ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಶತ್ರು ದಿಢೀರ್ ನಾಪತ್ತೆ?
ರಷ್ಯಾ ಈಗ ಸೂಪರ್ ಪವರ್ ಸ್ಥಾನಕ್ಕೆ ಪೈಪೋಟಿ ಆರಂಭಿಸಿದೆ, ಅದರಲ್ಲೂ ಉಕ್ರೇನ್ ವಿರುದ್ಧ ಯುದ್ಧ ಸಾರಿದ ಬಳಿಕ ಪ್ರತಿನಿತ್ಯ ರಷ್ಯಾ ಅಧ್ಯಕ್ಷ ಪುಟಿನ್ ಸುದ್ದಿಯಲ್ಲಿ ಇರುತ್ತಾರೆ. ಆದರೆ ಈಗ ದಿಢೀರ್ ಪುಟಿನ್ ಅವರ ಶತ್ರು, ಜೈಲಿಂದ ನಾಪತ್ತೆ ಆಗಿರುವುದು ಚರ್ಚೆಗೆ ಗ್ರಾಸವಾಗಿದೆ. ಹಾಗಾದರೆ ನಿಜಕ್ಕೂ ಆಗಿದ್ದು ಏನು? ವ್ಲಾದಿಮಿರ್ ಪುಟಿನ್ ಅವರ ಶತ್ರು ದಿಢೀರ್ ನಾಪತ್ತೆ ಆಗಿದ್ದು ಏಕೆ? ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.
ಯೆಸ್ ರಷ್ಯಾದ ವಿರೋಧ ಪಕ್ಷದ ನಾಯಕನಾದ ಅಲೆಕ್ಸಿ ನವಾಲ್ನಿಯನ್ನ ಮಾಸ್ಕೊ ಸಮೀಪದ ಜೈಲಿಂದ, ಇದೀಗ ಅಜ್ಞಾತ ಸ್ಥಳಕ್ಕೆ ಕರೆದು ಒಯ್ಯಲಾಗಿದೆ ಎಂದು ನವಾಲ್ನಿ ವಕ್ತಾರರು ಭಾರಿ ಗಂಭೀರ ಆರೋಪ ಮಾಡುತ್ತಿದ್ದಾರೆ. 'ಅಲೆಕ್ಸಿ ನವಾಲ್ನಿ ಅವರನ್ನು ಡಿಸೆಂಬರ್ 11 ರಂದು ವ್ಲಾದಿಮಿರ್ ಜೈಲಿನಿಂದ ಬೇರೆ ಕಡೆಗೆ ಕರೆದೊಯ್ಯಲಾಗಿದೆ. ಆದರೆ ಎಲ್ಲಿ ಕರೆದೊಯ್ದಿದ್ದಾರೆ ಅನ್ನೋ ಬಗ್ಗೆ ಇನ್ನೂ ಮಾಹಿತಿ ತಿಳಿದುಬಂದಿಲ್ಲ.' ಎಂದು ಆರೋಪ ಮಾಡಲಾಗಿದೆ, ಈ ಮೂಲಕ ರಷ್ಯಾದಲ್ಲಿ ಉಕ್ರೇನ್ ಯುದ್ಧದ ನಡುವೆ ಮತ್ತೊಂದು ಬೆಂಕಿ ಹೊತ್ತಿಕೊಂಡಿದೆ.

ಏನಿದು ಪುಟಿನ್ ಶತ್ರುವಿನ ಪ್ರಕರಣ?
ಹಾಗೇ ಇದರ ಜೊತೆಗೆ ಅಲೆಕ್ಸಿ ನವಾಲ್ನಿ ಪರ ವಕೀಲರು ಡಿ. 6 ರಿಂದ ಅಲೆಕ್ಸಿ ನವಾಲ್ನಿರನ್ನ ನೋಡಿಲ್ಲ ಎಂಬ ಆರೋಪ ಕೂಡ ಕೇಳಿಬಂದಿದೆ. ನವಾಲ್ನಿ ಅವರು ಅದೇ ಜೈಲಿನಲ್ಲಿ ಈಗ ಇದ್ದರೆ, ಅವರನ್ನು ಭೇಟಿ ಮಾಡೋದಕ್ಕೆ ಅವಕಾಶ ನೀಡಿಲ್ಲ ಯಾಕೆ? ಅಂತ ಇದೀಗ ಅಲೆಕ್ಸಿ ನವಾಲ್ನಿ ಬೆಂಬಲಿಗರು ಪ್ರಶ್ನೆ ಮಾಡಿದ್ದಾರೆ. 2021ರಲ್ಲಿ ಅಲೆಕ್ಸಿ ನವಾಲ್ನಿ ಅವರನ್ನ ಅರೆಸ್ಟ್ ಮಾಡಿ ಜೈಲಿಗೆ ಹಾಕಲಾಗಿದೆ. ಹಾಗಾದರೆ ಪುಟಿನ್ ಶತ್ರು ಜೈಲಿಗೆ ಹೋಗಿದ್ದು ಯಾಕೆ?
ಈ ಕಾರಣಕ್ಕೆ ಜೈಲು ಸೇರಿದ್ದರು
ಭಯೋತ್ಪಾದಕ ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ, ಅಲೆಕ್ಸಿ ನವಾಲ್ನಿ ಅವರನ್ನ ಅರೆಸ್ಟ್ ಮಾಡಿ ಕಂಬಿ ಹಿಂದೆ ತಳ್ಳಿದೆ ಪುಟಿನ್ ಆಡಳಿತ. ಈ ನಡುವೆ ನಿಷೇಧಿತ ರಾಜಕೀಯ ಸಂಸ್ಥೆಗೆ ನೀಡಿದ್ದ ಒಟ್ಟು 4.7 ದಶ ಲಕ್ಷ ಡಾಲರ್ ಹಣ ದುರುಪಯೋಗ ಆರೋಪವನ್ನ ಕೂಡ ನವಾಲ್ನಿ ವಿರುದ್ಧ ಹೊರಿಸಲಾಗಿದೆ. ಈ ಮೂಲಕ ಅಲೆಕ್ಸಿ ನವಾಲ್ನಿ ಬೆಂಬಲಿಗರು, ತಮ್ಮ ನಾಯಕನ ಬಿಡುಗಡೆಗೆ ಆಗ್ರಹಿಸಿ ಹೋರಾಟ ಕೂಡ ನಡೆಸಿದ್ದರು. ಆದರೆ ಅದ್ಯಾವುದೂ ಕೈಗೂಡಿಲ್ಲ.

ಪುಟಿನ್ ಶತ್ರು ಆಗಿದ್ದೇಕೆ ನವಾಲ್ನಿ?
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿ, ಹೋರಾಟ ನಡೆಸುತ್ತಾ ಬಂದಿದ್ದರು ಅಲೆಕ್ಸಿ ನವಾಲ್ನಿ. ಆದರೆ ಹೀಗಿದ್ದಾಗಲೇ 2020ರಲ್ಲಿ ಭೀಕರ ಘಟನೆ ನಡೆದು ಹೋಗಿತ್ತು. ಅಲೆಕ್ಸಿ ನವಾಲ್ನಿಗೆ ವಿಷ ಉಣಿಸಿ ಆಸ್ಪತ್ರೆಗೆ ದಾಖಲಿಸಿದ ಆರೋಪಗಳು ಕೇಳಿಬಂದಿದ್ದವು. ಇದಾದ ನಂತರ ಅಲೆಕ್ಸಿ ನವಾಲ್ನಿ ಜರ್ಮನಿಗೆ ತೆರಳಿ ಚಿಕಿತ್ಸೆ ಪಡೆದಿದ್ರು. ಆದರೆ ಮರಳಿ ರಷ್ಯಾಗೆ ಬಂದ ನಂತರ ಅಲೆಕ್ಸಿ ನವಾಲ್ನಿ ಬಂಧನವಾಗಿತ್ತು. ಹಾಗೇ ಅಲೆಕ್ಸಿ ನವಾಲ್ನಿಗೆ ಜೈಲಿನಲ್ಲಿರುವಾಗ ಮತ್ತೊಮ್ಮೆ ವಿಷವನ್ನ ನೀಡಿ ಕೊಲೆ ಮಾಡೋದಕ್ಕೆ ಪ್ರಯತ್ನ ನಡೆದಿತ್ತು ಎಂದು ಆರೋಪವನ್ನ ಕೂಡ ಮಾಡಲಾಗಿತ್ತು.
ಚುನಾವಣೆ ಸಮಯದಲ್ಲೇ ಆಘಾತ!
ಒಟ್ನಲ್ಲಿ ರಷ್ಯಾದಲ್ಲಿ ಇನ್ನೇನು ಚುನಾವಣೆಗಳು ಹತ್ತಿರ ಆಗುತ್ತಿರುವ ಸಮಯದಲ್ಲೇ ಗಂಭೀರ ಆರೋಪ ಒಂದು ಕೇಳಿಬಂದಿದೆ. ಅದರಲ್ಲೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಬೇಕು ಅಂತಲೇ ತಮ್ಮ ಶತ್ರುವನ್ನ ಅಜ್ಞಾತ ಸ್ಥಳಕ್ಕೆ ಕಳುಹಿಸಿದ್ದಾರೆ ಅನ್ನೋ ಆರೋಪವನ್ನ ಮಾಡಲಾಗಿದೆ. ಹೀಗಿದ್ದಾಗಲೇ ಅಲೆಕ್ಸಿ ನವಾಲ್ನಿ ಬೆಂಬಲಿಗರು ಭಾರಿ ಪ್ರತಿಭಟನೆ ಆರಂಭಿಸಿ ಹೋರಾಟ ನಡೆಸುವ ಮುನ್ಸೂಚನೆ ನೀಡಿದ್ದಾರೆ. ಆದ್ರೆ ಪುಟಿನ್ ಆಡಳಿತದಲ್ಲಿ ಇದೆಲ್ಲವೂ ನಡೆಯುತ್ತಾ? ಅನ್ನೋದೆ ಈಗಿನ ಟ್ರಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಇದೆಲ್ಲಾ ಏನೇ ಇರಲಿ, ಉಕ್ರೇನ್ & ರಷ್ಯಾ ಯುದ್ಧದ ನಡುವೆ ನವಾಲ್ನಿ ವಿಚಾರ ಮುನ್ನೆಲೆಗೆ ಬಂದಿದ್ದು ವಿಶೇಷ.












Click it and Unblock the Notifications