ಗಡ್ಡ ಬಿಟ್ಟವರಿಗಷ್ಟೇ Govrnment Job; ಇದು ತಾಲಿಬಾನ್ ಸರ್ಕಾರದ ರೂಲ್ಸ್!
ಕಾಬೂಲ್, ಮಾರ್ಚ್ 28: ಇಡೀ ಜಗತ್ತಿನಲ್ಲೇ ತನ್ನ ವಿಚಿತ್ರ ಹಾಗೂ ವಿಭಿನ್ನ ಕಾನೂನು ಕಟ್ಟಳೆಗಳಿಂದ ಸುದ್ದಿಯಾಗಿರುವ ತಾಲಿಬಾನ್ ಸರ್ಕಾರ ಮತ್ತೊಮ್ಮೆ ಅಫ್ಘಾನಿಸ್ತಾನದಲ್ಲಿ ಅಂಥದ್ದೇ ನಿಯಮವನ್ನು ಜಾರಿಗೊಳಿಸಲು ಮುಂದಾಗಿದೆ.
ಅಫ್ಘಾನಿಸ್ತಾನದ ಎಲ್ಲಾ ಸರ್ಕಾರಿ ಕಚೇರಿಗಳನ್ನು ಸುತ್ತು ಹಾಕಿದ ತಾಲಿಬಾನ್ ಆಡಳಿತದ ಸಾರ್ವಜನಿಕ ನೈತಿಕತೆಯ ಸಚಿವಾಲಯದ ಅಧಿಕಾರಿಗಳು ನೌಕರರು ಗಡ್ಡ ಬೆಳೆಸಿದ್ದಾರೆಯೇ ಇಲ್ಲವೋ ಹಾಗೂ ಸಮವಸ್ತ್ರವನ್ನು ಪಾಲನೆ ಮಾಡುತ್ತಿದ್ದಾರೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಿದರು ಎಂದು ರಾಯಿಟರ್ಸ್ ವರದಿ ಮಾಡಿದೆ.
ಸದ್ಗುಣ ಪ್ರಚಾರ ಮತ್ತು ಅನೀತಿ ನಿಯಂತ್ರಣ ಸಚಿವಾಲಯದ ಪ್ರತಿನಿಧಿಗಳು ಎಲ್ಲಾ ಸರ್ಕಾರಿ ನೌಕರರು ಗಡ್ಡ ಬೋಳಿಸಿಕೊಳ್ಳದಂತೆ ಸರ್ಕಾರಿ ಕಚೇರಿ ಅಧಿಕಾರಿಗಳಿಗೆ ಕಟ್ಟಪ್ಪಣೆ ಹೊರಡಿಸಿದೆ ಎಂದು ತಿಳಿದು ಬಂದಿದೆ. ಇದಷ್ಟೇ ಅಲ್ಲದೇ ಸರ್ಕಾರಿ ನೌಕರರು ಇಂಥದ್ದೇ ಬಟ್ಟೆಯನ್ನು ಸಮವಸ್ತ್ರವಾಗಿ ಧರಿಸಬೇಕೆಂದು ಸಚಿವಾಲಯವು ಸೂಚನೆ ನೀಡಿದೆ ಎಂದು ವರದಿಯಾಗಿದೆ.

ಸರ್ಕಾರಿ ನೌಕರರ ಸಮವಸ್ತ್ರ ಹೇಗಿರಬೇಕು?:
ಅಫ್ಘಾನಿಸ್ತಾನದ ಸರ್ಕಾರಿ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುವ ಉದ್ಯೋಗಿಗಳು ತಾಲಿಬಾನ್ ಸರ್ಕಾರದ ಪ್ರತಿನಿಧಿಗಳು ಸೂಚಿಸುವಂತಹ ಸಮವಸ್ತ್ರವನ್ನು ಕಡ್ಡಾಯವಾಗಿ ಹಾಕಿಕೊಳ್ಳಬೇಕು. ಇದರ ಜೊತೆಗೆ ಉದ್ದವಾದ ಗಡ್ಡವನ್ನು ಬೆಳೆಸುವುದು ಕಡ್ಡಾಯವಾಗಿರುತ್ತದೆ. ಇಷ್ಟಲ್ಲದೇ, ಉದ್ದವಾದ ಹಾಗೂ ಸಡಿಲವಾದ ಟಾಪ್ ಮತ್ತು ಪ್ಯಾಂಟ್, ಟೋಪಿ ಅಥವಾ ಪೇಟಾವನ್ನು ಒಳಗೊಂಡಿರುವ ಸ್ಥಳೀಯ ಉಡುಪುಗಳನ್ನು ಧರಿಸಲು ಸೂಚಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಿಯಮ ಪಾಲಿಸದಿದ್ದರೆ ಸರ್ಕಾರಿ ನೌಕರಿಯೇ ಇಲ್ಲ:
ಸರ್ಕಾರಿ ನೌಕರಿಯಲ್ಲಿಯೇ ಉಳಿದುಕೊಳ್ಳಬೇಕಾದರೆ, ಇನ್ನು ಮುಂದೆ ನಿಯಮಗಳನ್ನು ಪಾಲನೆ ಮಾಡುವುದು ಕಡ್ಡಾಯವಾಗಿರುತ್ತದೆ. ಉದ್ದನೆಯ ಗಡ್ಡ ಹಾಗೂ ಸಮವಸ್ತ್ರವನ್ನು ಹೊಂದಿಲ್ಲದ ಸರ್ಕಾರಿ ನೌಕರರಿಗೆ ಕಚೇರಿಗಳಲ್ಲಿ ಪ್ರವೇಶ ಇರುವುದಿಲ್ಲ. ಅಲ್ಲದೇ ಅವರು ಡ್ರೆಸ್ ಕೋಡ್‌ಗಳನ್ನು ಪಾಲನೆ ಮಾಡದಿದ್ದರೆ, ಸರ್ಕಾರಿ ನೌಕರಿಯಿಂದಲೇ ವಜಾಗೊಳಿಸಲಾಗುವುದು ಎಂದು ತಿಳಿಸಲಾಗಿದೆ.












Click it and Unblock the Notifications