ಬಾಂಗ್ಲಾದೇಶ ಪ್ರಮಾಣ ವಚನ ಸಮಾರಂಭ, ಪ್ರಧಾನಿ ಮೋದಿ ಅವರಿಗೆ ವಿಶೇಷ ಆಹ್ವಾನ | Bangladesh Election
ಬಾಂಗ್ಲಾದೇಶದ ಜನರು ಅಳೆದು & ತೂಗಿ ಇದೀಗ ಹೊಸ ಜನಪ್ರತಿನಿಧಿಗಳ ಆಯ್ಕೆ ಮಾಡಿದ್ದು, ಅತ್ತ ಪಾಪಿ ಪಾಕಿಸ್ತಾನದ ಕುತಂತ್ರಕ್ಕೆ ತಕ್ಕ ಉತ್ತರ ಕೊಟ್ಟಿದ್ದಾರೆ. ಬಾಂಗ್ಲಾದೇಶ ಕ್ರಾಂತಿಯ ನಂತರ 2 ವರ್ಷ ಹಂಗಾಮಿ ಸರ್ಕಾರ ಅಡಿಯಲ್ಲಿ, ಕೋಮು ಗಲಭೆ ಸೇರಿದಂತೆ ಅಶಾಂತಿ ಸೃಷ್ಟಿಸುವ ವಾತಾವರಣದಲ್ಲಿ ನಲುಗಿತ್ತು ಬಾಂಗ್ಲಾದೇಶ. ಆದರೆ ಇದೀಗ ಬಾಂಗ್ಲಾದೇಶದಲ್ಲಿ ಹೊಸ ಮನ್ವಂತರವು ಆರಂಭ ಆಗಿದ್ದು, ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿಯು ಭರ್ಜರಿ ಬಹುಮತ ಪಡೆದು ಸರ್ಕಾರ ರಚಿಸಲು ಸಜ್ಜಾಗಿದೆ.
ಈ ಹಿನ್ನೆಲೆಯಲ್ಲಿ ಮಂಗಳವಾರ ಪ್ರಮಾಣ ವಚನ ಕಾರ್ಯಕ್ರಮ ಕೂಡ ಆಯೋಜನೆ ಮಾಡಲಾಗಿದ್ದು, ಇದೀಗ ಸಮಾರಂಭಕ್ಕೆ ಸಕಲ ಸಿದ್ಧತೆ ಸಾಗುವ ಜೊತೆಗೆ ಭಾರತದ ಪ್ರಧಾನಿ ಮೋದಿ ಅವರಿಗೆ ವಿಶೇಷ ಆಹ್ವಾನ ಕೂಡ ನೀಡಲಾಗಿದೆ. ಅಲ್ಲದೆ ಭಾರತದ ಜೊತೆಗೆ ಸಂಬಂಧ ಸುಧಾರಣೆಗೆ ಕೂಡ ಹೊಸದಾಗಿ ಆಯ್ಕೆ ಆಗಿರುವ ಬಾಂಗ್ಲಾದೇಶದ ಸರ್ಕಾರ ಮುಂದಾಗಿದ್ದು, ಜಾಗತಿಕವಾಗಿ ಈ ಬೆಳವಣಿಗೆಯು ಗಮನ ಸೆಳೆದಿದೆ.

ಫೆಬ್ರವರಿ 17ಕ್ಕೆ ಪ್ರಮಾಣ ವಚನ ಸ್ವೀಕಾರಕ್ಕಾಗಿ, ಬಹುದೊಡ್ಡ ಕಾರ್ಯಕ್ರಮ ಆಯೋಜನೆ ಮಾಡಿದೆ ಬಾಂಗ್ಲಾದೇಶ. ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ ಪೂರ್ಣ ಬಹುಮತ ಪಡೆದು 212 ಸ್ಥಾನ ಗೆದ್ದಿದೆ. ಈ ಮೂಲಕ 300 ಸ್ಥಾನಗಳ ಬಲವನ್ನು ಹೊಂದಿರುವ ಬಾಂಗ್ಲಾದೇಶ ಸಂಸತ್‌ನಲ್ಲಿ ಭಾರತದ ಜೊತೆಯಲ್ಲಿ ಉತ್ತಮ ಸಂಬಂಧವನ್ನ ಹೊಂದಿರುವ ವ್ಯಕ್ತಿ, ಎಂದರೆ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿಯ ನಾಯಕ ತಾರಿಕ್ ರಹ್ಮಾನ್ ಪ್ರಧಾನಿ ಆಗುತ್ತಿದ್ದಾರೆ. ಸಮಾರಂಭಕ್ಕೆ ಭಾರತದ ಪ್ರಧಾನಿ ಮೋದಿ ಅವರಿಗೆ ವಿಶೇಷ ಆಹ್ವಾನ ನೀಡಿರುವ ಹಿನ್ನೆಲೆ, ಪಾಕಿಸ್ತಾನ ಮತ್ತು ಚೀನಾ ಸೇರಿದಂತೆ ಭಾರತದ ವಿರೋಧಿ ದೇಶಗಳಿಗೆ ಹೊಟ್ಟೆ ಉರಿ ಕೂಡ ಶುರುವಾಗಿದೆ.
ಪ್ರಧಾನಿ ಮೋದಿ ಅವರು ಹೋಗುತ್ತಾರಾ?
ಈಗ ಇರುವ ಮಾಹಿತಿ ಪ್ರಕಾರ ಬಾಂಗ್ಲಾದೇಶ ಪ್ರಧಾನಿ ಪ್ರಮಾಣ ವಚನ ಸಮಾರಂಭಕ್ಕೆ ಭಾರತದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಹೋಗುವುದು ಅನುಮಾನ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಬದಲಾಗಿ ಬೇರೆಯೊಬ್ಬರು ಹೋಗುವುದು ಖಚಿತವಾಗಿದೆ, ಮತ್ತೊಂದು ಕಡೆ ಬಾಂಗ್ಲಾ ಜೊತೆ ಶೀಘ್ರದಲ್ಲೇ ಭಾರತ ದ್ವಿಪಕ್ಷೀಯ ಮಾತುಕತೆ ನಡೆಸುವ ನಿರೀಕ್ಷೆ ಕೂಡ ಇದೆ. ಇನ್ನೊಂದು ಕಡೆ ಈಗ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿಯ ನಾಯಕ ತಾರಿಕ್ ರಹ್ಮಾನ್, ಬಾಂಗ್ಲಾದೇಶದ ಪ್ರಧಾನಿ ಆಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಭಾರತಕ್ಕೆ ಮೊದಲ ಭೇಟಿ ಕೊಡುತ್ತಾರಾ? ಎಂಬ ಕುತೂಹಲ ಕೂಡ ಮನೆ ಮಾಡಿದೆ. ಹಾಗೇ ತಮ್ಮ ಮೊದಲ ಭಾಷಣದಲ್ಲಿ ಭಾರತದ ಜೊತೆ ಸಂಬಂಧ ಸುಧಾರಣೆ ಬಗ್ಗೆ ಪರೋಕ್ಷವಾಗಿ ಮುನ್ಸೂಚನೆ ನೀಡಿದ್ದಾರೆ.
ಬಾಂಗ್ಲಾ ಭಾವಿ ಪ್ರಧಾನಿ ಹೇಳಿಕೆ
ಬಾಂಗ್ಲಾದೇಶದ ಮುಂದಿನ ಪ್ರಧಾನಿ ಪಟ್ಟಕ್ಕೆ ಬಹುತೇಕ ತಾರಿಕ್ ರೆಹಮಾನ್ ಆಯ್ಕೆ ಖಚಿತವಾಗಿದ್ದು, ಇದೀಗ ಬಾಂಗ್ಲಾದ ಭವಿಷ್ಯದ ವಿದೇಶಾಂಗ ನೀತಿ ಕುರಿತು ತಾರಿಕ್ ರೆಹಮಾನ್ ನೀಡಿರುವ ಹೇಳಿಕೆಗಳು ಗಮನ ಸೆಳೆದಿದೆ. ನನಗೆ ರಾಷ್ಟ್ರೀಯ ಹಿತಾಸಕ್ತಿಯೇ ಅತಿಮುಖ್ಯ ಮತ್ತು ಅದರಲ್ಲಿ ರಾಜಿ ಆಗುವ ಮಾತಿಲ್ಲ ಎಂದು ಹೇಳಿರುವುದು ಮತ್ತೊಂದು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಅದರಲ್ಲೂ, ಭಾರತದ ಜೊತೆ ಸಂಬಂಧ ಸುಧಾರಣೆ ವಿಚಾರದಲ್ಲಿ ನಮಗೆ ಬಾಂಗ್ಲಾದೇಶ & ಬಾಂಗ್ಲಾದೇಶದ ಜನರೇ ಮೊದಲು ಎಂದು ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ. ಆದರೆ ಇದೆಲ್ಲವನ್ನೂ ಮೀರಿ ತಾರಿಕ್ ರೆಹಮಾನ್ ಈಗ ಭಾರತದ ಜೊತೆಗೆ ಉತ್ತಮ ಸಂಬಂಧ ಕಾಯ್ದುಕೊಳ್ಳುವ ನಿರೀಕ್ಷೆ ಇದೆ. ಪ್ರಮಾಣ ವಚನ ಸ್ವೀಕಾರ ಸಮಾರಂಭ ಹಿನ್ನೆಲೆಯಲ್ಲಿ ಭಾರಿ ಭದ್ರತೆ ಕೈಗೊಳ್ಳಲಾಗಿದ್ದು, ಗಡಿಯಲ್ಲಿ ಭಾರತೀಯ ಸೇನೆ ಕೂಡ ಅಲರ್ಟ್ ಆಗಿದೆ.












Click it and Unblock the Notifications