ವಿಶ್ವದ ಮೊದಲ ಕೇಸ್: ಆಸ್ಟ್ರೇಲಿಯಾ ರೋಗಿಯ ಮೆದುಳಿನಲ್ಲಿ ಜೀವಂತ ಹುಳ ಪತ್ತೆ: ಸ್ಕ್ಯಾನ್ ಕಂಡು ವೈದ್ಯರು ಶಾಕ್!
ಆಸ್ಟ್ರೇಲಿಯದಲ್ಲಿ ವಿಚಿತ್ರ ಘಟನೆಯೊಂದು ವೈದ್ಯ ಲೋಕವನ್ನೇ ಬೆಚ್ಚಿ ಬೀಳಿಸಿದೆ. ರೋಗಿಯ ಮೆದುಳಿನಲ್ಲಿ 8 ಸೆಂಟಿಮೀಟರ್ ಅಳತೆಯ ಜೀವಂತ ಹುಳವೊಂದು ಹರಿದಾಡುತ್ತಿರುವುದು ಕಂಡುಬಂದಿದೆ.
ರೋಗಿಯು ಆಗ್ನೇಯ ನ್ಯೂ ಸೌತ್ ವೇಲ್ಸ್‌ನ 64 ವರ್ಷದ ಮಹಿಳೆ. ಮೂರು ವಾರಗಳ ಹೊಟ್ಟೆ ನೋವು ಮತ್ತು ಅತಿಸಾರದಿಂದ ಬಳಲುತ್ತಿದ್ದ ಮಹಿಳೆ 2021ರ ಜನವರಿ ಅಂತ್ಯದಲ್ಲಿ ತನ್ನ ಸ್ಥಳೀಯ ಆಸ್ಪತ್ರೆಗೆ ಮೊದಲ ಬಾರಿಗೆ ದಾಖಲಾಗಿದ್ದರು. ಈ ವೇಳೆ ಇವರಿಗೆ ನಿರಂತರ ಒಣ ಕೆಮ್ಮು, ಜ್ವರ ಮತ್ತು ರಾತ್ರಿ ಬೆವರುವಿಕೆ ಕೂಡ ಇತ್ತು.

2022ರ ಹೊತ್ತಿಗೆ ಆಕೆಯ ರೋಗಲಕ್ಷಣಗಳು ಮರೆವು ಮತ್ತು ಖಿನ್ನತೆಯನ್ನು ಹೆಚ್ಚಿಸಿದವು. ಈ ವೇಳೆ ಇವರನ್ನು ಕ್ಯಾನ್‌ಬೆರಾ ಆಸ್ಪತ್ರೆಯಲ್ಲಿ ಮೆದುಳಿನ MRI ಸ್ಕ್ಯಾನ್ ಗೆ ಸೂಚಿಸಲಾಯಿತು. ಆದರೆ MRI ಸ್ಕ್ಯಾನ್ ವೀಕ್ಷಿಸಿದ ವೈದ್ಯರು ಧಂಗಾಗಿ ಹೋಗಿದ್ದಾರೆ. ಸ್ಕ್ಯಾನ್ ಪ್ರತಿಯಲ್ಲಿ ಮೆದುಳಿನಲ್ಲಿ ಯಾವುದೋ ಒಂದು ಸಣ್ಣ ಹುಳು ಇರುವುದು ಪತ್ತೆಯಾಗಿದೆ. ಅದು ಜೀವಂತವಾಗಿರುವುದನ್ನು ಕಂಡ ವೈದ್ಯರು ಗಾಬರಿಗೊಂಡಿದ್ದಾರೆ.
ಈ ಬಗ್ಗೆ ಕ್ಯಾನ್‌ಬೆರಾ ಆಸ್ಪತ್ರೆಯ ಸಾಂಕ್ರಾಮಿಕ ರೋಗಗಳ ವೈದ್ಯ ಡಾ. ಸಂಜಯ ಸೇನಾನಾಯಕ್ ಮಾಹಿತಿ ನೀಡಿದ್ದಾರೆ. 'ನಾನು ಸ್ಕ್ಯಾನ್ನಿಂಗ್‌ನಲ್ಲಿ ಹುಳವನ್ನು ನೋಡುತ್ತೇನೆ ಎಂದು ಭಾವಿಸಿರಲಿಲ್ಲ. ಈ ರೀತಿಯ ಪ್ರಕರಣ ನನ್ನ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ಕಂಡುಬಂದಿದೆ. ಈ ನಿರೀಕ್ಷೆಯೇ ನನಗೆ ಇರಲಿಲ್ಲ' ಎಂದು ಅವರು ಹೇಳಿದರು.
ಈ ಹುಳು ಒಫಿಡಾಸ್ಕರಿಸ್ ರಾಬರ್ಟ್ಸಿ ನೆಮಟೋಡ್ ಜಾತಿಗೆ ಸೇರಿದ ಮೂರನೇ ಹಂತದ ಲಾರ್ವಾ ಎಂದು ಗುರುತಿಸಲ್ಪಟ್ಟಿದೆ. ಈ ಪ್ರಕರಣ ವೈದ್ಯಕೀಯ ಇತಿಹಾಸದಲ್ಲಿ ಒಂದು ವಿಶಿಷ್ಟ ಘಟನೆಯಾಗಿದೆ. ಈ ಘಟನೆಯನ್ನು ಎಮರ್ಜಿಂಗ್ ಇನ್ಫೆಕ್ಷಿಯಸ್ ಡಿಸೀಸ್ ಜರ್ನಲ್ ನಲ್ಲಿ ದಾಖಲಿಸಲಾಗಿದೆ. ಸಾಮಾನ್ಯವಾಗಿ ಈ ಹುಳು ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್‌ನ ಸ್ಥಳೀಯ ಕಾರ್ಪೆಟ್ ಹೆಬ್ಬಾವುಗಳ ಜಠರಗರುಳಿನ ವ್ಯವಸ್ಥೆಗಳಲ್ಲಿ ವಾಸಿಸುತ್ತದೆ.
"ಕ್ಯಾನ್‌ಬೆರಾ ಒಂದು ಸಣ್ಣ ಸ್ಥಳವಾಗಿದೆ. ಆದ್ದರಿಂದ ನಾವು ಇನ್ನೂ ಜೀವಂತವಾಗಿರುವ ಹುಳು ಬಗ್ಗೆ ತಿಳಿಯಲು ಬಹಳ ಅನುಭವಿ ಸಿಎಸ್‌ಐಆರ್‌ಒ ವಿಜ್ಞಾನಿಗಳ ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ" ಎಂದು ಡಾ.ಸೇನಾನಾಯಕೆ ಹೇಳಿದರು. 'ಅವರು ಅದನ್ನು ನೋಡಿ, ಇದು ಓಫಿಡಾಸ್ಕರಿಸ್ ರಾಬರ್ಟ್ಸಿ' ಎಂದು ಹೇಳಿದ್ದಾರೆ.
ಆಕೆಯ ಪ್ರಕರಣದಲ್ಲಿ ತೊಡಗಿರುವ ಸಂಶೋಧಕರು ಹೆಬ್ಬಾವು ತನ್ನ ಮಲದ ಮೂಲಕ ಹುಲ್ಲಿನ ಮೇಲೆ ಈ ಹುಳುವನ್ನು ಹೊರಹಾಕಿರಬಹುದು ಎಂಬ ಹೇಳಿದ್ದಾರೆ. ಆ ಹುಲ್ಲಿನ ಸಂಪರ್ಕಕ್ಕೆ ಬರುವ ಮೂಲಕ ರೋಗಿಯು ಆಹಾರ ಅಥವಾ ಅಡಿಗೆ ಪಾತ್ರೆಗಳಿಂದಾಗಿ ಅಥವಾ ಆ ಸ್ಥಳದಲ್ಲಿ ಬೆಳೆ ದಹಸಿರು ತರಕಾರಿ ಸೇವಿಸುವಾಗ ಅದನ್ನು ಸೇವಿಸಿರಬಹುದು ಎಂದು ಶಂಕಿಸಿದ್ದಾರೆ.












Click it and Unblock the Notifications