ಪಾಕಿಸ್ತಾನಕ್ಕೆ ನೀರು ಹರಿಯದಿದ್ರೆ ಭಾರತೀಯರ ರಕ್ತ ಹರಿಯುತ್ತೆ: ಪಾಕ್ ನಾಯಕ ಬೆದರಿಕೆ
ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏಪ್ರಿಲ್ 22 ರಂದು ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ 25ಕ್ಕೂ ಹೆಚ್ಚು ಮಂದಿ ಅಮಾಯಕರು ಸಾವನ್ನಪ್ಪಿದರು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನದ ಜೊತೆಗಿನ ಸಿಂಧೂ ನದಿ ನೀರು ಒಪ್ಪಂದವನ್ನು ಭಾರತ ಸ್ಥಗಿತಗೊಳಿಸಿದೆ. ಈಗಾಗಲೇ ಪಾಕಿಸ್ತಾನ ನೀರು ಹರಿಯುವುದನ್ನು ನಿಲ್ಲಿಸಿ ಸಮರಕ್ಕೆ ಸಜ್ಜಾಗಿದೆ. ಈ ನಿರ್ಧಾರಕ್ಕೆ ಪ್ರತಿಯಾಗಿ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಅಧ್ಯಕ್ಷ ಬಿಲಾವಲ್ ಭುಟ್ಟೋ-ಜರ್ದಾರಿ ಭಾರತಕ್ಕೆ ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ.
ಪಾಕಿಸ್ತಾನದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಭುಟ್ಟೋ-ಜರ್ದಾರಿ, ʼಸಿಂಧೂ ನಮ್ಮದು. ಅದು ಎಂದೆಂದಿಗೂ ನಮ್ಮದೇ ಆಗಿರುತ್ತದೆ ಎಂದು ನಾನು ಭಾರತಕ್ಕೆ ಹೇಳಲು ಬಯಸುತ್ತೇನೆ. ನಮ್ಮ ನೀರು ಅದರ ಮೂಲಕ ಹರಿಯುತ್ತದೆ. ಪಾಕಿಸ್ತಾನಕ್ಕೆ ಸಿಂಧೂ ನದಿಯ ನೀರು ಹರಿಯದಿದ್ದರೆ, ಭಾರತೀಯರ ರಕ್ತ ಹರಿಯುತ್ತದೆʼ ಎಂದು ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ.

ಪಹಲ್ಗಾಮ್ ಘಟನೆಯ ಬಗ್ಗೆ ಭಾರತ ಪಾಕಿಸ್ತಾನದ ಮೇಲೆ ಆರೋಪ ಮಾಡುತ್ತಿದೆ. ಮೋದಿ ತಮ್ಮ ದೌರ್ಬಲ್ಯಗಳನ್ನು ಮರೆಮಾಚಲು ಮತ್ತು ತಮ್ಮ ಜನರನ್ನು ಮೋಸ ಮಾಡಲು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಸಿಂಧೂ ನದಿ ಪಾಕಿಸ್ತಾನಕ್ಕೆ ಸೇರಿದ್ದು ಎಂದು ಭಾರತ ಒಪ್ಪಿಕೊಂಡಿದ್ದ ಸಿಂಧೂ ಜಲ ಒಪ್ಪಂದವನ್ನು ಅವರು ಏಕಪಕ್ಷೀಯವಾಗಿ ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ. ಸಿಂಧೂ ನದಿಯ ಪಕ್ಕದಲ್ಲಿರುವ ಸುಕ್ಕೂರ್‌ನಲ್ಲಿ ನಿಂತು ಸಿಂಧೂ ನಮ್ಮದೇ ಎಂದು ನಾನು ಭಾರತಕ್ಕೆ ಹೇಳಲು ಬಯಸುತ್ತೇನೆ. ಈ ಸಿಂಧೂನಲ್ಲಿ ನೀರು ಹರಿಯುತ್ತೆ ಅಥವಾ ಅವರ ರಕ್ತ ಹರಿಯುತ್ತೆ ಎಂದು ವಾರ್ನಿಂಗ್ ಕೊಟ್ಟಿದ್ದಾರೆ.
ಲಷ್ಕರ್-ಎ-ತೈಬಾ (ಎಲ್‌ಇಟಿ) ಸಂಘಟನೆಯಾದ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳು ಮತ್ತು ಗಡಿಯಾಚೆಗಿನ ಹಿಂಸಾಚಾರದ ನಡುವಿನ ಸಂಪರ್ಕವನ್ನು ಮತ್ತೊಮ್ಮೆ ಬಹಿರಂಗಪಡಿಸಿದೆ. ಭಾರತವು ಪಾಕಿಸ್ತಾನದೊಂದಿಗಿನ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಳ್ಳಲು ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಿದೆ.

ಭಯೋತ್ಪಾದಕ ದಾಳಿಗೆ ಗಡಿಯಾಚೆಗಿನ ಸಂಪರ್ಕಗಳನ್ನು ಗಮನದಲ್ಲಿಟ್ಟುಕೊಂಡು ಅಟ್ಟಾರಿ ಭೂ-ಸಾರಿಗೆ ಮಾರ್ಗವನ್ನುತಕ್ಷಣವೇ ಮುಚ್ಚುವುದು ಸೇರಿದಂತೆ ಹಲವಾರು ಕ್ರಮಗಳನ್ನು ಘೋಷಿಸಿದೆ. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನವು ಸಿಮ್ಲಾ ಒಪ್ಪಂದ ಸೇರಿದಂತೆ ದ್ವಿಪಕ್ಷೀಯ ವ್ಯಾಪಾರ ಮತ್ತು ಒಪ್ಪಂದಗಳನ್ನು, ಭಾರತದೊಂದಿಗಿನ ವಾಯುಪ್ರದೇಶವನ್ನು ಸಹ ಸ್ಥಗಿತಗೊಳಿಸಿದೆ.
ಏನಿದು ಸಿಂಧೂ ಜಲ ಒಪ್ಪಂದ?
ಭಾರತ ಮತ್ತು ಪಾಕಿಸ್ತಾನ ನಡುವೆ 1960ರಲ್ಲಿ ಸಿಂಧೂ ಜಲ ಒಪ್ಪಂದಕ್ಕೆ (IWT) ಸಹಿ ಹಾಕಲಾಯಿತು. ಇದು ಗಡಿಯಾಚೆಗಿನ ನೀರು ಹಂಚಿಕೆಗೆ ಒಂದು ಪ್ರಮುಖವಾದ ಒಪ್ಪಂದ. ಒಂಬತ್ತು ವರ್ಷಗಳ ಮಾತುಕತೆಯ ನಂತರ ವಿಶ್ವಬ್ಯಾಂಕ್ ಮಧ್ಯಸ್ಥಿಕೆ ವಹಿಸಿತು. ನದಿಗಳನ್ನು ನಿರ್ವಹಿಸಲು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಪಾಕಿಸ್ತಾನದ ಅಧ್ಯಕ್ಷ ಅಯೂಬ್ ಖಾನ್ ಸಹಿ ಹಾಕಿದರು. ಈ ಒಪ್ಪಂದವು 12 ಲೇಖನಗಳು ಮತ್ತು 8 ಅನುಬಂಧಗಳನ್ನು ಹೊಂದಿದೆ.
ಈ ಒಪ್ಪಂದದ ಪ್ರಕಾರ ಪೂರ್ವ ನದಿಗಳಾದ ರವಿ, ಬಿಯಾಸ್, ಸಟ್ಲೆಟ್‌ಗಳನ್ನು ಭಾರತಕ್ಕೆ ಮತ್ತು ಪಶ್ಚಿಮ ನದಿಗಳಾದ ಸಿಂಧೂ, ಝೀಲಂ, ಚೆನಾಬ್ ನದಿಗಳನ್ನು ಪಾಕಿಸ್ತಾನಕ್ಕೆ ಹಂಚಿಕೆ ಮಾಡಲಾಗಿತ್ತು. ಎರಡೂ ರಾಷ್ಟ್ರಗಳು ತಮ್ಮ ನೀರಿನ ಅಗತ್ಯಗಳನ್ನು ಪೂರೈಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ನದಿ ಮತ್ತು ಅದರ ಉಪನದಿಗಳ ಸಮಾನ ಹಂಚಿಕೆಗೆ ಒಪ್ಪಂದ ಮಾರ್ಗಸೂಚಿಗಳನ್ನು ವಿವರಿಸಿತ್ತು. ಆದರೆ ಭಾರತ ಅಥವಾ ಪಾಕಿಸ್ತಾನ ಎರಡೂ ಕಾನೂನುಬದ್ಧವಾಗಿ ಅದನ್ನು ಏಕಪಕ್ಷೀಯವಾಗಿ ರದ್ದುಗೊಳಿಸಲು ಸಾಧ್ಯವಿಲ್ಲ. ಒಪ್ಪಂದವು ಯಾವುದೇ ಅಂತಿಮ ದಿನಾಂಕವನ್ನು ಹೊಂದಿಲ್ಲ, ಮತ್ತು ಯಾವುದೇ ಮಾರ್ಪಾಡುಗಳಿಗೆ ಎರಡೂ ಪಕ್ಷಗಳ ಒಪ್ಪಿಗೆಯ ಅಗತ್ಯವಿದೆ.












Click it and Unblock the Notifications