ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ: ಎಂಟು ಮಂದಿ ಸಜೀವ ದಹನ
ಷಿಕಾಗೋ, ಆಗಸ್ಟ್ 27: ಅಮೆರಿಕದ ಷಿಕಾಗೋದಲ್ಲಿನ ಮೂರು ಅಂತಸ್ತಿನ ಅಪಾರ್ಟ್‌ಮೆಂಟ್ ಒಂದರಲ್ಲಿ ಭಾನುವಾರ ನಸುಕಿನಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಆರು ಮಕ್ಕಳೂ ಸೇರಿದಂತೆ ಎಂಟು ಮಂದಿ ಬಲಿಯಾಗಿದ್ದಾರೆ.
ಇನ್ನು ಇಬ್ಬರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಬೆಂಕಿ ನಂದಿಸುವ ಸಾಹಸದಲ್ಲಿ ಅಗ್ನಿಶಾಮಕ ಸಿಬ್ಬಂದಿಯೊಬ್ಬರಿಗೂ ಗಾಯವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಷಿಕಾಗೋ ಅಗ್ನಿಶಾಮಕದ ದಳದ ವಕ್ತಾರ ಲ್ಯಾರಿ ಮೆರಿಟ್ ತಿಳಿಸಿದ್ದಾರೆ.
ಮೃತಪಟ್ಟ ಮಕ್ಕಳಲ್ಲಿ ಒಂದು ನವಜಾತ ಶಿಶುವೂ ಸೇರಿದೆ. ಮೃತರ ವಿವರಗಳನ್ನು ಹಾಗೂ ಘಟನೆಗೆ ಕಾರಣ ಏನೆಂಬುದನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ.

ಇಷ್ಟೊಂದು ಮಂದಿ ಬೆಂಕಿಗೆ ಆಹುತಿಯಾದ ಈ ರೀತಿಯ ದುರ್ಘಟನೆ ಇಲ್ಲಿ ಎಷ್ಟೋ ವರ್ಷಗಳಿಂದ ಸಂಭವಿಸಿರಲಿಲ್ಲ ಎಂದು ಅಗ್ನಿಶಾಮಕ ವಿಭಾಗದ ಆಯುಕ್ತ ಜೋಸ್ ಸ್ಯಾಂಟಿಯಾಗೊ ತಿಳಿಸಿದ್ದಾರೆ.
ರಾತ್ರಿ ಪಾಳಿಯ ಕೆಲಸ ಮುಗಿಸಿ ಹಿಂದಿರುಗಿದ್ದ ನೆರೆಮನೆಯ ಮಹಿಳೆ ಸುಡುತ್ತಿರುವ ವಾಸನೆ ಗ್ರಹಿಸಿ ಅಪಾರ್ಟ್‌ಮೆಂಟ್‌ನ ಮನೆಗಳ ಬಾಗಿಲು ಬಡಿದು ಎಚ್ಚರಿಸಿದ್ದಾರೆ. ಆದರೆ, ತೀವ್ರವಾಗಿ ವ್ಯಾಪಿಸಿದ ಬೆಂಕಿ ಒಂದೇ ಕುಟುಂಬದ ಎಂಟು ಮಂದಿಯನ್ನು ಬಲಿ ತೆಗೆದುಕೊಂಡಿದೆ.











Click it and Unblock the Notifications