ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ರಷ್ಯಾ ವಿರುದ್ಧ ಮೊದಲ ಬಾರಿಗೆ ಭಾರತದ ಮತ!
ನ್ಯೂಯಾರ್ಕ್, ಆಗಸ್ಟ್ 25: ಉಕ್ರೇನ್ ನೆಲದ ಮೇಲೆ ರಷ್ಯಾ ಯುದ್ಧ ಸಾರಿದ ಆ ದಿನದಿಂದ ಈ ದಿನದವರೆಗೂ ಹಲವು ಬೆಳವಣಿಗೆಗಳು ನಡೆದಿವೆ. ಇದರ ಮಧ್ಯ ಮೊದಲ ಬಾರಿಗೆ ರಷ್ಯಾ ವಿರುದ್ಧ ಭಾರತವು ಮತ ಚಲಾವಣೆ ಮಾಡಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು (UNSC) ವಾಸ್ತವಿಕವಾಗಿ ಉದ್ದೇಶಿಸಿ ಮಾತನಾಡಲು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಗೆ ಅವಕಾಶ ನೀಡುವ ಪ್ರಸ್ತಾಪಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಲಾಯಿತು. ಈ ವೇಳೆ ಅವಕಾಶ ನೀಡಬೇಕು ಎಂದು ಒಟ್ಟು 13 ರಾಷ್ಟ್ರಗಳು ಒತ್ತಾಯಿಸಿವೆ.
ಉಕ್ರೇನ್ ಅಧ್ಯಕ್ಷರ ಮಾತಿಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದ 13 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವೂ ಸೇರಿದ್ದು ವಿಶೇಷವಾಗಿದೆ. ಆ ಮೂಲಕ ಮೊದಲ ಬಾರಿಗೆ ರಷ್ಯಾದ ವಿರುದ್ಧ ಭಾರತವು ವೋಟ್ ಮಾಡಿದಂತೆ ಆಗಿದೆ. ವಿಶ್ವಸಂಸ್ಥೆಯಲ್ಲಿ "ಕಾರ್ಯವಿಧಾನದ ಮತದಾನ"ದ ಸಂದರ್ಭದಲ್ಲಿ ಭಾರತವು ಮೊದಲ ಬಾರಿಗೆ ರಷ್ಯಾ ವಿರುದ್ಧ ಮತ ಚಲಾಯಿಸಿತು.

ಮತದಾನದಿಂದ ದೂರ ಉಳಿದ ಚೀನಾ
ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯು ಪ್ರಾರಂಭವಾದಾಗ, ವಿಶ್ವಸಂಸ್ಥೆಯ ರಷ್ಯಾದ ರಾಯಭಾರಿ ವಾಸಿಲಿ ಎ ನೆಬೆಂಜಿಯಾ ವಿಡಿಯೊ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಉಕ್ರೇನಿಯನ್ ಅಧ್ಯಕ್ಷರ ಭಾಗವಹಿಸುವಿಕೆಯ ಬಗ್ಗೆ ಕಾರ್ಯವಿಧಾನದ ಮತವನ್ನು ಕೋರಿದರು. ಈ ವೇಳೆ ರಷ್ಯಾ ವಿರುದ್ಧವಾಗಿ ಮತ ಚಲಾಯಿಸಿದರೆ ಚೀನಾ ಮತದಾನದಿಂದ ದೂರ ಉಳಿದಿತ್ತು. ಇದರ ಪರಿಣಾಮವಾಗಿ ಉಕ್ರೇನ್ ಪರವಾಗಿ 13 ಮತಗಳು ಚಲಾವಣೆಯಾದರೆ, ವಿರುದ್ಧವಾಗಿ ಒಂದು ಮತ ಚಲಾವಣೆಯಾಗಿತ್ತು. ಒಂದು ರಾಷ್ಟ್ರ ಗೈರು ಹಾಜರಾಗಿತ್ತು ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅಧ್ಯಕ್ಷ ಜಾಂಗ್ ಜುನ್ ಹೇಳಿದರು.

ಉಕ್ರೇನ್ ಅಧ್ಯಕ್ಷನ ಭಾಗವಹಿಸುವಿಕೆಗೆ ವಿರೋಧ
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯ ವರ್ಚುವಲ್ ಭಾಗವಹಿಸುವಿಕೆಯನ್ನು ರಷ್ಯಾ ವಿರೋಧಿಸಿದೆ. ಆದರೆ ಯುಎನ್‌ಎಸ್‌ಸಿ ಸಭೆಯನ್ನು ವೈಯಕ್ತಿಕವಾಗಿ ಉದ್ದೇಶಿಸಿ ಮಾತನಾಡುವುದನ್ನು ಅದು ವಿರೋಧಿಸುವುದಿಲ್ಲ ಎಂದು ತಿಳಿಸಿದೆ. ಉಕ್ರೇನ್ ಮಾಡಿರುವ ವಿಶೇಷ ವಿನಂತಿಯ ಹಿನ್ನೆಲೆ ಭಾರತದಿಂದ 12ನೇ ಬಾರಿಗೆ ಮಾನವೀಯ ದೃಷ್ಟಿಯಿಂದ 26 ಬಗೆಯ ಔಷಧಿಗಳನ್ನು ಒಳಗೊಂಡಿರುವ ನೆರವನ್ನು ಒದಗಿಸಲಾಗುತ್ತಿದೆ ಎಂದು ಭಾರತವು ಘೋಷಿಸಿತ್ತು.

ಜಗತ್ತಿಗೆ ಔಷಧಿಯನ್ನು ನೆರವಿನ ರೂಪದಲ್ಲಿ ನೀಡಿದ ಭಾರತ
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅನ್ನು ಉದ್ದೇಶಿಸಿ ಮಾತನಾಡಿದ ದೇಶದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್, ಮಾನವೀಯ ನೆರವು 'ಹೆಮೋಸ್ಟಾಟಿಕ್ ಬ್ಯಾಂಡೇಜ್'ಗಳನ್ನು ಒಳಗೊಂಡಿದೆ. ಇದು ಮಕ್ಕಳು ಮತ್ತು ವಯಸ್ಕರಲ್ಲಿ ಆಳವಾದ ಗಾಯಗಳ ರಕ್ತಸ್ರಾವವನ್ನು ತಡೆಯಲು ಉದ್ದೇಶಿಸಲಾಗಿದೆ. ಉಕ್ರೇನ್‌ನಲ್ಲಿ ನಡೆಯುತ್ತಿರುವ ಸಂಘರ್ಷದ ಆರಂಭದಿಂದ 6 ತಿಂಗಳುಗಳನ್ನು ಗುರುತಿಸಲು ಸದಸ್ಯರು ಭೇಟಿಯಾಗುತ್ತಿದ್ದಂತೆ ಉಕ್ರೇನಿಯನ್ ಕಡೆಯಿಂದ ನಿರ್ದಿಷ್ಟ ವಿನಂತಿ ಸಲ್ಲಿಸಲಾಗಿತ್ತು ಎಂದು ತಿಳಿಸಿದರು.
ಉಕ್ರೇನಿಯನ್ ಅಧಿಕಾರಿಗಳು ದೇಶದಲ್ಲಿ ಉಂಟಾಗುತ್ತಿರುವ ಬಿಕ್ಕಟ್ಟನ್ನು ನಿಭಾಯಿಸಲು ಭಾರತ ಸರ್ಕಾರದಿಂದ ಸಹಾಯವನ್ನು ಕೋರಿದ ಕಾರಣಕ್ಕೆ ಒದಗಿಸಲಾಗುತ್ತಿದೆ. ನಾವು ಲಸಿಕೆಗಳ ವಿಷಯದಲ್ಲಿ ಜಗತ್ತನ್ನು ತಲುಪಿಸಿದ್ದೇವೆ. ನಾವು ಇದನ್ನು ಔಷಧಿಗಳಿಗಾಗಿ ಮೊದಲೇ ಮಾಡಿದ್ದೇವೆ ಎಂದು ಹೇಳಿದರು.

ಜಾಗತಿಕ ಸಮಸ್ಯೆಗಳಿಗೆ ಹೆಗಲು ನೀಡುವುದೇ ಭಾರತದ ಗುಣ
ಆಹಾರ, ಆರೋಗ್ಯ ಮತ್ತು ಇಂಧನ ಭದ್ರತೆಯ ಅಂಶಗಳ ಮೇಲೆ ಜಾಗತಿಕ ದಕ್ಷಿಣ ನಿರ್ಬಂಧಿತವಾದಾಗಲೆಲ್ಲಾ ಭಾರತವು ಒಂದು ಹೆಜ್ಜೆ ಮುಂದೆ ಇಡುತ್ತದೆ ಎಂಬುದನ್ನು ಈ ಮಂಡಳಿಗೆ ಭರವಸೆ ನೀಡಲು ಬಯಸುತ್ತೇನೆ," ಎಂದು ಕಾಂಬೋಜ್ ಹೇಳಿದರು. ಭಾರತದ ವಿಧಾನವೇ ಮಾತುಕತೆ ಮತ್ತು ರಾಜತಾಂತ್ರಿಕತೆಯನ್ನು ಉತ್ತೇಜಿಸುವುದು ಆಗಿದೆ. ರಷ್ಯಾ ಮತ್ತು ಉಕ್ರೇನ್ ನಡುವಿನ ನಡೆಯುತ್ತಿರುವ ಯುದ್ಧದಿಂದ ಸೃಷ್ಟಿ ಆಗುತ್ತಿರುವ ಆರ್ಥಿಕ ಸವಾಲುಗಳನ್ನು ತಗ್ಗಿಸಲು ಮತ್ತು ಸಂಘರ್ಷವನ್ನು ಕೊನೆಗೊಳಿಸುವ ಗುರಿಯನ್ನು ಹೊಂದಿದೆ ಎಂದು ಅವರು ಹೇಳಿದರು.












Click it and Unblock the Notifications