ಆಸ್ಟ್ರೇಲಿಯಾ; ಐದು ದಿನದಲ್ಲಿ 5 ಸಾವಿರ ಒಂಟೆಗಳ ಹತ್ಯೆ
ಸಿಡ್ನಿ, ಜನವರಿ 14 : ಒಂದು ಕಡೆ ಕಾಳ್ಗಿಚ್ಚು, ಮತ್ತೊಂದು ಕಡೆ ಬರ, ಇನ್ನೊಂದು ಕಡೆ ಒಂಟೆಗಳ ಮಾರಣ ಹೋಮ. ಇದು ಆಸ್ಟ್ರೇಲಿಯಾದ ಸದ್ಯದ ಪರಿಸ್ಥಿತಿ. ಸರ್ಕಾರದ ಆದೇಶದಂತೆ ಐದು ದಿನಗಳಲ್ಲಿ 5 ಸಾವಿರ ಒಂಟೆಗಳನ್ನು ಹತ್ಯೆ ಮಾಡಲಾಗಿದೆ.
ಹೌದು, ಆಸ್ಟ್ರೇಲಿಯಾ ಸರ್ಕಾರ 10 ಸಾವಿರ ಒಂಟೆಗಳನ್ನು ಕೊಲ್ಲುವುದಕ್ಕೆ ಆದೇಶ ನೀಡಿತ್ತು. ಇದಕ್ಕಾಗಿ ಶಾರ್ಪ್ ಶೂಟರ್‌ಗಳನ್ನು ನಿಯೋಜನೆ ಮಾಡಲಾಗಿತ್ತು. ಹೆಲಿಕಾಪ್ಟರ್ ಮೂಲಕ 5 ದಿನದಲ್ಲಿ ಐದು ಸಾವಿರ ಒಂಟೆಗಳನ್ನು ಕೊಂದು ಹಾಕಲಾಗಿದೆ.
ಒಂಟೆಗಳು ಅಧಿಕ ನೀರು ಕುಡಿಯುತ್ತವೆ. ದಕ್ಷಿಣ ಆಸ್ಟ್ರೇಲಿಯಾದ ಬುಡಕಟ್ಟು ಜನರು ಒಂಟೆಗಳಿಂದ ನೀರಿನ ಅಭಾವ ಆಗುತ್ತಿದ್ದೆ ಎಂದು ದೂರು ಕೊಟ್ಟಿದ್ದರು. ಮನೆಯ ಏರ್ ಕಂಡೀಷನ್‌ಗಳ ನೀರನ್ನು ಕುಡಿಯಲು ಪ್ರಯತ್ನ ನಡೆಸಿವೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.

ದೂರುಗಳನ್ನು ಪರಿಶೀಲಿಸಿ ಸರ್ಕಾರ ಒಂಟೆಗಳ ಹತ್ಯೆಗೆ ಆದೇಶ ನೀಡಿತ್ತು. ಎಪಿವೈ ಲ್ಯಾಂಡ್ ಎಂಬಲ್ಲಿ ಒಂಟೆಗಳನ್ನು ಹತ್ಯೆ ಮಾಡುವ ಕಾರ್ಯಾಚರಣೆ ಆರಂಭಿಸಲಾಗಿತ್ತು. ಈ ಪ್ರದೇಶದಲ್ಲಿ ಒಂಟೆಗಳ ಸಂಖ್ಯೆ ಅಧಿಕವಾಗಿದ್ದು, ಇದರಿಂದಾಗಿ ಜನರಿಗೆ ನೀರು ಸಿಗದಂತಹ ಪರಿಸ್ಥಿತಿ ಉಂಟಾಗಿತ್ತು.
ಸರ್ಕಾರದ ಆದೇಶದಂತೆ ಕಾರ್ಯ ಆರಂಭಿಸಿದ ಶಾರ್ಪ್ ಶೂಟರ್‌ಗಳು 5 ಸಾವಿರ ಒಂಟೆಗಳನ್ನು ಹತ್ಯೆ ಮಾಡಿದ್ದಾರೆ. ಇನ್ನೂ 5 ಸಾವಿರ ಒಂಟೆಗಳ ಹತ್ಯೆಗೆ ಕಾರ್ಯಾಚರಣೆ ನಡೆಯುತ್ತಿದೆ. ಮನುಷ್ಯ ತಾನು ಬದುಕುವುದಕ್ಕೆ ಏನು ಬೇಕಾದರೂ ಮಾಡುತ್ತಾನೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.
ಕಾಳ್ಗಿಚ್ಚು ತಡೆಯಲು ಆಸ್ಟ್ರೇಲಿಯಾದಲ್ಲಿ ಮಾಡಿದ ಪ್ರಯತ್ನಗಳು ಫಲಕೊಟ್ಟಿಲ್ಲ. ಮಿಲಿಯನ್ ಗಟ್ಟಲೇ ಪ್ರಾಣಿಗಳು ಬೆಂಕಿಗೆ ಆಹುತಿಯಾಗಿವೆ. ಕಾಳ್ಗಿಚ್ಚು ಹಬ್ಬಿದಾಗಲೇ ಒಂಟೆಗಳನ್ನು ಕೊಲ್ಲುವ ಬಗ್ಗೆ ಚಿಂತನೆ ಆರಂಭವಾಗಿತ್ತು. ಈಗ ಅದು ಕಾರ್ಯರೂಪಕ್ಕೆ ಬಂದಿದೆ.











Click it and Unblock the Notifications