ಲೋಕಸಭೆ ಚುನಾವಣೆ 2019 : 6 ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಕಷ್ಟ ಕಷ್ಟ!
Recommended Video

ಬೆಂಗಳೂರು, ಸೆಪ್ಟೆಂಬರ್ 08 : 2019ರ ಲೋಕಸಭೆ ಚುನಾವಣೆ ಕುರಿತು ಕರ್ನಾಟಕ ಬಿಜೆಪಿ ವರದಿಯೊಂದನ್ನು ಸಿದ್ದಪಡಿಸಿದೆ. ವರದಿಯ ಪ್ರಕಾರ 6 ಕ್ಷೇತ್ರಗಳಲ್ಲಿ ಬಿಜೆಪಿಗೆ ಗೆಲುವ ಕಷ್ಟವಾಗಲಿದೆ. ಇವುಗಳಲ್ಲಿ ಎರಡು ಕ್ಷೇತ್ರಗಳಲ್ಲಿ ಸಂಸದರಾಗಿರುವವರು ಕೇಂದ್ರದಲ್ಲಿ ಸಚಿವರಾಗಿದ್ದಾರೆ.
ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಈ ವರದಿ ಸಿಕ್ಕಿದೆ. ಹೈಕಮಾಂಡ್ ನಾಯಕರನ್ನು ಭಾನುವಾರ ದೆಹಲಿಯಲ್ಲಿ ಭೇಟಿ ಮಾಡಲಿರುವ ಯಡಿಯೂರಪ್ಪ ಅವರು ಈ ವರದಿ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಒಟ್ಟಾಗಿ ಚುನಾವಣೆ ಎದುರಿಸಿದರೆ ಇನ್ನಷ್ಟು ಕ್ಷೇತ್ರಗಳಲ್ಲಿ ಗೆಲುವು ಕಷ್ಟವಾಗಲಿದೆ ಎಂಬುದು ಸದ್ಯದ ಮಾಹಿತಿ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ 20ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸಬೇಕು ಎಂಬುದು ಹೈಕಮಾಂಡ್ ನಾಯಕರ ಸೂಚನೆಯಾಗಿದೆ.
2014ರ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ 17 ಸ್ಥಾನಗಳಲ್ಲಿ ಜಯಗಳಿಸಿತ್ತು. ಕಾಂಗ್ರೆಸ್ 9 ಮತ್ತು ಜೆಡಿಎಸ್ 2 ಸ್ಥಾನದಲ್ಲಿ ಜಯಗಳಿಸಿತ್ತು. 2018ರ ವಿಧಾನಸಭೆ ಚುನಾವಣೆ ಬಳಿಕ ಬಿ.ಶ್ರೀರಾಮುಲು (ಬಳ್ಳಾರಿ), ಬಿ.ಎಸ್.ಯಡಿಯೂರಪ್ಪ (ಶಿವಮೊಗ್ಗ), ಸಿ.ಎಸ್.ಪುಟ್ಟರಾಜು (ಮಂಡ್ಯ) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಬಿಜೆಪಿಗೆ ಕಗ್ಗಂಟಾಗಿರುವ 6 ಕ್ಷೇತ್ರಗಳು
ಬಿ.ಎಸ್.ಯಡಿಯೂರಪ್ಪ ಕೈ ಸೇರಿರುವ ವರದಿ ಪ್ರಕಾರ 6 ಕ್ಷೇತ್ರಗಳಲ್ಲಿ ಪಕ್ಷಕ್ಕೆ ಗೆಲುಲು ಅಷ್ಟು ಸುಲಭವಲ್ಲ.
* ಉತ್ತರ ಕನ್ನಡ - ಅನಂತ್ ಕುಮಾರ್ ಹೆಗಡೆ
* ಬೆಳಗಾವಿ - ಸುರೇಶ್ ಅಂಗಡಿ
* ಕೊಪ್ಪಳ - ಕರಡಿ ಸಂಗಣ್ಣ
* ವಿಜಯಪುರ - ರಮೇಶ್ ಜಿಗಜಿಣಗಿ
* ಮೈಸೂರು - ಪ್ರತಾಪ್ ಸಿಂಹ
* ಬಾಗಲಕೋಟೆ - ಪಿ.ಸಿ.ಗದ್ದಿ ಗೌಡರ

6 ಕ್ಷೇತ್ರಗಳಲ್ಲೂ ಬಿಜೆಪಿ ಸಂಸದರು
ಅಚ್ಚರಿಯ ಸಂಗತಿ ಎಂದರೆ ಈ ಎಲ್ಲಾ 6 ಕ್ಷೇತ್ರಗಳಲ್ಲಿ ಬಿಜೆಪಿಯ ಸಂಸದರು ಇದ್ದಾರೆ. ಆದರೆ, ಮುಂದಿನ ಚುನಾವಣೆಯಲ್ಲಿ ಹಿನ್ನಡೆ ಉಂಟಾಗಲಿದೆ. ಗೆಲುವು ಕಷ್ಟವಾಗಲಿದೆ. ಇದಕ್ಕೆ 2018ರ ವಿಧಾನಸಭೆ ಚುನಾವಣೆ ಫಲಿತಾಂಶವೂ ಕಾರಣವಾಗಿದೆ.
ಬಿಜೆಪಿ 2019ರ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗೆ ಸಮೀಕ್ಷೆ ನಡೆಸುತ್ತಿದೆ. ಒಟ್ಟು 2 ಸಮೀಕ್ಷೆಗಳು ಮುಕ್ತಾಯಗೊಂಡಿದ್ದು, ಇದರ ವರದಿ ಸಿಕ್ಕಿದೆ. ಈ ವರದಿಯಲ್ಲಿಯೇ 6 ಕ್ಷೇತ್ರಗಳಲ್ಲಿ ಈ ಬಾರಿ ಗೆಲುವು ಅಷ್ಟು ಸುಲಭವಲ್ಲ ಎಂಬ ವರದಿ ಬಂದಿದೆ.

2 ಕ್ಷೇತ್ರಗಳಲ್ಲಿ ಕೇಂದ್ರ ಸಚಿವರು ಇದ್ದಾರೆ
ಅಚ್ಚರಿಯ ಸಂಗತಿ ಎಂದರೆ 6 ಕ್ಷೇತ್ರಗಳ ಪೈಕಿ ಉತ್ತರ ಕನ್ನಡ (ಅನಂತ್ ಕುಮಾರ್ ಹೆಗಡೆ), ವಿಜಯಪುರ (ರಮೇಶ ಜಿಗಜಿಣಗಿ) ಅವರು ಕೇಂದ್ರ ಸಚಿವರು. ಆದರೂ ಸಹ ಈ ಕ್ಷೇತ್ರದಲ್ಲಿ ಗೆಲುವು ಕಷ್ಟವಾಗಲಿದೆ ಎಂಬುದು ಸದ್ಯದ ವರದಿ.
ಅನಂತ ಕುಮಾರ್ ಹೆಗಡೆ ಅವರು ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಲೇ ಹೆಚ್ಚು ಸುದ್ದಿಯಾಗಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ಸಿಗುವುದೇ ಕಷ್ಟವಾಗಿದೆ ಎಂಬಂತಹ ಪರಿಸ್ಥಿತಿ ಇದೆ. ಟಿಕೆಟ್ ಸಿಕ್ಕರೂ ಅವರು ಗೆಲ್ಲುವುದಿಲ್ಲ ಎನ್ನುತ್ತಿದೆ ವರದಿ.

ಕಾಂಗ್ರೆಸ್-ಜೆಡಿಎಸ್ ಮೈತ್ರಿ
2019ರ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ ಕುರಿತು ಚರ್ಚೆ ನಡೆಯುತ್ತಿದೆ. ಒಂದು ವೇಳೆ ಮೈತ್ರಿ ಮಾಡಿಕೊಂಡರೆ ಬಿಜೆಪಿಯ ಗೆಲುವಿಗೆ ಕಷ್ಟವಾಗಲಿದೆ ಎಂಬುದು ವರದಿಯ ಸಾರಾಂಶ.
ಈ ಬಾರಿಯ ಚುನಾವಣೆಯಲ್ಲಿ 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕು ಎಂಬುದು ಬಿಜೆಪಿಯ ಗುರಿಯಾಗಿದೆ. ಪಕ್ಷ 11 ಸ್ಥಾನಗಳಲ್ಲಿ ಪ್ರಬಲ ಅಭ್ಯರ್ಥಿಯನ್ನು ಹುಡುಕಲು ಪ್ರಯತ್ನ ನಡೆಸಿದೆ. ಈ ವರದಿಯ ಅನ್ವಯ 6 ಕ್ಷೇತ್ರಗಳಲ್ಲಿ ಹಾಲಿ ಸಂಸದರನ್ನು ಹೊರತುಪಡಿಸಿದರೆ, ಬೇರೆ ಅಭ್ಯರ್ಥಿಗಳನ್ನು ಕಣಕ್ಕಿ ಇಳಿಸುವುದು ಸಹ ಬಿಜೆಪಿಗೆ ಸವಾಲಾಗಿದೆ.












Click it and Unblock the Notifications