India VS Canada: ಭಾರತ-ಕೆನಡಾ ಸಂಘರ್ಷದ ಬಗ್ಗೆ ಅಮೆರಿಕ ಹೇಳಿದ್ದೇನು?
ಭಾರತ VS ಕೆನಡಾ ನಡುವೆ ಖಲಿಸ್ತಾನಿಗಳ ವಿಚಾರಕ್ಕೆ ಕಾಡ್ಗಿಚ್ಚು ಹೊತ್ತಿಕೊಂಡಿದೆ. ಹೀಗೆ ಎರಡೂ ದೇಶಗಳ ನಡುವೆ ಸಂಘರ್ಷ ಜೋರಾಗಿರುವ ಸಮಯದಲ್ಲಿ ಅಮೆರಿಕ ರಿಯಾಕ್ಷನ್ ಕೊಟ್ಟಿದ್ದು, ಈ ಬೆಳವಣಿಗೆ ಬಗ್ಗೆ ಮಾತನಾಡಿದೆ. ಹಾಗಾದರೆ ದೊಡ್ಡಣ್ಣ ಅಮೆರಿಕ ಇದೀಗ ಹೇಳಿದ್ದು ಏನು? ಯಾರಿಗೆ ಬುದ್ಧಿ ಹೇಳಿದ್ದಾನೆ ದೊಡ್ಡಣ್ಣ? ಇದರಿಂದ ಭಾರತ & ಕೆನಡಾ ಕಿತ್ತಾಟ ನಿಂತು ಹೋಗುತ್ತಾ? ತಿಳಿಯೋಣ ಬನ್ನಿ.
ಇತ್ತೀಚೆಗೆ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್‌ನ ಹತ್ಯೆ ಮಾಡಲಾಗಿತ್ತು. ಇದರ ಹಿಂದೆ ಭಾರತದ ಕೈವಾಡ ಇದೆ ಎಂದು ಸಂಸತ್‌ನಲ್ಲಿ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ ಆರೋಪಿಸಿದ್ದಾರೆ. ಕೆನಡಾದ ಸಂಸತ್‌ನಲ್ಲಿ ವಿರೋಧ ಪಕ್ಷಗಳ ತುರ್ತು ಅಧಿವೇಶನ ಉದ್ದೇಶಿಸಿ ಮಾತನಾಡಿದ್ದ ಟ್ರುಡೋ, ಭಾರತ ಮೂಲದ ಏಜೆಂಟ್‌ಗಳು ಹರ್ದೀಪ್ ಸಿಂಗ್ ನಿಜ್ಜರ್‌ನ ಹತ್ಯೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಹೀಗಾಗಿ ನೇರ ಭಾರತ & ಕೆನಡಾದ ಸಂಬಂಧಕ್ಕೆ ಈ ಆರೋಪ ಕೊಳ್ಳಿ ಇಟ್ಟಿತ್ತು. ಈ ಸಂಬಂಧ ಅಮೆರಿಕ ಪ್ರತಿಕ್ರಿಯೆ ನೀಡಿದೆ.

ದೊಡ್ಡಣ್ಣ ಅಮೆರಿಕ ಹೇಳಿದ್ದು ಏನು?
ಭಾರತ ಮತ್ತು ಕೆನಡಾ ಮಧ್ಯೆ ಹರ್ದೀಪ್ ಸಿಂಗ್ ನಿಜ್ಜರ್ ವಿಚಾರಕ್ಕೆ ಕಿರಿಕ್ ಶುರುವಾಗಿರುವ ಬಗ್ಗೆ ಅಮೆರಿಕ ಕಳವಳ ವ್ಯಕ್ತಪಡಿಸಿದೆ. ಹಾಗೇ ಕೆನಡಾ ಪ್ರಧಾನಿ ಈಗ ಮಾಡಿದ ಅರೋಪ ಹಾಗೂ ಭಾರತದ ವಿರುದ್ಧ ಹೊರಹಾಕಿರುವ ಆಕ್ರೋಶಕ್ಕೆ ಅಮೆರಿಕ ರಿಯಾಕ್ಷನ್ ಕೊಟ್ಟಿದೆ. ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಅಡ್ರಿಯೆನ್ ವ್ಯಾಟ್ಸನ್ ಘಟನೆ ಬಗ್ಗೆ ಹೇಳಿಕೆ ನೀಡಿದ್ದು, ನಾವು ಕೆನಡಾ ಜೊತೆಗೆ ನಿರಂತರ ಸಂಪರ್ಕದಲ್ಲಿ ಇರುತ್ತೇವೆ. ಕೇಸ್‌ನ ಬಗ್ಗೆ ತನಿಖೆ ಮುಂದುವರಿಯಲಿದ್ದು ಈ ಪ್ರಕರಣದಲ್ಲಿ ನ್ಯಾಯ ನಿರ್ಣಾಯಕ ಎಂದಿದ್ದಾರೆ.
ಭಾರತದ ಮೋಸ್ಟ್ ವಾಟೆಂಡ್ ಉಗ್ರ & ಖಲಿಸ್ತಾನಿ ಗ್ಯಾಂಗ್ ನಾಯಕ ಹರ್ದೀಪ್ ಸಿಂಗ್ ನಿಜ್ಜರ್‌ನ ಈ ವರ್ಷದ ಜೂನ್‌ನಲ್ಲಿ ಅಂದರೆ ಜೂನ್ 18ರಂದು ಕೆನಡಾದ ಸರ್ರೆಯಲ್ಲಿ ಗುಂಡಿಟ್ಟು ಕೊಲೆ ಮಾಡಲಾಗಿತ್ತು. ಹಿಂಸಾಚಾರ & ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾದ ಆರೋಪವೂ ನಿಜ್ಜರ್ ವಿರುದ್ಧ ಇತ್ತು. ಆದರೆ ಈ ಕೊಲೆಯನ್ನ ಭಾರತದ ಏಜೆಂಟ್‌ಗಳು ಮಾಡಿದ್ದಾರೆ ಎನ್ನುತ್ತಿದೆ ಕೆನಡಾ. ಹೀಗಾಗಿ ಸೂಕ್ತ ಸಾಕ್ಷ್ಯ ಇಲ್ಲದೆ ಇಂತಹ ಆರೋಪಗಳು ಸರಿಯಲ್ಲ ಎಂದು ಇದೀಗ ಭಾರತ ಕೂಡ ಖಡಕ್ ಎಚ್ಚರಿಕೆ ಸಂದೇಶವನ್ನೇ ರವಾನಿಸಿದೆ. ಇಷ್ಟೆಲ್ಲದರ ಮಧ್ಯೆ ಅಮೆರಿಕ ಕೂಡ ಪ್ರತಿಕ್ರಿಯೆ ನೀಡಿ, ಸೂಕ್ತ ತನಿಖೆಗೆ ಒತ್ತಾಯಿಸಿದೆ.

ಖಲಿಸ್ತಾನಿಗಳ ಕಾಟ ವಿಪರೀತ ಆಯ್ತು
ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಪ್ರಾಬಲ್ಯ ಹೊಂದಿರುವ ಖಲಿಸ್ತಾನಿ ಗ್ಯಾಂಗ್ ಭಾರತದ ವಿರುದ್ಧ ಷಡ್ಯಂತ್ರ ಮಾಡಿದಂತೆ ಕಾಣುತ್ತಿದೆ. ಇದಕ್ಕೆ ಸಾಕ್ಷಿಯಾಗಿ ಭಾರತೀಯರ ಮೇಲೆ ಮತ್ತು ಭಾರತೀಯರ ಕಟ್ಟಡಗಳ ಮೇಲೆ ಪದೇ ಪದೆ ದಾಳಿಗಳು ನಡೆದಿವೆ. ಈಗ ನೇರ ಕೆನಡಾ & ಭಾರತ ನಡುವೆ ತಿಕ್ಕಾಟ ಶುರುವಾಗಿದೆ. ಅಮೆರಿಕ ಸೇರಿ ಕೆನಡಾ ಬಹುಭಾಗದಲ್ಲಿ ಖಲಿಸ್ತಾನಿ ಬೆಂಬಲಿಗ ಪಡೆ ವಾಸವಿದೆ. ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾದ ಹಲವು ಪ್ರಾಂತ್ಯದಲ್ಲೂ ಖಲಿಸ್ತಾನಿ ಬೆಂಬಲಿಗರು ಭಾರತದ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ ಎಂಬ ಆರೋಪವಿದೆ.
ಒಟ್ನಲ್ಲಿ ಸೂಕ್ತ ಆಧಾರ ಇಲ್ಲದೆ ಕೆನಡಾ ಪ್ರಧಾನಿ ಆರೋಪ ಮಾಡಿದ್ದಾರೆ ಎಂದು ಭಾರತ ಗರಂ ಆಗಿದೆ. ಇಂದು ಮೊದಲಿಗೆ ಕೆನಡಾ ಭಾರತದ ಹಿರಿಯ ರಾಜತಾಂತ್ರಿಕರನ್ನು ಹೊರ ಹೋಗಲು ತಿಳಿಸಿದ ನಂತರ, ಭಾರತ ಕೂಡ ಕೆನಡಾದ ಹಿರಿಯ ರಾಜತಾಂತ್ರಿಕರ ಉಚ್ಛಾಟನೆ ಮಾಡಿದೆ. ಈ ಮೂಲಕ ಉಗ್ರ ಪಟ್ಟ ಕಟ್ಟಿಕೊಂಡಿದ್ದ ವ್ಯಕ್ತಿಯ ವಿಚಾರಕ್ಕೆ ಕೆನಡಾ ಮತ್ತು ಭಾರತದ ನಡುವೆ ಕಿರಿಕ್ ಶುರುವಾಗಿದೆ. ಮುಂದೆ ಇದು ಎಲ್ಲಿ ಹೋಗಿ ಮುಟ್ಟುತ್ತೆ ಅಂತಾ ಕಾದು ನೋಡಬೇಕಿದೆ. ಆದರೆ ಈ ಬೆಳವಣಿಗೆ ಎರಡೂ ದೇಶಗಳ ಸಂಬಂಧ ಕೆಡಿಸದೇ ಇದ್ರೆ ಸಾಕು ಅಂತಿದ್ದಾರೆ ಎರಡೂ ದೇಶದ ಪ್ರಜೆಗಳು. ಏಕೆಂದರೆ ಎರಡೂ ದೇಶಗಳ ಸಂಬಂಧವು ಅತ್ಯುತ್ತಮವಾಗಿದೆ.












Click it and Unblock the Notifications