ಯುದ್ಧಕ್ಕೆ ಹೊಡಿ ಗೋಲಿ.. ಹಿಂಸಾಚಾರದ ಆರ್ಭಟಕ್ಕೆ ಬೀಳಲಿ ಬೇಲಿ..
2023ರ ಅಕ್ಟೋಬರ್ ತಿಂಗಳಲ್ಲಿ ಆರಂಭ ಆಗಿದ್ದ ಹಮಾಸ್ & ಇಸ್ರೇಲ್ ಯುದ್ಧ ಇದೀಗ ಒಂದು ಹಂತಕ್ಕೆ ಬಂದು ನಿಂತಂತೆ ಕಾಣುತ್ತಿದೆ. ಈಗಾಗಲೇ ಸುಮಾರು 40 ಸಾವಿರಕ್ಕೂ ಹೆಚ್ಚು ಜನ ಕಳೆದ 10 ತಿಂಗಳಲ್ಲಿ ಯುದ್ಧಕ್ಕೆ ಬಲಿಯಾಗಿದ್ದಾರೆ ಎಂಬ ಆರೋಪಗಳ ನಡುವೆ, ಯುದ್ಧಕ್ಕೆ ಬ್ರೇಕ್ ಹಾಕಲು ಖುದ್ದು ದೊಡ್ಡಣ್ಣ ಅಮೆರಿಕ ಎಂಟ್ರಿ ಕೊಟ್ಟಿದೆ. ಅಲ್ಲದೆ ಯುದ್ಧ ನಿಲ್ಲಿಸುವ ಬಗ್ಗೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಹತ್ವದ ಮಾಹಿತಿಯನ್ನ ಇಡೀ ಜಗತ್ತಿನ ಎದುರು ತೆರೆದಿಟ್ಟಿದ್ದಾರೆ.
ಇಸ್ರೇಲ್ & ಹಮಾಸ್ ನಡುವೆ ನಡೆಯುತ್ತಿರುವ ಯುದ್ಧ ಜಗತ್ತಿನ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ. ಯಾಕಂದ್ರೆ ಈ ಯುದ್ಧದ ಪರಿಣಾಮ ಮಧ್ಯಪ್ರಾಚ್ಯ ಪರಿಸ್ಥಿತಿ ಕೈಮೀರಿ ಹೋಗ್ತಿದೆ. ಅಲ್ಲದೆ ಮತ್ತೊಂದು ಕಡೆ ಪೆಟ್ರೋಲ್, ಡೀಸೆಲ್, ಗ್ಯಾಸ್ ಸೇರಿದಂತೆ ಹಲವು ಸರಕುಗಳಿಗೂ ಈ ಯುದ್ಧ ಪೆಟ್ಟು ನೀಡುವ ಭಯ ಆವರಿಸಿದೆ. ಇಂತಹ ಸಮಯದಲ್ಲೇ ಅಲರ್ಟ್ ಆಗಿರುವ ಅಮೆರಿಕ ಇದೀಗ ನೇರವಾಗಿ ಇಸ್ರೇಲ್‌ಗೆ ತೆರಳಿ ಮಾತುಕತೆ ನಡೆಸಿ, ಯುದ್ಧ ನಿಲ್ಲಿಸುವ ಬಗ್ಗೆ ತಯಾರಿ ಆರಂಭ ಮಾಡಿದೆ. ಈ ಕುರಿತು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹೇಳಿರುವ ಮಾತು ಏನು ಗೊತ್ತಾ?

ಯುದ್ಧ ನಿಲ್ಲಿಸಲು ಇಸ್ರೇಲ್ ರೆಡಿ?
ಈಗಿನ ಪರಿಸ್ಥಿತಿಯಲ್ಲಿ ಕದನ ವಿರಾಮ ಘೋಷಣೆ ಮತ್ತು ಗಾಜಾದ ಒತ್ತೆಯಾಳುಗಳನ್ನ ರಿಲೀಸ್ ಮಾಡುವ ಬಗ್ಗೆ ಇಸ್ರೇಲ್ ಒಪ್ಪಿಗೆಯನ್ನ ಸೂಚಿಸಿದೆ. ಹೀಗೆ ಇಸ್ರೇಲ್ ಶಾಂತಿ ಒಪ್ಪಂದದ ಬಗ್ಗೆ ಒಪ್ಪಿಗೆ ಸೂಚಿಸಿದ ರೀತಿಯಲ್ಲೇ ಹಮಾಸ್ ಕೂಡ ಒಪ್ಪಿಕೊಳ್ಳಬೇಕು ಅಂತಿದೆ ಅಮೆರಿಕ. ಇದರ ಮಾಹಿತಿ ಇದೀಗ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಬ್ಲಿಂಕನ್ ಮಾಹಿತಿ ಹಂಚಿಕೊಂಡಿದ್ದಾರೆ. ಹಾಗೇ ಯುದ್ಧದ ಬಗ್ಗೆ ಸುದೀರ್ಘವಾಗಿ ಇಸ್ರೇಲ್ ಪ್ರಧಾನಿ ಜೊತೆಗೆ ಮಾತುಕತೆ ನಡೆಸಿದ್ದಾರೆ, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ.
ಕೊತ ಕೊತ ಕುದಿಯುತ್ತಿದೆ ಇರಾನ್!
ಒಂದು ಕಡೆ ಇಸ್ರೇಲ್ & ಗಾಜಾ ಯುದ್ಧ ನಿಲ್ಲಿಸುವ ಪ್ರಯತ್ನ ಆರಂಭವಾಗಿದೆ. ಆದರೆ ಇದೇ ಸಮಯದಲ್ಲಿ ಇರಾನ್ & ಇಸ್ರೇಲ್ ನಡುವೆ ಯುದ್ಧದ ವಾತಾವರಣ ಶುರುವಾಗಿದೆ. ಈಗಾಗಲೇ ಇಸ್ರೇಲ್ ಸೈನಿಕರನ್ನ ಗುರಿಯಾಗಿಸಿ ಇರಾನ್ ದಾಳಿ ಮಾಡುತ್ತಿದೆ ಎಂಬ ಆರೋಪ ಇದೆ. ಈ ಸಮಯದಲ್ಲಿ ಮತ್ತಷ್ಟು ಅಲರ್ಟ್ ಆಗಿರುವ ಇರಾನ್ ಪಡೆಗಳು, ಯಾವ ಕ್ಷಣದಲ್ಲಿ ಬೇಕಾದ್ರು ಇಸ್ರೇಲ್ ವಿರುದ್ಧ ಯುದ್ಧ ಸಾರುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ, ಮಧ್ಯಪ್ರಾಚ್ಯ ಇದೀಗ ಮತ್ತೊಮ್ಮೆ ಬೆಂಕಿಯಲ್ಲಿ ಬಿದ್ದ ಬಟ್ಟೆಯಂತೆ ಆಗಿದೆ.












Click it and Unblock the Notifications