ಫೇಸ್ ಬುಕ್ ಸಿಇಒಗೆ ಪಾಕಿಸ್ತಾನಿ ಉಗ್ರನಿಂದ ಜೀವ ಬೆದರಿಕೆ
ವಾಷಿಂಗ್ಟನ್, ಜ. 10: ಫೇಸ್ ಬುಕ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾರ್ಕ್ ಜುಕರ್‌ಬರ್ಗ್‌ಗೆ ಪಾಕಿಸ್ತಾನಿ ಉಗ್ರನೋರ್ವ ಜೀವ ಬೆದರಿಕೆ ಹಾಕಿದ್ದ. ಹೀಗೆಂದು ಸ್ವತಃ ಜುಕರ್ ಬರ್ಗ್ ತಮ್ಮ ಫೇಸ್ ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ.
"ಫೇಸ್ ಬುಕ್ ಪುಟದಲ್ಲಿ ಕೆಲವರು ಇಸ್ಲಾಂ ವಿರೋಧಿ ಬರಹ ಹಾಕಿಕೊಂಡಿದ್ದರು. ಇಂತಹ ಪುಟಗಳನ್ನು ನಿಷೇಧಿಸಬೇಕೆಂದು ಕೆಲವು ವರ್ಷಗಳ ಹಿಂದೆ ಪಾಕಿಸ್ತಾನಿ ಉಗ್ರನೋರ್ವ ನನ್ನನ್ನು ಆಗ್ರಹಿಸಿದ್ದ. ಒಪ್ಪಿಕೊಳ್ಳದಿದ್ದಾಗ ನನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ" ಎಂದು ಬರೆದಿದ್ದಾರೆ. [ಉಗ್ರ ಸಹೋದರರ ಬೇಟೆಗೆ 80 ಸಾವಿರ ಪೊಲೀಸರು]
ಪ್ಯಾರಿಸ್ ಮೇಲೆ ನಡೆದ ಉಗ್ರರ ದಾಳಿಗೆ ಪ್ರತಿಕ್ರಿಯೆ ನೀಡಿದ ಮಾರ್ಕ್ ಜುಕರ್‌ಬರ್ಗ್ ಈ ವಿಷಯ ತಿಳಿಸಿದ್ದಾರೆ.

"ಹಲವು ವಿವಾದಾತ್ಮಕ ಸಂದೇಶಗಳೂ ಜಗತ್ತನ್ನು ಉತ್ತಮಗೊಳಿಸಬಲ್ಲವು ಮತ್ತು ಆಸಕ್ತಿದಾಯಕ ಪ್ರದೇಶವನ್ನಾಗಿ ಮಾಡಬಲ್ಲವು ಎಂಬ ಹಿನ್ನೆಲೆಯಲ್ಲಿ ಉಗ್ರನ ಬೇಡಿಕೆಯನ್ನು ತಿರಸ್ಕರಿಸಲಾಗಿತ್ತು" ಎಂದು ಹೇಳಿದ್ದಾರೆ. [ವ್ಯಂಗ್ಯಚಿತ್ರ ಅರ್ಥ ಮಾಡಿಕೊಳ್ಳದವರಿಗೆ ಧಿಕ್ಕಾರ]
"ನಾವು ಪ್ರತಿ ದೇಶದಲ್ಲಿಯೂ ಅಲ್ಲಿಯ ಕಾನೂನು ಪಾಲಿಸುತ್ತೇವೆ. ಆದರೆ, ಯಾವುದೇ ದೇಶ ಅಥವಾ ವ್ಯಕ್ತಿಗಳ ಗುಂಪು ಜಗತ್ತಿನಾದ್ಯಂತ ಇರುವ ಜನರಿಗೆ ನಿರ್ದೇಶನ ನೀಡುವುದಕ್ಕೆ ನಾವು ಅವಕಾಶ ನೀಡುವುದಿಲ್ಲ" ಎಂದು ಮಾರ್ಕ್ ಸ್ಪಷ್ಟಡಿಸಿದ್ದಾರೆ.
"ಕೆಲವು ವ್ಯಕ್ತಿಗಳ ಗುಂಪು ಜನರ ಧ್ವನಿ ಅಡಗಿಸಲು ಯತ್ನಿಸುವುದನ್ನು ನಾವು ತಿರಸ್ಕರಿಸಬೇಕು. ಫೇಸ್ ಬುಕ್ ಪುಟದಲ್ಲಿ ಹೀಗೆ ನಡೆಯಲು ಅವಕಾಶ ನೀಡುವುದಿಲ್ಲ" ಎಂದು ತಿಳಿಸಿದ್ದಾರೆ.
"ಸ್ವತಂತ್ರವಾಗಿ, ಧೈರ್ಯದಿಂದ ಮಾತನಾಡುವವರಿಗೆ ಸೇವೆ ಒದಗಿಸಲು ನಾನು ಬದ್ಧನಾಗಿದ್ದೇನೆ. ಫ್ರಾನ್ಸ್‌ನ ಜನತೆ, ಬಾಧಿತರು, ಅವರ ಕುಟುಂಬ ಹಾಗೂ ಭಾವನೆ ಹಂಚಿಕೊಳ್ಳಲು ಇಚ್ಛಿಸುವ ಜಗತ್ತಿನ ಎಲ್ಲ ವ್ಯಕ್ತಿಗಳ ಪರವಾಗಿ ನಾನಿದ್ದೇನೆ" ಎಂದು ಮಾರ್ಕ್ ಜುಕರ್‌ಬರ್ಗ್ ಹೇಳಿದ್ದಾರೆ. [ಫೇಸ್ ಬುಕ್, ಟ್ವಿಟ್ಟರ್ ಮೂಲಕ ಬಿಬಿಎಂಪಿಗೆ ದೂರು ನೀಡಿ]












Click it and Unblock the Notifications