Sudan: ಜಗತ್ತಿನ ವಿನಾಶದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಕಳವಳ!
ಸುಡಾನ್: ಅಲ್ಲಿ ತಿನ್ನಲು ಅನ್ನವಿಲ್ಲ.. ಆದರೂ ಶೋಕಿಗೆ ಗನ್ ಬೇಕು, ಬಾಂಬ್ ಬೇಕು.. ಇದು ಕಥೆಯಲ್ಲ ಸುಡಾನ್ ನಾಯಕರ ಶೋಕಿಯ ವ್ಯಥೆ. ಹೌದು, ಹೀಗೆ ಒಣ ಶೋಕಿಯಿಂದಲೇ ಸುಡಾನ್ ಸೇನೆ ಹಾಗೂ ರಾಜಕೀಯ ನಾಯಕರು ಸುಡಾನ್ ದೇಶವನ್ನ ಹಾಳು ಮಾಡಿ ವಿನಾಶದ ಅಂಚಿಗೆ ತಂದಿದ್ದಾರೆ. ಜೊತೆಗೆ ಇಡೀ ಜಗತ್ತಿಗೂ ವಿನಾಶದ ಅಪಾಯ ಎದುರಾಗುವಂತೆ ಮಾಡಿದ್ದಾರೆ.
ಅಂದಹಾಗೆ ಸುಡಾನ್ ಸೇನೆ ಮತ್ತು ಅರೆಸೇನಾ ಪಡೆ ಮಧ್ಯೆ ಜಗಳ ಶುರುವಾಗಿ ಸಿಕ್ಕ ಸಿಕ್ಕ ಜಾಗವನ್ನು ನಾಶ ಮಾಡುತ್ತಾ ಸಾಗುತ್ತಿರುವುದು ಗೊತ್ತಿರುವ ವಿಚಾರ. ಆದರೆ ಇಂತಹ ಕಿರಾತಕರ ಕೈಗೆ ಈಗ ಲ್ಯಾಬ್ ಸಿಕ್ಕಿಬಿಟ್ಟಿದೆ. ಅಷ್ಟಕ್ಕೂ ಲ್ಯಾಬ್‌ನ ದುರುಪಯೋಗ ಮಾಡಿಕೊಂಡು ಭೀಕರ ಜೈವಿಕ ದಾಳಿ ನಡೆಸುವ ಅಪಾಯ ಎದುರಾಗಿದೆ. ಇದರಿಂದ ಇಡೀ ಜಗತ್ತಿಗೇ ಅಪಾಯ ಎದುರಾಗಬಹುದು ಎಂದು ವಿಶ್ವಸಂಸ್ಥೆ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಆತಂಕ ವ್ಯಕ್ತಪಡಿಸಿದೆ. ಅದರ ಬಗ್ಗೆ ಮಾಹಿತಿ ಇಲ್ಲಿದೆ.

ಕಿರಾತಕರ ಕೈಯಲ್ಲಿ ಪ್ರಯೋಗಾಲಯ
ಅಷ್ಟಕ್ಕೂ ಸುಡಾನ್ ರಾಜಧಾನಿ ಖರ್ಟೋಮ್‌ನಲ್ಲಿರುವ ಜೈವಿಕ ವಸ್ತುಗಳ ರಾಷ್ಟ್ರೀಯ ಆರೋಗ್ಯ ಪ್ರಯೋಗಾಲಯವನ್ನು ಹಿಂಸಾಚಾರ ನಡೆಸುತ್ತಿರುವ ಕಿರಾತಕರು ತಮ್ಮ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಸುಡಾನ್ ಸೇನೆ ಅಥವಾ ಅರೆಸೇನಾ ಪಡೆಯ ಪೈಕಿ ಒಬ್ಬರಿಗೆ ಈ ಲ್ಯಾಬ್ ಸಿಕ್ಕಿಬಿಟ್ಟಿದೆ. ಇದ್ರಿಂದ ಭಾರಿ ಅಪಾಯ ಎದುರಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಲ್ಯಾಬ್‌ನಲ್ಲಿ ಪೋಲಿಯೊ, ದಢಾರ, ಕಾಲರಾಗೆ ಸಂಬಂಧಿಸಿದ ಔಷಧ ಇರಿಸಲಾಗಿತ್ತು. ಆದರೆ ಲ್ಯಾಬ್‌ನಲ್ಲಿದ್ದ ಅಧಿಕಾರಿ ವರ್ಗ ಸಿಬ್ಬಂದಿಯನ್ನ ಓಡಿಸಿರುವ ದಂಗೆಕೋರರು, ಮುಂದೆ ಜಗತ್ತಿಗೇ ವಿನಾಶ ಸೃಷ್ಟಿಸುವ ಅಪಾಯ ಎದುರಾಗಿದೆ.
ಬೀದಿಗೆ ಬಿದ್ದ ತುಂಬು ಗರ್ಭಿಣಿಯರು
ಇದಿಷ್ಟು ಮಾತ್ರವಲ್ಲ, ವಿಶ್ವಸಂಸ್ಥೆಯ ನಿರಾಶ್ರಿತ ಕೇಂದ್ರದ ವರದಿ ಪ್ರಕಾರ ಸುಡಾನ್ ಹಿಂಸಾಚಾರ ಆರಂಭವಾದ ನಂತರ 11 ಲಕ್ಷ ಬೀದಿಗೆ ಬಿದ್ದಿದ್ದಾರೆ. ಹೀಗೆ ಮನೆ ಕಳೆದುಕೊಂಡು ನರಳುತ್ತಿರುವ ನಿರಾಶ್ರಿತರ ಪೈಕಿ 24 ಸಾವಿರ ಗರ್ಭಿಣಿಯರು ಕೂಡ ಸೇರಿದ್ದಾರಂತೆ. ಇವರಿಗೆಲ್ಲಾ ಮುಂದಿನ ವಾರದಲ್ಲಿ ಹೆರಿಗೆ ಆಗುವುದಿದೆ ಎಂದಿದೆ ವರದಿ. ಸುಡಾನ್ ದೇಶಾದ್ಯಂತ ಒಟ್ಟು 2,19,000 ಗರ್ಭಿಣಿಯರಿದ್ದಾರೆ. ಆದರೆ ಸೇನಾ ಪಡೆ, ಅರೆಸೇನಾ ಪಡೆ ಹುಚ್ಚಾಟದಲ್ಲಿ ತುಂಬು ಗರ್ಭಿಣಿಯರಿಗೆ ಸರಿಯಾದ ಚಿಕಿತ್ಸೆ ಸಿಗದೆ ಬೀದಿಗೆ ಬಿದ್ದಂತಾಗಿದೆ.
ಆಸ್ಪತ್ರೆಗಳು ತೆರೆದಿಲ್ಲ, ರೋಗಿಗಳ ನರಳಾಟ
ಸುಡಾನ್ ಪರಿಸ್ಥಿತಿ ನೋಡುತ್ತಿದ್ದರೆ ಅಕ್ಷರಶಃ ನರಕವೇ ಕಣ್ಣಮುಂದೆ ಬರುತ್ತದೆ. ಅದರಲ್ಲೂ ಸುಡಾನ್ ರಾಜಧಾನಿ ಖರ್ಟೋಮ್ ಸಂಪೂರ್ಣ ಹೊತ್ತಿ ಉರಿಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಶೇ. 60ರಷ್ಟು ಆಸ್ಪತ್ರೆಗಳು ಮುಚ್ಚಿವೆ. ಇನ್ನು ರೋಗಿಗಳು ಏನು ಮಾಡಬೇಕು ಹೇಳಿ? ಉಳಿದಿರುವ ಶೇ. 16ರಷ್ಟು ಆಸ್ಪತ್ರೆಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ಕೂಡ ಸಿಗದೆ ಹಲವರು ಮೃತಪಟ್ಟಿರುವ ಆರೋಪ ಕೇಳಿಬಂದಿದೆ. ಇದು ವಿಶ್ವ ಸಮುದಾಯದ ನಿದ್ದೆಗೆಡಿಸಿದೆ.

ಅಮೆರಿಕದ ಮತ್ತೊಬ್ಬ ಪ್ರಜೆ ಸಾವು?
ಸುಡುಗಾಡಿನ ರೂಪವಾಗಿರುವ ಸುಡಾನ್ ದೇಶದಲ್ಲಿ ವಿದೇಶಿಯರು ಸಿಲುಕಿ ನರಳುತ್ತಿದ್ದಾರೆ. ಅದರಲ್ಲೂ ಸಂಘರ್ಷದಲ್ಲಿ ಮತ್ತೊಬ್ಬ ಅಮೆರಿಕದ ಪ್ರಜೆ ಮೃತಪಟ್ಟಿರುವ ಮಾಹಿತಿ ಹೊರಬಿದ್ದಿದೆ. ಈ ಮೂಲಕ ಇಲ್ಲಿಯತನಕ ಅಮೆರಿಕ ಮೂಲದ ಇಬ್ಬರು ಪ್ರಜೆಗಳು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇನ್ನು ಒಟ್ಟಾರೆ ಸುಡಾನ್‌ನಲ್ಲಿ 500ಕ್ಕೂ ಹೆಚ್ಚು ಮಂದಿ ಮೃತಪಟ್ಟ ಬಗ್ಗೆ ಮಾಹಿತಿ ಇದ್ದು, 4000 ಸಾವಿರಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.
ಒಟ್ನಲ್ಲಿ ಸುಡಾನ್‌ಗೆ ಅಲ್ಲಿನ ಸೇನೆ ಮತ್ತು ಅರೆಸೇನಾ ಪಡೆ ಜಗಳ ಒಂದು ಗತಿ ಕಾಣಿಸೋದು ಪಕ್ಕಾ ಅನ್ನೋ ಮಾತು ಕೇಳಿಬರುತ್ತಿದೆ. ತಮ್ಮ ಪ್ರಜೆಗಳಿಗೆ ತಿನ್ನಲು ಅನ್ನವಿಲ್ಲ ಅಂದರೂ ಅಲ್ಲಿನ ನಾಯಕರ ಶೋಕಿಗೆ ಒಂದಿಷ್ಟೂ ಕೊರತೆ ಇಲ್ಲ. ಗನ್, ಬಾಂಬ್ ದಾಳಿ ಮಾಡಿಸುತ್ತಿರುವ ಎರಡೂ ಬಣಗಳು ಅಮಾಯಕರನ್ನು ಬಲಿಪಡೆಯುತ್ತಿವೆ. ವಿಶ್ವಸಂಸ್ಥೆ ಸುಡಾನ್ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದು, ಶೀಘ್ರದಲ್ಲೇ ಈ ಬಗ್ಗೆ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.












Click it and Unblock the Notifications