Nuclear Waste: ಮುಗೀತು ಮನುಷ್ಯರ ಕಥೆ, ಏನ್ ಗುರೂ ಜಪಾನ್ ವ್ಯಥೆ?
ಆ ಪುಣ್ಯಾತ್ಮ ಆಲ್ಬರ್ಟ್ ಐನ್ಸ್ಟೈನ್ ಮನುಷ್ಯರು ನೆಮ್ಮದಿಯಾಗಿ ಬದುಕಲಿ, ತಂತ್ರಜ್ಞಾನದ ಸಹಾಯದಿಂದ ಮನುಷ್ಯರ ಬದುಕು ಹಸನಾಗಲಿ ಅಂತಾ ಪರಮಾಣು ವಿಜ್ಞಾನವನ್ನು ಈ ಜಗತ್ತಿಗೆ ಕಲಿಸಿ ಹೋದರು. ಆದರೆ ಅದರಿಂದಲೇ ಅಣುಬಾಂಬ್ ಕಂಡುಹಿಡಿದ ಈ ವಿಕೃತ ಜೀವಿ ಮನುಷ್ಯ ಅದೇ ಪರಮಾಣು ವಿಜ್ಞಾನದಿಂದ ಭೂಮಿಯನ್ನ ನಾಶ ಮಾಡಲು ಸ್ಕೆಚ್ ಹಾಕಿದ್ದಾನೆ. ಅದರಲ್ಲೂ ಜಪಾನ್ ನಡೆ ಬಗ್ಗೆ ಜಗತ್ತಿನಾದ್ಯಂತ ಈಗ ಆಕ್ರೋಶ ಮೊಳಗಿದೆ.
ಜಗತ್ತು ಅಣುಗಳಿಂದ ರೂಪುಗೊಂಡಿದೆ, ಹಾಗೇ ಅಣುಗಳು ಪರಮಾಣು ಮೂಲಕ ರೂಪ ಪಡೆದಿವೆ. ಇದು ಒಂದನೇ ತರಗತಿ ಮಕ್ಕಳಿಗೆ ಹೇಳಿ ಕೊಡುವ ಪಾಠ. ಆದರೆ ಮನಷ್ಯರೆಲ್ಲ ಇದನ್ನ ಪಾಠವಾಗಿ ಮಾತ್ರ ಸ್ವೀಕಾರ ಮಾಡಿದಂತೆ ಕಾಣುತ್ತಿದೆ. ಇದೇ ಕಾರಣಕ್ಕೆ ಭೂಮಿಯ ಮೇಲೆ ಮನುಷ್ಯನ ದೌರ್ಜನ್ಯ ಮುಂದುವರಿದಿದೆ.

ಅದ್ರಲ್ಲೂ ಪರಮಾಣು ಬಳಕೆ ಮೂಲಕ ಭೂಮಿಯನ್ನೇ ನಾಶ ಮಾಡಲು ಸ್ಕೆಚ್ ನಡೆಯುತ್ತಿದೆ. ಇದೇ ಸಮಯದಲ್ಲಿ ಬೆಂಕಿಗೆ ತುಪ್ಪ ಸುರಿದಿರುವ ಜಪಾನ್, ತನ್ನಲ್ಲಿನ ಪರಮಾಣು ತ್ಯಾಜ್ಯವನ್ನ ಸಮುದ್ರಕ್ಕೆ ಬಿಡಲು ಸಜ್ಜಾಗಿದೆ.
ಮನುಷ್ಯರ ಭವಿಷ್ಯವೇ ಸರ್ವನಾಶ?
ಹೌದು, ಜಪಾನ್ ಫುಕೋಶಿಮಾ ಪರಮಾಣು ವಿದ್ಯುತ್ ಸ್ಥಾವರದ ಸಂಸ್ಕರಿಸಿದ ತ್ಯಾಜ್ಯ ನೀರನ್ನ ಫೆಸಿಫಿಕ್ ಮಹಾ ಸಾಗರಕ್ಕೆ ಬಿಡಲು ಮತ್ತೆ ಸಿದ್ಧತೆ ನಡೆಸಿದೆ. ಈ ಮೂಲಕ ಜಪಾನ್ ಸರ್ಕಾರ 2ನೇ ಹಂತದ ಕಾರ್ಯಾಚರಣೆಗೆ ಚಾಲನೆ ನೀಡಿದೆ.

ಆದ್ರೆ ಇದರಿಂದ ಸಮುದ್ರ ನೀರಿನಲ್ಲಿಯೂ ಪರಮಾಣು ತ್ಯಾಜ್ಯ ಸೇರಿ, ವಿಕಿರಣ ಸಮಸ್ಯೆ ಉಂಟಾಗುವ ಭೀತಿ ಎದುರಾಗಿದೆ. ಮುಂದಿನ 17 ದಿನದಲ್ಲಿ ಮತ್ತೆ 7,800 ಟನ್ ಅಣು ತ್ಯಾಜ್ಯದ ನೀರನ್ನ ಸಮುದ್ರಕ್ಕೆ ರಿಲೀಸ್ ಮಾಡೋದಕ್ಕೆ ಜಪಾನ್ ನಿರ್ಧರಿಸಿದೆ. ಇದೇ ಕ್ರಮದ ವಿರುದ್ಧ ಇದೀಗ ಇಡೀ ಜಗತ್ತು ಆಕ್ರೋಶಗೊಂಡಿದೆ.
ಅಂದಹಾಗೆ ಈಗಾಗಲೇ ಜಪಾನ್ 7,800 ಟನ್ ಅಣು ತ್ಯಾಜ್ಯದ ನೀರನ್ನು ಸಮುದ್ರಕ್ಕೆ ರಿಲೀಸ್ ಮಾಡಿತ್ತು. ಆಗಸ್ಟ್ 24 ರಿಂದ ಸೆಪ್ಟೆಂಬರ್ 11ರ ತನಕ 7,800 ಟನ್ ಅಣು ತ್ಯಾಜ್ಯದ ನೀರನ್ನ ಸಮುದ್ರಕ್ಕೆ ಬಿಟ್ಟಿತ್ತು ಜಪಾನ್. ಈ ಬಗ್ಗೆ ಜಗತ್ತಿನಾದ್ಯಂತ ಆಕ್ರೋಶದ ಕಹಳೆ ಮೊಳಗಿತ್ತು.
ಅಲ್ಲದೆ ಸ್ವತಃ ಜಪಾನ್ ಜನರು ಕೂಡ ತಮ್ಮ ಸರ್ಕಾರದ ನಿರ್ಧಾರದ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಿದ್ದರು. ಎಷ್ಟೇ ಆಕ್ರೋಶ ವ್ಯಕ್ತವಾದರೂ ಪ್ರಯೋಜನಕ್ಕೆ ಬಂದಂತೆಯೇ ಕಾಣುತ್ತಿಲ್ಲ. ಹೀಗಾಗಿ ಜಪಾನ್ ಮತ್ತೊಮ್ಮೆ 7,800 ಟನ್ ಅಣು ತ್ಯಾಜ್ಯದ ನೀರು ಸಮುದ್ರಕ್ಕೆ ರಿಲೀಸ್ ಮಾಡುತ್ತಿದೆ. ಸ್ಥಾವರದಲ್ಲಿ ಸಂಗ್ರಹವಾಗಿರುವ 1.34 ದಶಲಕ್ಷ ಟನ್ ಅಣು ತ್ಯಾಜ್ಯದ ನೀರನ್ನು ಮುಂದಿನ 30 ವರ್ಷಗಳ ಸಮಯದಲ್ಲಿ ಸಮುದ್ರಕ್ಕೆ ಬಿಡಲು ಪ್ಲ್ಯಾನ್ ಮಾಡಿದೆ.












Click it and Unblock the Notifications