ದ್ವೀಪವೊಂದರಲ್ಲಿ ಆಲಿಬಾಬ ಸಂಸ್ಥಾಪಕ ಜಾಕ್ ಮಾ ಪ್ರತ್ಯಕ್ಷ
ಬೀಜಿಂಗ್, ಫೆ 11: ಚೀನಾದ ಕಮ್ಯೂನಿಸ್ಟ್ ಸರಕಾರದ ಕೆಂಗಣ್ಣಿಗೆ ಗುರಿಯಾಗಿರುವ, ಆಲಿಬಾಬ ಗ್ರೂಪ್ ಆಫ್ ಕಂಪೆನಿಯ ಸಂಸ್ಥಾಪಕ ಜಾಕ್ ಮಾ, ದೇಶದ ದ್ವೀಪವೊಂದರಲ್ಲಿದ್ದಾರೆಂದು ವರದಿಯಾಗಿದೆ.
ಕಳೆದ ಐದು ತಿಂಗಳಿನಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಜಾಕ್ ಮಾ, ದಕ್ಷಿಣ ಚೀನಾ ಸಮುದ್ರದ ಹೈನಾನ್ ದ್ವೀಪವೊಂದರ ಐಷಾರಾಮಿ ರೆಸಾರ್ಟಿನಲ್ಲಿದ್ದಾರೆಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ.
ಹೈನಾನ್ ದ್ವೀಪದ ಪಂಚತಾರಾ ಸನ್ ವಾಲಿ ಗಾಲ್ಫ್ ರೆಸಾರ್ಟ್ ನಲ್ಲಿ ಜಾಕ್ ಮಾ ಗಾಲ್ಫ್ ಆಡುತ್ತಿರುವುದನ್ನು ಹೆಸರು ಹೇಳಲು ಇಚ್ಚಿಸದವರೊಬ್ಬರು ನೋಡಿದ್ದಾರೆ ಎಂದು ಬ್ಲೂಮ್ ಬರ್ಗ್ ವರದಿ ಮಾಡಿದೆ.

ಚೀನಾ ಸರಕಾರದ ವಾಣಿಜ್ಯ ನೀತಿಯನ್ನು ಖಂಡಿಸಿ ಜಾಕ್ ಮಾ ಹೇಳಿಕೆ ನೀಡಿದ ನಂತರ ಇವರು ನಾಪತ್ತೆಯಾಗಿದ್ದರು. ಹಲವು ಉದ್ಯಮಿಗಳಿಗೆ ಪ್ರೇರಣೆಯಾಗಿದ್ದ ಜಾಕ್ ಮಾ ಅವರ ನಾಪತ್ತೆ ವಿಚಾರ ವಿಶ್ವಮಟ್ಟದಲ್ಲಿ ಭಾರೀ ಸುದ್ದಿಯಾಗಿತ್ತು.
ತಮ್ಮ ಸರಕಾರದ ವಿರುದ್ದ ಧ್ವನಿ ಎತ್ತಿದ್ದಕ್ಕೆ ಚೀನಾ ಸರಕಾರವೇ ಜಾಕ್ ಮಾ ಮೇಲೆ ದ್ವೇಷ ಸಾಧಿಸುತ್ತಿದೆ ಎನ್ನುವ ಆರೋಪ ಕೇಳಿಬರುತ್ತಿತ್ತು. ಇದಾದ ನಂತರ ಕಳೆದ ಜನವರಿ ಇಪ್ಪತ್ತರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಶಿಕ್ಷಕರಿಗೆ ಶುಭಾಶಯ ಕೋರಿದ್ದರು.
ಚೀನಾ ಸರಕಾರ ಜಾಕ್ ಮಾ ವಿರುದ್ದ ದ್ವೇಷ ಸಾಧಿಸುತ್ತಿದೆ ಎನ್ನುವುದಕ್ಕೆ ಇನ್ನೊಂದು ಉದಾಹರಣೆಯೆಂದರೆ, ಚೀನಾದ ಸರ್ಕಾರಿ ಮಾಧ್ಯಮವು ಪ್ರಕಟಿಸಿರುವ ದೇಶದ ಪ್ರಮುಖ ಉದ್ಯಮಶೀಲರ ಪಟ್ಟಿಯಿಂದ ಜಾಕ್ ಮಾ ಅವರ ಹೆಸರನ್ನು ಕೈಬಿಟ್ಟಿರುವುದು.












Click it and Unblock the Notifications