‌ಗಳನ್ನು ಎತ್ತಿಕೊಂಡು ಮೋದಿ ತಮ್ಮ ಕಿಸೆಯಲ್ಲಿ ಇಟ್ಟುಕೊಂಡಿದ್ದಾರೆ. ಇದನ್ನು ನೋಡಿದ ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಫೋಸಾ ಅವರು ಸಹ ಭಾರತದ ಪ್ರಧಾನಿಯಂತೆ ಕಾರ್ಡ್‌ಗಳನ್ನು ಮೇಲೆತ್ತಿಕೊಂಡಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ.

ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ದಕ್ಷಿಣ ಆಫ್ರಿಕಾದ ಅಧ್ಯಕ್ಷರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು. ದ್ವಿಪಕ್ಷೀಯ ಸಂಬಂಧಗಳಲ್ಲಿನ ಪ್ರಗತಿ ಪರಿಶೀಲಿಸಿ ಪ್ರಾದೇಶಿಕ ಮತ್ತು ಬಹುಪಕ್ಷೀಯ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಅಲ್ಲದೇ ಜಾಗತಿಕವಾಗಿ ಧ್ವನಿ ಬಲಪಡಿಸಲು ಜಂಟಿಯಾಗಿ ಕೆಲಸ ಮಾಡುವ ಕುರಿತು ಸಮಾಲೋಚನೆ ನಡೆಸಿದರು.
2 ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧ ಪ್ರಗತಿ ಪರಿಶಿಲನೆ
ಎರಡು ದೇಶಗಳ ಅಗ್ರ ನಾಯಕರು ಉಭಯ ದೇಶಗಳ ಮಧ್ಯದ ದ್ವಿಪಕ್ಷೀಯ ಸಂಬಂಧದ ಪ್ರಗತಿ ಪರಿಶೀಲಿಸಿದರು. ದೇಶಗಳ ರಕ್ಷಣೆ, ಕೃಷಿ, ವ್ಯಾಪಾರ ಮತ್ತು ಹೂಡಿಕೆ, ಆರೋಗ್ಯ, ಸಂರಕ್ಷಣೆ ಮತ್ತು ಜನರ ನಡುವಿನ ಸಂಬಂಧಗಳು ಒಳಗೊಂಡಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧಿಸಿದ ಕಾರ್ಯಸಾಧನೆ ಕುರಿತು ತೃಪ್ತಿ ವ್ಯಕ್ತಪಡಿಸಿದರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಮಾಫೋಸಾ ಭಾರತದ G20 ಅಧ್ಯಕ್ಷ ಸ್ಥಾನಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು. ಆಫ್ರಿಕನ್ ಯೂನಿಯನ್‌ಗೆ G-20 ನ ಸಂಪೂರ್ಣ ಸದಸ್ಯತ್ವ ನೀಡುವ ಭಾರತದ ಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. G-20 ಶೃಂಗಸಭೆಗಾಗಿ ನವದೆಹಲಿಗೆ ಭೇಟಿ ನೀಡಲು ಎದುರು ನೋಡುತ್ತಿದ್ದೇನೆ ಎಂದು ರಾಮಫೋಸಾ ತಿಳಿಸಿದರು.












Click it and Unblock the Notifications