ಸುಡಾನ್ ಜಗಳದಲ್ಲಿ ಕೈದಿಗಳು ಜೈಲಿನಿಂದ ಎಸ್ಕೇಪ್!
ಖರ್ಟೋಮ್, ಸುಡಾನ್: ಇಬ್ಬರ ಜಗಳದಲ್ಲಿ 3ನೇ ವ್ಯಕ್ತಿಗೆ ಲಾಭ ಎಂಬ ಮಾತನ್ನು ಕೇಳಿದ್ದೀವಿ, ಆದರೆ ಇಲ್ಲಿ ಇಬ್ಬರ ಜಗಳವನ್ನ ಕೈದಿಗಳೇ ತಮ್ಮ ಲಾಭಕ್ಕೆ ಬಳಸಿಕೊಂಡಿದ್ದಾರೆ. ಒಂದ್ಕಡೆ ಹಿಂಸಾಚಾರದ ಬೆಂಕಿಯಲ್ಲಿ ಸುಡಾನ್ ನಿತ್ಯವೂ ನಲುಗುತ್ತಿದ್ದರೆ, ಇನ್ನೊಂದ್ಕಡೆ ಇದೇ ಸಮಯ ಬಳಸಿಕೊಂಡು ಸುಡಾನ್‌ನಲ್ಲಿ ನಟೋರಿಯಸ್ ಕೈದಿಗಳು ಜೈಲಿನಿಂದ ಎಸ್ಕೇಪ್ ಆಗಿದ್ದಾರೆ.
ಸಂಘರ್ಷದ ನೆಲವಾಗಿ, ಸುಡಾನ್‌ನಲ್ಲಿ ನಡೆಯುತ್ತಿರುವ ಸೇನಾಪಡೆಗಳ ನಡುವಿನ ಭೀಕರ ಕಾಳಗದಲ್ಲಿ ಯುದ್ಧ ಕೈದಿಗಳು ಎಸ್ಕೇಪ್ ಆಗಿದ್ದಾರೆ. ಯುದ್ಧ ಅಪರಾಧಿಯಾಗಿ ಜೈಲು ಸೇರಿದ್ದ ಅಹ್ಮದ್ ಹರೂನ್ ಮತ್ತು ಆತನ ನಟೋರಿಯಸ್ ಗ್ಯಾಂಗ್ ಕೋಬೆರ್ ಜೈಲಿನಿಂದ ಎಸ್ಕೇಪ್ ಆಗಿದೆ. ಈ ಗ್ಯಾಂಗ್ ಹಿಂಸಾಚಾರದಲ್ಲಿ ಎಕ್ಸ್‌ಪರ್ಟ್ ಎಂಬ ಆರೋಪವಿದ್ದು, ಈಗಾಗಲೇ ಆಂತರಿಕ ಹಿಂಸಾಚಾರದಲ್ಲಿ ಬೆಂದಿರುವ ಸುಡಾನ್‌ಗೆ ಮುಂದಿನ ದಿನಗಳಲ್ಲಿ ಭಾರಿ ಅಪಾಯ ಕಾದಿದೆ ಎನ್ನಲಾಗುತ್ತಿದೆ.

ಎಸ್ಕೇಪ್ ಆದವನು ನಟೋರಿಯಸ್!
ಅಂದಹಾಗೆ ಸುಡಾನ್ ನೆಲ ಸಂಘರ್ಷದ ತವರು ಎಂದು ಕರೆಯಬಹುದು. ಅದರಲ್ಲೂ ಸುಡಾನ್ ದೇಶದಲ್ಲಿ ನಡೆದಷ್ಟು ಹಿಂಸಾಚಾರ ಆಫ್ರಿಕಾದ ಬೇರೆ ಯಾವುದೇ ದೇಶದಲ್ಲೂ ನಡೆದಿಲ್ಲ ಎಂದು ಹೇಳುತ್ತದೆ ಇತಿಹಾಸ. ಹೀಗೆ 1958, 1969, 1985, 1989, 2019 ಮತ್ತು 2021ರಲ್ಲಿ ಸುಡಾನ್ ಭೀಕರ ದಂಗೆ ಹಾಗೂ ಹಿಂಸಾಚಾರ ಕಂಡಿದೆ. 1989ರಲ್ಲಿ ನಡೆದ ದಂಗೆ ಪರಿಣಾಮ ಒಮರ್ ಅಲ್-ಬಶೀರ್ ಅಧಿಕಾರ ಬಂದು 30 ವರ್ಷಕ್ಕೂ ಹೆಚ್ಚು ಕಾಲ ಸರ್ವಾಧಿಕಾರಿಯಾಗಿ ಸುಡಾನ್ ಆಳಿದ್ದ. ಈತನ ಆಪ್ತನಾಗಿದ್ದ ಅಹ್ಮದ್ ಹರೂನ್ ಈಗ ಜೈಲಿನಿಂದ ಎಸ್ಕೇಪ್ ಆಗಿದ್ಧಾನೆ.
ಅಹ್ಮದ್ ಹರೂನ್ ವಿರುದ್ಧ ಹಲವು ಗಂಭೀರ ಆರೋಪಗಳು ಇವೆ. 2019ರಲ್ಲಿ ಪದಚ್ಯುತಗೊಂಡ ಸರ್ವಾಧಿಕಾರಿ ಒಮರ್ ಅಲ್-ಬಶೀರ್ ಬಂಟನಂತೆ ಇದ್ದ ಅಹ್ಮದ್ ಹರೂನ್, ಯುದ್ಧ ಅಪರಾಧ ನಡೆಸಿದ್ದಕ್ಕಾಗಿ ಅಂತರರಾಷ್ಟ್ರೀಯ ಅಪರಾಧ ನ್ಯಾಯಾಲಯದಿಂದ ಸಮನ್ಸ್ ಪಡೆದಿದ್ದ. ಈಗ ಜೈಲಿನಿಂದ ಎಸ್ಕೇಪ್ ಆಗುವ ಮೂಲಕ ಆತಂಕ ಡಬಲ್ ಮಾಡಿದ್ದಾನೆ. ಈತ ಮತ್ತು ಈತನ ಸಹಚರರು ಹಿಂಸೆಗೆ ನಿಂತರೆ ಮಹಾ ಕ್ರೂರಿಗಳು ಎಂಬ ಆರೋಪ ಅಹ್ಮದ್ ಹರೂನ್ ಸಹಚರರ ವಿರುದ್ಧ ಇದೆ.

ಭಾರತೀಯರು ಸೇರಿ 6,400 ಜನ ಸ್ಥಳಾಂತರ
ಸುಡಾನ್ ಸೇನಾ ಸಂಘರ್ಷ ಎಷ್ಟು ಹುಚ್ಚೆದ್ದು ಹೋಗಿದೆ ಎಂದರೆ, ಅಲ್ಲಿರುವ ವಿದೇಶಿಯರನ್ನ ಅವರವರ ದೇಶಕ್ಕೆ ಹೋಗಲು ಬಿಡಬೇಕು ಎಂಬ ಕಾರಣಕ್ಕೆ 72 ಗಂಟೆಗಳ ಕಾಲ ಕದನ ವಿರಾಮ ಘೋಷಿಸಲಾಗಿದೆ. ಆದರೆ ಕದನ ವಿರಾಮ ಇದ್ದರು ಕೂಡ ದಾಳಿ ಮುಂದುವರಿದಿದೆ. ಇಷ್ಟೆಲ್ಲಾ ಸಂಕಷ್ಟದ ನಡುವೆ ಭಾರತೀಯರು ಸೇರಿ 6,400 ಜನರನ್ನು ಸುಡುಗಾಡಿನ ರೂಪ ತಳೆದಿರುವ ಸುಡಾನ್‌ನಿಂದ ರಕ್ಷಣೆ ಮಾಡಿ ಸ್ಥಳಾಂತರಿಸಲಾಗಿದೆ. ಇಲ್ಲಿನ ಬೆಳವಣಿಗೆಯನ್ನ ಅಂತಾರಾಷ್ಟ್ರೀಯ ಸಮುದಾಯ ಕೂಡ ಗಂಭೀರವಾಗಿ ಪರಿಗಣಿಸಿದೆ.
ಭಾರತೀಯರನ್ನ ಹೊರಗೆ ಹಾಕಿದ್ರಾ?
ಸುಡಾನ್ ನಾಗರಿಕರ ಮೇಲೆ ಕೇಳಿಬಂದಿರುವ ಮತ್ತೊಂದು ಆರೋಪ ಏನೆಂದರೆ ಭಾರತದಿಂದ ಹೊಟ್ಟೆಪಾಡಿಗೆ ಸುಡಾನ್ ದೇಶ ತಲುಪಿದ್ದ ಭಾರತೀಯರನ್ನ ಮನೆಯಿಂದ ಹೊರ ಹಾಕಲಾಗಿದೆ ಎನ್ನಲಾಗಿದೆ. ಹೌದು ಸುಡಾನ್ ದೇಶದಲ್ಲಿ ಬಾಡಿಗೆ ಇರುವ ಭಾರತೀಯರನ್ನ ಅಲ್ಲಿನ ಮಾಲೀಕರು ಮನೆಯಿಂದ ಹೊರಗೆ ಕಳುಹಿಸುತ್ತಿರುವ ಆರೋಪ ಕೇಳಿಬಂದಿದೆ. ತೀವ್ರ ಹಿಂಸಾಚಾರ ನಡೆಯುತ್ತಿರುವ ಹೊತ್ತಲ್ಲೇ ಸುಡಾನ್ ಮಾಲೀಕರು ಈ ರೀತಿ ಭಾರತೀಯರನ್ನ ಏಕಾಏಕಿ ಮನೆಯಿಂದ ಹೊರಹಾಕಿ, ಅವರನ್ನ ಅತಂತ್ರ ಮಾಡಿದ್ದಾರೆ ಎಂಬ ಆರೋಪ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಒಟ್ಟಾರೆ ಯಾರದ್ದೋ ತಪ್ಪಿಗೆ ಅಮಾಯಕರು ಹಿಂಸೆಯ ಕುಲುಮೆಯಲ್ಲಿ ನರಳುವಂತಾಗಿದೆ. ಈ ಹೊತ್ತಲ್ಲೇ ಭಾರತೀಯರ ರಕ್ಷಣೆ ಬಗ್ಗೆ ಕೇಂದ್ರ ಸರ್ಕಾರ ಮುತುವರ್ಜಿ ವಹಿಸಿ, ಅಗತ್ಯ ಕ್ರಮ ಕೈಗೊಂಡಿದೆ. ಈಗಾಗಲೇ ಬಹುತೇಕ ಭಾರತೀಯರು ಸುರಕ್ಷಿತ ಜಾಗ ತಲುಪಿದ್ದಾರೆ. ಮತ್ತೊಂದು ಕಡೆ ಕ್ಷಣಕ್ಷಣಕ್ಕೂ ಸುಡಾನ್ ನೆಲದಲ್ಲಿ ಹಿಂಸಾಚಾರಕ್ಕೆ ಬಲಿಯಾಗುತ್ತಿರುವ ಅಮಾಯಕರ ಸಂಖ್ಯೆ ಹೆಚ್ಚಾಗುತ್ತಿದ್ದು, ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ.












Click it and Unblock the Notifications